ಮಂಗಳವಾರ, ಜೂನ್ 15, 2021
27 °C

ಕಲಘಟಗಿ: ಬೆನ್ನುಬಿಡದ ಜಲದುರಂತಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಘಟಗಿ: ಪಟ್ಟಣದ ಕೆರಿ ಓಣಿಯ ಅಗಸರ ಕುಟುಂಬದ ಪರ್ವೀನ್ ಬಾನು ಎಂಬ ಯುವತಿಯನ್ನು ಪಕ್ಕದ ತಾಲ್ಲೂಕಿನ ಹಳಿಯಾಳದ ನಾಲಬಂದ ಕುಟುಂಬದ ಮುಸ್ತಾಕ್ ಅಹ್ಮದ್ ಎಂಬ ವರನಿಗೆ ಮದುವೆ ನಿಶ್ಚಯ ಆಗಿತ್ತು. ಎಲ್ಲವೂ ಸುಸೂತ್ರವಾಗಿದ್ದರೆ ಮದುವೆ ನಡೆದು ಇಡೀ ಓಣಿಯಲ್ಲಿ ಸಂಭ್ರಮ ಇರುತ್ತಿತ್ತು.

 

ಆದರೀಗ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಪರ್ವೀನ್ ಬಾನು ಅವರ ಚಿಕ್ಕಮ್ಮನ ಮಗ ಸಾಹಿಲ್ ಮದುವೆ ಮೊದಲ ದಿನ ಮತ್ತು ರಾತ್ರಿಯೂ ಪೂರ್ಣ ಮಂಗಲ ಕಾರ್ಯಕ್ಕಾಗಿ ದುಡಿದು ದಣಿದಿದ್ದ. ಈ ಕಾರ್ಯಕ್ಕೆ ಬಂದ ಬೆಳಗಾವಿಯ ತಬ್ರೇಜ್ ಮತ್ತು ಕಾವಲವಾಡದ ರುಸ್ತುಂ ಅವರೊಂದಿಗೆ ಸ್ನಾನಕ್ಕೆಂದು ಪಟ್ಟಣದ ದೊಡ್ಡ ಕೆರೆಯಾದ ರುಸ್ತುಂಸಾಬ್ ಕೆರೆಗೆ ಹೋಗಿದ್ದವನು ಮತ್ತೆ ಬರಲಿಲ್ಲ. ಇವರು ಕೆರೆಯಲ್ಲಿ ನೀರಾಟವಾಡಲು ಇಳಿದಾಗ, ದಡದ ಪಕ್ಕದಲ್ಲಿಯೇ, ಕೈಕಾಲು ಬಡಿಯುತ್ತಿದ್ದಾಗ, ಕೆರೆಯ ಅಂಗಳ ಆಳಕ್ಕಿರುವುದು ಅರಿವಾಗದೇ ಜಾರಿದ್ದಾರೆ. ಈಜು ಬಾರದವರನ್ನು ರಕ್ಷಿಸಲು ಮುಂದಾದ ಸಾಹಿಲ್ ಸಹಿತ ನೀರುಪಾಲಾಗಿ ಮೂವರೂ ಮೃತರಾದರು.ಸುದ್ದಿ ಕೇಳಿದಾಗ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿತು. ಬೆಳಿಗ್ಗೆ 11.15ಕ್ಕೆ ನಿಕಾಹ್ ಶಾಸ್ತ್ರ ಮುಗಿಯುವಷ್ಟರಲ್ಲಿ ಎರಗಿದ ದುರಂತದ ಸುದ್ದಿಯಿಂದ ಎಲ್ಲರೂ ಗರಬಡಿದಂತಾದರು. ಮದುವೆಗೆ ಮಾಡಿದ ಅಡಿಗೆಯನ್ನು ಪಟ್ಟಣದ ಎಪಿಎಂಸಿ ಸೇರಿದಂತೆ ಅಲ್ಲಲ್ಲಿ ನಿಂತಿದ್ದ ಜನರಿಗೆ ಉಣಬಡಿಸಿದರು. ತಾವ್ಯಾರೂ ಉಣ್ಣಲಿಲ್ಲ. ಇದಕ್ಕಿಂತ ಹಿಂದೆ ಆರೇಳು ವರ್ಷಗಳ ಹಿಂದೆ ಇದೇ ಕುಟುಂಬದ ರಬ್ಬಾನಿ ಎಂಬ ಹದಿನೆಂಟರ ಹರೆಯದ ಹುಡುಗನೊಬ್ಬ, ಇದೇ ಕೆರೆಯಲ್ಲಿ ಮೃತನಾಗಿದ್ದ ಘಟನೆಯನ್ನು ಎಲ್ಲರೂ ಜ್ಞಾಪಿಸಿಕೊಂಡರು. ಸುದ್ದಿ ತಿಳಿದು ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಹರಸಾಹಸ ನಡೆಸಿದರೂ, ಸುಲಭದಲ್ಲಿ ಶವಗಳನ್ನು ಹೊರತೆಗೆಯಲಾಗಲಿಲ್ಲ. ಕನಿಷ್ಠ 25 ಅಡಿಗಳಷ್ಟು ಆಳವಿರುವ ಕೆರೆಯಲ್ಲಿ ಜಲಶೋಧಕಗಳಿಂದ ಹೊರತೆಗೆಯಲು ಅಸಾಧ್ಯವಾದಾಗ ಅಗ್ನಿಶಾಮಕದಳದ ಅಧಿಕಾರಿ ವಿನಾಯಕ ಕಲ್ಗುಟಕರ ಮಾರ್ಗದರ್ಶನದಲ್ಲಿ ಸೈಯದ್ ಖಾದ್ರಿ, ಇ.ಡಿ. ತಮ್ಮಣ್ಣವರ, ಸಿ.ಎಚ್. ಪೂಜಾರ, ಶಿವಾನಂದ ಕನ್ನೂರ, ಅರ್ಜುನ ಬಂಡಿವಡ್ಡರ, ಅಜಿತ ಅಕ್ಕತಂಗಿಯರಹಾಳ, ಶಿವಪ್ಪ ಧಾರವಾಡ ಮೊದಲಾದವರು ನೀರಿಗೆ ಜಿಗಿದು ಶವಗಳನ್ನು ಹೊರತರುವಲ್ಲಿ ಯಶಸ್ವಿಯಾದರು. ರಕ್ಷಣೆ ಇಲ್ಲದ ಕೆರೆ: ಪಟ್ಟಣದ ದೊಡ್ಡ ಕೆರೆ, ರುಸ್ತುಂಸಾಬ್ ಕೆರೆ, ಮೃತ್ಯುಂಜಯ ಕೆರೆ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಕೆರೆ ದೈವೀ ನಂಬಿಕೆಗಳಿಗೆ ನೆಲೆಯಾಗಿದೆ. ಕಳೆದ 8-10 ವರ್ಷಗಳ ಹಿಂದೆ, ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ರಚನೆಯ ಸಂದರ್ಭದಲ್ಲಿ ಮಾರ್ಗ ನಿರ್ಮಾಣಕ್ಕೆ ಮಣ್ಣು ಅಗತ್ಯವಿದ್ದಾಗ, ಜೆಸಿಬಿ ಯಂತ್ರದ ಸಹಾಯದಿಂದ ಆಳದವರೆಗೆ ಹೂಳೆತ್ತಲಾಗಿತ್ತು. ಇದರಿಂದ ಕೆರೆ ತುಂಬ ಆಳವಾಗಿತ್ತು. ಈ ಕೆರೆಯ ಕಾವಲು ಕಾಯುವವರು ಯಾರೂ ಇಲ್ಲದಂತಾಗಿದೆ. ಕೆರೆಗೆ ಕಾವಲಿನ ಅಗತ್ಯವಿದೆ ಎಂದು ನೆರೆದಿದ್ದ ನಾಗರಿಕರು ಹೇಳುತ್ತಿದ್ದರು.ಸಾಲು ಸಾಲು ದುರಂತ: ತಾಲ್ಲೂಕಿನಲ್ಲಿ ಕೆರೆಗಳಿಗೆ ಬರವಿಲ್ಲ. ಅಂತೆಯೇ ದುರಂತಗಳಿಗೂ ಕೊನೆಯಿಲ್ಲ. ಕಳೆದ ವರ್ಷದ ಕೊನೆಯಲ್ಲಿ ತಾಲ್ಲೂಕಿನ ಕಂದ್ಲಿ ತಟ್ಟಿಹಳ್ಳ ಜಲಾಶಯದ ಹಿನ್ನೀರಿನಲ್ಲಿ ಐವರು ಕೃಷಿ ಕಾರ್ಮಿಕರು ತೆಪ್ಪದ ದುರಂತದಲ್ಲಿ ಮೃತರಾಗಿದ್ದರು. ವರ್ಷ ಗತಿಸುವಷ್ಟರಲ್ಲಿ ಜಿಲ್ಲೆಯಲ್ಲಿ ದೊಡ್ಡಕೆರೆ ಎಂದೇ ಹೆಸರಾದ, ನೀರಸಾಗರ ಕೆರೆಯಲ್ಲಿ ಕಳೆದ ಡಿಸೆಂಬರದಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದರು. ಅದು ಮರೆಯಾಗುವಷ್ಟರಲ್ಲಿ ರುಸ್ತುಂಸಾಬ್ ಕೆರೆಯ ದುರಂತ ನಡೆದಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.