ಶನಿವಾರ, ಮೇ 8, 2021
27 °C

ಕವಿತೆ, ನೀನೇಕೆ ಪದಗಳಲಿ ಕುಳಿತೆ

ನಿರೂಪಣೆ: ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ನನ್ನ ಕಥೆ- ಹೃದಯಶಿವ

ಕವನಗಳು ಯಾವ ಪತ್ರಿಕೆಯಲ್ಲೂ ಪ್ರಕಟವಾಗಲಿಲ್ಲ. ಕೋಪ ಹತಾಶೆ ಎಲ್ಲವೂ ಆಯಿತು. ಕವನ ಪ್ರಕಟಿಸುವುದರಲ್ಲೂ ಗುಂಪುಗಾರಿಕೆ ಇದೆ ಎನ್ನುವ ಭಾವನೆ ಮೂಡಿತು. ಪತ್ರಿಕೆಗಳಿಗೆ ಕವಿತೆ ಕಳುಹಿಸುವುದನ್ನೇ ಬಿಟ್ಟುಬಿಟ್ಟೆ.

 

ಬರೆದುದ್ದನ್ನೆಲ್ಲಾ ನಾನೇ ಇಟ್ಟುಕೊಳ್ಳುತ್ತಿದ್ದೆ. ಲಘು ಗುರು ಮಾತ್ರೆಗಳ ಲೆಕ್ಕಾಚಾರ ಹಾಕಿ, ಹಳೆಗನ್ನಡದ ಪದ ಪ್ರಯೋಗ ಮಾಡಿದ ಚೌಪದಿ ಪದ್ಯಗಳವು. ಅಂತಹ ಸುಮಾರು 250-300 ಕವಿತೆಗಳು ಈಗಲೂ ನನ್ನ ಬಳಿ ಇವೆ.ಅವುಗಳನ್ನು ಈಗ ಮತ್ತೆ ಓದಿದಾಗ, ಕವಿತೆ ಬರೆಯುವ ಹುಮ್ಮಸ್ಸಿನಲ್ಲಿ ಗೀಚಿದ ಅಪ್ರಬುದ್ಧ ಸಾಲುಗಳವು ಅನ್ನಿಸುತ್ತದೆ. ಅರ್ಥವೇ ಆಗದ ಪದ್ಯಗಳನ್ನು ಯಾರು ಪ್ರಕಟಿಸುತ್ತಾರೆ? ಈಗ ಅವುಗಳ ಪ್ರಕಟಣೆಯಿರಲಿ, ಯಾರಿಗೆ ತೋರಿಸಲೂ ಬಯಸುವುದಿಲ್ಲ!ನಾನು ಹಳ್ಳಿ ರೈತನ ಮಗ. ನನ್ನೂರು ಕನಕಪುರದ ಕೆಬ್ರೆ. ಈಗ ದೇಹ ಬೆಂಗಳೂರು, ಮನಸ್ಸು ಹಳ್ಳಿ. ಬೆಳಿಗ್ಗೆ ಜೋಳದ ತೆನೆ ಬಿಡಿಸಿ, ಶಾಲೆಗೆ ಹೋಗುತ್ತಿದ್ದೆ. ಶಾಲೆ ಬಿಟ್ಟ ಮೇಲೆ ಹಸುಗಳನ್ನು ಮೇಯಿಸುತ್ತಿದ್ದೆ. ಈಗಲೂ ಊರಿಗೆ ಹೋದಾಗ ಉಳುಮೆ ಮಾಡುತ್ತೇನೆ.`ಹೃದಯ ಶಿವ~ ಎಂಬ ಹೆಸರನ್ನು ನಾನೇ ನಾಮಕರಣ ಮಾಡಿಕೊಂಡಿದ್ದು. `ಬಾರಿಸು ಕನ್ನಡ ಡಿಂಡಿಮವ~ ಗೀತೆಯಿಂದ ಪ್ರೇರಿತಗೊಂಡು ಇಟ್ಟುಕೊಂಡ ಹೆಸರದು. ನನ್ನ ನಿಜವಾದ ಹೆಸರು ಕೆ.ಎಂ.ಶಿವಣ್ಣ. ಅಪ್ಪ, ಅಮ್ಮ, ತಂಗಿ, ತಮ್ಮ ಹೀಗೆ ಪುಟ್ಟ ಕುಟುಂಬ ನಮ್ಮದು. ಇತ್ತೀಚೆಗಷ್ಟೇ ಮದುವೆಯಾಗಿದ್ದೇನೆ!ಬರವಣಿಗೆ ಪ್ರಾರಂಭವಾಗಿದ್ದು ಐದನೇ ತರಗತಿಯಲ್ಲಿದ್ದಾಗ. ಶಾಲೆಯಲ್ಲಿ ಸ್ವರಚಿತ ಗೀತಗಾಯನ ಸ್ಪರ್ಧೆ ಇತ್ತು. ನಾವೇ ಬರೆದು, ನಮ್ಮದೇ ಸಂಗೀತ ಸಂಯೋಜನೆಯಲ್ಲಿ, ನಾವೇ ಹಾಡಬೇಕು. `ಕನ್ನಡವನ್ನೇ ಬರೆಯೋಣ, ಕನ್ನಡವನ್ನೇ ತಿಳಿಯೋಣ~ ಎಂಬ ಪದ್ಯ ಬರೆದೆ. ಆದರೆ ಸಾಹಿತ್ಯ ಅದಕ್ಕೂ ಮೊದಲೇ ಆಸಕ್ತಿ ಕೆರಳಿಸಿತ್ತು. ಆರಂಭದಲ್ಲಿ ಓದಿದ್ದು ಕುವೆಂಪು ನಾಟಕಗಳನ್ನು.

 

ನನ್ನ ಕಾಟ ತಡೆಯಲಾರದೆ ಪ್ರೈಮರಿ ಶಾಲೆ ಮೇಷ್ಟ್ರು  `ಬೆರಳ್‌ಗೆ ಕೊರಳ್~, `ಬೊಮ್ಮನಹಳ್ಳಿ ಕಿಂದರಿಜೋಗಿ~ ಮುಂತಾದ ಪುಸ್ತಕಗಳನ್ನು ಕೊಟ್ಟಿದ್ದರು. ತಾತ ಪುಸ್ತಕಗಳನ್ನು ತಂದುಕೊಡುತ್ತಿದ್ದರು. ಮನೆಯಲ್ಲಿ ಕಣ್ಣಿಗೆ ಬಿದ್ದ ಕೆ.ಎಸ್.ನರಸಿಂಹಸ್ವಾಮಿ ಅವರ `ನವಿಲದನಿ~ ಕವಿತೆಗಳು ಆಕರ್ಷಕವೆನ್ನಿಸಿದ್ದವು. ಆಗ ಅವೆಲ್ಲ ಎಷ್ಟರಮಟ್ಟಿಗೆ ಅರ್ಥವಾಗಿದ್ದವೋ ಗೊತ್ತಿಲ್ಲ!ಪ್ರೌಢಶಾಲೆಯಲ್ಲಿ `ಸನಂದ~ ಎಂಬ ವಾರ್ಷಿಕ ಪತ್ರಿಕೆಯನ್ನು ಶಾಲೆ ಹೊರತರುತ್ತಿತ್ತು. ಅದರಲ್ಲಿ ಪದ್ಯಗಳನ್ನು ಬರೆದೆ. ನಾನು ಬರೆದದ್ದು ಪ್ರಿಂಟ್ ಆಗಿದ್ದನ್ನು ನೋಡಿ ಆದ ಸಂಭ್ರಮ ಹೇಳತೀರದು. ಸೂಕ್ಷ್ಮಾಣುಜೀವಿಗಳ ಬಗ್ಗೆ ಲೇಖನವನ್ನೂ ಬರೆದಿದ್ದೆ. ಹಾಸ್ಟೆಲ್‌ನಲ್ಲಿದ್ದ ಗ್ರಂಥಾಲಯ ಯಾರೂ ಬಳಸದೆ ದೂಳು ತುಂಬಿಕೊಂಡಿತ್ತು. ಅದರ ಬಾಗಿಲು ತೆರೆದು ಕೈ ಹಾಕಿದಾಗ ಮೊದಲು ಸಿಕ್ಕಿದ್ದು ಕುಮಾರ ಕಕ್ಕಯ್ಯ ಪೋಳ ಬರೆದ `ಚಾಥುರ್ವರ್ಣ ಧರ್ಮದರ್ಶನ~.ನನಗಾಗ ಧರ್ಮ, ಆಚಾರ ವಿಚಾರಗಳ ಒಳಹೊರಗುಗಳ ಪರಿಚಯವಿರಲಿಲ್ಲ. ಪುಸ್ತಕ ಓದುತ್ತಾ ಹೋದಂತೆ ಹಿಂದೂ ಧರ್ಮದ ಆಚರಣೆಗಳು, ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು, ಅದರೊಳಗಿರುವ ಮೌಢ್ಯದ ಬಗ್ಗೆ ತಿಳಿದುಕೊಂಡೆ.ಒಂಬತ್ತನೇ ತರಗತಿಯಲ್ಲಿದ್ದಾಗ `ಅಡವಿಯ ಬಾಲೆಯರು~ ಎಂಬ ನಾಟಕ ಬರೆದಿದ್ದೆ. ಆಗ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಬರಹಗಾರರ ಕೃತಿಗಳನ್ನು ಪ್ರಕಟಿಸಲು ಮುಂದಾಗಿತ್ತು. ನೋಟ್‌ಬುಕ್‌ನಲ್ಲಿ ಬರೆದಿದ್ದ ನಾಟಕವನ್ನು ತೆಗೆದುಕೊಂಡು ಹೋಗಿ ಕೊಟ್ಟೆ. ಅದನ್ನವರು ಕಳೆದು ಹಾಕಿದರು. ನನ್ನ ಮೊದಲ ನಾಟಕ ಕ.ಸಾ.ಪದಲ್ಲಿ ಕಳೆದುಹೋಯಿತು.

ಕಾಲೇಜು ಸೇರಿದ ಬಳಿಕ ವಯೋಸಹಜ ಪ್ರೇಮಕವಿತೆಗಳು ಹುಟ್ಟಿಕೊಂಡವು.ಅರ್ಥವಾಗದ ವಿಶಿಷ್ಟ ಪದಪ್ರಯೋಗಗಳಿದ್ದವು! ಅದು ರಾಘವಾಂಕ, ಕುವೆಂಪು ಹಳೆಗನ್ನಡದ ಪ್ರಭಾವ. ಪದವಿಯಲ್ಲಿ ಕನ್ನಡ ಐಚ್ಛಿಕ ತೆಗೆದುಕೊಂಡಿದ್ದು ಕಾವ್ಯಲೋಕದ ಅಧ್ಯಯನಕ್ಕೆ ನೆರವಾಯಿತು. ಓದುವಾಗಲೇ ಮಾರ್ಕೆಟಿಂಗ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸದ ಮೇಲೆ ಕೇರಳ, ತಮಿಳುನಾಡು, ಗೋವಾ, ದೆಹಲಿ ಮುಂತಾದ ಕಡೆ ಹೋದಾಗ ಅಲ್ಲಿ ಕವನ ಬರೆಯುತ್ತಿದ್ದೆ.ಸಿನಿಮಾಕ್ಕೆ ಹಾಡು ಬರೆಯುವಂತೆಯೂ ಗೆಳೆಯರು ಪ್ರೇರೇಪಿಸಿದರು. ಬರೆಯುವುದು ನಾಲ್ಕು ಜನರಿಗೆ ತಲುಪಬೇಕಾದರೆ ಸಿನಿಮಾ ಉತ್ತಮ ಮಾಧ್ಯಮ ಎನಿಸಿತು. ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ನನ್ನ ಕವಿತೆಗಳನ್ನು ತೋರಿಸಿದೆ. ಅವುಗಳ ಕವಿತೆಗಳ ಹಣೆಬರಹ ಗೊತ್ತಾಗಿದ್ದು ಆಗಲೇ. `ಇರ್ಪುದು~, `ದೊಳ್~ ಪದಗಳು ಅರ್ಥವಾಗುವಂತಿರಲಿಲ್ಲ.ಮಾರ್ಕೆಟಿಂಗ್ ಕೆಲಸ ಮಾಡುತ್ತಲೇ ಸುಮಾರು ಮೂರು ವರ್ಷ ಗುರುಕಿರಣ್‌ಗೆ ನಾನು ಬರೆದುದನ್ನು ತೋರಿಸುವ ಪ್ರಯತ್ನ ನಡೆದಿತ್ತು. `ನಮ್ಮಣ್ಣ~ ಚಿತ್ರದಲ್ಲಿ ಟ್ಯೂನ್ ಕೊಟ್ಟು ಹಾಡು ಬರೆಯಲು ಗುರುಕಿರಣ್ ಹೇಳಿದರು.

 

ಟ್ಯೂನ್‌ಗೆ `ಮೀಟ್ರು~ ಬರೆದುಕೊಟ್ಟರು. ಬರೆಯಲು ಪ್ರಯತ್ನಿಸಿದೆ. ಬರೆದದ್ದು ಹೊಂದಿಕೆಯಾಗುತ್ತಲೇ ಇರಲಿಲ್ಲ. ಬಳಿಕ ಬೇರೆಯವರ ಹತ್ತಿರ ಹಾಡು ಬರೆಸಿದರು. ಆದರೆ ಹಾಗೆ ಬರೆದ ಸಾಲುಗಳನ್ನು ಇಟ್ಟುಕೊಂಡೇ ಗುರುಕಿರಣ್ `ಮಂಡ್ಯ~ ಚಿತ್ರಕ್ಕೆ ಟ್ಯೂನ್ ಹಾಕಿದರು. ಅದೇ ನನ್ನ ಮೊದಲ ಸಿನಿಮಾ ಗೀತೆ- `ಮುಟ್ಟಿದ್ರೆ ಯಾಕೋ...~. ನಂತರ `ಗಂಡ ಹೆಂಡತಿ~, `ಏಕದಂತ~- ಹೀಗೆ ಸಿನಿಮಾ ಗೀತರಚನೆ ವೃತ್ತಿಯಾಗಿ ಆವರಿಸಿಕೊಳ್ಳತೊಡಗಿತು.`ಮುಂಗಾರು ಮಳೆ~ ಛಾಯಾಗ್ರಾಹಕ ಕೃಷ್ಣ ನಿರ್ದೇಶಕ ಯೋಗರಾಜ್ ಭಟ್ಟರ ಪರಿಚಯ ಮಾಡಿಕೊಟ್ಟರು. ಮೊದಲ ಬಾರಿಗೆ ಪ್ರೇಮ ಗೀತೆ ಬರೆಯುವ ಅವಕಾಶ ಸಿಕ್ಕಿತು. ಅರೆಬರೆ ಹಾಡು ಬರೆದು ಮನೆಯಲ್ಲೇ ಕುಳಿತಿದ್ದೆ. ಭಟ್ಟರು, ಚಿತ್ರೀಕರಣ ನಡೆಸುತ್ತಿದ್ದ ಸಕಲೇಶಪುರಕ್ಕೆ ಕರೆಸಿದರು. ನಾಲ್ಕೈದು ದಿನ ಅಲ್ಲೇ ಇದ್ದು `ಇವನು ಗೆಳೆಯನಲ್ಲ~ ಹಾಡು ಬರೆದೆ. ಜೊತೆಗೆ `ಸುವ್ವಿ ಸುವ್ವಾಲಿ~ ಹಾಡನ್ನೂ ಬರೆದೆ.`ಮುಂಗಾರು ಮಳೆ~ ಸುರಿದ ಭರಾಟೆಯಲ್ಲಿ ನೂರಾರು ಚಿತ್ರಗಳು ಹುಟ್ಟಿಕೊಂಡವು. ಅವಕಾಶಗಳ ಬಾಗಿಲೂ ತೆರೆಯಿತು. ಸುಮಾರು 70 ಚಿತ್ರಗಳಿಗೆ ಹಾಡು ಬರೆದಿದ್ದೇನೆ. ಚಿತ್ರ ಗೆದ್ದಾಗ ಅದರಲ್ಲಿನ ಹಾಡುಗಳೂ ಹೆಸರು ಮಾಡುತ್ತವೆ. ಸೋತ ಚಿತ್ರಗಳಲ್ಲಿ ಒಳ್ಳೆ ಹಾಡುಗಳಿದ್ದರೂ ತೆರೆಮರೆ ಸೇರಿಬಿಡುತ್ತದೆ.ಕವನಗಳನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆಗಳ ಮೆಟ್ಟಿಲು ಹತ್ತಿದಾಗ ಎದುರಾದದ್ದು ನಿರಾಶೆ. ಹೀಗಾಗಿ ನನ್ನದೇ `ಪದ ಪ್ರಕಾಶನ~ ಹುಟ್ಟುಹಾಕಿದೆ. `ಚರಕದ ಮುದುಕ~, `ಮೂಕ ಮೈಲಿಗಲ್ಲು~ ಕವನ ಸಂಕಲನ ಪ್ರಕಟಿಸಿದೆ. ಸಿನಿಮಾದ ಆಯ್ದ ಹಾಡುಗಳ `ಇವನು ಗೆಳೆಯನಲ್ಲ~ ಪುಸ್ತಕವನ್ನೂ ಹೊರತಂದೆ. `ಪೈಕಿ~ ಕಥಾಸಂಕಲನ ಸದ್ಯದಲ್ಲೇ ಹೊರಬರಲಿದೆ.ಸಿನಿಮಾ ಹಾಡು ಬರೆಯುವುದು ಬೇರೆಯವರ ಮನೆಗೆ ಬಣ್ಣ ಹೊಡೆಯುವಂತಹ ಕೆಲಸ. ಕೆಲವೊಮ್ಮೆ ಬರೆದ ಪದಗಳು ಬದಲಾಗುತ್ತದೆ. ಅದು ಚೆನ್ನಾಗಿರಲಿ, ಕೆಟ್ಟದಾಗಿರಲಿ ನಾವೇ ಹೊಣೆಗಾರರಾಗುತ್ತೇವೆ. ಸಿನಿಮಾ ಗ್ರಾಮರ್ ಬದಲಾಗುತ್ತಿಲ್ಲ, ಗ್ಲಾಮರ್ ಬದಲಾಗುತ್ತಿದೆ. ನಿರ್ದೇಶಕ ಬಯಸುವುದನ್ನು ಚಿತ್ರಸಾಹಿತಿಯಾಗಿ ನೀಡುತ್ತೇವೆ.ಒಳ್ಳೆಯ ಹಾಡು ಬರಬೇಕೆಂದರೆ ಅಂತಹ ಸನ್ನಿವೇಶದ ಸೃಷ್ಟಿಯಾಗಬೇಕು. ಗೀತರಚನೆಯಲ್ಲಿ ನಮಗೆ ಸ್ಪರ್ಧಿ ಎಂದರೆ ಯೋಗರಾಜ್ ಭಟ್ಟರು! ಅವರೊಮ್ಮೆ ನನ್ನ ಬಳಿ `ಮಾಸ್ ಹಾಡೆಂದರೆ ಹೇಗೆ ಬರೆಯಬೇಕು ಗೊತ್ತಾ? ನಾನು ಬರೆಯುತ್ತೇನೆ~ ಎಂದಿದ್ದರು. ಅದಾದ ಮೂರ‌್ನಾಲ್ಕು ವರ್ಷದ ಬಳಿಕ ಅವರು ಹೇಳಿದ್ದು ಏನೆಂದು ಅರ್ಥವಾಗಿದೆ. ಅವರು ಹೊಸ ಟ್ರೆಂಡ್ ಹುಟ್ಟುಹಾಕಿದ್ದಾರೆ.ಚಿತ್ರಸಾಹಿತಿಯಾಗಿಯಾಗಿಯೇ ಬದುಕು ಕಟ್ಟಿಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿಯೇ ನಾನು ಚಿತ್ರಜಗತ್ತಿನ ಬೇರೆ ಬೇರೆ ಮಜಲುಗಳನ್ನು ನೋಡ ಹೊರಟಿರುವುದು. `ಉಯ್ಯಾಲೆ~, `ಕಾರ್ತಿಕ್~, `ಅಘೋರ~ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದೇನೆ. ನಿರ್ದೇಶನ ನನ್ನ ಕನಸು. ಹಾಸ್ಯ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲು ಅಣಿಯಾಗುತ್ತಿದ್ದೇನೆ.

ಗೈದುದೇನೆಂಬುದನು ನೆನೆದು

ಇಹದಿನಂಗಳ ನೂಕದೆ

ಗೈವುದೇನೆಂಬುದನು ಕುರಿತು

ಬಹುದಿನಂಗಳ ಕಾಯದೆ

ಇಂದಿಗಿಂದಿನ ಕಾರ್ಯ ಜರುಗಲಿ

ಮುಂದಿನದು ತನ್ನಂತೆ ಮೆರೆಯಲಿ

ಅಂದಿಗಂದಿನ ಬೆಲೆಯಿದೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.