ಸೋಮವಾರ, ಮಾರ್ಚ್ 1, 2021
24 °C

ಕಾಂಗ್ರೆಸ್ ಕಾರಣ ಅರಿತು ಜಿಎಸ್‌ಟಿ ಬೆಂಬಲಿಸಲಿ: ಜೇಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಕಾರಣ ಅರಿತು ಜಿಎಸ್‌ಟಿ ಬೆಂಬಲಿಸಲಿ: ಜೇಟ್ಲಿ

ನವದೆಹಲಿ (ಪಿಟಿಐ): ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಯನ್ನು ಕಾಂಗ್ರೆಸ್ ‘ಕಾರಣವರಿತು’ ಸಂಸತ್ತಿನಲ್ಲಿ ಬೆಂಬಲಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದಿ ಎಕಾನಮಿಕ್ ಟೈಮ್ಸ್‌’ನ ಜಾಗತಿಕ ವ್ಯಾಪಾರ ಶೃಂಗದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಜಿಎಸ್‌ಟಿ ಮಸೂದೆಯು ಹಿಂದಿನ ಯುಪಿಎ ಸರ್ಕಾರದ ಮಹತ್ವದ ಸುಧಾರಣೆ. ಅದರ ಶ್ರೇಯವನ್ನು ನಾನು ಕಾಂಗ್ರೆಸ್‌ಗೆ ಕೊಡಬೇಕು. ಆದರೆ ಅದರ ನಿರ್ಮಾತೃಗಳೇ ಅದಕ್ಕೆ ವಿರೋಧ ವ್ಯಕ್ತಪಡಿಸಿದರೆ, ನಾನೇನು ಮಾಡಬೇಕು. ಅವರನ್ನು ಭೇಟಿ ಮಾಡಿ ಚರ್ಚಿಸಿರುವೆ. ಅವರು ನ್ಯಾಯೋಚಿತವಾದ ಕಾರಣ ಅರಿತು ಜಿಎಸ್‌ಟಿಗೆ ಅನುಮೋದನೆಗೆ ಸಹಕರಿಸಲಿದ್ದಾರೆ’ ಎಂದು ಜೇಟ್ಲಿ ಅಭಿಪ್ರಾಯಪಟ್ಟರು.

ಅಲ್ಲದೇ, ಕಾಂಗ್ರೆಸ್ ಎತ್ತಿರುವ ಮೂರು ಆಕ್ಷೇಪಗಳು, ‘ಅವರು ರೂಪಿಸಿರುವ ಮಸೂದೆಯ ಮೂಲಕ ತಳಹದಿಗೇ ವಿರುದ್ಧವಾಗಿವೆ’ ಎಂದರು.

‘ಯುಪಿಎ ಸರ್ಕಾರದ ಅಂಗಪಕ್ಷಗಳಾದ ಆರ್‌ಜೆಡಿ, ಎನ್‌ಸಿಪಿ ಹಾಗೂ ಜೆಡಿಯು ಪಕ್ಷಗಳು ಬಹಿರಂಗವಾಗಿ ಜಿಎಸ್‌ಟಿಯನ್ನು ಬೆಂಬಲಿಸುತ್ತಿವೆ’. ಕಾಂಗ್ರೆಸ್ ಆಡಳಿತದ ರಾಜ್ಯಗಳು ಅದರ ಪರವಾಗಿವೆ ಎಂದು ತಿಳಿಸಿದರು.

‘ಜಿಎಸ್‌ಟಿ ಮಸೂದೆ ಬೆಂಬಲಿಸಲು ಕಾಂಗ್ರೆಸ್‌ ಏಕೆ ಮರು ಯೋಚನೆ ಮಾಡುತ್ತಿದೆ ಎಂದು ನನಗೆ ಅರ್ಥವಾಗುತಿಲ್ಲ. ಮಸೂದೆಯ ನಿರ್ದಿಷ್ಟ ಅಂಶದ ಕುರಿತು ಚರ್ಚೆ ನಡೆಯುವುದಾದರೆ ಅದಕ್ಕೆ ಸಿದ್ಧವಾಗಿರುವೆ. ನಿಶ್ಚಿತವಾಗಿಯೂ ನಾವು ದೋಷಯುಕ್ತ ಮಸೂದೆಯ ಮೂಲಕ ಭವಿಷ್ಯದ ತಲೆಮಾರನ್ನು ಕಟ್ಟಿಹಾಕಲಾಗದು’ ಎಂದು ನುಡಿದರು.

ಜಿಎಸ್‌ಟಿ ಮಸೂದೆ ಬಹುದಿನಗಳಿಂದ ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಉಳಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.