ಸೋಮವಾರ, ಆಗಸ್ಟ್ 10, 2020
24 °C
ಸಂಪರ್ಕದಿಂದ ದೂರ ರಾಳ್ಳಗಡ್ಡ ತಾಂಡ

ಕಲೆ ಕಣ್ತೆರೆದರೆ ಬಡತನ ಬಾಯ್ದೆರೆದು ಕೂತಿದೆ

ಪ್ರಜಾವಾಣಿ ವಾರ್ತೆ/ ವಿಶೇಷ ವರದಿ / -ಬಿ.ಮಂಜುನಾಥ Updated:

ಅಕ್ಷರ ಗಾತ್ರ : | |

ಕಲೆ ಕಣ್ತೆರೆದರೆ ಬಡತನ ಬಾಯ್ದೆರೆದು ಕೂತಿದೆ

ಗುಡಿಬಂಡೆ:  ಕಲೆಯೋ ಕಾಯಕವೋ ಕೈ ಹಿಡಿದರೆ ಕಷ್ಟಗಳನ್ನು ಸಹಿಸುವುದು ರೂಢಿಯಾಗುತ್ತದೆಯೆ? ತಾಲ್ಲೂಕಿಗೆ ಹೊಂದಿಕೊಂಡಂತೆ ಇರುವ ಗೌರಿಬಿದನೂರು ತಾಲ್ಲೂಕಿನ ರಾಳ್ಳಗಡ್ಡ ತಾಂಡದವರನ್ನು ನೋಡಿದರೆ ಹೀಗೆ ಅನಿಸದೆ ಇರದು. ಇಲ್ಲಿನ ಲಂಬಾಣಿ ತಾಂಡದವರು ಕಲೆ ಹಾಗೂ ಕಾಯಕ ಎರಡನ್ನೂ ಆರಾಧಿಸುತ್ತಾರೆ. ಆ ಕಾರಣಕ್ಕೋ ಏನೋ ಸಮಸ್ಯೆಗಳು ಸಹಜೀವಿಗಳಂತೆ ಆಗಿಹೋಗಿವೆ.ಗುಡಿಬಂಡೆ ಪಟ್ಟಣದಿಂದ ಚೋಳಶೆಟ್ಟಿಹಳ್ಳಿಗೆ ಹೋಗುವ ಮಾರ್ಗದಲ್ಲಿ 8 ಕಿಲೋಮೀಟರ್ ಸಾಗಿದರೆ ರಾಳ್ಳಗಡ್ಡ ತಾಂಡ ಕಾಣಿಸುತ್ತದೆ. ಇನ್ನೂ ಸ್ಪಷ್ಟವಾಗಿ ಗುರುತು ಹೇಳಬೇಕೆಂದರೆ ಸಾಲು- ಸಾಲು ಗುಡಿಸಲುಗಳು ಕಾಣುತ್ತವೆ. ಚಟುವಟಿಕೆಯಿಂದ ಪುಟಿಯುತ್ತಿರುವ ಲಂಬಾಣಿ ಸಮುದಾಯದವರು ಕುರಿ, ಹಸು ಮೇಯಿಸುತ್ತಿರುತ್ತಾರೆ. ಸೌದೆ ಮಾರುವವರು, ಕಾಡಿನ ಹಣ್ಣುಗಳನ್ನು ಮಾರಲು ನಿಂತವರು, ಹುಲ್ಲುಕಡ್ಡಿ ಕಟ್ಟಿ ಪೊರಕೆ ಮಾಡುತ್ತಿರುವವರು.. ಹೀಗೆ ಜೀವನೋಪಾಯಕ್ಕಾಗಿ ಹತ್ತು ಹಲವು ಕೆಲಸ ಮಾಡುತ್ತಾ ನಡೆದಾಡುವ ಪಾದರಸದಂತೆ ಕಾಣುತ್ತಾರೆ.ಈ ರಸ್ತೆಯಲ್ಲಿ ಸಂಚರಿಸುವವರು ಹಿಡಿ ಶಾಪ ಹಾಕುತ್ತಾ, ವ್ಯವಸ್ಥೆಯನ್ನು, ರಾಜಕಾರಣಿಗಳನ್ನು ಮನಸೋ ಇಚ್ಛೆ ಬಯ್ದುಕೊಳ್ಳುವುದು ತೀರಾ ಸಾಮಾನ್ಯ ಎಂಬಂತಾಗಿ ಹೋಗಿದೆ. ವಿಚಿತ್ರ ಎಂದರೆ ಈ ರಾಳ್ಳಗಡ್ಡ ತಾಂಡ ಪ್ರವೇಶಿಸಿದ ತಕ್ಷಣ ಅಂಥವರ ಮನಸ್ಸಲಿ ತಾವು ಸಾಗಿ ಬಂದ ಹಾದಿಯ ಬಗ್ಗೆಯೇ ಗೌರವ ಮೂಡಿಬಿಡುತ್ತದೆ. ಏಕೆಂದರೆ ಈ ಗ್ರಾಮದಲ್ಲಿ ರಸ್ತೆಯೇ ಇಲ್ಲ. ಎಲ್ಲಿ ಚರಂಡಿ ನೀರು ಹರಿಯುತ್ತಿಲ್ಲವೋ ಎಲ್ಲಿ ಗುಂಡಿಗಳಿಲ್ಲವೋ ಅಂಥ ಸ್ಥಳ ಸೂಕ್ಷ್ಮವಾಗಿ ಗಮನಿಸಿ ಹೆಜ್ಜೆಯಿಡುತ್ತಾ ಸಾಗಬೇಕು. ಅದೇ ಗ್ರಾಮದವರಾದರೆ ರೂಢಿಯಾಗಿರುವುದರಿಂದ ಸಲೀಸಾಗಿ ನಡೆದಾಡುತ್ತಾರೆ.ಸುತ್ತಮುತ್ತಲು ತಾಂಡಗಳಿವೆಯಾದರೂ ಅಲ್ಲಿನ ಪರಿಸ್ಥಿತಿ ರಾಳ್ಳಗಡ್ಡ ತಾಂಡದಷ್ಟು ಬೀಭತ್ಸವಾಗಿಲ್ಲ. ಅಭಿವೃದ್ಧಿ ಕೆಲಸಗಳು ಏನಾದರೂ ನಡೆದಿದೆಯಾ ಎಂದು ಕೇಳಿದರೆ, ಇದ್ಯಾವುದೋ ಅನ್ಯದೇಶದ ಪದವೇನೋ ಎಂಬಂತೆ ಇಲ್ಲಿನ ತಾಂಡದವರು ಒಬ್ಬರ ಮುಖ ಒಬ್ಬರು ನೋಡುತ್ತಾರೆ. ಸೌಲಭ್ಯ, ಸವಲತ್ತು ಇದೆಲ್ಲ ದೂರದ ಮಾತೇ ಆಗಿದೆ.

ಆ ದಿನದ ದುಡಿಮೆ ಅಂದಿಗೆ ಎಂದು ಬದುಕುತ್ತಿರುವವರೇ ಹೆಚ್ಚಾಗಿರುವ ಇಲ್ಲಿ, ಬಡತನ ರೇಖೆಗಿಂತ ಕೆಳಗಿರುವವರೇ ಹೆಚ್ಚು.ಇಲ್ಲೊಂದು ಪ್ರಾಥಮಿಕ ಶಾಲೆ ಇದೆ. ಒಂದರಿಂದ ಐದನೇ ತರಗತಿಗೆ ಹಲವು ವರ್ಷಗಳಿಂದ ಇರುವುದು ಒಬ್ಬರೇ ಶಿಕ್ಷಕರು. ಒಂದೋ ಇಲ್ಲಿಗೆ ಬರುವುದಕ್ಕೆ ಬೇರೆಯವರು ಒಪ್ಪವುದಿಲ್ಲ. ಇನ್ನೊಂದು ಇಲ್ಲಿಗೆ ಸರಿಯಾದ ಸಾರಿಗೆ ಸೌಲಭ್ಯವಿಲ್ಲ. ಬೆಳಿಗ್ಗೆ 6.30ಕ್ಕೆ ಒಂದು ಬಸ್ಸು ಹೊರಟರೆ ಮತ್ತೆ ರಾತ್ರಿ 8.30ಕ್ಕೆ ವಾಪಸ್ ಬರುತ್ತದೆ. ಈ ಮಧ್ಯೆ ಸಾರಿಗೆ ವ್ಯವಸ್ಥೆ ಎಂಬ ಯಾವ ಅನುಕೂಲವೂ ಇಲ್ಲಿನ ಗ್ರಾಮಸ್ಥರಿಗಿಲ್ಲ.  ರಾಳ್ಳಗಡ್ಡ ತಾಂಡದವರು ಲಂಬಾಣಿ ಸಮುದಾಯದ ನೃತ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಜನಪದ ಶೈಲಿ ವಾದ್ಯಗಳ ಹಿನ್ನೆಲೆಯಲ್ಲಿ ಹಾಡುಗಳನ್ನು ಹೇಳಿಕೊಳ್ಳುತ್ತಾ ನೃತ್ಯ ಮಾಡುತ್ತಾರೆ. ಆ ಮೂಲಕ ತಮ್ಮ ನಿತ್ಯದ ಕಷ್ಟಗಳನ್ನು ಸ್ವಲ್ಪ ಕಾಲ ಮರೆಯುತ್ತಾರೆ. ಅಪೂರ್ವಕ್ಕೊಮ್ಮೆ ಯಾರಾದರೂ ಕಾರ್ಯಕ್ರಮ ಆಯೋಜಕರು ನೃತ್ಯ ಕಾರ್ಯಕ್ರಮಗಳಿಗೆ ಈ ತಾಂಡದ ಕಲಾವಿದರನ್ನು ಕರೆದೊಯ್ಯುತ್ತಾರೆ. ಅಂಥ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಹಣ ಸಿಗುತ್ತದೆ. `ಎಸೋ ವರ್ಷಗಳಿಂದ ಹೀಗೇ ಇದ್ದುಬುಟ್ವಿ. ನಮ್ಮಕ್ಕಳು ಪೇಟೆಗೆ ಹೋಗಬಂದಾಗ ಅಲ್ಲಿ ಅಂಗೈತೆ ಇಂಗೈತೆ ಅಂತ ಯೋಳ್ತಾರೆ. ನಾವಂತೂ ಯಾವ ದೊಡ್ಡ ಆಪೀಸರ‌್ನೂ ನಮ್ಮ ತಾಂಡದಾಗ ನೋಡೇ ಇಲ್ಲ. ಕಾಯಿಲೆ ಕಸಾಲೆ ಬಂದು ತೀರಿಕೊಂಡವರು ಅದೆಷ್ಟು ಜನ ಆಗೋದ್ರೋ... ಈಗಿನ ಮಕ್ಕಳಾದ್ರೂ ಸಂದಾಗಿ ಬದುಕ್ಬೇಕು' ಎನ್ನುತ್ತಾರೆ ರಾಳ್ಳಗಡ್ಡ ತಾಂಡದ ವೃದ್ಧರೊಬ್ಬರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.