ಮಂಗಳವಾರ, ಏಪ್ರಿಲ್ 20, 2021
25 °C

ಕಲಿಯುವವರ ಕಿರುಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಕಲಚೇತನ ಮಕ್ಕಳ ಆಟಕ್ಕೆ ಭಿನ್ನ ಸ್ಪರ್ಶ ನೀಡುವ ಕೆಲಸವನ್ನು ಇಂದು ಅನಿಮೇಷನ್ ಶಿಕ್ಷಣ ಸಂಸ್ಥೆಯೊಂದು ಮಾಡುತ್ತಿದೆ.ಹೆಣೆಯುವ ಯೋಜನೆ, ಕೈಗೊಳ್ಳುವ ಕಾರ್ಯ, ಸಿಗುವ ಪ್ರೋತ್ಸಾಹ, ಅದನ್ನು ಬಳಸಿಕೊಳ್ಳುವ ರೀತಿ ಉತ್ತಮವಾಗಿದ್ದರೆ ವಿದ್ಯಾರ್ಥಿಗಳ ಸಾಧನೆಗೆ ಶಹಬ್ಬಾಸ್‌ಗಿರಿ ಸಲ್ಲುತ್ತದೆ.ಯುವಜನತೆಯ ಮನದಲ್ಲಿ ಮೂಡುವ ಯೋಚನೆ ಸಾಕಾರಗೊಂಡರೆ ಅದೊಂದು ಮಹಾನ್ ಸಾಧನೆಯಾಗಿ ಹೊರ ಹೊಮ್ಮುತ್ತದೆ. ಇಂಥದ್ದೇ ಒಂದು ಸಾಧನೆ ಐದು ವಿದ್ಯಾರ್ಥಿಗಳ ತಂಡದಿಂದ ಆಗಿದೆ. ಅದಕ್ಕೆ ಪೋಷಣೆ ನೀಡಿದ್ದು `ವಿಜ್‌ಟೂನ್ಜ್ ಅನಿಮೇಷನ್ ಅಕಾಡೆಮಿ~.ವಿಕಲಚೇತನ ಮಕ್ಕಳ ಕುರಿತು ಸಂಸ್ಥೆಯ ಎರಡನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳು ಕಿರುಚಿತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಮಕ್ಕಳ ಭಾವನೆಗಳನ್ನು ಉತ್ತಮವಾಗಿ ಸೆರೆ ಹಿಡಿದಿರುವ ಈ ಚಿತ್ರ ವಿಕಲಚೇತನ ಮಕ್ಕಳ ಬಗ್ಗೆ ಮರುಕ ಹುಟ್ಟಿಸುವ ಬದಲು ಉತ್ತೇಜಿಸುವ ಭಾವನೆ ಮೂಡಿಸುತ್ತದೆ.

 

`ಸಮರ್ಥನಂ~ ಸಂಸ್ಥೆಯ ಮಕ್ಕಳ ಕುರಿತ ಈ ಚಿತ್ರವನ್ನು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಆಸಕ್ತಿಯಿಂದ ಸೆರೆಹಿಡಿದಿದ್ದಾರೆ. ಇಲ್ಲಿ ಮಕ್ಕಳ ಸಹಜ ಹಾವ-ಭಾವ, ಆಂಗಿಕ ಅಭಿನಯವೇ ಬಂಡವಾಳ. ಇದನ್ನು ಚಿತ್ರವಾಗಿಸಿರುವಲ್ಲಿ ವಿದ್ಯಾರ್ಥಿಗಳ ಪ್ರೌಢಿಮೆ ಎದ್ದುಕಾಣುತ್ತದೆ.ಜೆ.ಪಿ.ನಗರದ ವಿಜ್‌ಟೂನ್ಜ್ ಅನಿಮೇಷನ್ ಅಕಾಡೆಮಿ ವಿದ್ಯಾರ್ಥಿಗಳಾದ ಬಿಂದು ಆರ್, ಶ್ವೇತಾ ಬಿ.ಎಂ, ರಾಜೇಶ್ ಕೆ.ಎಚ್, ದೀಪಕ್ ಎಚ್.ವಿ. ಸೇರಿ ಈ ಯೋಜನೆ ಸಿದ್ಧಪಡಿಸಿದ್ದಾರೆ. `ಶಿಕ್ಷಣ ಸಂಸ್ಥೆಯ ಸಹಕಾರ, ಪಾಲಕರ ಪ್ರೋತ್ಸಾಹ ಈ ಕಾರ್ಯಕ್ಕೆ ಸಹಕಾರಿಯಾಯಿತು.ಚಿತ್ರೀಕರಣದ ವೇಳೆ ಸಾರ್ವಜನಿಕರು, ಸಂಸ್ಥೆಗಳು, ಸರ್ಕಾರದಿಂದ ಸಹಕಾರ ಸಿಕ್ಕಿದ್ದರೆ ಇನ್ನಷ್ಟು ಗುಣಮಟ್ಟದ ಚಿತ್ರ ಸಿದ್ಧಪಡಿಸಬಹುದಿತ್ತು~ ಎನ್ನುತ್ತಾರೆ ಇವರು.

ವಿದ್ಯಾರ್ಥಿಗಳೆಲ್ಲ ಮೂರು ವರ್ಷದ ಪದವಿ ಕಲಿಕೆಯಲ್ಲಿ ಒಂದು ವರ್ಷ ಪೂರೈಸಿಕೊಂಡಿದ್ದಾರೆ.ತರಗತಿ ಅವಧಿ ಹೊರತುಪಡಿಸಿ ರಜೆ ಹಾಗೂ ಸಮಯ ಸಿಕ್ಕಾಗೆಲ್ಲಾ ಓಡಾಡಿ ಚಿತ್ರ ಸಿದ್ಧಪಡಿಸಿಕೊಂಡಿದ್ದಾರೆ. ಕಲಿಕೆಯ ಜತೆ ಜತೆಗೆ ಮೊದಲ ವರ್ಷಾಂತ್ಯದೊಳಗೇ ಕಿರುಚಿತ್ರ ಸಿದ್ಧಪಡಿಸಿ ನೀಡುತ್ತಿರುವುದು ಅವರಿಗೆ ಹೆಮ್ಮೆಯ ಸಂಗತಿ.ತಂಡದ ನಾಯಕತ್ವ ವಹಿಸಿದ್ದವರು ಕೋರಮಂಗಲದ ಬಿಂದು ಆರ್.  ಪಿಯುಸಿ ಮುಗಿಸಿ ಅನಿಮೇಷನ್ ಕಲಿಯುತ್ತೇನೆ ಅಂದಾಗ ಪಾಲಕರು ವಿರೋಧಿಸಿದ್ದರು. ಆದರೆ ವರ್ಷದಲ್ಲಿ ಇವರ ಕೆಲಸ ಕಂಡು ಎಲ್ಲರೂ ಮೆಚ್ಚಿದ್ದಾರೆ. ಇದರ ಹಿಂದೆ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರ ಎನ್ನುತ್ತಾರೆ ಬಿಂದು.ಜೆ.ಪಿ.ನಗರದ ನಿವಾಸಿ ಶ್ವೇತಾ ಕಲಿಕೆಯ ಜತೆ ವ್ಯಾಪಾರವನ್ನೂ ನಡೆಸುತ್ತಿದ್ದಾರೆ. ಇನ್ನಷ್ಟು ಕಲಿಯುವ ಆಸಕ್ತಿ ಹೊಂದಿರುವ ಇವರಿಗೆ ಈ ಚಿತ್ರ ಸಮಾಧಾನ ತಂದಿದೆ.

ಕೋಲಾರದ ರಾಜೇಶ್ ಕೆ.ವಿ. ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂಬುದನ್ನು ಇಲ್ಲಿ ತೋರಿಸಿದ್ದಾರೆ. ಅನಿಮೇಷನ್ ಕಲಿಕೆಗಾಗಿಯೇ ಬೆಂಗಳೂರಿಗೆ ಬಂದ ಇವರ ಕೈ ಹಿಡಿದದ್ದು ವಿಜ್‌ಟೂನ್ಜ್. ಇಂದು ಇಲ್ಲಿ ಕಲಿತು ಒಂದು ಕಿರುಚಿತ್ರ ಕೂಡ ಮಾಡಿ ಯಶ ಸಾಧಿಸಿದ್ದೇನೆ ಎನ್ನುತ್ತಾರೆ ಅವರು.ಹೊಸಕೋಟೆಯಿಂದ ನಿತ್ಯ ಬೆಂಗಳೂರಿಗೆ ಓಡಾಡುವ ದೀಪಕ್ ಎಚ್.ವಿ. ಒಬ್ಬ ಸಹೃದಯಿ ಛಾಯಾಗ್ರಾಹಕ. ಕೆಲವೆಡೆ ಮೊಬೈಲ್ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿ ಜಯಿಸಿದ್ದಾರೆ. ಉತ್ಸಾಹಕ್ಕೆ ತಕ್ಕ ಪ್ರೋತ್ಸಾಹವೂ ಸಿಕ್ಕಿರುವುದು ಅವರ ಯಶಸ್ಸಿನ ಓಟಕ್ಕೆ ಇಂಬುಗೊಟ್ಟಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.