ಗುರುವಾರ , ಜೂಲೈ 9, 2020
28 °C

ಕಾಲೇಜ್ ಕ್ಯಾಂಪಸ್‌ನಲ್ಲಿ.ಮೌಲ್ಯಗಳ ಹುಡುಕಾಟ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲೇಜ್ ಕ್ಯಾಂಪಸ್‌ನಲ್ಲಿ.ಮೌಲ್ಯಗಳ ಹುಡುಕಾಟ?

ಮೌಲ್ಯಾಧಾರಿತ ಶಿಕ್ಷಣ ಎನ್ನುವದು ಇಂದಿನ ಅವಶ್ಯಕತೆಯಾಗಿದೆ. ‘ಮೊಬೈಲ್ ಸ್ವಿಚ್ ಆಫ್ ಮಾಡು’ ಅಂದದ್ದಕ್ಕೆ ಮುಖ ಸಿಂಡರಿಸಿಕೊಂಡು ಎದ್ದು ನಡೆದು ತಿಂಗಳಾನುಗಟ್ಟಲೆ ಆ ಅಧ್ಯಾಪಕರ ಪೀರಿಯಡ್ ತಪ್ಪಿಸಿ ಅಂಡಲೆಯುವ ಜಮಾನಾದಲ್ಲಿ... ‘ಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ, ಗುರುವೇ ಮಹಾಪ್ರಸಾದ’ ವೆನ್ನಬೇಕಾದ ದಿನಮಾನಗಳಲ್ಲಿ ಕಾಲೇಜ್ ಕ್ಯಾಂಪಸ್‌ಗಳಲ್ಲಿ ಮೌಲ್ಯಗಳ ಹುಡುಗಾಟವೇನು..? ಇಂದು ಎಲ್ಲ ವಲಯಗಳಲ್ಲಿಯೂ ಮೌಲ್ಯ ಎನ್ನುವುದು ಕಳೆದುಹೋಗಿದೆ. ಹಾಗಾಗಿ ಸಂಘಟನೆ, ಸಮುದಾಯ, ಸಮಾಜ, ದೇಶ, ವಿಶ್ವ ಎಲ್ಲೆಡೆಗಳಲ್ಲೂ ಮೌಲ್ಯಗಳ ಹುಡುಕಾಟದ ಹವಣಿಕೆಯಿದೆ. ಅಮೂಲ್ಯವಾದದ್ದರ ಕೊರತೆ ಬಾಧಿಸಿದಾಗ ಉದ್ಭವವಾಗುವ ಸ್ಥಿತಿ ಇದು. ನಾನುಮಾತನಾಡುತ್ತಿರುವುದು ನಮ್ಮ ಬದುಕಿನಲ್ಲಿ ಅಂತರ್ಗತವಾಗಬೇಕಾದ ಮೌಲ್ಯಗಳ ಬಗ್ಗೆಯೇ ಹೊರತು, ನಮ್ಮ ಭೌತಿಕ ಜಗತ್ತಿನ ಬಯಕೆಗಳ ಈಡೇರಿಕೆಯಲ್ಲಿ ಕೈಗೂಡುವಅರ್ಥಶಾಸ್ತ್ರದ ಮೌಲ್ಯವಲ್ಲ.

ಮೌಲ್ಯವೆನ್ನುವದು ನಮ್ಮ ಜೀವನದಲ್ಲಿಯ ಉದಾತ್ತ ಸಂಗತಿಗಳನ್ನು, ಭಾವನೆಗಳನ್ನು ಪ್ರತಿಪಾದಿಸುತ್ತದೆ. ಇದು ಚಾರಿತ್ರ್ಯ ನಿರ್ಮಾಣದ ಸೂತ್ರವಿದ್ದಂತೆ. ನಮ್ಮ ಜೀವನದಲ್ಲಿಯ ಉದಾತ್ತವಾದ ಸಂಗತಿಗಳಾದ ನಂಬುಗೆ, ಆದರ್ಶ, ಪ್ರೀತಿ, ವಿಶ್ವಾಸ, ದಯೆ, ಮಾನವೀಯತೆಯಂಥ ಗುಣಗಳ ಗಣವೇ ಮೌಲ್ಯವಾಗಿದೆ. ನಮ್ಮ ಗುರಿ ಹಾಗೂ ಸಾಧನೆಗಳ ಬೆನ್ನ ಹಿಂದಿರುವ ಉತ್ಕೃಷ್ಟವಾದ ಆಯ್ಕೆಗಳನ್ನು ಕುರಿತು ಅದು ಹೇಳುತ್ತದೆ. ಮೌಲ್ಯಗಳ ಕೆಳಬದಿಯಲ್ಲಿಯೇ ದೀಪದ ಬುಡದ ಕತ್ತಲಿನ ಹಾಗೆ ಅಪಮೌಲ್ಯಗಳಿವೆ. ಶೈಕ್ಷಣಿಕ ಪರಿಸರದ ಘನವಾದ ಉದ್ದೇಶ ಒಬ್ಬ ವಿದ್ಯಾರ್ಥಿಯಲ್ಲಿಯ ಅವಗುಣಗಳನ್ನು ಮೈನಸ್ ಮಾಡಿ ಸದ್ಗುಣಗಳನ್ನು ಪ್ಲಸ್ ಮಾಡುವುದಾಗಿದೆ. ಆ ದಿಶೆಯಲ್ಲಿ ಸಾಧನೆಗೆ ಶಿಕ್ಷಕರಾದವರ ಹೊಣೆಗಾರಿಕೆಯಾಗಬೇಕು. ಅವರ ಜೊತೆಯಲ್ಲಿ ಇಡೀ ಸಮಾಜ ಕೈಗೂಡಿಸಬೇಕು.ಮೌಲ್ಯ ಎನ್ನುವುದನ್ನು ತಕ್ಷಣದಲ್ಲಿಯೇ ಬಟ್ಟೆ ಬದಲಿಸಿದ ವೇಗದಲ್ಲಿಯೇ ಕಲಿಸಲಾಗುವುದಿಲ್ಲ. ಹಾಗೆಯೇ ಇದೊಂದು ಅಂತರ್ಗತವಾಗಬೇಕಾದ ಪ್ರಕ್ರಿಯೆ. ಯಾವುದೋ ಒಂದಷ್ಟು  ಬಾಹ್ಯ ಒತ್ತಡದಿಂದಾಗಲೀ ಇಲ್ಲವೇ ಯಾವುದೋ ಒಂದು ಸಾಂಸ್ಕೃತಿಕ ಸಂಘಟನೆಯ ಮೂಲಕವಾಗಲೀ ವಿದ್ಯಾರ್ಥಿಗಳಿಗೆ ಬಿಸಿ ಊಟ ಬಡಿಸುವ ಪರಿಯಲ್ಲಿ ಸಾಲಾಗಿ ಉಣಬಡಿಸಲಾಗದು. ಅಷ್ಟಕ್ಕೂ ನಮ್ಮಲ್ಲಿ ಶೈಕ್ಷಣಿಕ ಪರಿಸರದಲ್ಲಿ ಮೌಲ್ಯಾಧಾರಿತ ಶಿಕ್ಷಣದ ಬಗೆಗಿನ ಮಾತು ಕೇಳಲು ಆರಂಭವಾದದ್ದೇ 1980 ರ ದಶಕದಲ್ಲಿ.

ಮನೆಯಿಂದಲೇ ಆರಂಭವಾಗಬೇಕು...

 ಮೌಲ್ಯಗಳ ಅಳವಡಿಕೆ ಮನೆಯಿಂದಲೇ ಆರಂಭಗೊಳ್ಳಬೇಕು. ನಂತರ ಅದು ಶಾಲೆಯಲ್ಲಿ ವಿಸ್ತೃತ ರೂಪ ಪಡೆಯಬೇಕು. ಕಾಲೇಜು ಹಂತದಲ್ಲಿ ನಿರ್ಣಾಯಕ ಘಟ್ಟವನ್ನು ತಲುಪಬೇಕು. ಮನೆಯೇ ಮೊದಲ ಪಾಠಶಾಲೆಯಾಗಿ ಮೌಲ್ಯಗಳನ್ನು ಸಂಪೋಷಿಸುವ ಮತ್ತು ಅಳವಡಿಸುವ ಕಾರ್ಯವನ್ನು ತುಂಬಾ ಅಚ್ಚುಕಟ್ಟಾಗಿ ತನ್ನದೇ ಆದ ಅನೌಪಚಾರಿಕ ರೀತಿಯಲ್ಲಿ ಹಿಂದೆ ಅವಿಭಕ್ತ ಕುಟುಂಬ ಅಲ್ಲಿರುವ ಹಿರಿಯರ ಮೂಲಕ ನಿಭಾಯಿಸುತ್ತಿತ್ತು. ಕ್ರಮೇಣವಾಗಿ ಗಂಡ, ಹೆಂಡತಿ ಮಕ್ಕಳು ಎಂಬಂತಹ ವಿಭಕ್ತ ಕುಟುಂಬಗಳ ಜನಪ್ರಿಯತೆಯ ನಡುವೆ ಅವಿಭಕ್ತ ಕುಟುಂಬದ ಪ್ರಭಾವ ಕುಂದತೊಡಗಿತು.ಸಾಂಸ್ಕೃತಿಕ ಗೊಂದಲ

1960ರ ದಶಕದ ನಂತರ ಕೆಲ ಪರಿಕಲ್ಪನೆಗಳು ನಮ್ಮ ಸಮಾಜದಲ್ಲಿ ಸಾಂಸ್ಕೃತಿಕ ಗೊಂದಲವನ್ನೇ ಉಂಟು ಮಾಡಿದವು. ಉದಾರವಾದ, ಆಧುನೀಕರಣ. ಪ್ರಗತಿ, ಪುನರ್‌ನಿರ್ಮಾಣ, ವಿಮೋಚನೆ, ವಸಾಹತುಶಾಹಿಯಂತಹ ಕಲ್ಪನೆಗಳನ್ನು ಟೀಕಿಸುವ ಜೊತೆಯಲ್ಲಿಯೇ ಸಮಾಜವನ್ನು ಪ್ರತಿಗಾಮಿ ಎಂದು ಜರಿಯುವ ಪರಿಪಾಠವೂ ಆರಂಭವಾಯಿತು. ಈ ಮಧ್ಯೆ ಮೌಲ್ಯಗಳು ತಮ್ಮ ಪ್ರಾಮುಖ್ಯವನ್ನು ಕಳೆದುಕೊಳ್ಳತೊಡಗಿದವು. 1950ರ ದಶಕದ ವರೆಗೆ ಅತ್ಯಂತ ವ್ಯವಸ್ಥಿತವಾಗಿ ನಮ್ಮ ಪೂರ್ವಜರಿಂದ ಬಳುವಳಿ ಎನ್ನುವ ಹಾಗೆ ಅಳವಡಿಸಿಕೊಂಡು ಬರಲಾದ ಮೌಲ್ಯಗಳು ಪರಿವರ್ತನೆಯ ಹೆಸರಲ್ಲಿ ನಗಣ್ಯವೆನಿಸತೊಡಗಿದವು.

ನಗರೀಕರಣದ ಹಾವಳಿ

ಔದ್ಯೋಗೀಕರಣ ಮತ್ತು ನಗರೀಕರಣಗಳೆರಡೂ ಮೌಲ್ಯಗಳ ಅಳವಡಿಕೆಯಲ್ಲಿ ಬಹು ದೊಡ್ಡ ತೊಡಕಾದವು. ನಗರೀಕರಣದ ರಭಸಕ್ಕೆ ಅವಿಭಕ್ತ ಕುಟುಂಬ ಅಣು ಕುಟುಂಬವಾಗುವ ಜೊತೆಯಲ್ಲಿ ಆ ಕುಟುಂಬದಲ್ಲಿಯ ತಂದೆ - ತಾಯಿಗಳಿಬ್ಬರೂ ದುಡಿಯಲೇಬೇಕು ಎನ್ನುವ ಅನಿವಾರ್ಯತೆಯನ್ನು ನಗರ ಪರಿಸರ ತಂದಿಟ್ಟ ಹಿನ್ನೆಲೆಯಲ್ಲಿ  ಮೌಲ್ಯಗಳನ್ನು ಧಾರೆ ಎರೆಯುವ ಪೋಷಕರೇ ಈಗ ಒಟ್ಟಾರೆ ಪುರಸೊತ್ತಿಲ್ಲದ ಯಂತ್ರಗಳಂತಾದರು.ಆರ್ಥಿಕ ಒತ್ತಡ ಮತ್ತು ಭೌತಿಕ ಪ್ರಪಂಚದ ಬೆನ್ನಿಗೆ ಬಿದ್ದು ಓಡುವ ಭರಾಟೆಯಲ್ಲಿಯೇ ನಗರದ ಬದುಕು ಕಳೆದು ಹೋಗುತ್ತಿದೆ. ಈ ನಡುವೆ ಮೌಲ್ಯಗಳನ್ನು ಕುರಿತು ಯೋಚಿಸಲು ಟೈಮ್ ಆದರೂ ಯಾರಲ್ಲಿದೆ..?

ನಡುಮನೆಯಲ್ಲಿ ಅವತರಿಸಿದ ಬಣ್ಣದ ಟಿ.ವಿ.

1970ರ ದಶಕದ ಸಂದರ್ಭದಲ್ಲಿ ಈ ಕಿರುತೆರೆಯ ಪರದೆ ತನ್ನ ಕಪ್ಪು ಬಿಳುಪು ಮುಖಮಾಟದೊಂದಿಗೆ ಮಧ್ಯಮವರ್ಗದ ಕುಟುಂಬದ ಸಂಗಾತಿಯಾಗುವ ಜೊತೆಯಲ್ಲಿಯೇ ಅಲ್ಲಿರುವ  ಕುಟುಂಬದ ಸದಸ್ಯರ ಮಧ್ಯೆ ಅಳಿದುಳಿದ ಅನೌಪಚಾರಿಕ ಮನರಂಜನೆಯನ್ನೂ ನುಂಗಿಹಾಕಿ ತನ್ನ ಪ್ರಭಾವವನ್ನು ಮೆರೆಯತೊಡಗಿತು. ಕ್ರಮೇಣ, ಮೌಲ್ಯಗಳ ಬಗ್ಗೆ ಯೋಚಿಸಲಿಕ್ಕೆ ಬಿಡುವೇ ಇಲ್ಲದ ಹಾಗೆ ಧಾರವಾಹಿಗಳು.. ಸಿನಿಮಾಗಳು..ನೂರೆಂಟು ಚಾನೆಲ್ಲುಗಳ ಮೂಲಕ ಕುಟುಂಬದ ಮೇಲೆ ದಾಂಗುಡಿ ಇಟ್ಟಿವೆ. ನಮ್ಮ ಸಂತಾನವನ್ನು ಟಿ.ವಿ.ಯಲ್ಲಿ ಬರುವ ಜಾಹೀರಾತುಗಳು ಆಳುತ್ತಿವೆ.

ಬೆಕ್ಕಿಗೆ ಗಂಟೆ ಕಟ್ಟುವವರಾರು..?

ಹಿಂದೆ ಕುಟುಂಬದಲ್ಲಿ, ನೆರೆಹೊರೆಯಲ್ಲಿ ಗುರುಹಿರಿಯರು ಅಜ್ಜ-ಅಜ್ಜಿಯರು ಇರುತ್ತಿದ್ದರು. ಅವರು ಕಥೆ ಹೇಳುವಲ್ಲಿಯೇ ಮೌಲ್ಯ ಅಡಕವಾಗಿರುತ್ತಿತ್ತು. ಮೊಮ್ಮಕ್ಕಳೊಂದಿಗೆ ಇಳಿವಯಸ್ಸನ್ನು ಕಳೆಯುವ ಅವಕಾಶಗಳೇ ಈಗ ಕಡಿಮೆ. ಹಾಗೆಯೇ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಇಂದಿನ ಪೀಳಿಗೆಗೆ ಅನಿಸುತ್ತಿದ್ದುದೂ ಕಡಿಮೆ. ಜೊತೆಗೆ ಅವರ ಕಣ್ಣೆದುರು ಅತ್ಯಂತ ಆದರ್ಶವೆನ್ನಬಹುದಾದ ಯಾವುದೇ ರೋಲ್ ಮಾಡೆಲ್‌ಗಳು ಕಾಣುತ್ತಿಲ್ಲ. ಇನ್ನು ಮೌಲ್ಯ ಶಿಕ್ಷಣ ಧಾರೆ ಎರೆಯುವುದು ಶಾಲೆ ಕಾಲೇಜುಗಳಲ್ಲಿ ತರಗತಿಯ ಕೋಣೆಗಳಲ್ಲಿ ಕೂಡಿ ಹಾಕಿ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸದ ಪಾಠಗಳನ್ನು ಕಲಿಸಿದಂತಲ್ಲ. ಮೌಲ್ಯ ಶಿಕ್ಷಣ ಎನ್ನುವುದು ಹೃದಯಕ್ಕೆ ಇಳಿಯಬೇಕಾದ ಸಂಗತಿ. ಶೈಕ್ಷಣಿಕ ಪರಿಸರದಲ್ಲಿ ಇದು ಸಮಾಜದ ಕೆನೆಪದರದ ಹಾಗಿರುವ ಶಿಕ್ಷಕರಿಂದ ಮಾತ್ರ ಸಾಧ್ಯವಾಗಬಹುದಾದ ಸಂಗತಿ. ಆದರೆ ಈ ಮೌಲ್ಯದ ಪಾಠಗಳನ್ನು ಕಲಿಸುವವರು ಮತ್ತು ಕಲಿಯುವವರು ಇಬ್ಬರೂ ತಮ್ಮ ‘ಇಸಂ’ ಗಳ ಹಂಗು ಹರಿಯಬೇಕಾದುದುಅಷ್ಟೇ ಅವಶ್ಯಕ.                         

                                                                          

ಆರ್ಥಿಕ ಒತ್ತಡ ಮತ್ತು ಭೌತಿಕ ಪ್ರಪಂಚದ ಬೆನ್ನಿಗೆ ಬಿದ್ದು ಓಡುವ ಭರಾಟೆಯಲ್ಲಿಯೇ ನಗರದ ಬದುಕು ಕಳೆದು ಹೋಗುತ್ತಿದೆ. ಈ ನಡುವೆ ಮೌಲ್ಯಗಳನ್ನು ಕುರಿತು ಯೋಚಿಸಲು ಟೈಮ್ ಆದರೂ ಯಾರಲ್ಲಿದೆ..?ನಡುಮನೆಯಲ್ಲಿ ಅವತರಿಸಿದ ಬಣ್ಣದ ಟಿ.ವಿ.1970ರ ದಶಕದ ಸಂದರ್ಭದಲ್ಲಿ ಈ ಕಿರುತೆರೆಯ ಪರದೆ ತನ್ನ ಕಪ್ಪು ಬಿಳುಪು ಮುಖಮಾಟದೊಂದಿಗೆ ಮಧ್ಯಮವರ್ಗದ ಕುಟುಂಬದ ಸಂಗಾತಿಯಾಗುವ ಜೊತೆಯಲ್ಲಿಯೇ ಅಲ್ಲಿರುವ ಕುಟುಂಬದ ಸದಸ್ಯರ ಮಧ್ಯೆ ಅಳಿದುಳಿದ ಅನೌಪಚಾರಿಕ ಮನರಂಜನೆಯನ್ನೂ ಅದು ನುಂಗಿಹಾಕಿ ತನ್ನ ಪ್ರಭಾವವನ್ನು ಮೆರೆಯತೊಡಗಿತು.ಕ್ರಮೇಣ, ಮೌಲ್ಯಗಳ ಬಗ್ಗೆ ಯೋಚಿಸಲಿಕ್ಕೆ ಬಿಡುವೇ ಇಲ್ಲದ ಹಾಗೆ ಧಾರವಾಹಿಗಳು.. ಸಿನೇಮಾಗಳು..ನೂರೆಂಟು ಚಾನೆಲ್ಲುಗಳ ಮೂಲಕ ಕುಟುಂಬದ ಮೇಲೆ ದಾಂಗುಡಿ ಇಟ್ಟಿವೆ. ನಮ್ಮ ಸಂತಾನವನ್ನು ಟಿ.ವಿ.ಯಲ್ಲಿ ಬರುವ ಜಾಹಿರಾತುಗಳು ಆಳುತ್ತಿವೆ.

ಬೆಕ್ಕಿಗೆ ಗಂಟೆ ಕಟ್ಟುವವರಾರು..?ಹಿಂದೆ ಕುಟುಂಬದಲ್ಲಿ.. ನೆರೆಹೊರೆಯಲ್ಲಿ ಗುರುಹಿರಿಯರು ಅಜ್ಜ-ಅಜ್ಜಿಯರು ಇರುತ್ತಿದ್ದರು. ಅವರು ಕಥೆ ಹೇಳುವಲ್ಲಿಯೇ ಮೌಲ್ಯ ಅಡಕವಾಗಿರುತ್ತಿತ್ತು. ಮೊಮ್ಮಕ್ಕಳೊಂದಿಗೆ ಇಳಿವಯಸ್ಸನ್ನು ಕಳೆಯುವ ಅವಕಾಶಗಳೇ ಈಗ ಕಡಿಮೆ. ಹಾಗೆಯೇ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಇಂದಿನ ಪೀಳಿಗೆಗೆ ಅನಿಸುತ್ತಿದ್ದುದೂ ಕಡಿಮೆ. ಜೊತೆಗೆ ಅವರ ಕಣ್ಣೆದುರು ಅತ್ಯಂತ ಆದರ್ಶವೆನ್ನಬಹುದಾದ ಯಾವುದೇ ರೋಲ್ ಮಾಡೆಲ್‌ಗಳು ಕಾಣುತ್ತಿಲ್ಲ.

ಇನ್ನು ಮೌಲ್ಯ ಶಿಕ್ಷಣ ಧಾರೆ ಎರೆಯುವುದು ಶಾಲೆ ಕಾಲೇಜುಗಳಲ್ಲಿ ತರಗತಿಯ ಕೋಣೆಗಳಲ್ಲಿ ಕೂಡಿ ಹಾಕಿ ಸಮಾಜಶಾಸ್ತ್ರ.. ಅರ್ಥಶಾಸ್ತ್ರ, ಇತಿಹಾಸದ ಪಾಠಗಳನ್ನು ಕಲಿಸಿದಂತಲ್ಲ. ಮೌಲ್ಯ ಶಿಕ್ಷಣ ಎನ್ನುವುದು ಹೃದಯಕ್ಕೆ ಇಳಿಯಬೇಕಾದ ಸಂಗತಿ. ಶೈಕ್ಷಣಿಕ ಪರಿಸರದಲ್ಲಿ ಇದು  ಸಮಾಜದ ಕೆನೆಪದರದ ಹಾಗಿರುವ ಶಿಕ್ಷಕರಿಂದ ಮಾತ್ರ ಸಾಧ್ಯವಾಗಬಹುದಾದ ಸಂಗತಿ. ಆದರೆ ಈ ಮೌಲ್ಯದ ಪಾಠಗಳನ್ನು ಕಲಿಸುವವರು ಮತ್ತು ಕಲಿಯುವವರು ಇಬ್ಬರೂ ತಮ್ಮ  ‘ಇಜಂ’ ಗಳ ಹಂಗು ಹರಿಯಬೇಕಾದುದು ಅಷ್ಟೇ ಅವಶ್ಯಕ.

              

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.