ಶುಕ್ರವಾರ, ಮೇ 14, 2021
21 °C

`ಕಾರ್ಮಿಕರ ಹಕ್ಕು ಸಂರಕ್ಷಣೆ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕಾರ್ಮಿಕರ ಕಾನೂನುಗಳನ್ನು ಸದ್ಬಳಕೆ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಸವರಾಜ್ ಎ.ಪಾಟೀಲ್ ತಿಳಿಸಿದರು.ನಗರದ ಗೌಡನಹಳ್ಳಿ ರಸ್ತೆಯ ಕೈಗಾರಿಕಾ ಪ್ರದೇಶದ ರುಶಿಲ್ ಡೆಕೋರ್ ಲಿಮಿಟೆಡ್ ಸಂಸ್ಥೆ ಆವರಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ವಕೀಲರ ಸಂಘ, ರುಶಿಲ್ ಡೆಕೋರ್ ಲಿಮಿಟೆಡ್ ಆಶ್ರಯದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಹಾಗೂ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯನಿಗೆ ಜೀವಿಸಲು ಮೂಲಭೂತ ವಸ್ತುಗಳಾದ ಗಾಳಿ ಮತ್ತು ನೀರಿನ ಅವಶ್ಯಕತೆ ಇರುವಂತೆಯೇ ಕಾನೂನು ಅವಶ್ಯಕತೆಯೂ ಹುಟ್ಟಿನಿಂದ ಸಾವಿನವರೆಗೂ ಇರುತ್ತದೆ. ಮಾಲೀಕರು ಕಾರ್ಮಿಕರನ್ನು ತಮ್ಮ ಉನ್ನತಿಗೆ ಬಳಸುವುದರೊಂದಿಗೆ ಅವರಿಗೆ ಕಾನೂನು ಅನ್ವಯ ನೀಡಬೇಕಾದ ಸವಲತ್ತುಗಳನ್ನು ನೀಡಬೇಕು ಎಂದರು.ಮನುಷ್ಯ ತನ್ನ ಮನಸ್ಸು ಹಾಗೂ ದೇಹ ಸ್ವಾಸ್ಥ್ಯದಿಂದ ಇದ್ದರೆ ಮಾತ್ರ ಯಾವುದೇ ಅಡಚಣೆ ಇಲ್ಲದೆ ಕಾರ್ಯನಿರ್ವಹಿಸಲು ಸಾಧ್ಯ. ಕಾರ್ಮಿಕರು ತಂಬಾಕು ಸೇವನೆ, ಧೂಮಪಾನ, ಮದ್ಯಪಾನದಂತಹ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು. ಆರೋಗ್ಯ ಸುಸ್ಥಿತಿಯಲ್ಲಿಟ್ಟುಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀವಳ್ಳಿ ಮಾತನಾಡಿ, ಕಾರ್ಮಿಕರು ತಮಗಿರುವ ಹಕ್ಕುಗಳ ಬಗ್ಗೆ ಅರಿವು ಹೊಂದುವುದರ ಮೂಲಕ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ವಕೀಲ ಎನ್.ದೇವೇಂದ್ರ ಕುಮಾರ್ ಕಾರ್ಮಿಕ ಕಾನೂನುಗಳ ಬಗ್ಗೆ ಹಾಗೂ ವೈದ್ಯಾಧಿಕಾರಿ ಡಾ.ಶಿವದತ್ತ್ ತಂಬಾಕು ಉತ್ಪನ್ನ ಸೇವನೆಯ ದುಷ್ಟರಿಣಾಮದ ಬಗ್ಗೆ ಉಪನ್ಯಾಸ ನೀಡಿದರು.ರುಶಿಲ್ ಡೆಕೋರ್ ಲಿಮಿಟೆಡ್ ಸಂಸ್ಥೆ ಉಪಾಧ್ಯಕ್ಷ ಜಿಕೇಶ್ ತಕ್ಕರ್, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹದೇವಯ್ಯ, ವಕೀಲರ ಸಂಘದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ರುಶಿಲ್ ಡೆಕೋರ್ ಲಿಮಿಟೆಡ್ ಸಂಸ್ಥೆ ಮಾಲಿಕ ರುಶಿಲ್, ಕಾರ್ಮಿಕ ನಿರೀಕ್ಷಕರಾದ ಚಂದ್ರು, ವೀಣಾ , ಸಂಸ್ಥೆ ವ್ಯವಸ್ಥಾಪಕ ನಾಗರಾಜ್, ಎಚ್.ಎಸ್.ಸುರೇಶ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.