ಮಂಗಳವಾರ, ಜೂನ್ 15, 2021
21 °C

ಕರೆಂಟ್ ಉಳಿಯಿತು ಬದುಕು ಬೆಳಗಿತು

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

15 ಅಶ್ವಶಕ್ತಿ (ಎಚ್‌ಪಿ) ಸಾಮರ್ಥ್ಯದ ಮೋಟಾರ್ ಬಳಸಿದರೆ ಮಾತ್ರ ತಮ್ಮ 600 ಅಡಿಯ ಕೊಳವೆ ಬಾವಿಯಿಂದ ನೀರೆತ್ತಲು ಸಾಧ್ಯ ಎಂದು ತಿಳಿದಿದ್ದ ಗೂಳ್ಯದ ಅಶ್ವತ್ಥರೆಡ್ಡಿ ಅವರ ನಿಲುವು ಈಗ ಬದಲಾಗಿದೆ. 12 ಎಚ್‌ಪಿ ಮೋಟಾರ್ ಬಳಸಿಯೂ ಮೊದಲಿಗಿಂತ ಹೆಚ್ಚು ನೀರು ಪಡೆಯುತ್ತಿದ್ದಾರೆ.`ವ್ಯವಸಾಯ ಕ್ಷೇತ್ರದಲ್ಲಿನ ವಿದ್ಯುತ್ ಅಪವ್ಯಯದ ಬಗ್ಗೆ ಅರಿವು ಉಂಟಾಗಿದ್ದು, ಇತರರಲ್ಲೂ ಜಾಗೃತಿ ಮೂಡಿಸುತ್ತೇನೆ~ ಎಂದು ವಿಶ್ವಾಸದಿಂದ ನುಡಿಯುತ್ತಾರೆ.   `ವಿದ್ಯುತ್ ಸಮಸ್ಯೆಗಳು ಉಂಟಾದರೆ ನಾವೇ ದುರಸ್ತಿ ಮಾಡಿಕೊಳ್ಳಬೇಕಿತ್ತು. ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಗೆ (ಬೆಸ್ಕಾಂ) ದೂರು ನೀಡಿದರೆ ಅವರು ಬರುವಷ್ಟರಲ್ಲಿ ಸಾಕಷ್ಟು ತಡವಾಗುತ್ತಿತ್ತು. ಆದರೆ ಈಗ ಕೆಲವೇ ಗಂಟೆಗಳಲ್ಲಿ ಸಮಸ್ಯೆ ಬಗೆಹರಿಯುತ್ತಿದೆ. ಬೆಸ್ಕಾಂ ಬಗ್ಗೆ ವಿಶ್ವಾಸ ಮೂಡಿದೆ~ ಎಂದು ಸಂತಸ ಹಂಚಿಕೊಳ್ಳುತ್ತಾರೆ ದಂಡುದಾಸನ ಕೊಡುಗೆಹಳ್ಳಿಯ ಗೋವಿಂದ ರಾಜು.`ವಿದ್ಯುತ್ ಸಮಸ್ಯೆಗೆ ಬೆಸ್ಕಾಂ ಮತ್ತು ಸರ್ಕಾರವನ್ನು ಮಾತ್ರ ದೂರುವುದಲ್ಲ. ಇದರಲ್ಲಿ ನಮ್ಮ ಪಾಲೂ ಇದೆ. ಅಪವ್ಯಯಕ್ಕೆ ನಾವು ಹೇಗೆ ಕಾರಣ ಎಂಬುದು ಅರಿವಾಗಿದೆ~. ಇದು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬುಗೆರೆ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ 604 ರೈತರ ನುಡಿ.ವಿದ್ಯುತ್ ಅಪವ್ಯಯ ಹೊಸದಲ್ಲ. ಕೃಷಿ ಕ್ಷೇತ್ರದಲ್ಲಿಯೇ ಶೇ 40 ರಷ್ಟು ವಿದ್ಯುತ್ ಅಪವ್ಯಯವಾಗುತ್ತಿದೆ ಎಂಬ ಅಂದಾಜಿದೆ. ಇದನ್ನು ಮನಗಂಡ ಬೆಸ್ಕಾಂ, ರೈತರಲ್ಲಿ ಜಾಗೃತಿ ಮೂಡಿಸಿ ಅಪವ್ಯಯವಾಗುತ್ತಿರುವ ವಿದ್ಯುತ್ ಸದ್ಬಳಕೆ ಮಾಡಿಕೊಳ್ಳಲು ದೇಶದಲ್ಲಿಯೇ ಮೊದಲ ವಿಶಿಷ್ಟ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ 37 ಹಳ್ಳಿಗಳಲ್ಲಿ ಕಾರ್ಯರೂಪಕ್ಕೆ ತಂದಿದೆ. ಬೆಸ್ಕಾಂನ ಈ ಪ್ರಾಯೋಗಿಕ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವುದು `ಎನ್‌ಜೆನ್~ ಎಂಬ ಖಾಸಗಿ ಸಂಸ್ಥೆ.`ವೈಲ್ಡ್ ಫ್ಲವರ್~ ಹೆಸರಿನ ಈ ಯೋಜನೆ, ಪ್ರತಿ ತಿಂಗಳು ಅಪವ್ಯಯವಾಗುತ್ತಿದ್ದ ಸರಾಸರಿ 82 ಸಾವಿರ ಯೂನಿಟ್ ವಿದ್ಯುತ್ ಉಳಿಸುವುದರ ಜತೆಗೆ ಸದ್ಬಳಕೆಯಾಗುವಂತೆ ಮಾಡಿದೆ. ಅಲ್ಲದೆ ಅಪವ್ಯಯವಾಗುತ್ತಿರುವ ವಿದ್ಯುತ್ ಸರಿಯಾಗಿ ಬಳಸಿಕೊಂಡರೆ ಗ್ರಾಮಗಳ ಇಂಧನ ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ಅರಿವನ್ನೂ ರೈತರಲ್ಲಿ ಮೂಡಿಸಿದೆ.ಅಪವ್ಯಯವಾಗುತ್ತಿದ್ದು ಹೀಗೆ

ಅಲ್ಲಿನ 4 ಫೀಡರ್ ವ್ಯಾಪ್ತಿಯ 37 ಹಳ್ಳಿಗಳಲ್ಲಿ 604 ಕೃಷಿ ಪಂಪ್‌ಸೆಟ್‌ಗಳಿದ್ದು, ಸರಾಸರಿಗೂ ಮೀರಿದ ವಿದ್ಯುತ್ ಬಳಸುತ್ತಿದ್ದವು. ಪಂಪ್‌ಸೆಟ್‌ನಿಂದ ನೀರೆತ್ತಲು ಸಾಮರ್ಥ್ಯಕ್ಕೂ ಮೀರಿದ ಮೋಟಾರ್‌ಗಳ ಅಳವಡಿಕೆ, ದುರ್ಬಲ ಕೇಬಲ್‌ಗಳು ಮತ್ತು ಕೆಪಾಸಿಟರ್‌ಗಳಿಂದ ವಿದ್ಯುತ್ ಹೆಚ್ಚು ಖರ್ಚಾಗುತ್ತಿತ್ತು. ಇದನ್ನು ಮನಗಂಡ ಬೆಸ್ಕಾಂ, ರೈತರಲ್ಲಿ ಅರಿವು ಮೂಡಿಸಲು ಸಜ್ಜಾಯಿತು. ಯೋಜನೆ ಜಾರಿ ಹೊಣೆಯನ್ನು `ಎನ್‌ಜೆನ್~ಗೆ ವಹಿಸಿತು.ಎನ್‌ಜೆನ್ ಸಿಬ್ಬಂದಿ ರೈತರ ಬಳಿ ತೆರಳಿ `ಪಂಪ್‌ಸೆಟ್‌ಗಳಿಂದ ನೀರೆತ್ತಲು ಸಾಮರ್ಥ್ಯಕ್ಕೆ ಮೀರಿದ ಮೋಟಾರ್ ಬಳಸುತ್ತಿದ್ದೀರಿ. ಕೇಬಲ್ ಮತ್ತು ಸ್ಟಾರ್ಟರ್ ಸಾಮರ್ಥ್ಯವೂ ದುರ್ಬಲವಾಗಿದೆ. ಇದರಿಂದ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತಿದೆ.ಉಪಕರಣಗಳಲ್ಲಿ ಕೆಲ ಮಾರ್ಪಾಟು ಮಾಡುವುದರಿಂದ ಈ ಅಪವ್ಯಯ ತಪ್ಪಿಸಬಹುದು. ಅಪವ್ಯಯದ ಬಗ್ಗೆ ಮಾಹಿತಿ ಸಂಗ್ರಹಿಸಲು ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುತ್ತೇವೆ~ ಎಂದಾಗ ರೈತರಿಂದ ಪ್ರತಿರೋಧ ವ್ಯಕ್ತವಾಯಿತು.`ಇದು ಸರ್ಕಾರದ ಪ್ರಾಯೋಗಿಕ ಯೋಜನೆ. ಮೀಟರ್ ಅಳವಡಿಸಿದರೂ ಯಾವುದೇ ದರ ಪಾವತಿಸಬೇಕಾಗಿಲ್ಲ. ಅಲ್ಲದೆ ಮೋಟಾರ್ ನಾವೇ ಬದಲಾಯಿಸಿ ಕೊಡುತ್ತೇವೆ. ಸಮಸ್ಯೆಯಾದರೆ ನಾವೇ ಜವಾಬ್ದಾರರು~ ಎಂದು ವಿಶ್ವಾಸ ಮೂಡಿಸಿದಾಗ ರೈತರು ಮೀಟರ್ ಅಳವಡಿಸಲು, ಮೋಟಾರ್ ಬದಲಿಸಲು ಒಪ್ಪಿದರು.ಯಶಸ್ಸಿನ ಹಾದಿ

ಅಲ್ಲಿಂದ ಮುಂದಿನದ್ದು ಯಶಸ್ಸಿನ ಹಾದಿ. ಪ್ರಾಯೋಗಿಕವಾಗಿ 280 ಪಂಪ್‌ಸೆಟ್‌ಗಳಿಗೆ ಮೀಟರ್ ಮತ್ತು 25 ಕೆ.ವಿಯ ಪ್ರತ್ಯೇಕ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಯಿತು.

 

ಹೆಚ್ಚು ವಿದ್ಯುತ್ ಬಳಸುತ್ತಿದ್ದ ಇವುಗಳ ಮೋಟಾರು ಮತ್ತು ಕೇಬಲ್ ಬದಲಾಯಿಸಲಾಯಿತು. ಪ್ರತಿ ತಿಂಗಳು ಪಂಪ್‌ಸೆಟ್‌ಗೆ ಬಳಕೆಯಾಗುತ್ತಿರುವ ವಿದ್ಯುತ್‌ನ ಮಾಹಿತಿ ಸಂಗ್ರಹಿಸಲಾಯಿತು. ಮೋಟಾರು ಬದಲಾಯಿಸುವ ಪೂರ್ವದಲ್ಲಿ 280 ಪಂಪ್‌ಸೆಟ್‌ಗಳು ಪ್ರತಿ ತಿಂಗಳು ತಲಾ ಸರಾಸರಿ 1,181 ಯೂನಿಟ್ ವಿದ್ಯುತ್ ಬಳಸುತ್ತಿದ್ದವು. ಮೋಟಾರು ಬದಲಾವಣೆ ನಂತರ ಶೇ 25 ರಷ್ಟು ವಿದ್ಯುತ್ ಬಳಕೆ ಕಡಿಮೆಯಾಗಿದ್ದನ್ನು (ಬಳಕೆ 895 ಯೂನಿಟ್) ಅಂಕಿಸಂಖ್ಯೆ ದೃಢಪಡಿಸಿತು.ಅಲ್ಲದೆ ಈ ಎಲ್ಲ ಪಂಪ್‌ಸೆಟ್‌ಗಳಿಗೆ ಕ್ರಮಾಂಕ ನಮೂದಿಸುವ ಮೂಲಕ ಯಾವುದೇ ಸಮಸ್ಯೆಗಳಿದ್ದರೂ ರೈತರು ಸಂಸ್ಥೆಯ ಉಚಿತ ಕಾಲ್‌ಸೆಂಟರ್‌ಗೆ ದೂರು ನೀಡುವ ವ್ಯವಸ್ಥೆ ಮಾಡಲಾಯಿತು. ಈಗ ಬೆಸ್ಕಾಂಗೆ ಸಂಬಂಧಿಸಿದ ದೂರುಗಳಿದ್ದರೆ, ಅವರಿಗೆ ಸಮಸ್ಯೆಯನ್ನು ರವಾನಿಸಿ ಶೀಘ್ರ ಬಗೆಹರಿಸಲಾಗುತ್ತಿದೆ. ಇದರಿಂದ ಸಹಜವಾಗಿ ರೈತರಲ್ಲಿ ಸಂಸ್ಥೆ ಬಗ್ಗೆ ಮತ್ತು ಬೆಸ್ಕಾಂ ಕಾರ್ಯದ ಬಗ್ಗೆ ವಿಶ್ವಾಸ ಮೂಡಿದೆ.ಆರಂಭದಲ್ಲಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದಾಗ ರೈತರು ಕೆಲವೆಡೆ ಕಿತ್ತು ಹಾಕಿದ್ದರು. ನಂತರ ಶಕ್ತಿ ಮೂಲಗಳ ಸದ್ಬಳಕೆ ಬಗ್ಗೆ ಬೀದಿ ನಾಟಕ ಮತ್ತು ಕಾರ್ಯಾಗಾರಗಳನ್ನು ನಡೆಸಿ ಜಾಗೃತಿ ಮೂಡಿಸಲಾಯಿತು. ಇದು 10 ವರ್ಷದ ಅವಧಿಯ ಯೋಜನೆ. ರೈತರ ಸಹಭಾಗಿತ್ವದಲ್ಲಿ ಶಕ್ತಿ ಮೂಲಗಳ ಅಪವ್ಯಯ ತಡೆ ಮತ್ತು ಅಭಿವೃದ್ಧಿ ಇದರ ಪ್ರಮುಖ ಗುರಿ.ಉಳಿತಾಯವಾಗುವ ವಿದ್ಯುತ್‌ನಲ್ಲಿ  ಶೇಕಡಾವಾರು ರಾಜಧನವನ್ನು ಕಂಪೆನಿ ಪಡೆಯುತ್ತದೆ. ಹೀಗಾಗಿ ರೈತರು ಬಿಡಿಗಾಸೂ ಕೊಡಬೇಕಿಲ್ಲ. ರಾಜ್ಯದ ಎಲ್ಲಾ ಭಾಗದಲ್ಲೂ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ಮತ್ತು ರೈತರು ಜಾಗೃತರಾದರೆ ಆದಷ್ಟೂ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಮಾಹಿತಿ ನೀಡುತ್ತಾರೆ `ವೈಲ್ಡ್ ಫ್ಲವರ್~ ಯೋಜನಾ ವ್ಯವಸ್ಥಾಪಕ ಪರಮೇಶ್ವರ ಹೆಗಡೆ.ವಿದ್ಯುತ್ ಅಪವ್ಯಯ ಮತ್ತು ಸದ್ಬಳಕೆ ಕುರಿತು ಮಾಹಿತಿ ಕಲೆ ಹಾಕಲು `ಜಿಪಿಎಸ್~ ವ್ಯವಸ್ಥೆ ಜಾರಿ ಬಗ್ಗೆಯೂ ಸಂಸ್ಥೆ ಚಿಂತಿಸಿದೆ. ಶಕ್ತಿ ಮೂಲಗಳ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಿರುವ ಎನ್‌ಜೆನ್ ಅಂತರ್ಜಲ ಅಭಿವೃದ್ಧಿಗೂ ಇಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.

 

ನೀರಿನ ಒರತೆ ಕಣ್ಮರೆಯಾಗಿರುವ 60 ಪಂಪ್‌ಸೆಟ್‌ಗಳನ್ನು ಮರು ಪೂರಣಗೊಳಿಸಿದೆ. 150 ತೆರೆದ ಬಾವಿಗಳಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿ, ರೈತರ ಹೊಲದಲ್ಲಿ ಮತ್ತೆ ಹಸಿರು ಮರುಕಳಿಸಲು ನೆರವಾಗಿದೆ.

ಈಗ ಸುತ್ತಲಿನ ರೈತರೂ ಇದರಿಂದ ಪ್ರಭಾವಿತರಾಗಿದ್ದಾರೆ, ತಮ್ಮಲ್ಲೂ ಜಾರಿಗೆ ತನ್ನಿ ಎಂಬ ಬೇಡಿಕೆ ಮುಂದಿಡುತ್ತಿದ್ದಾರೆ. ಉಳಿತಾಯ


ವೈಲ್ಡ್‌ಫ್ಲವರ್ ಯೋಜನೆ ಜಾರಿಗೆ ಬಂದದ್ದು ಕಳೆದ ಏಪ್ರಿಲ್‌ನಲ್ಲಿ. ಇದಕ್ಕೂ ಮುನ್ನ ಪ್ರತೀ ಪಂಪ್‌ಸೆಟ್ ಬಳಸುತ್ತಿದ್ದ ಸರಾಸರಿ ವಿದ್ಯುತ್ 1181 ಯೂನಿಟ್. ಸುಧಾರಣೆಗಳ ನಂತರ ಇದು ತಿಂಗಳಿಗೆ ಸರಾಸರಿ 895 ಯೂನಿಟ್‌ಗೆ ಇಳಿಯಿತು. ಆದರೆ ನೀರೆತ್ತುವ ಪ್ರಮಾಣ ಇನ್ನಷ್ಟು ಹೆಚ್ಚಿತ್ತು.ಈಗಿನ ಲೆಕ್ಕಾಚಾರದಂತೆ 280 ಪಂಪ್‌ಸೆಟ್‌ಗಳಿಂದ ವರ್ಷಕ್ಕೆ 9.82 ಲಕ್ಷ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ. ಗ್ರಾಮಾಂತರ ಪ್ರದೇಶದ ಮನೆಯೊಂದು ತಿಂಗಳಿಗೆ ಸರಾಸರಿ 30 ಯೂನಿಟ್ ವಿದ್ಯುತ್ ಬಳಸುತ್ತದೆ ಎಂದು ಅಂದಾಜು ಮಾಡಲಾಗಿದೆ.ಅಂದರೆ ವೈಲ್ಡ್‌ಫ್ಲವರ್ ಯೋಜನೆ ಅಳವಡಿಕೆ ನಂತರ ಕೇವಲ 280 ಪಂಪ್‌ಸೆಟ್‌ಗಳ ಮೂಲಕ ಉಳಿತಾಯವಾಗುವ ವಿದ್ಯುತ್ತಿನಿಂದ ಹಳ್ಳಿಗಾಡಿನ ಸುಮಾರು 2700 ಮನೆಗಳನ್ನು ಬೆಳಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.