ಗುರುವಾರ , ಜನವರಿ 23, 2020
23 °C
ನೂರು ಕಣ್ಣು ಸಾಲದು

ಕನ್ನಡದ ರವಿ ಮೂಡಿ ಬಂದ... (ಭಾಗ–2)

ನೇಸರ Updated:

ಅಕ್ಷರ ಗಾತ್ರ : | |

ಕನ್ನಡ ಚಿತ್ರೋದ್ಯಮಕ್ಕೆ ಆತ್ಮವಿಶ್ವಾಸ ತಂದುಕೊಟ್ಟ 1950ರ ದಶಕದಲ್ಲಿ ವೈವಿಧ್ಯಮಯ ಚಿತ್ರಗಳು ತೆರೆಗೆ ಬಂದವು. ರಂಗಭೂಮಿಯಲ್ಲಿ ಪಳಗಿದ ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಕಾಲಿಟ್ಟರೆ ಇನ್ನೂ ಕೆಲವರು ಸ್ವಂತ ತಯಾರಿಕಾ ಸಂಸ್ಥೆಗಳನ್ನು ಹುಟ್ಟುಹಾಕಿ ಹೊಸ ಪ್ರಯೋಗಗಳಿಗೆ ಮುಂದಾದರು.ಎರಡು, ಮೂರು ಭಾಷೆಗಳಲ್ಲಿ ಒಂದೇ ಸಿನಿಮಾ ತಯಾರಾಗುತ್ತಿದ್ದ ಕಾಲ ಅದು. ಆರ್‌. ನಾಗೇಂದ್ರರಾವ್‌, ಬಿ.ಆರ್‌. ಪಂತುಲು ಅಂತಹವರು ಇಂತಹ ಸಾಹಸಗಳಿಗೆ ಕೈಹಾಕಿದ್ದರು. ಈ ಅವಧಿಯಲ್ಲಿ ತೆರೆಕಂಡ ‘ಪ್ರೇಮದ ಪುತ್ರಿ’, ‘ಬೆಟ್ಟದಕಳ್ಳ’, ‘ರತ್ನಗಿರಿ ರಹಸ್ಯ’, ‘ರಾಯರ ಸೊಸೆ’, ‘ಸ್ಕೂಲ್‌ ಮಾಸ್ಟರ್‌’, ‘ಭಕ್ತ ಕನಕದಾಸ’, ‘ಮಕ್ಕಳ ರಾಜ್ಯ’, ‘ಮಹಿಷಾಸುರ ಮರ್ದಿನಿ’, ‘ಮಹಾಕವಿ ಕಾಳಿದಾಸ’, ‘ಜಗಜ್ಯೋತಿ ಬಸವೇಶ್ವರ’ ಮುಂತಾದ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಚೈತನ್ಯವನ್ನು ತಂದುಕೊಟ್ಟವು.ಒಂದೇ ದಶಕದಲ್ಲಿ (1950) 75 ಚಿತ್ರಗಳು ತಯಾರಾಗುವುದರೊಂದಿಗೆ ಕನ್ನಡ ಚಿತ್ರಭೂಮಿಯ ಬುನಾದಿ ಗಟ್ಟಿಯಾದರೂ ಸಮಸ್ಯೆಗಳೇನೂ ಕಡಿಮೆಯಾಗಿರಲಿಲ್ಲ. ಕನ್ನಡ ಚಿತ್ರರಂಗ ಗಟ್ಟಿನೆಲೆಯಲ್ಲಿ ಸಾಗಲು ಕನ್ನಡ ಚಳವಳಿ ಜೊತೆಗೆ ರಾಜ್ಯ ಸರ್ಕಾರದ ನೆರವಿನ ಹಸ್ತದಿಂದ ಸಾಧ್ಯವಾಯಿತು. ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದ್ದ ‘ಕಿತ್ತೂರು ಚೆನ್ನಮ್ಮ’ನನ್ನು ಪಂತಲು ತೆರೆಯ ಮೇಲೆ ತಂದರು. ಈ ಐತಿಹಾಸಿಕ ಚಿತ್ರ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಯಿತು. ಇದೇ ರೀತಿ ಕನ್ನಡಿಗರಲ್ಲಿ ಉತ್ಸಾಹ ಹೆಚ್ಚಿದ ಇನ್ನೊಂದು ಚಿತ್ರ ಆರ್‌. ನಾಗೇಂದ್ರ ರಾಯರ ‘ವಿಜಯನಗರದ ವೀರಪುತ್ರ’. ಇದೇ ದಶಕದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕಾರಗಳೂ ಕನ್ನಡ ಚಿತ್ರಗಳಿಗೆ ಸಂದವು. ಆವರೆಗೆ ಪರಭಾಷೆಯ ಚಿತ್ರಗಳೇ ಹೆಚ್ಚು ಪರಿಣಾಮ ಬೀರುತ್ತಿದ್ದ ಕನ್ನಡಿಗರಿಗೆ ನಮ್ಮದೇ ಸೊಗಡಿನ, ನಮ್ಮ ನೆಲದ ಕಥೆಗಳು ಹುರುಪು ತಂದವು.ಏಳು ಬೀಳುಗಳೊಂದಿಗೆ ಹೆಜ್ಜೆಗಳನ್ನಿಡುತ್ತಿದ್ದ ಕನ್ನಡ ಚಿತ್ರೋದ್ಯಮ ಬಹುಮಟ್ಟಿಗೆ ಗರಿಗೆದರಿದ್ದು 1960–70ರ ದಶಕಗಳಲ್ಲಿ. ವಿನೂತನ ಕಥಾಹಂದರಗಳು. ಯುವ ಪೀಳಿಗೆಯ ನಿರ್ದೇಶಕರು, ನಟ ನಟಿಯರು ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ತಂತ್ರಜ್ಞರಾಗಿ ಹೆಸರು ಮಾಡಿದ್ದ ಬಿ.ಎಸ್‌. ರಂಗ, ಎಂ.ಆರ್‌. ವಿಠಲ್‌, ಹುಣಸೂರು ಕೃಷ್ಣಮೂರ್ತಿ ಮುಂತಾದವರು ನಿರ್ದೇಶನ ರಂಗಕ್ಕಿಳಿದರು. ಆ ಕಾಲಕ್ಕೆ ಹೊಸ ಬಗೆಯದಾದ ‘ನಂದಾದೀಪ’, ‘ನಾಂದಿ’ (ಎನ್‌. ಲಕ್ಷ್ಮೀನಾರಾಯಣ್‌) ಚಿತ್ರಗಳು ತೆರೆಗೆ ಬಂದವು. ಕನ್ನಡದ ಮೊದಲುಗಳು ಆರಂಭಗೊಂಡದ್ದೇ ಆ ಕಾಲಘಟ್ಟದಲ್ಲಿ. ರಂಗಾ ಅವರು ಕನ್ನಡದ ಪ್ರಥಮ ವರ್ಣಚಿತ್ರ ‘ಅಮರ ಶಿಲ್ಪಿ ಜಕಣಾಚಾರಿ’ಯನ್ನು ತಯಾರಿಸಿದರೆ, ಮೊದಲ ಕನ್ನಡ ಕಾದಂಬರಿ ಆಧಾರಿತ ‘ಕರುಣೆಯೇ ಕುಟುಂಬದ ಕಣ್ಣು’ ಚಿತ್ರವನ್ನು ಟಿ.ವಿ. ಸಿಂಗ್‌ ಠಾಕೂರ್‌ ನಿರ್ದೇಶಿಸಿದರು. ಕವಿ ಸಾಹಿತಿಗಳು ತೆರೆಯಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದೇ ಆಗ. ಕುವೆಂಪು, ಅ.ನ.ಕೃ., ತ.ರಾ.ಸು., ಕೆ.ಎಸ್.ನ., ತ್ರಿವೇಣಿ, ಚದುರಂಗ, ಕೊರಟಿ ಶ್ರೀನಿವಾಸರಾವ್‌, ಕೃಷ್ಣಮೂರ್ತಿ ಪುರಾಣಿಕ ಮೊದಲಾದವರು ಕನ್ನಡ ಪ್ರೇಕ್ಷಕರಿಗೆ ಪರಿಚಯವಾದರು. ಅವರ ಕಥೆಗಳನ್ನು ಚಿತ್ರಗಳನ್ನಾಗಿ ನೋಡಿದರು. ಇವರ ಗೀತೆಗಳು ಚಿತ್ರಗೀತೆಗಳಾಗಿ ಹರಿದಾಡಿದವು.ಕವಲು ದಾರಿಯಲ್ಲಿದ್ದ ಕನ್ನಡ ಚಿತ್ರೋದ್ಯಮದಲ್ಲಿ ಅಭಿನಯ ಪ್ರಾಧಾನ್ಯದಿಂದ ಕನ್ನಡಿಗರ ಮನಗೆದ್ದು ಬಲವಾದ ಹೆಜ್ಜೆಗಳನ್ನು ಮೂಡಿಸಿದವರು ರಾಜಕುಮಾರ್‌. ಪೌರಾಣಿಕ, ಐತಿಹಾಸಿಕ, ಭಕ್ತಿ, ಸಾಂಸಾರಿಕ, ಬಾಂಡ್‌ ಶೈಲಿ, ಹಾಸ್ಯ ಹೀಗೆ ಎಲ್ಲಾ ಬಗೆಯ ಪಾತ್ರಗಳನ್ನು ಅದ್ಬುತವಾಗಿ ನಿರ್ವಹಿಸಿದ ರಾಜ್‌ಕುಮಾರ್‌ ಕನ್ನಡ ಚಿತ್ರರಂಗಕ್ಕೆ ಗಟ್ಟಿ ನೆಲೆ ಬೆಲೆ ತಂದುಕೊಟ್ಟರು.ಮದ್ರಾಸ್‌ನಲ್ಲಿ ನೆಲೆಗೊಂಡ ಕನ್ನಡ ಚಿತ್ರೋದ್ಯಮವನ್ನು ಕರ್ನಾಟಕಕ್ಕೆ ಸೆಳೆದು ತರುವ ನಿಟ್ಟಿನಲ್ಲಿ ಸಹಾಯ ಧನ, ಪ್ರಶಸ್ತಿಗೌರವ ಇನ್ನಿತರ ಸೌಲಭ್ಯಗಳನ್ನು, ಸರ್ಕಾರ ರೂಪಿಸಿದಾಗ, ಅದೊಂದು ಸ್ವಾಗತಾರ್ಹ ಬೆಳವಣಿಗೆ ಎನ್ನಿಸಿಕೊಂಡಿತು. ಸ್ಟುಡಿಯೊಗಳಿಗೆ ಸೀಮಿತವಾಗಿದ್ದ ಕನ್ನಡ ಚಿತ್ರಗಳನ್ನು ಹೊರಾಂಗಣಗಳಿಗೆ ತರುವಲ್ಲಿ ಹೆಚ್ಚಿನ ಆಸಕ್ತಿ ತೋರಿದವರು ಪುಟ್ಟಣ್ಣ ಕಣಗಾಲ್. ಪಂತಲು ಅವರಿಂದ ಪಟ್ಟುಗಳನ್ನು ಕಲಿತು ‘ಬೆಳ್ಳಿಮೋಡ’ದ ಮೂಲಕ ಸ್ವತಂತ್ರ ನಿರ್ದೇಶಕರಾದ ಪುಟ್ಟಣ್ಣ ಕರ್ನಾಟಕದ ರಮಣೀಯ ತಾಣಗಳಿಗೆ ಲಗ್ಗೆ ಹಾಕಿದರು, ಅನೇಕ ಪ್ರತಿಭಾನ್ವಿತರನ್ನು ತೆರೆಗೆ ಪರಿಚಯಿಸಿದರು.ನಾಯಕ ಪ್ರಧಾನ ಪಾತ್ರಗಳೇ ವಿಜೃಂಭಿಸುತ್ತಿದ್ದ ಆ ಸಂದರ್ಭದಲ್ಲಿ ಮಹಿಳಾ ಪಾತ್ರಗಳಿಗೆ ದನಿಕೊಟ್ಟ ಪುಟ್ಟಣ್ಣ ಸ್ತ್ರೀ ಜಗತ್ತಿಗೆ ಹೊಸ ಹಾದಿ ತೆರೆದರು.

ಕಥಾವಸ್ತು, ಸುಶ್ರಾವ್ಯ ಸಂಗೀತ, ಕಣ್ಮನ ಸೆಳೆವ ಹೊರಾಂಗಣ, ಮನಮುಟ್ಟುವ ಹಾಡು, ಸಂಭಾಷಣೆ ಪುಟ್ಟಣ್ಣನವರ ಬಹುತೇಕ ಚಿತ್ರಗಳಲ್ಲಿ ನೋಡುಗರನ್ನು ಗೆದ್ದ ಅಂಶಗಳು. ‘ಗೆಜ್ಜೆಪೂಜೆ’, ‘ರಂಗನಾಯಕಿ’, ‘ಶರಪಂಜರ’, ‘ಕಥಾಸಂಗಮ’, ‘ಫಲಿತಾಂಶ’, ‘ಪಡುವಾರಳ್ಳಿ ಪಾಂಡವರು’, ‘ಎಡಕಲ್ಲು ಗುಡ್ಡದ ಮೇಲೆ’– ಹೀಗೆ ಹೊಸ ಚಿತ್ರಪ್ರಯೋಗಗಳನ್ನು ಮಾಡಿದ ಪುಟ್ಟಣ್ಣ ಕಲ್ಪನಾ, ಆರತಿ, ಅಂಬರೀಷ್‌, ವಿಷ್ಣುವರ್ಧನ್‌, ಜೈಜಗದೀಶ್‌ ಮೊದಲಾದ ಕಲಾವಿದರನ್ನು ತೆರೆಗಿತ್ತರು.1970ರ ದಶಕವನ್ನು ಕನ್ನಡ ಚಿತ್ರರಂಗದ ದಾಖಲೆಗಳ ದಶಕವೆಂದು ಕರೆಯಬಹುದು. ‘ಸಂಸ್ಕಾರ’ದಂತಹ ಹೊಸಜಾಡಿನ ಚಿತ್ರ, ಜನಮನ್ನಣೆ ಪಡೆದ ‘ಬಂಗಾರದ ಮನುಷ್ಯ’, ಗ್ರಾಮ್ಯ ಸೊಗಡಿನ ‘ಬೂತಯ್ಯನ ಮಗ’ ಚಿತ್ರಗಳು ಬಿಡುಗಡೆಯಾದ ದಶಕ ಇದು. ಸಿದ್ದಲಿಂಗಯ್ಯನವರಂತಹ ಸತ್ವಶಾಲಿ ನಿರ್ದೇಶಕ ರೂಪುಗೊಂಡ ಈ ಸಮಯದಲ್ಲಿ ಗಿರೀಶ ಕಾರ್ನಾಡ್, ಬಿ.ವಿ. ಕಾರಂತ್, ಪಿ. ಲಂಕೇಶ್, ಕೆ.ಎಂ. ಶಂಕರಪ್ಪ, ಎಂ.ಎಸ್. ಸತ್ಯು, ಗಿರೀಶ ಕಾಸರವಳ್ಳಿ, ಟಿ.ಎಸ್. ನಾಗಾಭರಣರಂತಹ ಸೃಜನಶೀಲ ಮತ್ತು ನವ್ಯ ಚಿತ್ರ ನಿರ್ದೇಶಕರು ಕಾಣಿಸಿಕೊಂಡರು.‘ಸಂಸ್ಕಾರ’ ಕನ್ನಡಕ್ಕೆ ರಾಷ್ಟ್ರಾಧ್ಯಕ್ಷರ ಸ್ವರ್ಣ ಪದಕ ತಂದುಕೊಟ್ಟ ಪ್ರಥಮ ಚಿತ್ರ. ಪಟ್ಟಾಭಿರಾಮರೆಡ್ಡಿ ನಿರ್ದೇಶಿಸಿದ ‘ಸಂಸ್ಕಾರ’ ಯು.ಆರ್. ಅನಂತಮೂರ್ತಿ ಅವರ ಕಾದಂಬರಿಯನ್ನು ಆಧರಿಸಿತ್ತು. ‘ಸಂಸ್ಕಾರ’ದಲ್ಲಿ ಕಾರ್ನಾಡ್‌, ಲಂಕೇಶ್‌, ಸ್ನೇಹಲತಾರೆಡ್ಡಿ, ಕಲಾವಿದ ಎಸ್‌.ಜಿ. ವಾಸುದೇವ್‌, ಟಾಂಕೋವನ್‌ ಮೊದಲಾದವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.‘ಸಂಸ್ಕಾರ’ದ ಬಳಿಕ ಆಲನಹಳ್ಳಿ ಕೃಷ್ಣ ಅವರ ‘ಕಾಡು’, ಎಸ್‌.ಎಲ್‌. ಭೈರಪ್ಪನವರ ‘ವಂಶವೃಕ್ಷ’ ಚಿತ್ರಗಳು ಬೆಳ್ಳಿತೆರೆಗೆ ಬಂದವು. ಕಾರ್ನಾಡ್‌, ಕಾರಂತ್‌ ಅವರೊಂದಿಗೆ ಜಿ.ವಿ. ಅಯ್ಯರ್‌ ಅವರೂ ಹೊಸ ಹಾದಿಯಲ್ಲಿ ನಡೆಯಲಾರಂಭಿಸಿದರು. ಹಳ್ಳಿಗಾಡಿನ ರಾಜಕೀಯ, ದ್ವೇಷವನ್ನು ಶಕ್ತಿಯುತವಾಗಿ ನಿರೂಪಿಸಿದ್ದ ಆಲನಹಳ್ಳಿ ಕೃತಿಯನ್ನು ಕಾರ್ನಾಡ್‌ ಸಿನಿಮಾದಲ್ಲಿ ಸಮರ್ಥವಾಗಿ ಬಿಂಬಿಸಿದರು. ಲಕ್ಷ್ಮೀಪತಿ ನಾರಾಯಣ್ ನಿರ್ಮಿಸಿದ ‘ಕಾಡು’ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತಲ್ಲದೆ ನಟರಾಜ್‌, ನಂದಿನಿ ಮೊದಲಾದ ಪ್ರತಿಭಾವಂತರನ್ನು ಬೆಳಕಿಗೆ ತಂದಿತು. ಜಿ.ವಿ. ಅಯ್ಯರ್‌ ಅವರು ‘ವಂಶವೃಕ್ಷ’, ‘ಹಂಸಗೀತೆ’ಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಿನ ದಿನಗಳಲ್ಲಿ ಪ್ರಯೋಗಗಳ ನೆಲೆಯಲ್ಲೇ ನಿಂತರು. ‘ಹಂಸಗೀತೆ’ ಅಯ್ಯರ್‌ ಪ್ರತಿಭೆಗೆ ಕನ್ನಡಿಯಾಯಿತು.ಸಂಗೀತ–ನಾಟಕಗಳಲ್ಲಿ ಪರಿಣಿತರಾಗಿದ್ದ ಬಿ.ವಿ. ಕಾರಂತರು ಶಿವರಾಮ ಕಾರಂತರ ‘ಚೋಮನದುಡಿ’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದರು. ರಂಗಭೂಮಿ ನಟ ಎಂ.ವಿ. ವಾಸುದೇವರಾವ್‌ ‘ಚೋಮ’ನಾಗಿ ಕಾಣಿಸಿಕೊಂಡ ‘ಚೋಮನದುಡಿ’ ರಾಷ್ಟ್ರಮಟ್ಟದಲ್ಲಿಯೂ ಪ್ರಶಸ್ತಿಗಳ ಮೂಲಕ ಸುದ್ದಿಮಾಡಿತು.‘ಮೇಯರ್‌ ಮುತ್ತಣ್ಣ’ ಚಿತ್ರದಿಂದ ನಿರ್ದೇಶಕರಾದ ಸಿದ್ದಲಿಂಗಯ್ಯ ಹಳ್ಳಿಗಾಡಿನ ಚಿತ್ರಗಳನ್ನು ಚಲನಚಿತ್ರಗಳಲ್ಲಿ ಸಹಜವಾಗಿ ಹರಡುವ ನೈಪುಣ್ಯತೆ ಹೊಂದಿದ್ದರು. ಅವರ ನಿರ್ದೇಶನದ ‘ಬಂಗಾರದ ಮನುಷ್ಯ’ ಸಿನಿಮಾ– ಉನ್ನತ ಶಿಕ್ಷಣ ಪಡೆದ ಯುವಕನೊಬ್ಬ ಹಳ್ಳಿ ಸೇರಿ ಯಶಸ್ಸು ಸಾಧಿಸುವ, ನಂತರ ಪರಿಸ್ಥಿತಿಯ ಏರುಪೇರುಗಳಿಂದ ತನ್ನದೆಲ್ಲವನ್ನೂ ತ್ಯಾಗ ಮಾಡುವ ಕಥೆ ಹೊಂದಿದ್ದು, ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲುಗಳಲ್ಲೊಂದಾಗಿದೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಕೃತಿ ಆಧರಿಸಿದ ‘ಬೂತಯ್ಯನ ಮಗ ಅಯ್ಯು’ ಸಿದ್ದಲಿಂಗಯ್ಯನವರ ನಿರ್ದೇಶನದಲ್ಲಿ ಹೊರಬಂದ ಇನ್ನೊಂದು ಮಹೋನ್ನತ ಚಿತ್ರ. ಎಂ.ಪಿ. ಶಂಕರ್‌, ಲೋಕೇಶ್‌, ವಿಷ್ಣುವರ್ಧನ್‌, ಲೋಕನಾಥ್‌, ದಿನೇಶ್‌, ಎಲ್‌.ವಿ. ಶಾರದ– ಹೀಗೆ ಹಲವು ಪ್ರತಿಭೆಗಳನ್ನು ಒಟ್ಟುಮಾಡಿದ ಸಿದ್ದಲಿಂಗಯ್ಯ ಮನಮುಟ್ಟುವಂತೆ ‘ಭೂತಯ್ಯ’ನನ್ನ ಸೃಷ್ಟಿಸಿ ಜನಪ್ರಿಯತೆಯ ತುಟ್ಟತುದಿಗೆ ತಲುಪಿಸಿದರು.

(ಮುಂದುವರೆಯುವುದು)

ಪ್ರತಿಕ್ರಿಯಿಸಿ (+)