ಸೋಮವಾರ, ಏಪ್ರಿಲ್ 19, 2021
31 °C

ಕಳೆಗೆ ಯಂತ್ರದ ಕತ್ತರಿ

ಚೌಡರೆಡ್ಡಿ ಎಂ Updated:

ಅಕ್ಷರ ಗಾತ್ರ : | |

ಕಳೆಗೆ ಯಂತ್ರದ ಕತ್ತರಿ

ದೇಶದಲ್ಲಿ ಮುಂಗಾರು ಕೈಕೊಟ್ಟರೂ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಯಲ್ಲಿಯೇ ನಮ್ಮ ರೈತರು ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಆದರೆ ನಂತರ ಕಾಡುವ ಬಹು ದೊಡ್ಡ ಸಮಸ್ಯೆ ಎಂದರೆ ಕಳೆ ನಿರ್ವಹಣೆ. ಜಮೀನಿನಲ್ಲಿ ಕಾಣಿಸಿಕೊಳ್ಳುವ ಕಳೆ ಆಯಾ ಬೆಳೆಯ ಇಳುವರಿಯ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ. ಸಕಾಲಕ್ಕೆ ನಿಯಂತ್ರಿಸದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ.ಕಳೆ ನಿಯಂತ್ರಣದ ಮುಖ್ಯ ಉದ್ದೇಶವೇ ಬೆಳೆಗಳ ಸಂಪೂರ್ಣ ಆರೋಗ್ಯಕರ ಬೆಳವಣಿಗೆ, ಮಣ್ಣಿನ ಗುಣಧರ್ಮ ಸುಧಾರಿಸುವುದು. ಹೀಗಾಗಿ ಬೆಳೆಗಳ ಬೆಳವಣಿಗೆಗೆ ಬೇಕಾದ ತೇವಾಂಶ, ಬೆಳಕು ಮತ್ತು ಪೋಷಕಾಂಶಗಳನ್ನು ಕಬಳಿಸಿ ಬೆಳೆಯುವ ಬೇಡವಲ್ಲದ ಕಳೆಯನ್ನು ನಿರ್ಮೂಲನೆ ಮಾಡುವುದು ಮುಖ್ಯ.ಕಳೆ ಇಡೀ ಜಮೀನನ್ನು ನಿರುಪಯುಕ್ತ ಮಾಡುತ್ತದೆ. ಅಲ್ಲದೆ ಅಲ್ಲಿ ಅಪಾಯಕಾರಿಯಾದ ಮುಳ್ಳುಗಳು, ವಿವಿಧ ರೀತಿಯ ಕಳೆಯ ಬೀಜಗಳು ಸೇರಿಕೊಂಡು ಫಸಲಿನ ಇಳುವರಿ ಕುಂಠಿತಗೊಳಿಸುತ್ತವೆ.ಇದಲ್ಲದೆ ವಿಷಯುಕ್ತ ಕಳೆ ಸೇವನೆಯಿಂದ ಜಾನುವಾರುಗಳ ಆರೋಗ್ಯ ಹಾಳಾಗುತ್ತದೆ. ಹೀಗಾಗಿ ನಮ್ಮ ರೈತರು ಕಳೆ ನಿರ್ಮೂಲನೆಗೆ ಅನೇಕ ವಿಧಾನಗಳನ್ನು ಬಳಸುತ್ತಾರೆ.ಅವುಗಳಲ್ಲಿ ಸಾಂಪ್ರದಾಯಿಕ ಸಲಕರಣೆಗಳಾದ ಕೈಯಿಂದ ಕಳೆ ಕೀಳುವ ಕುರಪಿ, ಪಿಕಾಸಿ ಅಥವಾ ಬಾಯಿ ಗುದ್ದಲಿಗಳನ್ನು ಬಳಸುವುದುಂಟು. ಅವುಗಳ ಕಾರ್ಯಕ್ಷಮತೆ ಕಡಿಮೆ. ಅಲ್ಲದೆ ಹೆಚ್ಚಿನ ಸಮಯ, ಅಧಿಕ ಖರ್ಚು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ  ಕೂಲಿಯಾಳುಗಳು ಬೇಕಾಗುವುದರಿಂದ ಅನ್ನದಾತನಿಗೆ ಹೊರೆ ಎನಿಸುತ್ತದೆ.ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕಳೆ ನಿರ್ಮೂಲನೆ ಮಾಡುವುದು ಚಾಲ್ತಿಯಲ್ಲಿದೆ. ಆದರೂ ಈ ವಿಧಾನ ಕೃಷಿ ಭೂಮಿಯನ್ನು ಮಲಿನಗೊಳಿಸುವುದರ ಜೊತೆಗೆ ಮಣ್ಣಿನಲ್ಲಿ ಜೀವಿಸುತ್ತಿರುವ ಅನೇಕ ರೀತಿಯ ಎರೆಹುಳು, ಮೈಕ್ರೋಬ್ಸ್‌ಗಳಂಥ ಉಪಕಾರಿ ಜೀವಕಣಗಳನ್ನು ಸಾಯಿಸಿ ಫಲವತ್ತತೆ ಹಾಳು ಮಾಡುತ್ತದೆ.ಈ ಕಾರಣದಿಂದಾಗಿ ಕಳೆಗಳನ್ನು ಪರಿಣಾಮಕಾರಿಯಾಗಿ ಕಿತ್ತೊಗೆಯುವ ಮತ್ತು ದುಷ್ಪರಿಣಾಮ ತಡೆಯುವ ಯಂತ್ರಗಳನ್ನು ಕೃಷಿ ತಂತ್ರಜ್ಞರು, ಪರಿಣಿತರು ತಯಾರಿಸಿದ್ದಾರೆ.

ಅವುಗಳಲ್ಲಿ  ಒಬ್ಬ ಆಳು ನಿಭಾಯಿಸಬಲ್ಲ ರೋಟರಿ ವೀಡರ್‌ಗಳು, ಎತ್ತುಗಳು ಎಳೆಯುವ ಸಣ್ಣ ಚಕ್ರಗಳಿಂದ ಕೂಡಿದ ರೋಟರಿ ಬ್ಲೇಡ್‌ಗಳು, ಪವರ್ ಟಿಲ್ಲರ್, ಟ್ರಾಕ್ಟರ್ ಚಾಲಿತ ಶಕ್ತಿಯನ್ನು ಬಳಸಿ ಕಳೆ ನಿಯಂತ್ರಿಸಬಹುದಾದ ವಿವಿಧ ಬಗೆಯ ವೀಡರ್‌ಗಳಿವೆ. ಈ ಯಂತ್ರೋಪಕರಣಗಳು ಹೆಚ್ಚಿನ ಕಾರ್ಯದಕ್ಷತೆಯನ್ನು ಹೊಂದಿದ್ದು, ಕಡಿಮೆ ಖರ್ಚಿನಲ್ಲಿ ಯಾವುದೇ ರೀತಿಯ ಅನಾನುಕೂಲಗಳಿಲ್ಲದೆ ಕಳೆ ನಿಯಂತ್ರಿಸಲು ರೈತರಿಗೆ ನೆರವಾಗಲಿವೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗಂತೂ ಇವು ಹೆಚ್ಚು ಪ್ರಯೋಜನಕಾರಿ.ಸಿಂಹಸ್ವಪ್ನದಂತೆ ಕಾಡುವ ಕಳೆಗಳನ್ನು ಈ ಯಂತ್ರಗಳ ಸಹಾಯದಿಂದ ನಿಯಂತ್ರಿಸಬಹುದು. ರೈತನ ಮೊಗದಲ್ಲಿ ಸಂತಸ ಮೂಡಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.