ಕಲೆಗೆ ಡಿಜಿಟಲ್ ತಂತ್ರಜ್ಞಾನದ ಬಲೆ

ಆನಿಮೇಷನ್ನಂಥ ಡಿಜಿಟಲ್ ಕಲೆ ಈಗ ಹೆಚ್ಚು ಪ್ರಚಲಿತದಲ್ಲಿದೆ. ಈ ಕ್ಷೇತ್ರದಲ್ಲಿ ದುಡಿಯುತ್ತಿರುವವರೆಲ್ಲರೂ ಕಲಾವಿದರಲ್ಲ. ಆದ್ದರಿಂದಲೇ ಒಳ್ಳೆಯ ಕಲಾ ಸೃಷ್ಟಿ ಆಗುತ್ತಿಲ್ಲ ಎಂಬ ಬೇಸರದ ಮಾತುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಲಲಿತ ಕಲಾ ಕಾಲೇಜುಗಳಲ್ಲಿ ಆರಂಭಿಸಿರುವ ಡಿಜಿಟಲ್ ಕಲೆಯ ಅಭ್ಯಾಸದ ಯೋಜನೆ ಭರವಸೆ ಸೃಷ್ಟಿಸಿದೆ.
ಭಾರಿ ಸುದ್ದಿ ಮಾಡಿ ಚಿತ್ರಮಂದಿರಗಳಲ್ಲಿ ಜನಜಾತ್ರೆ ಸೃಷ್ಟಿಸಿದ ಸಿನಿಮಾ ಬಾಹುಬಲಿ. ಈ ಚಿತ್ರ ವೀಕ್ಷಿಸಿ ಬಂದವರೆಲ್ಲರೂ ಹೇಳಿದ ಮಾತು ಒಂದೇ: ‘ಅದ್ಭುತ, ಏನು ವರ್ಕ್ ಮಾಡಿದ್ದಾರಪ್ಪಾ... ಒಂದೊಂದು ಸೀನ್ ಕೂಡ ರೋಮಾಂಚಕ...’
ಈ ಚಿತ್ರಕ್ಕೆ ಇಂಥ ಕಮೆಂಟ್ ಬರಲು, ಚಿತ್ರ ಸೂಪರ್ ಹಿಟ್ ಆಗಲು ಪ್ರಮುಖ ಕಾರಣ ಇದರ ಹಿಂದೆ ದುಡಿದ ಡಿಜಿಟಲ್ ಕಲಾವಿದರು. ಗ್ರಾಫಿಕ್ ಮತ್ತು ಡಿಜಿಟಲ್ ಕಲೆಯನ್ನು ಬಳಸಿ ಹೆಸರು ಗಳಿಸಿದ ಇಂಥ ಸಿನಿಮಾಗಳು ಇತ್ತೀಚೆಗೆ ಆಗಾಗ ಸದ್ದು–ಸುದ್ದಿ ಮಾಡುತ್ತಿರುತ್ತವೆ. ಕಲಾವಿದರ ಸಂಖ್ಯೆ ಹೆಚ್ಚಿದಂತೆ ಚಿತ್ರದ ಯಶಸ್ಸು ಕೂಡ ಹೆಚ್ಚಿದೆ. ಇದು ಡಿಜಿಟಲ್ ಕಲೆಯ ವೈಶಿಷ್ಟ್ಯ. ಬಾಹುಬಲಿ ಚಿತ್ರದ ಪರದೆಯ ಹಿಂದೆ 200 ಮಂದಿ ಕಲಾವಿದರ ಪ್ರಯತ್ನವಿದೆ ಎಂದ ಮೇಲೆ ಚಿತ್ರ ಹಿಟ್ ಆಗದೇ ಇರುತ್ತದೆಯೇ?
ಚಿತ್ರ ಕಲೆ ಎಂದರೆ ಕುಂಚದಲ್ಲಿ ಬಣ್ಣವನ್ನು ಅದ್ದಿಕೊಂಡು ಕ್ಯಾನ್ವಾಸ್ ಮುಂದೆ ನಿಂತು ಗಡ್ಡ ತಿರುವುತ್ತ ಭಾವಲೋಕದಲ್ಲಿ ಲೀನವಾಗುವ ಕಲಾವಿದನ ಚಿತ್ರ ಮೂಡುವುದು ಸಾಮಾನ್ಯ. ಆದರೆ ಈಗ ಕಾಲ ಬದಲಾಗಿದೆ; ಪರಿಸ್ಥಿತಿಯೂ. ಕಲೆಯಲ್ಲಿ ಆಸಕ್ತಿ ಇರುವವರು ಕಂಪ್ಯೂಟರ್ನಲ್ಲೇ ಕಲ್ಪನಾತೀತ ಪ್ರಪಂಚವನ್ನು ಸೃಷ್ಟಿಸುವ ಸಾಧ್ಯತೆಗಳು ಈಗ ಇವೆ. ಇದಕ್ಕೆ ಡಿಜಿಟಲ್ ಕಲೆ ಅವಕಾಶ ಒದಗಿಸಿದೆ. ಈ ಕಲೆ ಕೇವಲ ಹವ್ಯಾಸಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಸಾಕಷ್ಟು ಬೇಡಿಕೆ ಇರುವ ಇದು ಕೈತುಂಬ ಹಣ ಸಂಪಾದನೆ ಮಾಡುವ ‘ಕಲೆ’ಯೂ ಹೌದು.
ಸ್ವಲ್ಪ ದುಬಾರಿ ಎನಿಸುವ ಡಿಜಿಟಲ್ ಕಲಾ ಪ್ರಪಂಚಕ್ಕೆ ಬಡವರು, ಮಧ್ಯಮ ವರ್ಗದವರು ಕೂಡ ಪ್ರವೇಶಿಸಲು ರಾಜ್ಯ ಸರ್ಕಾರದ ‘ಕಲಾ ಕಾಲೇಜುಗಳ ಡಿಜಿಟಲೀಕರಣ (ಡಿಜಿಟಲೈಸೇಷನ್ ಆಫ್ ಆರ್ಟ್ ಕಾಲೇಜ್ಸ್–ಡಿಎಸಿ)’ ಯೋಜನೆ ಹಾದಿ ಒದಗಿಸಿದೆ. ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದು ಅಸೋಸಿಯೇಷನ್ ಆಫ್ ಬೆಂಗಳೂರು ಆನಿಮೇಷನ್ ಇಂಡಸ್ಟ್ರಿ (ಅಬಾಯ್).
ರಾಜ್ಯದ ಏಳು ಕಲಾ ಕಾಲೇಜುಗಳಲ್ಲಿ ಈಗಾಗಲೇ ಈ ಕೋರ್ಸ್ ನಡೆಯುತ್ತಿದೆ. ಎರಡನೇ ಹಂತದಲ್ಲಿ ಮತ್ತೆ ಏಳು ಕಾಲೇಜುಗಳಲ್ಲಿ ಯೋಜನೆ ಜಾರಿಗೊಳಿಸುವ ಸಿದ್ಧತೆ ಅಂತಿಮ ಹಂತದಲ್ಲಿದೆ. ಮೂರನೇ ಹಂತದಲ್ಲಿ ಮತ್ತೆ ಏಳು ಕಾಲೇಜುಗಳಿಗೆ ಯೋಜನೆ ಕಾಲಿಡಲಿದೆ.
ಯೋಜನೆ ಏನು – ಯಾಕೆ?
ಕಲಾ ಕಾಲೇಜುಗಳಲ್ಲಿ ಸಾಂಪ್ರದಾಯಿಕ ಚಿತ್ರ, ಶಿಲ್ಪ ಮತ್ತಿತರ ಕಲೆಗಳನ್ನು ಕಲಿಯುವವರಿಗೆ ಡಿಜಿಟಲ್ ಲೋಕದ ಪರಿಚಯ ಮಾಡಿಸುವುದು ಯೋಜನೆಯ ಮುಖ್ಯ ಉದ್ದೇಶ. ಆಯ್ಕೆಯಾದ ಕಾಲೇಜುಗಳಿಗೆ ಕಂಪ್ಯೂಟರ್ ಮತ್ತಿತರ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಅಬಾಯಿ ಸಂಸ್ಥೆಯವರು ತರಬೇತಿಯ ಜವಾಬ್ದಾರಿ ನಿಭಾಯಿಸುತ್ತಾರೆ. ಮೂರು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಪ್ರತಿ ಕಾಲೇಜಿಗೆ ಗರಿಷ್ಠ ₹ ಐದು ಲಕ್ಷದ ವರೆಗೆ ಆರ್ಥಿಕ ನೆರವನ್ನೂ ಒದಗಿಸಲಾಗುತ್ತದೆ. ಆನಿಮೇಷನ್ ಕಲೆಯಲ್ಲಿ ಯುವ ಕಲಾವಿದರನ್ನು ಪಳಗಿಸುವುದು ಇದರ ಹಿಂದಿರುವ ಕಾಳಜಿ.
ಡಿಜಿಟಲ್ ಕಲೆಗೆ ಭಾರಿ ಬೇಡಿಕೆ ಇದೆ ನಿಜ. ಆದರೆ ಪರಿಪಕ್ವವಾದ ಕಲಾಕೃತಿಗಳು ಸೃಷ್ಟಿಯಾಗುತ್ತಿಲ್ಲ ಎಂಬ ವಾದವಿದೆ. ಕಂಪ್ಯೂಟರ್ ಬಳಕೆಯಲ್ಲಿ ಹೆಚ್ಚು ಪರಿಜ್ಞಾನವಿದ್ದು ಕಲೆಯ ಕುರಿತು ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಆದ್ದರಿಂದ ಕಲಾವಿದರ ಬಳಿಗೇ ಡಿಜಿಟಲ್ ಪ್ರಪಂಚವನ್ನು ತೆಗೆದುಕೊಂಡು ಹೋಗಲು ಸರ್ಕಾರ ನಿರ್ಧರಿಸಿತು. ಇದರ ಫಲ ಡಿ.ಎ.ಸಿ.
‘ಭಾತರದಲ್ಲಿ ಸದ್ಯ ಆನಿಮೇಷನ್ ವೃತ್ತಿಯಲ್ಲಿ ತೊಡಗಿಸಿಕೊಂಡವರ ಪೈಕಿ ಶೇಕಡಾ 80ರಷ್ಟು ಮಂದಿ ಕಲಾವಿದರಲ್ಲ. ಅವರಿಗೆ ಕಲೆಯನ್ನು ಹೇಳಿಕೊಡುವುದು ಅಸಾಧ್ಯದ ಮಾತು. ಕಲಾವಿದರಿಗೆ ಕಂಪ್ಯೂಟರ್ನಲ್ಲಿ ಚಿತ್ರ ಬಿಡಿಸಲು ಹೇಳುವುದು ಸುಲಭ. ಆದ್ದರಿಂದ ಈ ಯೋಜನೆ ಸಫಲವಾಗಲಿದೆ’ ಎನ್ನುತ್ತಾರೆ ಅಬಾಯಿ ಸಂಸ್ಥೆಯ ಸಚಿನ್ ಖಂಖೋಜೆ.
ಡಿಜಿಟಲ್ ಕಲೆ ತೆರೆದುಕೊಳ್ಳುವ ಬಗೆ
ಡಿಜಿಟಲ್ ಕಲೆಯಲ್ಲಿ ಮೊದಲು ಕಲಾಕೃತಿಯ ನಿರ್ಮಾಣಕ್ಕೆ ಬೇಕಾದ ಕಥೆಯೊಂದನ್ನು ಸೃಷ್ಟಿಸಲಾಗುತ್ತದೆ. ನಂತರ ಅದನ್ನು ಚಿತ್ರಕಥೆಯಾಗಿ ಪರಿವರ್ತಿಸಲಾಗುತ್ತದೆ. ಇದಾದ ನಂತರ ಅದಕ್ಕೊಂದು ಪರಿಕಲ್ಪನೆಯನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಕಥಾವಸ್ತುವಿಗೆ ಅಗತ್ಯವಿರುವ ಜಾಗ, ಕಥಾಪಾತ್ರಗಳು ಇತ್ಯಾದಿಗಳನ್ನು ಸೃಷ್ಟಿಸಲಾಗುತ್ತದೆ.
ಇದಾದ ನಂತರ ಮ್ಯಾಟ್ ಪೇಂಟಿಂಗ್ ಮಾಡಲಾಗುತ್ತದೆ. ಸೆಟ್ನಲ್ಲಿ ಏನೇನು ಬೇಕೆಂಬುದನ್ನು ಈ ಸಂದರ್ಭದಲ್ಲಿ ‘ಕಂಪ್ಯೂಟರ್ ಕಲಾವಿದ’ ನಿರ್ಧರಿಸ ಬೇಕಾಗುತ್ತದೆ. ವಾಸ್ತವದಲ್ಲಿ ಇಲ್ಲದ್ದನ್ನು ಸೃಷ್ಟಿ ಮಾಡುವ ಕಲಾವಿದನ ಪ್ರತಿಭೆ ಈ ಸಂದರ್ಭದಲ್ಲಿ ತೆರೆದುಕೊಳ್ಳಬೇಕು. ‘ಡಿಜಿಟಲ್ ಕಲೆ ಇಂದು ಕೇವಲ ಗೇಮ್ಸ್ ಮತ್ತು ಸಿನಿಮಾಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ಶಿಕ್ಷಣ, ಕ್ರೀಡೆ ಮುಂತಾದ ಎಲ್ಲ ಕ್ಷೇತ್ರಗಳಿಗೂ ಇದರ ಅಗತ್ಯವಿದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾನವ ದೇಹ ರಚನೆ ಬಗ್ಗೆ ಕಲಿಯಲು ಇದು ಅತಿ ಉಪಯುಕ್ತ ಆಗುತ್ತಿದೆ. ದೇಹದ ಒಳ ಹಾಗೂ ಹೊರಗಿನ ಅಂಗಗಳ ಕಾರ್ಯವನ್ನು ಜೀವಂತ ದೇಹದಂತೆ ಮಾಡಿ ತೋರಿಸಲು ತಜ್ಞ ಕಲಾವಿದನಿಗೆ ಸಾಧ್ಯ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಂತೂ ಇನ್ನೂ ಉಪಯುಕ್ತ. ಇ–ಲರ್ನಿಂಗ್ನಲ್ಲೂ ಡಿಜಿಟಲ್ ಕಲೆ ಮಹತ್ವದ ಪಾತ್ರ ವಹಿಸುತ್ತದೆ. ಯುದ್ಧೋಪಕರಣಗಳ ಬಗ್ಗೆ ಸೈನಿಕರಿಗೆ ತರಬೇತಿ ನೀಡುವಾಗಲು ಇದನ್ನು ಬಳಸಲಾಗುತ್ತದೆ’ ಎಂದು ಖಂಖೋಜೆ ಹೇಳುತ್ತಾರೆ.
ಮೊದಲ ಹಂತದಲ್ಲಿ ತರಬೇತಿ ನೀಡುತ್ತಿರುವ ಕಾಲೇಜುಗಳು
1.ಚಿತ್ರ ಕಲಾ ಪರಿಷತ್ ಕಾಲೇಜು, ಬೆಂಗಳೂರು
2.ಮಾತೋಶ್ರೀ ಮಾನೇಕ್ ಬಾಯಿ ಕೋತಂಬ್ರಿ ಕಾಲೇಜು. ಕಲಬುರ್ಗಿ
3.ಜೆ.ಎಸ್.ಎಸ್.ಹಾಲಭಾವಿ ಕಾಲೇಜು, ಧಾರವಾಡ
4.ವಿಜಯ ಕಾಲೇಜು, ಗದಗ
5.ವಿ.ವಿ. ದೃಶ್ಯ ಕಲಾ ಕಾಲೇಜು, ದಾವಣಗೆರೆ
6.ಲಲಿತ ಕಲೆ ಆನಿಮೇಷನ್ ಮತ್ತು ವಿನ್ಯಾಸ ಕೇಂದ್ರ, ತುಮಕೂರು
7.ಶ್ರೀ ವಿಜಯ ಮಹಾಂತೇಶ ಲಲಿತ ಕಲಾ ಕಾಲೇಜು, ಹುಬ್ಬಳ್ಳಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.