ಕಾರಿನ ದೂಳು, ಪೊಲೀಸರ ಹಗ್ಗ ಜಗ್ಗಾಟ
ಮಾದನಭಾವಿ (ತಾ.ಧಾರವಾಡ): ಒಂದಕ್ಕಿಂತ ಮತ್ತೊಂದು ಚಂದವಿದ್ದ ಬಿಳಿ, ನೀಲಿ, ಕೆಂಪು ಕಾರುಗಳು ರಸ್ತೆಯಲ್ಲಿ ಸಾಗುತ್ತಿದ್ದುದನ್ನು ಕುತೂಹಲದಿಂದ ನೋಡುತ್ತಿದ್ದ ಗ್ರಾಮಸ್ಥರ ಮೈಯೆಲ್ಲ ಕೆಂದೂಳು..
ಕಾರ್ಯಕ್ರಮದ ಛಾಯಾಚಿತ್ರ ತೆಗೆಯುವ ಧಾವಂತದಲ್ಲಿದ್ದ ಪತ್ರಿಕಾ ಛಾಯಾಗ್ರಾಹಕರಿಗೆ ಪೊಲೀಸರಿಂದ ತಡೆ, ಅವರ ವರ್ತನೆಗೆ ಮುಖ್ಯಮಂತ್ರಿಗಳ ಎಚ್ಚರಿಕೆ...
ಇದು ತಾಲ್ಲೂಕಿನ ವಿವಿಧೆಡೆ ಕಾರ್ಯಕ್ರಮಗಳಲ್ಲಿ ಕಂಡು ಬಂದ ದೃಶ್ಯಗಳು. ಸುವರ್ಣ ಗ್ರಾಮ ಯೋಜನೆಯಡಿ ಹಮ್ಮಿಕೊಳ್ಳಲಾದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ತಾ.ಪಂ. ಸದಸ್ಯರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಕಾರುಗಳು ಒಂದರ ಹಿಂದೆ ಒಂದರಂತೆ ಭರ್ರನೇ ಹೋಗುತ್ತಿದ್ದರೆ ಮುಗಳಿ, ಮಾದನಭಾವಿ ಗ್ರಾಮದ ಕೆಂಪು ಮಣ್ಣಿನ ದೂಳು ಇಡೀ ಗ್ರಾಮವನ್ನು ಆವರಿಸಿಕೊಂಡಿತ್ತು. ಮುಗಳಿಯಲ್ಲಿ ಸಾಲುಗಟ್ಟಿ ಕೊಡಗಳನ್ನು ತುಂಬಿಕೊಳ್ಳಲು ನಳದ ಬಳಿ ನಿಂತಿದ್ದ ಮಹಿಳೆಯರ ಬವಣೆಯನ್ನು ಮುಖ್ಯಮಂತ್ರಿಗಳು ಕಾರಿನಲ್ಲಿಯೇ ವೀಕ್ಷಿಸಿ ಮುಂದೆ ಸಾಗಿದರು.
ತಮ್ಮೂರಿಗೆ ಬಂದಿದ್ದ ತರಹೇವಾರಿ ಕಾರು ಹಾಗೂ ಜನರನ್ನು ನೋಡಲು ಮಕ್ಕಳು-ಮುದುಕರೆನ್ನದೇ ಎಲ್ಲರೂ ಗುಂಪು ಗುಂಪಾಗಿ ಸೇರಿದ್ದರು. ಗುಡ್ಡದ ಮೇಲೆ ಹಾಕಿದ್ದ ಶಾಮಿಯಾನದಲ್ಲಿ ಜನಪ್ರತಿನಿಧಿಗಳು ಮಾತನಾಡುತ್ತಿದ್ದರೆ, ಶಾಮಿಯಾನದಾಚೆಯೂ ಮಕ್ಕಳು, ಮಹಿಳೆಯರು ಕುಳಿತು ಭಾಷಣಗಳನ್ನು ಆಲಿಸಿದರು.
ಅಣ್ಣಿಗೇರಿಯಲ್ಲಿ ಇತ್ತೀಚೆಗೆ ನಡೆದ ಪಂಪ ಸ್ಮಾರಕ ಭವನದ ಉದ್ಘಾಟನೆಯ ಛಾಯಾಚಿತ್ರ ತೆಗೆಯಲು ಪತ್ರಿಕಾ ಛಾಯಾಗ್ರಾಹಕರು ಮುಂದಾದಾಗ ಪೊಲೀಸರು ಹಗ್ಗ ಬಳಸಿ ಛಾಯಾಗ್ರಾಹಕರನ್ನು ದೂರ ತಳ್ಳಿದ್ದ ಘಟನೆ ಹಸಿರಾಗಿರುವಾಗಲೇ ಮಾದನಭಾವಿಯಲ್ಲಿಯೂ ಪೊಲೀಸರು ಛಾಯಾಗ್ರಾಹಕರಿಗೆ ಮತ್ತೆ ಅಡ್ಡಿಪಡಿಸಿದರು.
ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿರುವ ಕಾರ್ಯಕ್ರಮದ ಫೋಟೊ ತೆಗೆಯಲು ವೇದಿಕೆಯ ಮುಂಭಾಗಕ್ಕೆ ಹೋಗದಂತೆ ಜಾಲರಿಗಳಿಂದ `ಡಿ ಝೋನ್~ ಮುಚ್ಚಲಾಗಿತ್ತು. ಜಾಲರಿಗೆ ತಂತಿಯನ್ನು ಬಿಗಿದಿದ್ದರಿಂದ ಛಾಯಾಗ್ರಾಹಕರು ಹೋಗಲು ತಡೆಯಾಯಿತು. ಇದನ್ನು ಗಮನಿಸಿದ ಮುಖ್ಯಮಂತ್ರಿ ಶೆಟ್ಟರ, `ಅವರಿಗೇಕೆ ಸಮಸ್ಯೆ ಮಾಡುತ್ತಿದ್ದೀರಿ? ಒಳಗೆ ಬಿಡಿ. ಎಷ್ಟು ಸಾರಿ ಹೇಳಬೇಕು. ಮೇಲಿಂದ ಮೇಲೆ ಹೇಳಿಸಿಕೊಳ್ಳಬಾರದು~ ಎಂದು ಪೊಲೀಸರಿಗೆ ಸೂಚಿಸಿದರು.
ಇದಾದ ಬಳಿಕವೂ ತಮ್ಮೂರಿಗೆ ಮುಖ್ಯಮಂತ್ರಿ ಬಂದಿದ್ದನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಗ್ರಾಮಸ್ಥರನ್ನು ಪೊಲೀಸರು ಹಗ್ಗದಿಂದ ತಳ್ಳುತ್ತಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.