ಗುರುವಾರ , ಮಾರ್ಚ್ 4, 2021
27 °C

ಕಾಡಿನ ಕತ್ತಲಲ್ಲಿ ಬೆಳಕು ಹುಡುಕುತ್ತಾ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡಿನ ಕತ್ತಲಲ್ಲಿ ಬೆಳಕು ಹುಡುಕುತ್ತಾ...

ಮಾವೊವಾದಿಗಳು ಸಾಗುತ್ತಿರುವುದೆತ್ತ? ಎಪ್ಪತ್ತರ ದಶಕದಲ್ಲಿ `ವರ್ಗ~ಗಳ ಕುರಿತ ನಮ್ಮ ಅರಿವಿನ ಮಟ್ಟ ಅಥವಾ ಮಾನದಂಡಗಳು ಜಾಗತೀಕರಣ ಪ್ರಕ್ರಿಯೆ ನಂತರ ಬದಲಾಗಿವೆ ಎಂಬ ವಾಸ್ತವದ ನೆಲೆಯಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕುವ ಅಗತ್ಯವಿದೆ.

 

ಸರಿಯಾಗಿ ನಾಲ್ಕು ದಶಕಗಳ ಹಿಂದೆ ಚಾರು ಮಜುಂದಾರ್ ಸಾವನ್ನಪ್ಪಿದಾಗ ಮಾವೊ ವಿಚಾರಧಾರೆಯ ಗುಂಪು ಹಲವು ಟಿಸಿಲುಗಳಾಗಿದ್ದಂತೂ ನಿಜ. ಚಿಂತನೆಯೂ ವ್ಯಾಪಕಗೊಂಡಿತು. ಜತೆಗೇ ಹತ್ತಾರು ಗುಂಪುಗಳಲ್ಲಿ ವಿಭಿನ್ನ ನಂಬಿಕೆ, ಕಾರ್ಯವಿಧಾನ, ಬದ್ಧತೆ ಸುದ್ದಿಯಾಗತೊಡಗಿದ್ದವು. ಆದರೆ ಹೊಸ ಪೀಳಿಗೆಯಲ್ಲಿ ಮಾವೊವಾದಿಗಳೆಂದರೆ ಅಪಹರಣ ಪ್ರಕರಣಗಳೇ ಥಟ್ಟನೆ ಸ್ಮೃತಿ ಪಠಲದಲ್ಲಿ ಮೂಡಿ ಬರುತ್ತಿರುವುದೊಂದು ವಿಪರ್ಯಾಸ.ದೇಶದ ಸುಮಾರು 145 ಜಿಲ್ಲೆಗಳಲ್ಲಿ ಮಾವೊವಾದಿಗಳ ಪ್ರಭಾವ ಗಣನೀಯ. ಜಾರ್ಖಂಡ್, ಒಡಿಶಾ, ಛತ್ತೀಸ್‌ಗಡ ರಾಜ್ಯಗಳಂತೂ ಇತ್ತೀಚಿನ ದಿನಗಳಲ್ಲಿ ಮಾವೊವಾದಿಗಳ ಚಟುವಟಿಕೆಗಳಿಂದಾಗಿಯೇ ದೇಶಾದ್ಯಂತ ಸುದ್ದಿಯಲ್ಲಿವೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಒಡಿಶಾದ ಮಲ್ಕಾನ್‌ಗಿರಿಯಲ್ಲಿ ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಅಪಹರಣ, ಈಚೆಗೆ ಇಟಲಿ ಪ್ರಜೆಗಳಿಬ್ಬರ ಅಪಹರಣ, ಶಾಸಕ ಹಿಕಾಕ ಅಪಹರಣ... ಹೀಗೆ ಒಡಿಶಾದಿಂದಲೇ ಸರಣಿ ಪ್ರಕರಣಗಳದ್ದೇ ಸುದ್ದಿ. ಮಾವೊವಾದಿಗಳ ಬೇಡಿಕೆ ಈಡೇರುತ್ತಿದ್ದಂತೆ ಕ್ರಮವಾಗಿ ಇವರೆಲ್ಲರ ಬಿಡುಗಡೆಯೂ ಆಗಿದೆ.

 

ಕಳೆದ ನಾಲ್ಕು ವರ್ಷಗಳಲ್ಲಿ ಮಾವೊವಾದಿಗಳಿಂದಲೇ 1554 ಜನರ ಅಪಹರಣವಾಗಿದ್ದು, ಅವರಲ್ಲಿ 328 ಮಂದಿ ಸತ್ತಿದ್ದಾರೆ ಎನ್ನುವುದು ಕೇಂದ್ರ ಗೃಹ ಸಚಿವಾಲಯದ ಅಂಕಿ ಅಂಶಗಳಿಂದ ಗೊತ್ತಾಗುತ್ತದೆ. ಹಾಗಿದ್ದರೆ, ನಕ್ಸಲರ ನಡೆ ಎತ್ತ ಮತ್ತು ಹೇಗೆ?ವಾಸ್ತವದಲ್ಲಿ ಕಾರ್ಲ್‌ಮಾರ್ಕ್ಸ್ ತಮ್ಮ ಸಿದ್ಧಾಂತ ರೂಪಿಸಿದಾಗ ಅವರ ತಲೆಯಲ್ಲಿ ಭಾರತವೂ ಸೇರಿದಂತೆ ಪೂರ್ವದ ದೇಶಗಳ ಭೂರಹಿತ ಕೃಷಿ ಕಾರ್ಮಿಕರ ಭವಿಷ್ಯದ ನಿರ್ದಿಷ್ಟ ಹೋರಾಟದ ಸಾಧ್ಯತೆಗಳ ಬಗ್ಗೆ ಲವಲೇಶ ವಿಚಾರವೂ ಇರಲಿಲ್ಲ.

 

ಮಾರ್ಕ್ಸ್ ಚಿಂತನೆಯೊಂದಿಗೆ ಕ್ರಾಂತಿಯ ಪಂಜು ಹಿಡಿದು ಯಶಸ್ವಿಯಾದ 1917ರ ರಷ್ಯ ಕ್ರಾಂತಿಯ ಹರಿಕಾರ ಲೆನಿನ್ ಏಷ್ಯಾದಲ್ಲಿ ಮಾರ್ಕ್ಸ್‌ವಾದದ ನೆಲೆಗಟ್ಟಿನಲ್ಲಿ ಹೊಸತೊಂದು ಕ್ರಾಂತಿಯ ಬಗ್ಗೆ ಸ್ಪಷ್ಟ ಪರಿಕಲ್ಪನೆ ಹೊಂದಿದ್ದರು. ಹೀಗಾಗಿಯೇ ಸುಮಾರು 90 ವರ್ಷಗಳ ಹಿಂದೆ ಭಾರತದಲ್ಲಿಯೂ ಅಲ್ಲಲ್ಲಿ ಕಮ್ಯುನಿಸ್ಟ್ ವಿಚಾರಧಾರೆಯ ಮಾತು, ಚರ್ಚೆಗಳು ಕೇಳಿ ಬರತೊಡಗಿದವು.

 

1949ರಲ್ಲಿ ಚೀನಾದಲ್ಲಿ ಊಳಿಗಮಾನ್ಯ ಸ್ಥಿತಿಯನ್ನು ಛಿದ್ರಗೊಳಿಸಿದ ಮಾವೊ ಮಾದರಿಯಂತೂ ಜಗತ್ತಿನಾದ್ಯಂತ ಹೊಸ ಸಂಚಲನ ಮೂಡಿಸಿತು. ಈ ಎರಡೂ ಮಾದರಿಗಳು ಕೂಡ ಪ್ರಪಂಚದ ವಿವಿಧ ಕಡೆ ಪ್ರಭುತ್ವಗಳ ಸಾಮ್ರೋಜ್ಯಶಾಹಿ ಧೋರಣೆ ಮತ್ತು ಗ್ರಾಮೀಣ ನೆಲೆಯ ಪಾಳೇಗಾರಿಕೆ ಪರಿಸ್ಥಿತಿಗಳ ಮೇಲೆ ಬಲವಾದ ಪೆಟ್ಟು ನೀಡಿದವು.

 

ಅದು ಆ ಸಂದರ್ಭದ ಆರ್ಥಿಕತೆ ಮತ್ತು ಉತ್ಪಾದನಾ ವ್ಯವಸ್ಥೆಯ ಸ್ವರೂಪಗಳ ಆಳ ಹರವುಗಳನ್ನು ಅರ್ಥ ಮಾಡಿಕೊಂಡು ಜನವಿರೋಧಿ ಎಳೆಗಳನ್ನು ಜಗ್ಗಾಡುವಷ್ಟು ಪರಿಣಾಮಕಾರಿಯಾಗಿತ್ತು. ಆದರೆ ಕಳೆದ ಎರಡು ದಶಕಗಳಲ್ಲಿ ಜಾಗತೀಕರಣ ಪ್ರಕ್ರಿಯೆಯ ಜಾಲ ಜನಜೀವನದೊಳಗೆ ಹಾಸು ಹೊಕ್ಕಾಗಿದೆ. ಊಳಿಗಮಾನ್ಯ ಸ್ಥಿತಿ ವೇಷ ಮರೆಸಿಕೊಂಡು ಘರ್ಜಿಸತೊಡಗಿದೆ.

 

ಸ್ವತಃ ಭಾರತವೇ ಸಾಮ್ರೋಜ್ಯಶಾಹಿ ಧೋರಣೆಗಳನ್ನು ಮೈಗೂಡಿಸಿಕೊಂಡಿದೆ. ಜಾಗತೀಕರಣದ ಮೂಲದ್ರವ್ಯವೇ ಆಗಿರುವ ಅನುಭೋಗ ಸಂಸ್ಕೃತಿಯು ಜನಮನದೊಳಗೆ ಬೆರೆತು ಹೋಗಿದೆ. ಸಮಸಮಾಜದ ಪರಿಕಲ್ಪನೆಗಳನ್ನು ಕೊಳ್ಳುಬಾಕ ಸಂಸ್ಕೃತಿಯ, ಆಧುನಿಕತೆಯ ಆವಿಷ್ಕಾರಗಳು ಜನರಿಗೆ ತಲುಪಿರುವ ಮಾನದಂಡಗಳ ಕನ್ನಡಿಯಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಅಲ್ಲಗಳೆಯುವಂತಿಲ್ಲ.

 

ಇದು ಗ್ರಾಮ ಪಟ್ಟಣಗಳೆಂಬ ಭೇದವಿಲ್ಲದೆ, ಸಾಮಾಜಿಕವಾಗಿ ಮೇಲು, ಕೀಳುಗಳೆಂಬ ವ್ಯತ್ಯಾಸವಿಲ್ಲದೆ ಎಲ್ಲೆಡೆ ಸಾಮಾನ್ಯವೆನಿಸಿಬಿಟ್ಟಿದೆ. ಇಂತಹ ಸಂದಿಗ್ಧದಲ್ಲಿ ಮಾವೊವಾದಿಗಳ ಹಲವು ಗುಂಪುಗಳು ಹಲವು ತೆರನಾಗಿ ಸ್ಪಂದಿಸತೊಡಗಿವೆ, ನಡೆಯತೊಡಗಿವೆ. ಅಸ್ಪಷ್ಟ ಗುರಿಗಳೊಂದಿಗೆ...!ಸುಮಾರು ಎಪ್ಪತ್ತು ವರ್ಷಗಳ ಹಿಂದೆಯೇ ಸಮಸಮಾಜದ ಕನಸು ಕಂಡಿದ್ದ ಹೋರಾಟಗಾರ, ಚಿಂತಕ ಎಂ.ಎನ್.ರಾಯ್ ಯಾವುದೇ ದೇಶದ ಕಮ್ಯುನಿಸ್ಟ್ ಚಳವಳಿಯು ಆ ಚಿಂತನೆಯ ಅಂತರರಾಷ್ಟ್ರೀಯ ಜಾಲದೊಳಗೆ ನಿಕಟತೆ ಹೊಂದಿರುತ್ತದೆ ಎಂದಿದ್ದು ಇವತ್ತಿಗೂ ನಿಜವೇ. ಈಚೆಗಷ್ಟೇ ಸಾವನ್ನಪ್ಪಿದ ದೇಶದ ಅತ್ಯಂತ ಪ್ರಭಾವಿ ಮಾವೊವಾದಿ ನೇತಾರ ಕಿಶನ್‌ಜಿ ಕೂಡಾ ಅದನ್ನೇ ಹೇಳುತ್ತಿದ್ದರು.

 

`ನಾವು ಅಂತರರಾಷ್ಟ್ರೀಯತೆ ಹೊಂದಿದ್ದೇವೆ. ನೇಪಾಳ, ಪೆರು, ಟರ್ಕಿ, ಫಿಲಿಪ್ಪೀನ್ಸ್ ಮುಂತಾದ ದೇಶಗಳಲ್ಲಿ  ಸಮಸಮಾಜ ನಿರ್ಮಾಣದ ಹೆಗ್ಗುರಿಯೊಂದಿಗೆ ನಡೆದಿರುವ ತೀವ್ರವಾದಿ ಕಮ್ಯುನಿಸ್ಟರ ಆಂದೋಲನದ ಜತೆಗೆ ನಾವೂ ಸಹಕರಿಸುತ್ತೇವೆ~ ಎಂದು ಕಿಶನ್‌ಜಿ ಹೇಳುತ್ತಿದ್ದರು.

 

ಆದರೆ ಅಲ್ಲೆಲ್ಲಾ ಧಾರ್ಮಿಕ ಕಾರಣಗಳಿಂದ ಅಥವಾ ಚಳವಳಿಯ ಮುಂಚೂಣಿ ನಾಯಕರ ಮುಖ್ಯವಾಹಿನಿ ರಾಜಕಾರಣದ ಆಕಾಂಕ್ಷೆಗಳಿಂದ ಆಂದೋಲನವೇ ಗೊಂದಲದ ಗೂಡಾಗಿರುವುದನ್ನು ಸಂಪರ್ಕ ಕ್ರಾಂತಿಯ ಈ ಕಾಲಘಟ್ಟದಲ್ಲಿ ಹೊಸ ಪೀಳಿಗೆಯ ಮಂದಿ ಗಮನಿಸಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಮಾವೊವಾದಿ ಚಿಂತನೆಗೆ ಬಲುದೊಡ್ಡ ಸ್ಫೂರ್ತಿಯ ಕೇಂದ್ರದಂತಿದ್ದ ಚೀನಾ ಇವತ್ತು ಬಂಡವಾಳಶಾಹಿಗಳ ಆಡುಂಬೊಲವಾಗಿದೆ.ತನ್ನ ಯುರೇನಿಯಂ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಆಸೆಯಿಂದ ಅದು ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ತನ್ನ ಕಬಂದಬಾಹುಗಳನ್ನು ಚಾಚಿರುವುದನ್ನು ಕಂಡಾಗ ಅಮೆರಿಕ ಸಾಮ್ರೋಜ್ಯಶಾಹಿಗಳೇ ನಾಚುವಂತಾಗಿದೆ. ಇವತ್ತು ನೇಪಾಳದ ಮಾವೊವಾದಿಗಳೇ ಚೀನಾದೊಂದಿಗೆ ಸ್ನೇಹ ಸಂಬಂಧಕ್ಕೆ ಎರಡು ಸಲ ಯೋಚಿಸುತ್ತಿರುವಂತಿದೆ. ಅವರ ಕಣ್ಣೆದುರು ಚೀನಾದ ಪಾದದಡಿ ನಲುಗುತ್ತಿರುವ ಟಿಬೆಟ್ ಮತ್ತು ಚೀನಾ ಎಂಬ `ಕಾಣದ ಕೈಗಳು~ ಮ್ಯೋನ್ಮಾರ್‌ನಲ್ಲಿ ಸೃಷ್ಟಿಸಿರುವ ನರಕಗಳೆಲ್ಲಾ ಧುತ್ತೆನ್ನತೊಡಗುತ್ತವೆ.ವರ್ಗ ಹೋರಾಟದ ಬುನಾದಿಯ ಮೇಲೆ ನಿಂತಿರುವ ಮಾವೊವಾದಿಗಳ ಆಂದೋಲನಕ್ಕೆ ಭಾರತದೊಳಗಿನ ಸಾಮಾಜಿಕ ತಾರತಮ್ಯವು ವ್ಯವಸ್ಥೆಯ ವಿರುದ್ಧದ ಸಮರಕ್ಕೆ ತೀಕ್ಷ್ಣ ಬಾಣಗಳ ಬತ್ತಳಿಕೆಯಾಯಿತು. ಆದರೆ ಮೀಸಲಾತಿ ಸೌಲಭ್ಯ ತಳಸ್ತರದವರಲ್ಲಿ ಎಬ್ಬಿಸಿದ ಶಿಕ್ಷಣ ಕ್ರಾಂತಿ, ಹೆಚ್ಚಿದ ಉದ್ಯೋಗವಕಾಶ, ಮೂಡಿದ ಆತ್ಮವಿಶ್ವಾಸಗಳಿಂದಾಗಿ ಅಂತಹ ಸಮೂಹಗಳು ಪ್ರಜಾಸತ್ತೆಯ ಚೌಕಟ್ಟಿನೊಳಗೇ ಅವಕಾಶಗಳಿಗಾಗಿ ಬಾಗಿಲು ಬಡಿಯತೊಡಗಿದವು.

 

ಊಳಿಗಮಾನ್ಯ ಕಪಿಮುಷ್ಠಿಯಿಂದ ಹೊರಬಂದ ತಳಸ್ತರದ ಹೊಸ ಪೀಳಿಗೆ ಪಟ್ಟಣಗಳಲ್ಲಿ ಎದೆ ಉಬ್ಬಿಸಿ ನಡೆಯತೊಡಗಿತು. ಮೀಸಲಾತಿ ಎಂಬ ಬ್ರಹ್ಮಾಸ್ತ್ರ ಮತ್ತು ಜಾಗತೀಕರಣದ ಅಬ್ಬರದಲ್ಲಿ ಹಳ್ಳಿಗಳಲ್ಲಿನ ಪಾಳೇಗಾರಿಕೆ ಅಬ್ಬರ ದುರ್ಬಲಗೊಂಡಿದೆ. ಜತೆಗೆ ಭೂ ಸುಧಾರಣಾ ಕ್ರಮಗಳಂತೂ ಹಲವು ರಾಜ್ಯಗಳಲ್ಲಿ ಕೆಳವರ್ಗ ಮತ್ತು ಸಾಮಾಜಿಕವಾಗಿ ದುರ್ಬಲ ಸಮುದಾಯಗಳ ಹೃದಯಗಳಲ್ಲಿ ಆತ್ಮವಿಶ್ವಾಸದ ಸೆಲೆ ಮೂಡಿಸಿದೆ. ಇಂತಹ ಸತ್ಯಗಳ ಬೆಳಕು ಫಳಫಳಿಸುತ್ತಿರುವಾಗ ಕಾಡಕತ್ತಲಲ್ಲಿ ಕುಳಿತು ಊಳಿಗಮಾನ್ಯ ವ್ಯವಸ್ಥೆ ವಿರುದ್ಧ, ಸಾಮ್ರೋಜ್ಯಶಾಹಿಗಳ ವಿರುದ್ಧ ಹೋರಾಟದ ರೂಪುರೇಷೆಗಳ ಟಿಪ್ಪಣಿ ಮಾಡುವವರಿಗೆ ಏನನ್ನುವುದು?ಇಂತಹ ಸಂದಿಗ್ಧತೆಯಲ್ಲಿ ಮಾವೊ ಮುಖಂಡರು ಒಡಿಶಾ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳ ಬುಡಕಟ್ಟು ಜನಾಂಗಗಳ ನಡುವೆ ಸಮ ಸಮಾಜದ ಕನಸು ಅರಳಿಸುತ್ತಾ ಸಂಘ ಕಟ್ಟುತ್ತಿದ್ದಾರೆ. ಇದೊಂದು ಅರ್ಥಪೂರ್ಣ ಕೈಂಕರ್ಯವೇ ನಿಜ. ಆದರೆ ಜನರು ಮಾತ್ರ ಮುಖ್ಯವಾಹಿನಿಯಿಂದ ದೂರವಾಗಿ ವ್ಯವಸ್ಥೆಯ ವಿರುದ್ಧ `ಬಾಣ~ಗಳಾಗುತ್ತಿದ್ದಾರೆ.

 

ಒಂದು ವೇಳೆ ವ್ಯವಸ್ಥೆಯೇ ಬದಲಾಯಿತೆಂದರೆ ಬಿಲ್ಲು ಹಿಡಿದವರೇ ಮತ್ತೊಂದು ಅಂತಹದೇ ವ್ಯವಸ್ಥೆಯಾಗುತ್ತಾರಷ್ಟೇ. ದಶಕದ ಹೋರಾಟದ ಕೊನೆಗೆ ನೇಪಾಳದಲ್ಲಿ ಅರಸೊತ್ತಿಗೆ ಉರುಳಿತು. ಆದರೆ `ಬಾಣ~ಗಳಾಗಿದ್ದ ಸಹಸ್ರಾರು ಮಂದಿಯ ಬದುಕಲ್ಲಿ ಬದಲಾವಣೆಗಳಾಗಿದ್ದು ಅಷ್ಟರಲ್ಲೇ ಇದೆ ಎಂಬುದು ಇದೀಗ ಎಲ್ಲರಿಗೂ ಗೊತ್ತಾಗಿದೆ.ದೇಶದಲ್ಲೇ ಒಡಿಶಾ ಅತ್ಯಧಿಕ ಬುಡಕಟ್ಟು ಜನಸಂಖ್ಯೆ ಹೊಂದಿರುವ ರಾಜ್ಯ. ಒಟ್ಟು ಜನಸಂಖ್ಯೆಯ ಕಾಲು ಭಾಗದಷ್ಟು (70ಲಕ್ಷ) ಬುಡಕಟ್ಟು ಜನರೇ ಇದ್ದಾರೆ. ಕೊಂಡ್ಸ್, ಸಂತಾಲರು, ಒರಾನ್ಸ್ ಸೇರಿದಂತೆ 62 ಬುಡಕಟ್ಟುಗಳ ಜನರನ್ನು ಮಾವೊವಾದಿಗಳು ಸಂಘಟಿಸುತ್ತಿದ್ದಾರೆ.

 

ಅಲ್ಲಿ ನಿಜಕ್ಕೂ ಮಾವೊವಾದಿಗಳ ಶಕ್ತಿ ಹೆಚ್ಚಾಗಿದೆ. ಆದರೆ ಬುಡಕಟ್ಟು ಜನರಿಗೆ ಇದರಿಂದ ಎಷ್ಟು ಲಾಭವಾಗಿದೆ? ಅವರದ್ದು ಯಥಾಸ್ಥಿತಿಯೇ. ಬುಡಕಟ್ಟು ಜನರಲ್ಲಿ ಕಡುಬಡವರೇ ಅಧಿಕ. ನಕ್ಸಲೀಯ ಚಳವಳಿಯನ್ನು ಮಟ್ಟ ಹಾಕುವುದಕ್ಕಾಗಿಯೇ ಆ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಬಹಳಷ್ಟು ಹಣ ವಿನಿಯೋಗಿಸುತ್ತಿದೆ.ಆದರೆ ಮೇರೆ ಮೀರಿರುವ ಭ್ರಷ್ಟಾಚಾರದಿಂದಾಗಿ ಅವರಿಗೆ ಸಿಗಬೇಕಾದದ್ದು ಸಿಗುತ್ತಿಲ್ಲ. ಯೋಜನೆಗಳೂ ಸರಿಯಾಗಿ ಕಾರ್ಯಗತಗೊಳ್ಳುತ್ತಿಲ್ಲ. ಹೀಗಾಗಿ ಇವರಲ್ಲಿ ಬಹುತೇಕ ಮಂದಿ ಮಾವೊವಾದಿಗಳ ಕರೆಗೆ ಓಗೊಡುತ್ತಿದ್ದಾರೆ. ಇದೊಂದು ಅಸಹಾಯಕ ಸ್ಥಿತಿ.ನಕ್ಸಲ್ ಚಳವಳಿಯ ಆರಂಭದ ದಿನಗಳಲ್ಲಿ ಚಾರು ಜತೆಗೂಡಿ ಹೋರಾಡಿದ್ದ ಕನು ಸನ್ಯಾಲ್ ನಂತರದ ವರ್ಷಗಳಲ್ಲಿ ಮೌನವಾಗಿದ್ದು ಬಿಟ್ಟರು. ಸಂತಾಲ ಬುಡಕಟ್ಟಿನ ಕನು ಅವರನ್ನು ಮುಂದಿನ ಹೋರಾಟ ಹೇಗಿರಬೇಕು ಎಂದು ಕೇಳಿದಾಗಲೆಲ್ಲಾ `ಬುಡಕಟ್ಟು ಮಂದಿ ಶಿಕ್ಷಣಕ್ಕೆ ಒತ್ತು ನೀಡಲಿ. ಎಳೆಯರು ಜ್ಞಾನಾರ್ಜನೆಗೆ ಆದ್ಯತೆ ಕೊಡಲಿ~ ಎಂದಷ್ಟೇ ಹೇಳುತ್ತಿದ್ದರು. ಅದೊಂದು ಅರ್ಥಗರ್ಭಿತ ಅನಿಸಿಕೆ.ಉದಾರೀಕರಣದ ನಂತರದ `ವರ್ಗ~ಗಳಲ್ಲಿ ಉಂಟಾದ ಬದಲಾವಣೆ, ಅದರ ಲಕ್ಷಣಗಳನ್ನು ಅರ್ಥ ಮಾಡಿಕೊಳ್ಳುವಲ್ಲೇ ಎಡವುತ್ತಿರುವಂತಿದೆ. ಹೀಗಾಗಿ ಮಾವೊವಾದಿ ಆಂದೋಲನವು ಸಾಮಾಜಿಕ-ಆರ್ಥಿಕ ಅಸಮತೋಲನದ ಮೂಲವನ್ನು ಗುರುತಿಸಿ ಅದನ್ನು ಸರಿ ಪಡಿಸಲೆತ್ನಿಸುತ್ತಿದೆಯೋ ಅಥವಾ ಕೇವಲ ಉಗ್ರಗಾಮಿ ಸಂಘಟನೆಯ ಮಿತಿಯಲ್ಲಿ ನಿಂತು ಬಿಟ್ಟಿದೆಯೊ ಎಂಬ ಗೊಂದಲಕ್ಕೆ ಕಾರಣವಾಗಿದೆ. ಈ ನೆಲದ ರೈತಕೂಲಿಗಳ, ಕಾರ್ಮಿಕರ, ಭೂರಹಿತರ ಪರ ಬಲು ದೊಡ್ಡ ಧ್ವನಿಯೇ ಆಗಿರುವ ಮಾವೊವಾದ ಜನಪರವೇ ಹೌದು.ಆದರೆ ಅದು  `ಅಪರಾಧೀಕರಣ~ದ ಹಾದಿ ಹಿಡಿದಾಗ ಮುಖ್ಯವಾಹಿನಿಯಿಂದ ದೂರವಾಗುವುದು ನಿಜ. `ಅಪಹರಣ~ ತಂತ್ರಗಳಿಂದ ಕೆಲವು ದಿನಗಳ ಕಾಲ ಸರ್ಕಾರವೇ ಮಂಡಿವೂರುವಂತೆ ಮಾಡಬಹುದು ನಿಜ. ಆದರೆ ದೂರಾಲೋಚನೆಯಿಂದ ಗಮನಿಸಿದಾಗ ಇದು ಸಂಘಟನೆಯ ತಾತ್ವಿಕ ಗಟ್ಟಿತನವನ್ನು ಅಲ್ಲಾಡಿಸುವಂತಹದ್ದು ಎನ್ನುವವರೂ ಇದ್ದಾರೆ. ಅದೇನೆ ಇದ್ದರೂ, ಇವತ್ತು ಜಿಲ್ಲಾಧಿಕಾರಿಗಳಾದ ಆರ್.ವಿ.ಕೃಷ್ಣ, ಅಲೆಕ್ಸ್ ಮೆನನ್, ಶಾಸಕ ಹಿಕಾಕ ಅಂಥವರ ಅಪಹರಣಗಳಾಗುತ್ತಿವೆ. ಜಾರ್ಖಂಡ್, ಒಡಿಶಾ ಮುಂತಾದೆಡೆ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೂ ಸೇರಿದಂತೆ ನೂರಾರು ಕ್ಷೇತ್ರಗಳಿಂದ `ಹಫ್ತಾ~ ವಸೂಲಿ ನಡೆಯುತ್ತಿದೆ.ಇವೆಲ್ಲದರ ನಡುವೆಯೂ ಆಡಳಿತಗಾರರಿಂದ ದೊಡ್ಡ ಮಟ್ಟದಲ್ಲಿಯೇ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ. ಭದ್ರತಾ ಪಡೆಗಳು ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ. ಬುಡಕಟ್ಟು ಮಂದಿ ರೋಸಿ ಹೋಗಿದ್ದಾರೆ... ಎಲ್ಲವೂ ನಿಜ.ಇಂತಹ ಸಂಕ್ರಮಣ ಕಾಲಘಟ್ಟದಲ್ಲಿ `ಅಪಹರಣ~ ಅಥವಾ `ಸಿಆರ್‌ಪಿಎಫ್ ಮೇಲೆ ದಾಳಿ~ಗಳಿಂದಷ್ಟೇ ವ್ಯವಸ್ಥೆಯ ಬದಲಾವಣೆ ಅಸಾಧ್ಯ, ಅನಗತ್ಯ ಕೂಡ. ಇಲ್ಲಿ ಸರ್ಕಾರವು ಕಾನೂನಿನ ಚೌಕಟ್ಟಿನೊಳಗೇ ವ್ಯವಹರಿಸುತ್ತಾ, ಮಾನವೀಯ ನೆಲೆಯಲ್ಲಿ ಜನರಿಗೆ ಸ್ಪಂದಿಸಬೇಕಿದೆ. ಭ್ರಷ್ಟಾಚಾರದ ವಿರುದ್ಧ ಉಗ್ರ ಸ್ವರೂಪದ ಕ್ರಮ ಕೈಗೊಳ್ಳಲೇ ಬೇಕಿದೆ. ಮಾವೊವಾದಿಗಳು ಮೊದಲಿಗೆ ಬದಲಾಗುತ್ತಿರುವ `ವರ್ಗ~ದ ಸ್ವರೂಪಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.