ಶುಕ್ರವಾರ, ಫೆಬ್ರವರಿ 26, 2021
30 °C

ಕಾಂಕ್ರಿಟ್‌ ಪಿಲ್ಲರ್‌ ಇಲ್ಲದೇ ಎರಡಂತಸ್ತು ಕಟ್ಟಿದೆ

ವೀರೇಶ ಬಂಗಾರಶೆಟ್ಟರ Updated:

ಅಕ್ಷರ ಗಾತ್ರ : | |

ಕಾಂಕ್ರಿಟ್‌ ಪಿಲ್ಲರ್‌ ಇಲ್ಲದೇ ಎರಡಂತಸ್ತು ಕಟ್ಟಿದೆ

ಕಡಿಮೆ ಖರ್ಚಿನಲ್ಲಿ ಸುಂದರವಾದ, ಅನುಕೂಲಕರವಾದ ಹಾಗೂ ವಾಸ್ತು ಸಹಿತವಾದ ಮನೆಯೇ ಬೇಕೆಂಬುದು ಪ್ರತಿಯೊಬ್ಬರ ಕನಸೇ ಆಗಿದೆ. ಉತ್ತಮ ಅನುಭವಿ ಆರ್ಕಿಟೆಕ್ಟ್‌ ಎಂಜನಿಯರ್‌ (ವಾಸ್ತುಶಿಲ್ಪ) ಮಾತ್ರವೇ ಅನ್ನು ಸುಲಭವಾಗಿ ಮಾಡಿಕೊಡಬಲ್ಲ.

ನನ್ನದೇ ಆದ ರೀತಿಯಲ್ಲಿ, ತುಸು ಭಿನ್ನ ವಿನ್ಯಾಸದಲ್ಲಿ ‘ಕನಸಿನ ಮನೆ’ ಕಟ್ಟಿಸಿದ್ದೇನೆ. ನೆಲ ಅಂತಸ್ತು ೧೨೦೦ ಚದರ ಅಡಿ, ಮೇಲಿನ ಅಂತಸ್ತು ೧೨೦೦ ಚದರ ಅಡಿ ಇದೆ. ಒಟ್ಟು 2400 ಚದರ ಅಡಿಗಳಷ್ಟು ಸುವಿಶಾಲವಾದ ಈ ಮನೆಯ ನಿರ್ಮಾಣಕ್ಕೆ ತಗುಲಿದ ಒಟ್ಟು ಖರ್ಚು ₨೨೫ ಲಕ್ಷ ಮಾತ್ರ!ಮನೆ ಕಟ್ಟಿರುವ ನಿವೇಶನದ ವಿಸ್ತಾರ ೧೮೦೦ ಚದರ ಅಡಿಗಳಷ್ಟಿದೆ. ಕಟ್ಟಡದ ಸುತ್ತಲೂ ನಿಯಮಕ್ಕೆ ಅನುಸಾರವಾಗಿ ಸಾಕಷ್ಟು (ಒಟ್ಟು 600 ಚದರ ಅಡಿ) ಜಾಗಬಿಟ್ಟು ಮನೆ ನಿರ್ಮಿಸಲಾಗಿದೆ.ಈ ಮನೆಯನ್ನು ಕಾಂಕ್ರೀಟ್‌ ಪಿಲ್ಲರ್‌ ಹಾಕದೆಯೇ ನಿರ್ಮಿಸಿರುವುದು ವಿಶೇಷ. ಅಂದರೆ, ಕೇವಲ ಪ್ಲಿಂತ್ ಬೀಮ್‌ಗಳನ್ನಷ್ಟೇ ಹಾಕಿ ಈ ಮನೆ ಕಟ್ಟಲಾಗಿದೆ.ಗಟ್ಟಿ ಮಣ್ಣಿನ ನೆಲವಾದರಿಂದ ಕಲ್ಲಿನ ತಳಪಾಯವನ್ನೇ ನಿರ್ಮಿಸಲಾಗಿದೆ. ಪಿಲ್ಲರ್‌ ಬೀಮ್ ಹಾಕದೇ ೯ ಇಂಚಿನ, ಉತ್ತಮ ಗುಣಮಟ್ಟದ ಸುಟ್ಟ ಇಟ್ಟಿಗೆಗಳಿಂದ ಗೋಡೆಗಳನ್ನು ಕಟ್ಟಲಾಗಿದೆ. ಈ ಗೋಡೆಗಳ ಮೇಲೆಯೇ ತಾರಸಿ ಕೂರಿಸಿ, ಎರಡನೇ ಅಂತಸ್ತಿನ ಮನೆ ಕಟ್ಟಬಹುದು ಎಂಬುದನ್ನು ತೋರಿಸಲೆಂದೇ ನಾನು  ಈ ಮನೆ ನಿರ್ಮಾಣ ಮಾಡಿದ್ದೇನೆ. ಅಲ್ಲದೇ ಮಳೆ ನೀರು ಸಂಗ್ರಹ ಹಾಗೂ ವರ್ಷಪೂರ್ತಿ ಅದೇ ನೀರು ಕುಡಿಯಲು ಬಳಸುವ ವ್ಯವಸ್ಥೆಯನ್ನೂ ಈ ಮನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.ಮನೆಯ ಹಾಲ್‌ನಲ್ಲಿ(ಹಜಾರ)  ಪಾವಟಿಗೆಗೆ ಹೊಂದಿಕೊಂಡು ಒಂದು ಷೋಕೇಸ್ ಇದೆ. ಇದರ ವಿಶೇಷ ಏನೆಂದರೆ ನೀವು ಹಾಲ್‌ನಲ್ಲಿಟಿ.ವಿ ನೋಡುತ್ತಾ ಅಥವಾ ಹರಟೆ ಹೊಡೆಯುತ್ತಾ ಕುಳಿತುಕೊಂಡೇ ಮನೆಯ ಮೇಲಿನ ಸಿಂಟೆಕ್ಸ್ ನೀರಿನ ತೊಟ್ಟಿ ತುಂಬಿರುವುದನ್ನು ಗಮನಿಸಿ, ಚಾಲೂ ಇರುವ ಮೋಟಾರ್ ಬಂದ್ ಮಾಡಬಹುದು. ಅಥವಾ ಹೊರಗೆ ಸಣ್ಣಗೇ  ಮಳೆ ಜಿನುಗುತ್ತ್ತಿದ್ದರೆ, ಮಳೆ ನೀರು ತನಾಗಿಯೇ ಈ ಷೋಕೇಸ್‌ ಪ್ರವೇಶಿಸಿ ಮಳೆ ನೀರು ನಲ್ಲಿಯ ಆಕಾರದಲ್ಲಿ ಒಂದರ ನಂತರ ಒಂದರಂತೆ ಮೂರು ಮಾಡುಗಳಲ್ಲಿ ಹರಿದು ಹೊರಗೆ ಹೋಗುತ್ತಾ ಮನೆಯ ಜೀವಂತಿಕೆಗೆ ಸಾಕ್ಷಿ ಅಗುತ್ತದೆ.ಹೊರಗಡೆ ಕಾರಿನ ಗ್ಯಾರೇಜ್, ಅದರ ಕೆಳಗಡೆ ಸುಮಾರು ೨೫ ಸಾವಿರ ಲೀಟರ್‌ ಸಾಮರ್ಥ್ಯದ ಮಳೆ ನೀರು ಸಂಗ್ರಹ ತೊಟ್ಟಿ. ಕಾರು ಗ್ಯಾರೇಜ್ ಮೇಲೆ ಕಾರು ಚಾಲಕ/ಆಯಾಗಾಗಿ ಒಂದು ಪ್ರತ್ಯೇಕ ಕೋಣೆ, ಜತೆಗೆ ಒಂದು ಸಣ್ಣ ಅಡುಗೆ ಕೋಣೆ ಮತ್ತು ಅಟ್ಯಾಚ್ ಬಾತರೂಂ ಸೌಲಭ್ಯವನ್ನೂ ಒದಗಿಸಲಾಗಿದೆ. ಇದು ಮುಖ್ಯಮನೆಗೆ ಹೊಂದಿಕೊಂಡಂತಿದ್ದು, ಒಳಕ್ಕೆ ಹೋಗಿಬರಲು ಬೇರೆಯದೇ ದಾರಿ ಇದೆ.ಮನೆಯ ಹೊರಗಡೆ ಪ್ರವೇಶ ದ್ವಾರದ ಸುತ್ತಮುತ್ತ ಸುಟ್ಟ, ಸಿರಾ ಗ್ರೇ ಗ್ರಾನೈಟ್‌ ಕಲ್ಲುಗಳನ್ನು ಹೊಂದಿಸಿದ್ದು ಮನೆಯ ಹೊರ ನೋಟಕ್ಕೆ ಇದು ಪೂರಕವಾಗಿಯೇ ಇದೆ.ಮನೆಯ ಮುಖ್ಯ ಬಾಗಿಲು ಮತ್ತು ಪೂಜಾಕೋಣೆ ಬಾಗಿಲು ತೇಗದ ಮರದಲ್ಲಿ ಮಾಡಿಸಲಾಗಿದೆ. ಹೊಳೆಆಲೂರಿನ ನುರಿತ ಕೆತ್ತನೆಗಾರರಿಂದ ಈ ಎರಡೂ ಬಾಗಿಲಿನ ಕೆತ್ತನೆ ಮಾಡಿಸಿದ್ದು ಪಾರಂಪರಿಕ ಶೈಲಿ ಬಹಳವಾಗಿ ಆಕರ್ಷಿಸುತ್ತದೆ. ನೆಲ ಅಂತಸ್ತಿನಲ್ಲಿ ಎರಡು ಮಲಗುವ ಕೋಣೆ, ಎರಡೂ ಕೋಣೆಗಳ ಮಧ್ಯೆ ಬಾತರೂಂ ಇದ್ದು, ಅಟ್ಯಾಚ್ಡ್‌ ರೂಂ ನಂತೆ ಸೌಲಭ್ಯ ಒದಗಿಸುತ್ತದಲ್ಲದೇ ಸಾಮಾನ್ಯ ಬಚ್ಚಲು ಮನೆ ಕೂಡ ಇದೇ ಆಗಿದೆ. ನೆಲಕ್ಕೆ ಲ್ಯಾವೆಂಡರ್ ಬ್ಲ್ಯೂ ಗ್ರಾನೈಟ್ ಅಳವಡಿಸಲಾಗಿದೆ.ಮೇಲಂತಸ್ತಿನಲ್ಲಿ ಒಂದು ವಿಶಾಲವಾದ ಬಾತ್‌ ರೂಂ ಸಹಿತ  ಮಲಗುವ ಕೋಣೆ, ಹಾಲ್, ಸಣ್ಣ ಅಡುಗೆ ಕೋಣೆ, ವರಾಂಡ ಇದ್ದು, ನೆಲಕ್ಕೆ ವಿಟ್ರಿಫೈಡ್ ನೆಲಹಾಸು ಹಾಕಲಾಗಿದೆ.ಕೊನೆ ಮಾತು:- ಮನೆಯ ತಾಳಿಕೆ, ಬಾಳಿಕೆ ಬಗ್ಗೆ ಪ್ರತಿಯೊಬ್ಬ ಮನೆ ಒಡೆಯನಿಗೂ ಕಾಳಜಿ ಸಹಜವಾಗಿ ಇರುತ್ತದೆ. ಒಂದು ಗಾದೆ ಮಾತಿದೆ, ಮಳೆ ಬಂದರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ. ಅದರರ್ಥ ಮಳೆ ಬಂದಷ್ಟೂ ಒಳ್ಳೆಯದೇ, ಮಗ ಮನೆಯಲ್ಲಿ ಉಂಡಷ್ಟು ಯಾವುದೇ ನಷ್ಟವಿಲ್ಲ. ಮನೆ ಮಗ ತಾನೇ.ಹಾಗೆಯೇ ಮನೆ ಕಟ್ಟಲು ಎಷ್ಟೇ ಖರ್ಚಾದರೂ ಚಿಂತೆಯಿಲ್ಲ. ನಿಮ್ಮದೇ ಮನೆ, ಅದರಲ್ಲಿ ವಾಸ ಇರುವವರೂ ನಿಮ್ಮದೇ ಕುಟುಂಬ ತಾನೆ. ಮನೆ ಸಾಮಗ್ರಿಗಳು ಉತ್ತಮ ಗುಣಮಟ್ಟದ್ದವೇ ಆಗಿರಬೇಕು. ಸಾಮಗ್ರಿಗಳ ಬಳಕೆ ಪ್ರಮಾಣದಲ್ಲಿಯೂ ಚಿಂತಿಸಬೇಕಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.