ಮಂಗಳವಾರ, ಮೇ 24, 2022
31 °C

ಕಲೆಯ ಜತೆ ಜೇನುಗೂಡು

ಪವಿತ್ರ ಮೊತ್ತಹಳ್ಳಿ Updated:

ಅಕ್ಷರ ಗಾತ್ರ : | |

ಮೈಸೂರು ವಿಶ್ವವಿದ್ಯಾಲಯದ ಕೆಲ ವಿದ್ಯಾರ್ಥಿಗಳು ಕಲಾ ತಂಡವೊಂದನ್ನು ಕಟ್ಟಿಕೊಂಡು ದೇಶದ ಹಲವು ರಾಜ್ಯಗಳನ್ನು ಸುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯುಳ್ಳ ಈ ಕಲಾತಂಡ ನಾಟಕ ಸೇರಿದಂತೆ ಹಲವು ಜನಪದ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದೆ. ಕಲಿಕೆಯ ಜತೆಯಲ್ಲಿಯೇ ಈ ಯುವಕರು ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿ.ಕಂಸಾಳೆ, ಪೂಜಾ ಕುಣಿತ, ದೇವರ ಹಾಡು, ಡೊಳ್ಳು ಕುಣಿತಕ್ಕೆ ಈ ತಂಡ ಸೈ ಎನಿಸಿಕೊಂಡಿದೆ. ರಾಷ್ಟ್ರಮಟ್ಟದಲ್ಲೂ ಗಮನ ಸೆಳೆಯುವ ಪ್ರದರ್ಶನ ನೀಡಿದೆ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ಈ ತಂಡ  ಹುಟ್ಟಿಕೊಂಡಿತ್ತು. ಸದ್ಯ ಎಂಟು ಜನ ಸದಸ್ಯರಿರುವ ಈ ಹವ್ಯಾಸಿ ಕಲಾ ತಂಡದ ಹೆಸರು `ಜೇನುಗೂಡು~.ನಾವೆಲ್ಲರೂ ಜೇನು ಹುಳಗಳ ಹಾಗೆಯೇ ಜತೆಗಿದ್ದೇವೆ ಎನ್ನುತ್ತಾರೆ ಈ ತಂಡದ ಹಿಂದಿನ ರೂವಾರಿ, ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿ ನಿಂಗರಾಜು. ಆಕಾಶವಾಣಿ ಕಲಾವಿದ ರಾಮಚಂದ್ರ, ಅರ್ಥಶಾಸ್ತ್ರ ಸಂಶೋಧನಾ ವಿದ್ಯಾರ್ಥಿ ಕಿರಣ್, ಪತ್ರಿಕೋದ್ಯಮ ವಿದ್ಯಾರ್ಥಿ ಪ್ರೇಮ್, ಗಣೇಶ, ದೇವಾನಂದ, ರಾಮಸ್ವಾಮಿ ಕೂಡ ತಂಡದ ಸದಸ್ಯರು.ಅಣ್ಣಾ ಮಲೈ ವಿಶ್ವವಿದ್ಯಾಲಯದಲ್ಲಿ 2004ರಲ್ಲಿ ನಡೆದ ವಿ.ವಿ ಮಟ್ಟದ ಪ್ರದರ್ಶನದಲ್ಲಿ ಈ ಕಲಾ ತಂಡ ಮೊದಲ ಪ್ರದರ್ಶನ ನೀಡಿತು.  ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 2004-05ರಲ್ಲಿ ನಡೆದ ಯುವ ಜನೋತ್ಸವದಲ್ಲಿ ವೀರಗಾಸೆ, ಡೊಳ್ಳು ಕುಣಿತ, ಪಟ್ಟದ ಕುಣಿತವನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿತು.

 

ಬೆಂಗಳೂರಿನಲ್ಲಿ 2006ರಲ್ಲಿ ನಡೆದ ದಕ್ಷಿಣ ವಲಯದ ಯುವ ಜನೋತ್ಸವದಲ್ಲಿ ಮೈಸೂರು ವಿದ್ಯಾರ್ಥಿಗಳು 28 ವರ್ಷಗಳ ನಂತರ `ಸಮಗ್ರ ಚಾಂಪಿಯನ್‌ಷಿಪ್~ ಪಟ್ಟವನ್ನು ಪಡೆದರು. ಈ ಉತ್ಸವದಲ್ಲಿ ಜೇನುಗೂಡು ತಂಡ ಗಮನೀಯ ಪ್ರದರ್ಶನ ನೀಡಿತು.ಈ ತಂಡ ಕಲ್ಲಿಕೋಟೆ ವಿ.ವಿ, ಶಿವಮೊಗ್ಗ, ಮಣಿಪುರ, ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕಂಸಾಳೆ, ಪೂಜಾ ಕುಣಿತವನ್ನು ಪ್ರದರ್ಶಿಸಿ ಭೇಷ್ ಎನಿಸಿಕೊಂಡಿದ್ದಾರೆ. ನವದೆಹಲಿ ಮತ್ತು ಅಸ್ಸಾಂನ ರಾಷ್ಟ್ರೀಯ ನಾಟಕ ಶಾಲೆ ಯಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ.ವಿಶ್ವವಿದ್ಯಾಲಯವು ಈ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತು ದೇಶದ ಹಲವಾರು ಕಡೆಗಳಲ್ಲಿ  ಪ್ರದರ್ಶನಕ್ಕೆ ತೆರಳಲು  ಬೆಂಬಲಿಸುತ್ತಿದೆ. ದಸರಾ ಸಂದರ್ಭದಲ್ಲಿ ನಡೆಯುವ ಉತ್ಸವದಲ್ಲೂ ಈ ತಂಡ ಭಾಗವಹಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.