ಸೋಮವಾರ, ಜನವರಿ 20, 2020
24 °C

ಕರ್ನಾಟಕ–ಕೇರಳ ಅಧಿಕಾರಿಗಳ ಚರ್ಚೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇರಳ ಸರ್ಕಾರ ಬಂಡೀಪುರ ಅಭಯಾರಣ್ಯದ ಮೂಲಕ ರಾತ್ರಿ ಸಂಚಾರದ ಪ್ರಸ್ತಾವವನ್ನು ಮತ್ತೆ ತಂದಿದ್ದು, ಈ ಸಂಬಂಧ ಅಲ್ಲಿನ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ. ಮೊಹಾಂತಿ, ಡಿ. 10ರಂದು ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಶಿವಶೈಲಂ ಜತೆ ಚರ್ಚೆ ನಡೆಸಲಿದ್ದಾರೆ.ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ (ಸಿ ಅಂಡ್ ಬಿ) ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.ಹೈಕೋರ್ಟ್‌ ಆದೇಶದಂತೆ ಬಂಡೀಪುರದ ಮೂಲಕ ಹಾದುಹೋಗುವ ಎರಡೂ ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.ಹುಣಸೂರು-–ಗೋಣಿಕೊಪ್ಪ-–ಕುಟ್ಟ-ಕರ್ಟೆ  ಕುಲಂ ಮಾರ್ಗವನ್ನು ರಾತ್ರಿ ಸಂಚಾರ ನಿಷೇಧದ ಸಮಯದಲ್ಲಿ ಪರ್ಯಾಯ ಮಾರ್ಗವಾಗಿ ಬಳಸ ಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ. ಇದಲ್ಲದೆ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಮುಖ್ಯ ಕಾರ್ಯದರ್ಶಿಗಳು ಈ ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿ ೨೧೨ಕ್ಕೆ ಪರ್ಯಾಯವಾಗಿ ಕೊಡಗು ಜಿಲ್ಲೆಯ ತಿತಿಮತಿ ಮೂಲಕ (೩೦ ಕಿ.ಮೀ. ಹೆಚ್ಚುವರಿ) ಮಾರ್ಗವಿದ್ದು, ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಆಗುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ.ಪರ್ಯಾಯ ಮಾರ್ಗವನ್ನು ಮೇಲ್ದರ್ಜೆಗೇರಿಸಲು ₨ ೪೮ ಕೋಟಿ ಬಿಡುಗಡೆ ಮಾಡಿದ್ದು, ದುರಸ್ತಿ ಕೆಲಸವು ಈಗಾಗಲೇ ಪೂರ್ಣಗೊಂಡಿದೆ. ಹೈಕೋರ್ಟ್‌ ಪರ್ಯಾಯ ಮಾರ್ಗವನ್ನು ಗುರುತಿಸಿ ಆದೇಶಿಸಿದ್ದು, ಕೇರಳ ಸರ್ಕಾರ ಹಾಗೂ ಅರ್ಜಿದಾರರಾಗಿದ್ದ ಖಾಸಗಿ ಸಾರಿಗೆ ಸಂಸ್ಥೆಗಳು ಇದನ್ನು ಒಪ್ಪಿಕೊಂಡಿವೆ. ಈಗ ಮತ್ತೊಮ್ಮೆ ಪರ್ಯಾಯ ಮಾರ್ಗದ ಚರ್ಚೆ ಅಗತ್ಯವಿಲ್ಲ ಎಂದು ವನ್ಯಜೀವಿ ಪರ ಸಂಘಟನೆಗಳು ಅಭಿಪ್ರಾಯಪಟ್ಟಿವೆ.

ಪ್ರತಿಕ್ರಿಯಿಸಿ (+)