ಬುಧವಾರ, ಮೇ 12, 2021
26 °C

ಕವಿತೆ: ಭೂಮಿಯ ಹಿತಮಿತದ ಕನಸಾದರೂ ದಕ್ಕಲಿ

ನಾಗರಾಜ ವಸ್ತಾರೆ Updated:

ಅಕ್ಷರ ಗಾತ್ರ : | |

ತಳವಿರದ ಕಡಲಿನಲ್ಲಿ ನಿರುಮ್ಮಳ ತೇಲುತ್ತಿರುವ

ಬಲಿಷ್ಠ ಆಮೆಯ ಚಿಪ್ಪಿಗೆ ನೆಟ್ಟಂತಿರುವ

ಕಂಭದ ಹಾಗೆ ತಲಾ ನಾಲ್ಕು ಕಾಲುಗಳಿರುವ

ಆರು ಆನೆಗಳ ಎತ್ತುಸೊಂಡಿಲ ಮೇಲೆ ತಟಸ್ಥವಿರುವ

ಪೀಠವೇ ಭೂಮಿ ಅಂತನ್ನುವ

ಹರಿಕಥೆಯ ದಾಸನನ್ನು

 

ಪೂರ್ತಾ

ಅಲ್ಲಗಳೆಯುವ ಹಾಗೆ

 

ಇಲ್ಲಿಂದ ಕೋಟಿ ಮಿಲಿಯ ವಾಟುಗಟ್ಟಲೆ

ಬೆಳಕುಗೋಲಿನ ದೂರ

ತನ್ನಕ್ಷ ಭ್ರಮಿಸುವ ನಿಕಟ ನಕ್ಷತ್ರದ ಸುತ್ತ

ಲೋಡುವ ಅಲ್ಲಲ್ಲ ಅದೆಷ್ಟೋ

ಡಿಗರಿಯೆಂಬ ನಿರ್ದಿಷ್ಟ ಬಾಗಳತೆಯಲ್ಲಿ

ತನ್ನ ಸುತ್ತಲೇ ಸುತ್ತಿಕೊಂಡು ಉಳಿದ

ನಿರ್ವಾತದಲ್ಲಿ ಜರುಗುವ ಚೆಂಡು ಅದು

ಅಂತನ್ನುವ ವಿ

ಜ್ಞಾನದ ಮೇಷ್ಟರನ್ನು

 

ಕೇಳಿದಾಗಲೆಲ್ಲ ಚಿಕ್ಕಂದಿನಲ್ಲಿ ಇಬ್ಬರೂ

ಬೊಗಳೆ ಬಂಡಲೆನಿಸುತ್ತಿತ್ತು

 

ಒಂದು ಕೇಳಿ ತಿಳಿದದ್ದು ಇನ್ನೊಂದು ಹೇಳಿ

ಕೊಟ್ಟು ಗಟ್ಟು ಹೊಡೆಸಿದ್ದು

ಈ ವಯಸ್ಸಿಗೂ ನಂಬಲಾಗುತ್ತಿಲ್ಲ

 

ಅದು

ಕತೆಯಾದರೆ ಇದು ಹಕೀ

ಕತೆಂದು ಇಷ್ಟಕ್ಕು

 

ಒಂದು ದಿವಸಮೊತ್ತದ ಎಚ್ಚರದಲ್ಲಿ

ಕಾರಿರದೆ ಬೈಕಿರದೆ

ಕಾಲುಗೆಲಸವಿಲ್ಲವಾಗಿಸುವ ಸಕಲ ಸಲ

ಕರಣೆ ಸವಲತ್ತೂ ಇರದೆ ನಡೆಯಲಾಗುವ

ತಗ್ಗುದಿಣ್ಣೆ ಉಬ್ಬಿಳಿತಗಳ ನೆಲ

ಮತ್ತದನ್ನು ಕವಿಚುವ ಆಕಾಶ ಮಾತ್ರವೆ

ನನ್ನ ಪಾಲಿನ ಭೂಮಿಯೆಂದು ಕಂಡು ಗೊತ್ತಿರುವ

ಸತ್ಯವನ್ನಷ್ಟೇ ನಂಬುತ್ತೇನೆ

 

ನಂಬದವರು ನ್ಯೂಟನೈನ್ಸ್‌ಟೀನು

ಗಳನ್ನು ಹಾಕಿಂಗಿನವರೆಗೆ ಸಲೀಸಾಗಿ ಲೇಖಿಸು

ಲ್ಲೇಖಿಸಿಕೊಂಡು ಬಡಿದಾಡಲಿ

 

ಕೇಳಿ ತಿಳಿದಿದ್ದನ್ನು ಹೇಳಿ ಕೊಟ್ಟಿದ್ದನ್ನು

ಕಲಿತು ಈವರೆಗೆ ಗೈದ ಪಾಪ ಕಳೆಯಲಿಕ್ಕೊಂದು

ಆಸ್ಪದವನ್ನೀಗ ಅರಸುತ್ತಿದ್ದೇನೆ

ಪರಿಹಾರದ ಕಾರ್ಪಣ್ಯ ಚೆನ್ನಾಗಿ ಗೊತ್ತಿದೆ ನನಗೆ

 

ಯಾತಕ್ಕು

ಇವೊತ್ತಿನಿಂದ ಕನಸಿನಲ್ಲಿ ಏಳಲಿಕ್ಕು

ಕನಸು ಕಾಣುತ್ತ ಮಲಗಲಿಕ್ಕು ಪ್ರಯತ್ನಿಸುತ್ತೇನೆ

 

ಕಲಿತವರೆಲ್ಲ ದಕ್ಕಿದ

ನೆಲ ಗಾಳಿ ಆಕಾಶವನ್ನು ಅಷ್ಟೇ ಚಂದವುಳಿಸಿ

ಹೋಗಿಲ್ಲವಲ್ಲ

 

ನಾನುಳಿಸುವ ತಲೆಮಾರಿಗೆ

ಹಿತಮಿತದ ಭೂಮಿಯ ಕನಸಾದರೂ

ದಕ್ಕಲಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.