ಮಂಗಳವಾರ, ಜನವರಿ 28, 2020
18 °C

ಕನಸುಗಳ ಬೆನ್ನತ್ತಿದ ಸಾಧಕರು

ಪಿ.ಎಂ.ಎಚ್ Updated:

ಅಕ್ಷರ ಗಾತ್ರ : | |

ಅಂಧರ ಟ್ರೆಕಿಂಗ್‌

ನಮ್ಮ ಯಶಸ್ಸಿನ ದಾರಿಗೆ ನಾವೇ ಶಿಕ್ಷಕರು– ಹೀಗೆ ಹೇಳಿದವರು 21ರ ಹರೆಯದ ಯುವಕ ಕಾರ್ತಿಕ್‌. ದಟ್ಟ ಕಾನನದಲ್ಲಿ ಯಶಸ್ವಿಯಾಗಿ ಟ್ರೆಕಿಂಗ್‌ ನಡೆಸಿದ ಅಂಧರ ತಂಡದ ನಾಯಕ ಕಾರ್ತಿಕ್.ಭಾರತ ಮತ್ತು ಭೂತಾನ್‌ ಗಡಿಯಲ್ಲಿರುವ ಗಾರುಮಾರ ರಾಷ್ಟ್ರೀಯ ಉದ್ಯಾನದಲ್ಲಿ ಯಶಸ್ವಿಯಾಗಿ ಟ್ರೆಕಿಂಗ್‌ ನಡೆಸಿದ  ಕಾರ್ತಿಕ್‌ ತಂಡ ವಿಶ್ವಸಂಸ್ಥೆಯ ಗೋಲ್ಡನ್‌ ಪ್ರಶಸ್ತಿ ಪಡೆದಿದೆ.ರಾಮಕೃಷ್ಣ ಮಿಷನ್‌ ಬ್ಲೈಂಡ್‌ ಬಾಯ್ಸ್‌ ಅಕಾಡೆಮಿಯಲ್ಲಿ ಓದುತ್ತಿರುವ ಅಂಧರ ತಂಡ ಈ ಸಾಧನೆ ಮಾಡಿದೆ. ಟ್ರೆಕಿಂಗ್‌ ತಂಡದಲ್ಲಿದ್ದದ್ದು 12 ಯುವಕರು. ಇವರಲ್ಲಿ ಐದು ಜನ ಪೂರ್ಣ ಪ್ರಮಾಣದ ಅಂಧರು. ಉಳಿದವರು ಒಂದು ಕಣ್ಣನ್ನು ಕಳೆದುಕೊಂಡವರು.

80 ಚದರ ಕಿ. ಮೀ ವ್ಯಾಪ್ತಿಯಲ್ಲಿರುವ ಕಾಡಿನಲ್ಲಿ ಐದು ದಿನಗಳ ಪಯಣ.  ರಾತ್ರಿ ಎತ್ತರದ ದಿಣ್ಣೆಗಳ ಮೇಲೆ ಟೆಂಟ್‌ ಹಾಕಿಕೊಂಡು ವಿಶ್ರಾಂತಿ ಪಡೆಯುವುದು, ಬೆಳಿಗ್ಗೆ ಮತ್ತೆ ಪ್ರಯಾಣ ಆರಂಭಿಸುವುದು. ನಾಲ್ಕು ರಾತ್ರಿ ಮತ್ತು ಐದು ಹಗಲಿನಲ್ಲಿ ಇಡೀ ಕಾಡನ್ನೇ ಸುತ್ತು ಹಾಕಿತು ಕಾರ್ತಿಕ್‌ ತಂಡ.‘ಮಬ್ಬು ಮಬ್ಬಾಗಿ ಕಾಣುವ ಹಸಿರು, ಗುಂಯ್‌ಗುಡುವ ಹುಳು ಹುಪ್ಪಟೆಗಳು. ಹಕ್ಕಿಗಳ ಕಲರವ, ಕಾಲಿಗೆ ತಾಗುವ ಮುಳ್ಳು ಮತ್ತು ಮೊನಚು ಕಲ್ಲುಗಳು, ಆಗಾಗ ಬಿಸಿಲು ಮತ್ತು ನೆರಳಿನ ಆಟ, ಹಳ್ಳ ಇಳಿಯುವುದು  ದಿಣ್ಣೆ ಹತ್ತುವುದು  ಒಂದು ವಿಭಿನ್ನ ಅನುಭವ’ ಎನ್ನುತ್ತಾರೆ ಕಾರ್ತಿಕ್‌.ಕಾಡು ಪ್ರಾಣಿಗಳ ಕೂಗನ್ನು ಆಲಿಸಿ ಇದು  ಇಂತಹ ಪ್ರಾಣಿ ಎಂದು ನಿಖರವಾಗಿ ಗುರುತಿಸುತ್ತಿದ್ದೆವು. ಟ್ರೆಕಿಂಗ್‌ನ ಮೂರನೇ ದಿನ ಮಳೆಯ ಕಾಟ. ಆಗಂತೂ ನಮ್ಮಗೆ ಟ್ರೆಕಿಂಗ್‌ ಪೂರ್ಣಗೊಳಿಸುತ್ತೇವೆಯೋ ಇಲ್ಲವೊ ಎಂಬ ಭಯ ಆವರಿಸಿತ್ತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ನಾವು ಅರಣ್ಯವನ್ನು ಸುತ್ತುಹಾಕಿದೆವು. ನಾಲ್ಕು ಗೋಡೆಗಳ ಮಧ್ಯೆ ಇದ್ದ ನಮಗೆ ಕಾಡಿನ ಅನುಭವ ರೋಮಾಂಚನ ನೀಡಿತು ಎನ್ನುತ್ತಾರೆ ಕಾರ್ತಿಕ್‌.ಬಿಸ್ಮಾನ್ ಮತ್ತು ತಂಡ

ಮನೆ ಕಟ್ಟಿದವರಿಗೆ ಗೊತ್ತು ಅದರ ಕಷ್ಟ ಏನು ಎಂದು! ಕಲ್ಲು, ಇಟ್ಟಿಗೆ, ಸಿಮೆಂಟ್, ಕೂಲಿ ಒಂದಲ್ಲ ಎರಡಲ್ಲ, ಹತ್ತಾರು ತಲೆ ಬಿಸಿ.ಈ ತಲೆ ಬಿಸಿಯನ್ನು ಕೂಲ್‌ಮಾಡಿಕೊಳ್ಳಲು ಯುವಕರ ತಂಡವೊಂದು ಮನೆ ಕಟ್ಟಲು ಬೇಕಾಗುವ ರೆಡಿಮೇಡ್‌ ಸಾಮಾಗ್ರಿಗಳನ್ನು ಕಂಡುಹಿಡಿದು ಮೂಲಕ ವಿಶ್ವದ ಪ್ರತಿಷ್ಠಿತ ‘ಸೋಶಿಯಲ್ ಇನೊವೇಶನ್ ರೀಲೆ (ಎಸ್ಐಆರ್)’ ಎಂಬ ಪ್ರಶಸ್ತಿಯನ್ನು ಗೆದ್ದಿದೆ.

ಹರಿಯಾಣದ ಸ್ಟ್ರಾಬೆರಿ ಫೀಲ್ಡ್ ವರ್ಲ್ಡ್ ಶಾಲೆಯ ವಿದ್ಯಾರ್ಥಿಗಳಾದ ಬಿಸ್ಮಾನ್ ದೆವು, ಕಂಬಿರ್ ಸಿಂಗ್ ಮತ್ತು  ರಾವಿನ್ಯ ಈ ಸಾಧನೆ ಮಾಡಿದ್ದಾರೆ.ಭತ್ತದ ಹೊಟ್ಟಿನಿಂದ ಮನೆ ಕಟ್ಟುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆಯಿಂದ ತೋರಿಸಿಕೊಟ್ಟಿದ್ದಾರೆ. ರೈತರು ಬಿಸಾಡುವ ಭತ್ತದ ಹೊಟ್ಟಿನಿಂದ ಪ್ಲೈವುಡ್ ಮಾದರಿಯ ಹಲಗೆಗಳನ್ನು ತಯಾರಿಸಿ ಸುಲಭವಾಗಿ ಮನೆಗಳನ್ನು ನಿರ್ಮಿಸಬಹುದು ಎನ್ನುತ್ತಾರೆ ಬಿಸ್ಮಾನ್‌ಮತ್ತು ತಂಡ.ಪರಿಸರ ಸ್ನೇಹಿ ಹಲಗೆಗಳು ಗಟ್ಟಿ ಮುಟ್ಟಾಗಿದ್ದು,  ನೀರು ಇಂಗದಿರುವುದು ಇದರ ವೈಶಿಷ್ಟ್ಯ. ಮಳೆ, ಬಿಸಿಲು, ಗಾಳಿಗೆ ಯಾವುದೇ ಕಾರಣಕ್ಕೂ ಹಾನಿಯಾಗದ ಭತ್ತದ ಹಲಗೆಗಳು ದೀರ್ಘ ಕಾಲ ಬಾಳಿಕೆ ಬರುತ್ತವೆ. ಅತಿ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಈ ಹಲಗೆಗಳಿಂದ ತಮಗೆ ಬೇಕಾದ ವಿನ್ಯಾಸದಲ್ಲಿ ಮನೆ ಕಟ್ಟಿಕೊಳ್ಳುಬಹುದು ಎನ್ನುತ್ತಾರೆ ಬಿಸ್ವಾನ್. ಮರಳು, ಸಿಮೆಂಟ್, ಕಬ್ಬಿಣದ ಬೆಲೆ ದುಬಾರಿಯಾಗಿರುವ  ಈ ದಿನಗಳಲ್ಲಿ ಇಂತಹ ಮನೆಗಳನ್ನು ನಿರ್ಮಿಸಿದರೆ ಹಣ ಉಳಿತಾಯ ಮಾತ್ರವಲ್ಲದೆ ಪರಿಸರ ಸಂರಕ್ಷಿಸಿದಂತಾಗುತ್ತದೆ ಎಂದು ಮತ್ತೊಬ್ಬ ಸಾಧಕಿ ರಾವಿನ್ಯ ತಿಳಿಸುತ್ತಾರೆ.

ಈ ಪ್ರಶಸ್ತಿಗೆ 19 ದೇಶಗಳಿಂದ 42.000 ಜನರು ಸ್ಪರ್ಧಿಸಿದ್ದರು. ಅಂತಿಮವಾಗಿ ಭಾರತೀಯರೇ ಈ ಪ್ರಶಸ್ತಿ ಮುಡಿಗೇರಿಸಿಕೊಂಡರು.ರಾಜ್‌ಚೆಟ್ಟಿ

ಭಾರತೀಯ ಮೂಲದ ಯುವ ಆರ್ಥಿಕ ತಜ್ಞ ರಾಜ್ ಚೆಟ್ಟಿಗೆ ಪ್ರಸಕ್ತ ಸಾಲಿನ ‘ಬೇಬಿ ನೊಬೆಲ್’ ಪ್ರಶಸ್ತಿ ಸಂದಿದೆ. ಅಮೆರಿಕದಲ್ಲಿ ನೆಲೆಸಿರುವ ದೆಹಲಿ ಮೂಲದ ಚೆಟ್ಟಿ ಹಾರ್ವಾರ್ಡ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ  ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

1988ರಲ್ಲಿ ಚೆಟ್ಟಿ ಕುಟುಂಬದವರು ಅಮೆರಿಕಕ್ಕೆ ವಲಸೆ ಬಂದರು. ಹಾರ್ವಾರ್ಡ್ ವಿಶ್ವವಿದ್ಯಾಲಯದಿಂದ  ಪದವಿ, ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ ಪದವಿ ಪಡೆದಿದ್ದಾರೆ. ‘ಮಧ್ಯಮ ವರ್ಗಗಳ ಆರ್ಥಿಕ ಸಬಲತೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು’ ಎಂಬ ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ  ಇವರಿಗೆ ಈ ಪುರಸ್ಕಾರ ಲಭಿಸಿದೆ.ಮಧ್ಯಮ ವರ್ಗದ ಜನರ ತೆರಿಗೆ ಪಾವತಿಯಿಂದಲೇ ಎಲ್ಲಾ ದೇಶಗಳ ಸರ್ಕಾರಗಳು ನಡೆಯುತ್ತಿವೆ. ಅವರ ಆದಾಯ ಯಾವಾಗಲೂ ಸಮತೋಲನದಿಂದ ಕೂಡಿರುತ್ತದೆ. ಆದರೆ ಉದ್ಯಮಿಗಳು ಮತ್ತು ಶ್ರೀಮಂತರ ಆದಾಯ ಏರು ಪೇರಾಗುವುದರಿಂದ ಅವರಿಂದ ಹೆಚ್ಚಿನ ತೆರಿಗೆ  ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರಗಳು ಈ ಜನರ ಆದಾಯ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುತ್ತಾರೆ ಚೆಟ್ಟಿ. ಭಾರತ ಸೇರಿದಂತೆ ಅಮೆರಿಕದಲ್ಲಿ ಶ್ರೀಮಂತರ ಮಕ್ಕಳಿಗಿಂತ ಮಧ್ಯಮ ವರ್ಗದ ಮಕ್ಕಳು ಸ್ವತಂತ್ರವಾಗಿ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಎಂಬ ಬಗ್ಗೆಯೂ ಸಂಶೋಧನೆ ನಡೆಸಿದ್ದಾರೆ. ಹತ್ತಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಚೆಟ್ಟಿ ಅವರಿಗೆ ಹಲವು ವಿಶ್ವವಿದ್ಯಾಲಯಗಳು ಫೆಲೋಶಿಪ್ ನೀಡಿ ಗೌರವಿಸಿವೆ. ಆರ್ಥಿಕ ಚಿಂತನೆ ಮತ್ತು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಅಸಾಮಾನ್ಯ ಸಂಶೋಧನೆ ನಡೆಸಿದವರಿಗೆ ಅಮೆರಿಕನ್‌ ಎಕನಾಮಿಕ್ ಅಸೋಶಿಯೇಶನ್ ಪ್ರತಿ ವರ್ಷ ಈ ಪ್ರಶಸ್ತಿ ನೀಡುತ್ತದೆ. ನೊಬೆಲ್ ಪ್ರಶಸ್ತಿ ಪಡೆದ ಬಹುತೇಕ ಆರ್ಥಿಕ ತಜ್ಞರು ಬೇಬಿ ನೊಬೆಲ್ ಪಡೆದವರಾಗಿದ್ದಾರೆ ಎಂಬುದು ವಿಶೇಷ.

 

ರಫಿಕ್‌ ಅಹ್ಮದ್ ಮಲಿಕ್

ತಮ್ಮೂರಿನ ಬೆಟ್ಟ ಹತ್ತಿ ಕುಣಿದು ಕುಪ್ಪಳಿಸಬೇಕು ಎಂದು ಕನಸು ಕಂಡಿದ್ದ ಯುವಕನೊಬ್ಬ ಮೌಂಟ್ ಎವರೆಸ್ಟ್ ಏರಿದ ಯಶಸ್ವಿ ಕಥೆ ಇದು.  ಜಮ್ಮು ಮತ್ತು ಕಾಶ್ಮಿರದ ಅನಂತನಾಗ್‌ಜಿಲ್ಲೆಯ ಕುಚಿಪೊರಾ ಎಂಬ ಕುಗ್ರಾಮದ 35ರ ಹರೆಯದ ಯುವಕ ರಫಿಕ್ ಅಹ್ಮದ್ ಮಲಿಕ್    ಈ ಸಾಧನೆ ಮಾಡಿದ್ದಾರೆ. ಮೌಂಟ್ ಎವರೆಸ್ಟ್ ಏರಿದ ಪ್ರಪ್ರಥಮ ಕಾಶ್ಮೀರಿ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾರೆ.

ಅದು ಗೋಲಿ ಆಡುವ ವಯಸ್ಸು. ಆಟ ಸಾಕಾದ ಮೇಲೆ ಮನೆಯ ಮಹಡಿಯಲ್ಲಿ ನಿಂತು ತದೇಕ ಚಿತ್ತದಿಂದ ದೂರದಲ್ಲಿ ಕಾಣುವ  ಹಾಲು ಬಣ್ಣದ ಬೆಟ್ಟಗಳನ್ನು  ಹತ್ತಬೇಕು,  ಅಲ್ಲಿ ಕುಣಿದು ಕುಪ್ಪಳಿಸ ಬೇಕು ಎಂಬ ದೊಡ್ಡ ಆಸೆಯನ್ನು ಕಣ್ತುಂಬಿಕೊಳ್ಳುತ್ತಿದ್ದರು.ಆ ಬೆಟ್ಟ ಹತ್ತಬೇಕು ಎಂದು ಅಪ್ಪನನ್ನು ಕೇಳಿದರೆ, ಅವರು ನೀನು ಬೆಟ್ಟವನ್ನು ಹತ್ತುವುದಾದರೆ ಹತ್ತು ಕುರಿಗಳನ್ನು ತಂದು ಕೊಡುವೆ ನಿತ್ಯ ಅವುಗಳನ್ನು ಕಾಯುತಾ ಬೆಟ್ಟ ಹತ್ತಬಹುದು ಎಂದು ವ್ಯಂಗ್ಯವಾಗಿ ಹೇಳಿದ್ದರಂತೆ. ಓದುವ ಆಸೆ ಇದ್ದುದರಿಂದ ಮಲಿಕ್‌ಬೆಟ್ಟ ಹತ್ತುವ ಹಂಬಲಕ್ಕೆ ಬ್ರೇಕ್‌ ಹಾಕಿ  ವಿದ್ಯಾಭ್ಯಾಸವನ್ನು ಮುಂದುವರೆಸಿದರು.ಎಸ್ಸೆಸ್ಸೆಲ್ಸಿ ಮುಗಿದ  ಕೂಡಲೇ  ಭಾರತೀಯ ಸೇನೆ ಸೇರಿದರು. ನಾಗಪುರದಲ್ಲಿ ತರಬೇತಿ ಪಡೆದು  ಕಾಶ್ಮೀರ ಬೆಟಾಲಿಯನ್‌ನಲ್ಲಿ ಕೆಲಸಕ್ಕೆ ನಿಯೋಜನೆಗೊಂಡರು.ಮಲಿಕ್ ಕಾಶ್ಮೀರಕ್ಕೆ ಬಂದ ಮೇಲೆ ಮತ್ತೆ ಬೆಟ್ಟ ಹತ್ತುವ ಆಸೆ ಗರಿ ಗೆದರಿತು. ಈ ಬಗ್ಗೆ ಮಿಲಿಟರಿ ಅಧಿಕಾರಿಗಳ ಬಳಿ ಹೇಳಿಕೊಂಡರು.  ಅವರು ಮಲಿಕ್‌ಅವರನ್ನು ಬೆಟ್ಟ ಹತ್ತುವ ತರಬೇತಿ ಪಡೆಯುತ್ತಿದ್ದ ತಂಡಕ್ಕೆ ಕಳುಹಿಸಿಕೊಟ್ಟರು.ಎರಡು ವರ್ಷ ಕಠಿಣ ತಾಲೀಮು ನಡೆಸಿದ ಮಲಿಕ್ ಹಿಮಾಲಯ ಪರ್ವತ ಶ್ರೇಣಿಯ ವಿವಿಧ ಬೆಟ್ಟಗಳನ್ನು ಏರಿದರು. ಅಂತಿಮವಾಗಿ ಮೌಂಟ್‌ಎವರೆಸ್ಟ್ ಶಿಖರವೇರಿ ದೇಶದ ಗಮನ ಸೆಳೆದರು. ಪ್ರಸ್ತುತ ಭಾರತೀಯ ಸೇನೆಯಲ್ಲಿ ಸೈನಿಕರಿಗೆ ಹಿಮಾಲಯ ಪರ್ವತ ಹತ್ತುವ ತರಬೇತಿ ನೀಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)