ಮಂಗಳವಾರ, ಜೂನ್ 22, 2021
29 °C

ಕಾಫಿ ತಿನ್ನುತ್ತಿರುವ ಕಾಡಾನೆಗಳು: ಬೆಳೆಗಾರರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕಾಫಿ ತೋಟಗಳಿಗೆ ನುಗ್ಗುವ ಕಾಡಾನೆಗಳು ಈಚೆಗೆ ಕಾಫಿ ಬೀಜ ತಿನ್ನಲು ಶುರು ಮಾಡಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ಕೊಡಗಿನ ಕಾಫಿ ಬೆಳೆಗಾರರು ಕಂಗಾಲಾಗುವ ದಿನಗಳು ದೂರವಿಲ್ಲ ಎಂದು ಕಾಫಿ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.ಹೈಕೋರ್ಟ್ ನಿರ್ದೇಶನದ ಮೇರೆಗೆ ಆನೆ-ಮಾನವ ಸಂಘರ್ಷದ ಬಗ್ಗೆ ಅಧ್ಯಯನ ನಡೆಸಲು ರಚಿತವಾಗಿರುವ ಸಮಿತಿಯ ಸದಸ್ಯರು ದಕ್ಷಿಣ ಕೊಡಗಿನ ಮಾಲ್ದಾರೆಗೆ ಬುಧವಾರ ಭೇಟಿ ನೀಡಿದಾಗ ಕಾಫಿ ಬೆಳೆಗಾರರು ಈ ವಿಷಯದ ಬಗ್ಗೆ ಗಮನ ಸೆಳೆದರು.ಆನೆ ಹಾವಳಿಯಿಂದಾಗಿ ಈ ಭಾಗದ ಜನರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮಾತನಾಡಿದ ಕಾಫಿ ಬೆಳೆಗಾರ ನಂದ ಸುಬ್ಬಯ್ಯ, ಇಲ್ಲಿಯವರೆಗೆ ಆನೆಗಳು ನಮ್ಮ ತೋಟಗಳಿಗೆ ನುಗ್ಗಿ ಬಾಳೆ, ಬಿದಿರು ತಿನ್ನುತ್ತಿದ್ದವು. ಆದರೆ, ಈಗ ಅವು ನಮ್ಮ ಆದಾಯದ ಮೂಲವಾಗಿರುವ ಕಾಫಿಗೆ ಬಾಯಿ ಹಾಕಿವೆ ಎಂದು ಹೇಳಿದರು.ತಮ್ಮ ಮಾತಿಗೆ ಸಾಕ್ಷಿ ಒದಗಿಸಲು ಅವರು ಆನೆಯ ಲದ್ದಿ ತಂದು ಅದರಲ್ಲಿ ಕಾಫಿ ಬೀಜ ಇರುವುದನ್ನು ತೋರಿಸಿದರು. ಮಾಲ್ದಾರೆ ವ್ಯಾಪ್ತಿಯ ನಿವಾಸಿ ಪೂವಯ್ಯ ಮಾತನಾಡಿ, ಮನುಷ್ಯರ ಸಂಖ್ಯೆ ಹೆಚ್ಚುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಈ ಭಾಗದಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಅರಣ್ಯ ಪ್ರದೇಶ ಮಾತ್ರ ಕಡಿಮೆಯಾಗುತ್ತಿದೆ. ಹೀಗಾಗಿ ಆನೆ-ಮಾನವ ಸಂಘರ್ಷಗಳು ಉಂಟಾಗುತ್ತಿವೆ ಎಂದರು.ಗ್ರಾಮದ ನಿವಾಸಿ ಅಯ್ಯಪ್ಪ ಮಾತನಾಡಿ, ಸೋಲಾರ್ ಬೇಲಿ, ಆನೆ ಕಂದಕಗಳ ನಿರ್ಮಾಣ ಇವ್ಯಾವುದೂ ಪರಿಣಾಮಕಾರಿಯಾಗಿ ಪ್ರಯೋಜನಕ್ಕೆ ಬರುತ್ತಿಲ್ಲ. ಅರಣ್ಯ ಅಧಿಕಾರಿಗಳು `ಕಮಿಷನ್~ಗೋಸ್ಕರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಆಗ ಮಧ್ಯಪ್ರವೇಶಿಸಿದ ಸಮಿತಿಯ ಸದಸ್ಯರು, ದಾಖಲೆಗಳಿಲ್ಲದೇ ಇಂತಹ ಆರೋಪಗಳನ್ನು ಮಾಡಬೇಡಿ ಎಂದರು.ನಮಗೆ ಮನುಷ್ಯರೂ ಮುಖ್ಯ, ಅದರ ಜೊತೆಗೆ ವನ್ಯಜೀವಿಗಳೂ ಮುಖ್ಯ. ಇವುಗಳ ನಡುವಿನ ಸಂಘರ್ಷ ತಪ್ಪಿಸಲು ನಿಮ್ಮ ಬಳಿ ಸಲಹೆಗಳಿದ್ದರೆ ತಿಳಿಸಿ, ಇವುಗಳನ್ನು ಹೈಕೋರ್ಟ್ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಮಿತಿಯ ಸದಸ್ಯ ರವೀಂದ್ರನಾಥ್ ಕಾಮತ್ ಹೇಳಿದರು.ಸರ್ಕಾರವು ಸೂಕ್ತ ಪರಿಹಾರ ನೀಡಿದರೆ ಅರಣ್ಯವನ್ನು ತೊರೆದು ನಾಡಿನಲ್ಲಿ ವಾಸಿಸಲು ಗಿರಿಜನರು ಸಿದ್ಧರಿದ್ದಾರೆಯೇ ಎಂದು ಸಮಿತಿಯ ಒಬ್ಬ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯದೊಳಗಿನ ಹಾಡಿಯಲ್ಲಿ ವಾಸಿಸುತ್ತಿರುವ ಟಿ.ವಿ. ರವಿ, ನಾವು ಕಳೆದ ನಾಲ್ಕು ತಲೆಮಾರಿನಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಕೊನೆಯ ಉಸಿರು ಇರುವವರೆಗೂ ನಾವು ಅರಣ್ಯವನ್ನು ಬಿಟ್ಟು ಹೊರಬರುವುದಿಲ್ಲ ಎಂದು ಹೇಳಿದರು.ಆನೆ ದಾಳಿಯಿಂದ ತಮಗಾಗುತ್ತಿರುವ ಕಷ್ಟ-ನಷ್ಟಗಳನ್ನು ಹಾಗೂ ಈ ಸಮಸ್ಯೆ ಪರಿಹಾರಕ್ಕೆ ಸಲಹೆಗಳನ್ನು ನೀಡಲು ಬಯಸುವವರು ಇ-ಮೇಲ್ ್ಟಠ್ಠಝ್ಠೇಃ್ಚಛಿ.ಜಿಜಿಠ್ಚ.ಛ್ಟ್ಞಿಛಿಠಿ.ಜ್ಞಿ ಅಥವಾ ಛಿಠ್ಛಿಃ ಟಟ ಜ್ಟಟ್ಠ.್ಚಟಞ ಮೂಲಕ ಸಂಪರ್ಕಿಸಬಹುದು. ವರದಿಯನ್ನು ಏ.15ರೊಳಗೆ ಹೈಕೋರ್ಟ್‌ಗೆ ಸಲ್ಲಿಸಬೇಕಾಗಿದ್ದು, ಆದಷ್ಟು ಬೇಗನೇ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ.ಆರ್. ಸುಕುಮಾರನ್ ಹೇಳಿದರು.ಇದಕ್ಕೂ ಮುಂಚೆ ಮಡಿಕೇರಿಯಲ್ಲಿ ಸಮಿತಿಯ ಸದಸ್ಯರು ಜನಪ್ರತನಿಧಿಗಳ ಜೊತೆ ಚರ್ಚೆ ನಡೆಸಿ, ಸಲಹೆಗಳನ್ನು ಪಡೆದರು.ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ, ಶಾಸಕ ಅಪ್ಪಚ್ಚು ರಂಜನ್, ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ. ಕಾವೇರಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸಲಹೆಗಳನ್ನು ನೀಡಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.