ಶುಕ್ರವಾರ, ಮೇ 14, 2021
29 °C
ಉತ್ತರಾಖಂಡದಲ್ಲಿ ಮತ್ತೆ ಮಳೆ, ಭೂಕುಸಿತ

ಕಾರ್ಯಾಚರಣೆಗೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಭೀಕರ ಪ್ರವಾಹಕ್ಕೆ ಸಿಲುಕಿ ಆತಂಕದ ಕ್ಷಣ ಎದುರಿಸುತ್ತಿರುವ ಹತ್ತು ಸಾವಿರ ಜನರ ಪೈಕಿ ಸೋಮವಾರ ಒಂದು ಸಾವಿರ ಮಂದಿಯನ್ನು ಮಾತ್ರ ರಕ್ಷಿಸುವಲ್ಲಿ ರಕ್ಷಣಾ ಪಡೆಗಳು ಸಫಲವಾಗಿವೆ. ಬಿಟ್ಟುಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಇದು ಪರಿಹಾರ ಕಾರ್ಯವನ್ನು ವಿಳಂಬಗೊಳಿಸಿದೆ. ಉತ್ತರಾಖಂಡ ಸರ್ಕಾರವು ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದವರ ಸಾಮೂಹಿಕ ಅಂತ್ಯ ಸಂಸ್ಕಾರ ವಿಧಿಯನ್ನು ಸೋಮವಾರ ನಡೆಸಲು ಯೋಜಿಸಿತ್ತಾದರೂ ಮಳೆಯಿಂದಾಗಿ ಅದು ಸಾಧ್ಯವಾಗಲಿಲ್ಲ.ಇದೇ ವೇಳೆ, `ಉತ್ತರಾಖಂಡದ ಕೆಲವೆಡೆ ಮುಂದಿನ ಮೂರು ದಿನಗಳಲ್ಲಿ ಅತಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ' ಎಂಬ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಇದು ಅತಂತ್ರರಾಗಿರುವವರ ರಕ್ಷಣೆಯ ಬಗ್ಗೆ ಇನ್ನಷ್ಟು ಭೀತಿ ಮೂಡಿಸಿದೆ. ಉತ್ತರಾಖಂಡದ ಕೆಲವೆಡೆ 25 ಸೆಂ.ಮೀ.ನಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.ಸೋಮವಾರ ಬೆಳಿಗ್ಗೆಯಿಂದ ಆರಂಭವಾದ ಭಾರಿ ಮಳೆಯಿಂದಾಗಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವುದು ರಕ್ಷಣಾ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತು. ಬದರಿನಾಥ ಕ್ಷೇತ್ರದಲ್ಲಿ ಸಿಲುಕಿರುವ 5,000 ಜನರ ಪೈಕಿ ಕೇವಲ 164 ಮಂದಿಯನ್ನು ಆರು ಆಸನ ಸಾಮರ್ಥ್ಯದ ಹೆಲಿಕಾಪ್ಟರ್‌ಗಳಲ್ಲಿ ಜೋಶಿಮಠಕ್ಕೆ ಕರೆತರಲಾಯಿತು.ಹರ್ಶಿಲ್, ಮನೇರಿ ಹಾಗೂ ಉತ್ತರ ಕಾಶಿ ಜಿಲ್ಲೆಯ ಭಟ್ವಾರಿಯಿಂದ 830 ಜನರನ್ನು ಧರಾಸು ಪಟ್ಟಣಕ್ಕೆ ಕರೆತರಲಾಯಿತು. ಇದರೊಂದಿಗೆ ಚಮೋಲಿ ಜಿಲ್ಲೆ, ಗಂಗೋತ್ರಿ ಕಣಿವೆ ಸೇರಿದಂತೆ ಹಿಮಾಲಯದ ವಿವಿಧ ಯಾತ್ರಾಸ್ಥಳಗಳಲ್ಲಿ ಸಿಲುಕಿರುವ ಸುಮಾರು ಒಂದು ಸಾವಿರ ಯಾತ್ರಾರ್ಥಿಗಳನ್ನು ಮಾತ್ರ ಸ್ಥಳಾಂತರಿಸಲು ಸಾಧ್ಯವಾಗಿದೆ.ಪರ್ವತ ಪ್ರದೇಶದಲ್ಲಿ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ವೈಮಾನಿಕ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಯಿತು. ಬದರಿನಾಥ ಹಾಗೂ ಆಸುಪಾಸಿನಲ್ಲಿ ಸಿಕ್ಕಿಹಾಕಿಕೊಂಡಿರುವ ಯಾತ್ರಾರ್ಥಿಗಳ ರಕ್ಷಣೆಗೆಂದು ನಿಯೋಜಿಸಲಾದ ಹೆಲಿಕಾಪ್ಟರ್‌ಗಳು ವಾತಾವರಣ ಸಹಜ ಸ್ಥಿತಿಗೆ ಬರುವತನಕ ಸಹಸ್ರಧಾರಾ ಹೆಲಿಪ್ಯಾಡ್‌ನಲ್ಲೇ ನಿಲ್ಲುವುದು ಅನಿವಾರ್ಯವಾಗಿದೆ. ಮಳೆ ಹಾಗೂ ಮಂಜಿನಿಂದಾಗಿ ಗುಪ್ತಕಾಶಿ ಹಾಗೂ ಗೌಚಾರ್‌ನಲ್ಲೂ ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗಲಿಲ್ಲ.ರುದ್ರಪ್ರಯಾಗ- ಬದರಿನಾಥ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದರೆ, ಚಮೋಲಿ ಹಾಗೂ ಪೌರಿ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಸುರಿಯುತ್ತಿದೆ. ಪೌರಿ ಜಿಲ್ಲೆಯ ಮುಲಾನ್‌ಗ್ರಾಮದ ಸಮೀಪ ಸಂಭವಿಸಿದ ಇನ್ನೊಂದು ಮೇಘಸ್ಫೋಟಕ್ಕೆ ಅನೇಕ ಮನೆಗಳು ನೆಲಸಮವಾಗಿದ್ದು, ಸಾವುನೋವು ವಿವರ ಇನ್ನೂ ಲಭ್ಯವಾಗಿಲ್ಲ.ವೈಮಾನಿಕ ಪರಿಹಾರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿರುವ ನಿವೃತ್ತ ವಿಂಗ್ ಕಮಾಂಡರ್ ಕ್ಯಾಪ್ಟನ್ ಆರ್.ಎಸ್.ಬ್ರಾರ್, `ಬದರಿನಾಥ ಹಾಗೂ ಅದರ ಅಕ್ಕಪಕ್ಕದ ಸ್ಥಳದಲ್ಲಿ ಸಿಲುಕಿರುವ 5,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಬೇಕಿದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ಗಳು ಬೆಳಿಗ್ಗೆಯಿಂದಲೂ ಹೊರಡಲು ಸಾಧ್ಯವಾಗಲಿಲ್ಲ' ಎಂದು ತಿಳಿಸಿದರು.ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಇನ್ನೂ ಮೂರು ದಿನ ಹಿಡಿಯಬಹುದು ಎಂದು ಇಂಡಿಯನ್ ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಗಳು ತಿಳಿಸಿದ್ದಾರೆ. `ಕೇದಾರನಾಥ ಕ್ಷೇತ್ರದಿಂದ ಬಹುತೇಕ ಎಲ್ಲರನ್ನೂ ಸ್ಥಳಾಂತರಿಸಲಾಗಿದೆ. ಬದರಿನಾಥ, ಗಂಗೋತ್ರಿ ಹಾಗೂ ಯಮುನೋತ್ರಿಯಲ್ಲಿ ಹಲವರು ಸಿಲುಕಿದ್ದಾರೆ. ಅವರನ್ನು ಕ್ರಮೇಣ ತೆರವುಗೊಳಿಸಲಾಗುವುದು' ಎಂದು ಐಟಿಬಿಪಿ ಮಹಾ ಕಾರ್ಯದರ್ಶಿ ಅಜಯ್ ಛಡ್ಡಾ ನವದೆಹಲಿಯಲ್ಲಿ ತಿಳಿಸಿದ್ದಾರೆ. ಜೂನ್ 28ರ ಹೊತ್ತಿಗೆ ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಯಿದ್ದು, ಒಂದೊಮ್ಮೆ ಹೆಲಿಕಾಪ್ಟರ್ ಹಾರಾಟಕ್ಕೆ ಅವಕಾಶ ಸಿಕ್ಕರೆ ಪರಿಹಾರ ಕಾರ್ಯಾಚರಣೆ ಚುರುಕುಗೊಳ್ಳಲಿದೆ ಎಂದು ತಿಳಿಸಿದ್ದಾರೆ.ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ್ಲ್ಲಲೂ ಮಳೆ ಸುರಿಯುತ್ತಿದೆ. ಉತ್ತರ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದ್ದು ಗಂಗಾ, ಗಾಘ್ರಾ ಮತ್ತು ಶಾರದಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಈ ಮಧ್ಯೆ ಹಿಮಾಚಲ ಪ್ರದೇಶದ ಬಂಜಾರ ಕ್ಯಾಂಪಿನಲ್ಲಿ ಸಿಲುಕಿದ್ದ ಅಮೆರಿಕದ 14 ಪ್ರವಾಸಿಗರನ್ನು ರಕ್ಷಿಸಿ, ರಾಂಪುರಕ್ಕೆ ಕರೆತರಲಾಯಿತು.ಋಷಿಕೇಶಕ್ಕೆ ತೆರಳಲು ಸೂಚನೆ: ಮಳೆಯಿಂದಾಗಿ ರುದ್ರಪ್ರಯಾಗ ಜಿಲ್ಲೆಗಳ ರಸ್ತೆಗಳೆಲ್ಲ ನಾಶವಾಗಿವೆ. ಈ ಸಮಯದಲ್ಲೂ ತಮ್ಮ ಬಂಧು- ಬಾಂಧವರನ್ನು ಪ್ರವಾಸಿಗರು ಹುಡುಕುತ್ತಿದ್ದು, ಅಂಥವರು ಸಾಧ್ಯವಾದಷ್ಟು ಶೀಘ್ರವೇ ಋಷಿಕೇಶದತ್ತ ಹೊರಡಲು ಸೂಚಿಸಲಾಗಿದೆ' ಎಂದು ರುದ್ರಪ್ರಯಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೀರಂದ್ರಜೀತ್ ಸಿಂಗ್ ತಿಳಿಸಿದ್ದಾರೆ.ಮಾನವರಹಿತ ವಾಹನ: ಪ್ರತಿಕೂಲ ವಾತಾವರಣದಿಂದಾಗಿ ರಕ್ಷಣಾ ಕಾರ್ಯ ಸ್ಥಗಿತಗೊಂಡಿದ್ದರೂ ಪಟ್ಟು ಬಿಡದ ಸೇನಾ ಪಡೆಗಳು, ಸಂತ್ರಸ್ತರನ್ನು ಹುಡುಕಲು ಮಾನವರಹಿತ ವೈಮಾನಿಕ ವಾಹನ (ಯುಎವಿ) `ನೇತ್ರಾ' ಬಳಸಲು ನಿರ್ಧರಿಸಿವೆ. ಅತಂತ್ರರಾಗಿ ಸಿಲುಕಿರುವವರನ್ನು ಹುಡುಕುವ ಕೆಲಸವನ್ನು ಈ ವಾಹನಗಳು ಸಮರ್ಥವಾಗಿ ನಿರ್ವಹಿಸುವ ನಿರೀಕ್ಷೆಯಿದೆ.ವಿಪತ್ತಿನಲ್ಲೂ ರಾಜಕೀಯ: ಸಾವಿರಾರು ಜನ ಪ್ರಾಕೃತಿಕ ವಿಪತ್ತಿಗೆ ಸಿಲುಕಿ ಅತಂತ್ರರಾಗಿ ನೆರವಿನ ನಿರೀಕ್ಷೆಯಲ್ಲಿದ್ದರೆ ರಾಜಕೀಯ ಪಕ್ಷಗಳು ಸಹಮತ ಪ್ರದರ್ಶಿಸದೆ, ರಾಜಕಾರಣ ಮಾಡುತ್ತಿವೆ ಎಂಬ ಟೀಕೆಗಳು ಕೇಳಿಬಂದಿವೆ.ಕೊಳೆತು ದುರ್ನಾತ ಬೀರುತ್ತಿರುವ ಹೆಣಗಳು

ಕೇದಾರ: ಸಾಮೂಹಿಕ ಅಂತ್ಯಕ್ರಿಯೆಗೆ ಸಿದ್ಧತೆ


ಗೌತಮ್ ಧೀರ್ / ಪ್ರಜಾವಾಣಿ ವಾರ್ತೆ

ಡೆಹ್ರಾಡೂನ್:
ಪ್ರಳಯರೂಪಿ ಮಳೆಗೆ ತತ್ತರಿಸಿರುವ ದೇವಾಲಯ ಪಟ್ಟಣ ಕೇದರನಾಥದಲ್ಲಿ ಅಸುನೀಗಿದ ನೂರಾರು ಸಂತ್ರಸ್ತರ ಅಂತ್ಯಸಂಸ್ಕಾರವನ್ನು ಸಾಮೂಹಿಕವಾಗಿ ನಡೆಸಲು ವಿಶೇಷ ತಂಡಗಳು ಸೋಮವಾರ ಸಿದ್ಧತೆ ಆರಂಭಿಸಿವೆ.ಈ ಬೆಳವಣಿಗೆಯಿಂದಾಗಿ, ಉತ್ತರಾಖಂಡದ ವಿನಾಶಕಾರಿ ಪ್ರವಾಹಕ್ಕೆ ಸಿಕ್ಕಿ ಪ್ರಾಣ ಕಳೆದುಕೊಂಡ ನೂರಾರು ಜನರ ಬಂಧುಗಳಿಗೆ ತಮ್ಮ ಆತ್ಮೀಯರ ಮುಖದರ್ಶನವನ್ನು ಕೊನೆಯ ಬಾರಿ ಮಾಡುವ ಅಥವಾ ಅಂತ್ಯಕ್ರಿಯೆ ನಡೆಸಲು ಅವಕಾಶ ದೊರೆಯುವ ಸಾಧ್ಯತೆ ಕ್ಷೀಣಿಸಿದೆ.ಸಾಮೂಹಿಕ ಅಂತ್ಯಸಂಸ್ಕಾರಕ್ಕಾಗಿ ಅಂದಾಜು 50 ಟನ್‌ಗಳಷ್ಟು ಸೌದೆ ಮತ್ತು ಅಷ್ಟೇ ಪ್ರಮಾಣದ ತುಪ್ಪಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಪುರೋಹಿತರ ಉಪಸ್ಥಿತಿಯಲ್ಲೇ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ.ಕೇದಾರನಾಥ ಪಟ್ಟಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹೆಣಗಳು ಕೊಳೆತು ದುರ್ನಾತ ಬೀರಲು ಆರಂಭಿಸಿರುವುದರಿಂದ ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.ಅಂತ್ಯಸಂಸ್ಕಾರ ಪ್ರಕ್ರಿಯೆ ಸೋಮವಾರ ಆರಂಭಿಸಲು ಯೋಜಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನ ಅದಕ್ಕೆ ಅವಕಾಶ ಕೊಟ್ಟಿಲ್ಲ. ಇನ್ನು ಒಂದೆರಡು ದಿನಗಳಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಯಲಿದೆ.ಉತ್ತರಾಖಂಡ: ಪ್ರವಾಹ ಪ್ರದೇಶದಲ್ಲಿ ಅಮಾನವೀಯ ಘಟನೆಗಳು

ಗೆಜ್ಜೆಗಾಗಿ ಶವದ ಕಾಲನ್ನೇ ಕತ್ತರಿಸಿದರು!

ಲಖನೌ:
ಪ್ರಳಯರೂಪಿ ಭಾರಿ ಮಳೆಯಿಂದ ನಲುಗಿರುವ ಉತ್ತರಾಖಂಡದಲ್ಲಿ ಸತ್ತವರ ಮೈಮೇಲಿನ ಆಭರಣಗಳನ್ನು ದೋಚುವ ಅಮಾನವೀಯ ಘಟನೆಗಳು ನಡೆಯುತ್ತಿವೆ.

ಪ್ರವಾಹಕ್ಕೆ ಸಿಲುಕಿ ಪಾರಾಗಿ ಬಂದಿರುವ ಆಶೀಶ್ ಶರ್ಮಾ ತಾವು ಕಣ್ಣಾರೆ ಕಂಡ ಅಂತಹ ಅನುಭವವೊಂದು ಹೀಗಿದೆ.

`ಪ್ರವಾಹದಲ್ಲಿ ತಂದೆ-ತಾಯಿ, ಇಬ್ಬರು ಸಹೋದರಿಯನ್ನು ಕಳೆದುಕೊಂಡೆ. ಕಣ್ಣಮುಂದೆಯೇ ಕುಟುಂಬ ಸದಸ್ಯರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದರು.

ಇದುವರೆಗೂ ಅವರ ಪತ್ತೆಯಾಗಿಲ್ಲ. ಸೇನೆಯ ನೆರವಿನಿಂದ ನನ್ನನ್ನು ರಕ್ಷಿಸಲಾಯಿತು. ಪ್ರವಾಹಪೀಡಿತ ಸ್ಥಳಗಳಲ್ಲಿ ಎತ್ತ ನೋಡಿದರೂ ಹೆಣಗಳ ರಾಶಿಯೇ ಕಂಡುಬರುತ್ತಿದೆ. ಅಂತಹ ಹೆಣಗಳ ಮೈಮೇಲಿರುವ ಚಿನ್ನ-ಬೆಳ್ಳಿಯ ಆಭರಣಗಳಿಗಾಗಿ, ಹಣಕ್ಕಾಗಿ ಕಳ್ಳರು ತಡಕಾಡುತ್ತಿದ್ದ ದೃಶ್ಯಗಳನ್ನು ಕಣ್ಣಾರೆ ಕಂಡೆ.

ಕೇದಾರನಾಥ ದೇವಸ್ಥಾನದಿಂದ ತುಸು ದೂರದಲ್ಲಿರುವ ರಾಮ್‌ಬಾರ ಎಂಬಲ್ಲಿ ಹೆಂಗಸೊಬ್ಬಳ ಕಾಲಿನಲ್ಲಿದ್ದ ಬೆಳ್ಳಿ ಕಾಲ್ಗೆಜ್ಜೆಯನ್ನು ಬಿಚ್ಚಲಾಗದ ಕಳ್ಳನೊಬ್ಬ ಕೊನೆಗೇ ಅವಳ ಕಾಲನ್ನೇ ಕತ್ತರಿಸಿದ. ಸಾವಿನ ದವಡೆಗೆ ಸಿಲುಕಿದ್ದ ದಾರುಣ ಪರಿಸ್ಥಿತಿಯಲ್ಲೂ ಇಂತಹ ಅಮಾನವೀಯತೆ ನೋಡಿ ಅಸಹ್ಯ ಅನ್ನಿಸಿತು' ಎಂದು ಶರ್ಮಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಕುಟುಂಬದವರನ್ನು ಕಳೆದುಕೊಂಡು ತೀವ್ರ ಮಾನಸಿಕ ಆಘಾತಕ್ಕೀಡಾಗಿರುವ ಆಶೀಶ್ ಅವರಿಗೆ ಇನ್ನೂ ಆ ಆಘಾತದಿಂದ ಹೊರಬರಲು ಆಗಿಲ್ಲ. ಪ್ರವಾಹಪೀಡಿತ ಸ್ಥಳದಲ್ಲಿ ಬದುಕುಳಿದ ಯಾತ್ರಾರ್ಥಿಗಳನ್ನು ಲೂಟಿ ಮಾಡಲಾಗುತ್ತಿದೆ.

ಮುಖ್ಯವಾಗಿ ಮಹಿಳೆಯರು ಲೂಟಿಕೋರರ ದಾಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಯಾತ್ರಾರ್ಥಿಗಳು ದೂರು ನೀಡಿದರೂ ಲೂಟಿಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಶೀಶ್ ದೂರಿದ್ದಾರೆ.

ದೇಗುಲದ ಘಂಟೆಯ ಆಸರೆಯಲ್ಲಿ ಒಂಬತ್ತು ಗಂಟೆ!

ಆ ಯುವಕ ಬದುಕಿದ್ದೇ `ಪವಾಡ'

ಡೆಹ್ರಾಡೂನ್ (ಪಿಟಿಐ):
ಪ್ರವಾಹಕ್ಕೆ ಸಿಲುಕಿ ಕುತ್ತಿಗೆಯವರೆಗೆ ನೀರಿನಲ್ಲಿ ಮುಳುಗಿದ್ದ ಆ ಯುವಕನ ಕೈಗೆ ಸಿಕ್ಕಿದ್ದು ದೇವಸ್ಥಾನದ ಘಂಟೆ. ಅದನ್ನೇ ಆಸರೆಯಾಗಿ ಹಿಡಿದುಕೊಂಡು, ತೇಲಿ ಬಂದ ಶವಗಳ ಮೇಲೆ ಸತತ ಒಂಬತ್ತು ತಾಸುಗಳ ಕಾಲ ನಿಂತು ಕೊನೆಗೂ ಜೀವ ಉಳಿಸಿಕೊಂಡ `ಪವಾಡ ಸದೃಶ' ಘಟನೆ ಕೇದಾರನಾಥದಲ್ಲಿ ನಡೆದಿದೆ.

ತೆಹ್ರಿ ಪಟ್ಟಣದ 36ರ ಹರೆಯದ ವಿಜೇಂದರ್ ಸಿಂಗ್ ನೇಗಿ ಎಂಬಾತನೇ ಪ್ರವಾಹದಲ್ಲಿ ಬದುಕುಳಿದ ವ್ಯಕ್ತಿ. ಕೆಲವೇ ಕ್ಷಣಗಳಲ್ಲಿ ಜಲಸಮಾಧಿಯಾಗಲಿದ್ದ ತನಗೆ ದೇವಾಲಯ ಜೀವ ಉಳಿಸಿದರೂ, ಮೃತದೇಹಗಳ ಮಧ್ಯೆ ಸಮತೋಲನ ಕಾಯ್ದುಕೊಂಡೇ ಕಳೆದ ಆತಂಕದ ಕ್ಷಣ ಮರೆಯಲಾಗುತ್ತಿಲ್ಲ ಎಂದು ನೇಗಿ ಹೇಳುತ್ತಾನೆ.

`ನನ್ನ ಭಾವ ವಿಜೇಂದರ್ ನೇಗಿ ಜೀವಂತವಾಗಿ ಮರಳಿ ಬಂದಿದ್ದು ಪವಾಡವಲ್ಲದೇ ಬೇರೇನಲ್ಲ. ಸತ್ತವರು ಆತನನ್ನು ಬದುಕಿಸಿದ ಘಟನೆ ಇದು' ಎಂದು ದೆಹಲಿಯಲ್ಲಿ ಪ್ರವಾಸಿ ಏಜೆಂಟ್ ಆಗಿರುವ ಗಂಗಾ ಸಿಂಗ್ ಭಂಡಾರಿ ಘಟನೆಯ ಬಗ್ಗೆ ವಿವರ ನೀಡಿದರು.

ಕೇದಾರನಾಥ ದೇವಸ್ಥಾನದ ಪಕ್ಕದಲ್ಲೇ ಭಂಡಾರಿ ಅವರ ಹೋಟೆಲ್ ಇದೆ. ಪ್ರವಾಹದಿಂದಾಗಿ ಆ ಹೋಟೆಲ್ ವಿಜೇಂದರ್ ಸಿಂಗ್ ನೇಗಿ ಕಣ್ಣೆದುರೇ ಕೊಚ್ಚಿಕೊಂಡು ಹೋಯಿತು. ನೇಗಿ ತಕ್ಷಣ ಮೂರನೇ ಅಂತಸ್ತಿನಿಂದ ಕೆಳಗೆ ನೀರೊಳಕ್ಕೆ ಜಿಗಿದ. ಆಸರೆಗೆ ಹುಡುಕಾಡಿ, ದೇವಸ್ಥಾನದ ಒಳಗೆ ಹೋದ. ಸ್ವಲ್ಪ ಹೊತ್ತಿನಲ್ಲೇ ದೇಗುಲದ ಒಳಾವರಣಕ್ಕೆ ಶವಗಳು ತೇಲುತ್ತಾ ಬಂದವು. ನೀರಿನ ಪ್ರಮಾಣ ಹೆಚ್ಚುತ್ತ, ಕುತ್ತಿಗೆಯವರೆಗೆ ಏರಿದಾಗ ದೇಗುಲದ ಘಂಟೆಯನ್ನು ಹಿಡಿದುಕೊಂಡು ನಿಂತ.

ನೀರಿನ ರಭಸ ತೀವ್ರಗೊಂಡು, ಆತನ ಬಟ್ಟೆಗಳೆಲ್ಲ ಹರಿದುಹೋದವು. ಸ್ವಲ್ಪ ಹೊತ್ತಿಗೆ ಕೈ ನೋಯಲು ಆರಂಭಿಸಿದಾಗ ಕಾಲ ಕೆಳಗೆ ಸಿಕ್ಕ ಶವಗಳ ಮೇಲೆ ನಿಂತು ಸುಧಾರಿಸಿಕೊಂಡ. ಹೀಗೆ ಬೆಳಿಗ್ಗೆ 7ರಿಂದ ಸಂಜೆ 4 ಗಂಟೆಯವರೆಗೆ ದೇಗುಲದ ಘಂಟೆ ಹಾಗೂ ಶವಗಳನ್ನೇ ಆಸರೆಯಾಗಿ ಮಾಡಿಕೊಂಡು ಆತಂಕದಿಂದ ಕಾಲ ಕಳೆದ.

ಶವಗಳ ಬಟ್ಟೆಯನ್ನು ಕಿತ್ತು ತನ್ನ ದೇಹಕ್ಕೆ ಸುತ್ತಿಕೊಂಡ. ನೀರಿನ ಮಟ್ಟ ಕಡಿಮೆಯಾದಾಗ ಹೊರ ಬಂದು, ಪಕ್ಕದಲ್ಲಿನ ಕಾಡಿಗೆ ತೆರಳಿ, ಎರಡು ದಿನ ಅಲೆದಾಡಿದ. ನಂತರ ರಕ್ಷಣಾ ಪಡೆ ಆತನನ್ನು ಗಮನಿಸಿ, ಹೆಲಿಕಾಪ್ಟರ್ ಮೂಲಕ ರಕ್ಷಿಸಿತು.

`ನೇಗಿಯನ್ನು ನೋಡಿದ್ದೇ ತಡ, ಆತನ ಕುಟುಂಬದ ಸದಸ್ಯರೆಲ್ಲ ಅತ್ತುಬಿಟ್ಟರು. ಏಕೆಂದರೆ ಆತ ಬದುಕಿಲ್ಲ ಎಂದೇ ಅವರು ಭಾವಿಸಿದ್ದರು. ಸಾವಿನ ದವಡೆಯಿಂದ ಆತನನ್ನು ಭಗವಂತನೇ ಪಾರು ಮಾಡಿದ್ದಾನೆ' ಎಂದು ಭಂಡಾರಿ ಉದ್ಗರಿಸಿದರು.

ಹವಾಮಾನ ಇಲಾಖೆ ವಿರುದ್ಧ ಆಕ್ಷೇಪ

ನವದೆಹಲಿ (ಪಿಟಿಐ): 
ಪ್ರವಾಹ, ಮಳೆಯ ಕುರಿತು ಹವಾಮಾನ ಇಲಾಖೆ ಖಚಿತ ಮಾಹಿತಿ ನೀಡಿದ್ದರೆ ಉತ್ತರಾಖಂಡ ಮತ್ತಿತರ ಕಡೆಗಳಲ್ಲಿ ಸಂಭವಿಸಿರುವ ದರಂತವನ್ನು ತಪ್ಪಿಸಿ ಜೀವಗಳನ್ನು ಉಳಿಸಬಹುದಿತ್ತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ದೂರಿದೆ.

ಹವಾಮಾನ ಬದಲಾವಣೆ ನಿರ್ವಹಣೆಗೆ ಸಂಬಂಧಿಸಿದ ದಕ್ಷಿಣ ಏಷ್ಯಾ ಪ್ರಾದೇಶಿಕ ಸಲಹಾ ಸಮಿತಿ ಸಭೆಯ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎನ್‌ಡಿಎಂಎ ಉಪಾಧ್ಯಕ್ಷ ಎಂ. ಶಶಿಧರ ರೆಡ್ಡಿ ,`ಅವರು (ಭಾರತೀಯ ಹವಾಮಾನ ಇಲಾಖೆ-ಐಎಂಡಿ) ಹವಾಮಾನ, ಮಳೆಯ ಕುರಿತು ಖಚಿತ ಮಾಹಿತಿ ಇಲ್ಲವೆ ಮುನ್ಸೂಚನೆ ನೀಡುವಂತಾಗಬೇಕು' ಎಂದರು.

`ಮಳೆಗೆ ಸಂಬಂಧಿಸಿದಂತೆ ಐಎಂಡಿ ಕೇವಲ, `ಮಳೆ ಅಥವಾ ಭಾರಿ ಮಳೆ ಬೀಳಬಹುದು' ಎಂಬ ಪದಗಳನ್ನು ಬಳಸಿ ಮುನ್ಸೂಚನೆ ನೀಡುತ್ತಿದೆ. ಆದರೆ ಇವುಗಳನ್ನು ನಾವು ಖಚಿತವಾಗಿ ಹೇಗೆ ಅರ್ಥೈಸಿಕೊಳ್ಳುವುದು. ಎಲ್ಲಿ ಹಾಗೂ ಎಷ್ಟು ಪ್ರಮಾಣದ ಮಳೆ ಬೀಳಲಿದೆ ಎನ್ನುವ ಖಚಿತ ಮಾಹಿತಿಯನ್ನು ಅವರು ನೀಡಬೇಕು' ಎಂದು ಒತ್ತಾಯಿಸಿದರು.

ಈಚೆಗೆ ಮಂಡಿಸಲಾದ ಮಹಾಲೇಖಪಾಲರ ವರದಿಯಲ್ಲಿ ಎನ್‌ಡಿಎಂಎ ಕಾರ್ಯವೈಖರಿಯನ್ನು ಟೀಕಿಸಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, `ನಮ್ಮ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವ ದಿಸೆಯಲ್ಲಿ ಪ್ರಯತ್ನ ಮುಂದುವರೆಸುತ್ತೇವೆ' ಎಂದರು.

ಪ್ರತ್ಯೇಕ ಕಾರ್ಯಾಚರಣೆಗೆ ಅನುಮತಿ ಇಲ್ಲ

ಡೆಹ್ರಾಡೂನ್ (ಪಿಟಿಐ):
ಪ್ರವಾಹಕ್ಕೆ ಸಿಲುಕಿರುವ ತಮ್ಮ ರಾಜ್ಯದ ಸಂತ್ರಸ್ತರನ್ನು ರಕ್ಷಿಸಲು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ನಡೆಸುವ ಕಾರ್ಯಾಚರಣೆಗೆ ಅನುಮತಿ ನೀಡದಿರಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

ತಮ್ಮ ರಾಜ್ಯಕ್ಕೆ ಸೇರಿದ 15,000 ಸಂತ್ರಸ್ತರನ್ನು ರಕ್ಷಣೆಗೆ ತಾವೇ ವ್ಯವಸ್ಥೆ ಮಾಡಿದ್ದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ವಿಜಯ ಬಹುಗುಣ ಹೀಗೆ ಹೇಳಿದ್ದಾರೆ.

ತಮ್ಮ ಪ್ರವಾಸಿಗರನ್ನು ಪಾರು ಮಾಡಲು ಆಯಾ ರಾಜ್ಯ ಸರ್ಕಾರಗಳು ಪ್ರತ್ಯೇಕ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳುತ್ತಾ ಗೊಂದಲ ಮೂಡಿಸಿವೆ. ಆದರೆ, ಯಾವುದೇ ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯಕ್ಕಾಗಿ ಹೆಲಿಕಾಪ್ಟರ್ ಅಥವಾ ಇನ್ನಾವುದೇ ಬಗೆಯ ನೆರವು ಕಲ್ಪಿಸುವುದಿದ್ದರೆ, ಅದನ್ನು ಉತ್ತರಾಖಂಡ ಸರ್ಕಾರದ ಮೂಲಕವೇ ಕಳಿಸಬೇಕು. ಇಲ್ಲಿನ ಸರ್ಕಾರ ಸಂತ್ರಸ್ತರ ರಕ್ಷಣೆಗೆ ಅದನ್ನು ಬಳಸಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.