ಶನಿವಾರ, ಮೇ 15, 2021
24 °C

ಕಾಯಕಲ್ಪಕ್ಕೆ ಕಾದಿರುವ ಮಹಾಲಿಂಗಪುರದ ಬಸ್ ನಿಲ್ದಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾಲಿಂಗಪುರ: ರಾಜ್ಯದ ಅನೇಕ ಬಸ್ ನಿಲ್ದಾಣಗಳಿಗೆ ಬದಲಾವಣೆ ಹಾಗೂ ಪುನರ್ ನಿರ್ಮಾಣದ ಭಾಗ್ಯ ಒದಗಿಬಂದರೂ ಬದಲಾವಣೆ ನಿಜಕ್ಕೂ ಅವಶ್ಯಕತೆ ಇದ್ದ ಇಲ್ಲಿಯ ಬಸ್ ನಿಲ್ದಾಣಕ್ಕೆ ಆ ಭಾಗ್ಯ ಎಂದು ಒದಗಿ ಬಂದೀತು ಎಂದು ಇಲ್ಲಿಯ ಜನತೆ ಕಾತುರದಿಂದ ಕಾಯುತ್ತಲೇ ಇದ್ದಾರೆ. 

ಸಾಮಾನ್ಯ ಜನತೆ ಪೂರ್ಣ ಪ್ರಮಾಣದಲ್ಲಿ ಬಸ್ ಪ್ರಯಾಣವನ್ನೇ ಅವಲಂಬಿಸಿದ್ದರೂ ವಾಕರಾಸಾ ಸಂಸ್ಥೆ ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಬಸ್‌ಗಳನ್ನು ನಿಲ್ಲಿಸುವುದು ಇಲ್ಲವೇ ಬಸ್‌ಗಳನ್ನು ಬೇರೆ ಮಾರ್ಗದಿಂದ ಓಡಿಸುವುದು ಇಲ್ಲಿಯ ಜನರಿಗೆ ಸಾಮಾನ್ಯ ಅನುಭವವಾಗಿದೆ. ಇದರೊಂದಿಗೆ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಇಲ್ಲಿಯ ಬಸ್ ನಿಲ್ದಾಣ ಪುರಾತನ ಧರ್ಮಶಾಲೆಯಾಗಿದೆ.ಮಹಾರಾಷ್ಟ್ರದ ಕೊಲ್ಹಾಪುರ, ಮಿರಜ್, ಸಾಂಗಲಿ, ಈಚಲಕರಂಜಿ ಹಾಗೂ ಕರ್ನಾಟಕದ ನಿಪ್ಪಾಣಿ, ಚಿಕ್ಕೋಡಿಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳ ಮೇಲೆ ಮುಖ್ಯ ಕೇಂದ್ರವಾಗಿ ಗುರುತಿಸಲ್ಪಡುವ ಮಹಾಲಿಂಗಪುರ ಬಸ್ ನಿಲ್ದಾಣ ಅತ್ಯಂತ ಅವ್ಯವಸ್ಥೆಯಿಂದ ಕೂಡಿದೆ.ಇಲ್ಲಿಯ ಕಂಪೌಂಡ್ ಗೋಡೆಗಳು ಪ್ರಯಾಣಿಕರ ಮೂತ್ರ ವಿಸರ್ಜನೆಯ ತಾಣಗಳಾಗಿವೆ. ಬಸ್‌ಗಳು ಬರುವವರೆಗೆ ಕಾಯೋಣ ಎಂದರೆ ಬಸ್ ನಿಲ್ದಾಣದ ಛಾವಣಿ ಎಲ್ಲಿ ಯಾವಾಗ ಕುಸಿಯುತ್ತದೊ ಎಂಬ ಭಯ. ಮಹಿಳೆಯರು ವಿಶ್ರಾಂತಿ ಪಡೆಯಲು ಇರುವ ಕೊಠಡಿಯನ್ನು ತೆರೆದ ಉದಾಹರಣೆಗಳೇ ಇಲ್ಲ. ಒಬ್ಬನೇ ನಿಯಂತ್ರಕ ಇಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ ಅವನೂ ತನ್ನ ಕೊಠಡಿಯನ್ನು ತೆರೆಯದೇ ನಿಲ್ದಾಣದಲ್ಲೇ ಕಾಲ ಕಳೆಯುತ್ತಾನೆ.ಇಲ್ಲಿಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡುವ ಯಾವ ವ್ಯವಸ್ಥೆಗಳೂ ಇರದೇ ಇರುವುದರಿಂದ ಊರಿಗೆ ಹೊಸದಾಗಿ ಆಗಮಿಸಿದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ಹೇಳತೀರದು. ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಯಾವ ಊರಿಗೆ ಹೋಗುವ ಬಸ್ಸುಗಳು ನಿಲ್ಲುತ್ತವೆ ಎಂದು ತಿಳಿಯುವುದಿಲ್ಲ. ಓದಲು ಬರುವ ಪ್ರಯಾಣಿಕರು ಮಾತ್ರ ಯಾರನ್ನೂ ಕೇಳದೆ ಬಸ್ ಹತ್ತುತ್ತಾರೆ. ಆದರೆ ಹಿರಿಯ ನಾಗರಿಕರು, ಹಳ್ಳಿಯ ಅನಕ್ಷರಸ್ಥ ಪ್ರಯಾಣಿಕರಿಗೆ ಆಗುವ ತೊಂದರೆ ಬಹಳ.ಎರಡು ದಶಕಗಳ ಹಿಂದೆಯೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಟ್ಟಲಾಗಿರುವ ಈ ಬಸ್ ನಿಲ್ದಾಣ ಯಾವುದೇ ಪೂರಕ ವ್ಯವಸ್ಥೆಗಳನ್ನು ಕಾಣಲೇ ಇಲ್ಲ. ಪ್ರಯಾಣಿಕರಿಗಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕೊರೆಸಿದ ಕೊಳವೆ ಬಾವಿಯನ್ನು ಕೇವಲ ಶೌಚಾಲಯಕ್ಕೆ ನೀರು ಪೂರೈಸಲು ಉಪಯೋಗಿಸಲಾಗುತ್ತಿದೆ.

ಶೌಚಾಲಯದ ಗುತ್ತಿಗೆದಾರ ಶೌಚಾಲಯವನ್ನೂ ಸ್ವಚ್ಛವಾಗಿ ಇಟ್ಟುಕೊಂಡಿಲ್ಲದಿರುವುದು ಸಾರ್ವಜನಿಕರ ದೌರ್ಭಾಗ್ಯವೇ ಸರಿ. ಸಂಸ್ಥೆಯ ಮೇಲಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಒಟ್ಟಾಗಿ ಸೇರಿ ಊರಿಗೆ ಹೆಮ್ಮೆ ತರುವ ಆಧುನಿಕ ಶೈಲಿಯ ಬಸ್ ನಿಲ್ದಾಣವನ್ನು ನಿರ್ಮಿಸಬೇಕು ಎಂದು ಪಟ್ಟಣದ ಸಿದ್ದು ಶಿರೋಳ, ಕರವೇ ಅಧ್ಯಕ್ಷ  ಅರವಿಂದ ಮಾಲಬಸರಿ, ವೀರೇಶ ಆಸಂಗಿ, ಬಂದೇನವಾಜ ಪಕಾಲಿ ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.