ಮಂಗಳವಾರ, ಮೇ 11, 2021
27 °C

ಕಾವೇರಿಗೆ ತೂಗು ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂದು ಕೊಡಗಿನ ರಾಮಸ್ವಾಮಿ ಕಣಿವೆಯ ಕಾವೇರಿ ನದಿ ಪಾತ್ರದ ಜನರಿಗೆ ಸಂಭ್ರಮವೋ ಸಂಭ್ರಮ. ಶಾಲೆಗೆ ಹೋಗುವ ಮಕ್ಕಳಿಗೆ ಖುಷಿ, ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗಗಳ ಜನರೂ ಸಂತಸದಲ್ಲಿದ್ದರು!ಸಂತಸಕ್ಕೆ ಕಾರಣ ಇತ್ತೀಚೆಗೆ ಕಣಿವೆಯ ರಾಮಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ತೂಗು ಸೇತುವೆ ಉದ್ಘಾಟನೆಯಾಯಿತು.ಅಂದು ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಅನೇಕರು ಸೇತುವೆ ಮೂಲಕ ಅತ್ತಿಂದ ಇತ್ತ ಓಡಾಡಿ ಸಂಭ್ರಮಿಸಿದರು.ಮಲೆನಾಡು ಅಭಿವೃದ್ಧಿ ಮಂಡಳಿ ಈ ತೂಗು ಸೇತುವೆ ನಿರ್ಮಾಣಕ್ಕೆ 47 ಲಕ್ಷ ರೂಪಾಯಿ ಖರ್ಚು ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಿರ್ಮಿಸಿದ ತೂಗು ಸೇತುವೆಯನ್ನು ಜನರ ಬಳಕೆಗೆ ಮುಕ್ತಗೊಳಿಸಿದ ಆ ಕ್ಷಣಗಳು ನದಿ ಪಾತ್ರದ ಜನರಿಗೆ ಅವಿಸ್ಮರಣೀಯ ಕ್ಷಣಗಳು. ಕಾವೇರಿಗೆ ಅಡ್ಡವಾಗಿ ತೂಗು ಸೇತುವೆ ನಿರ್ಮಿಸಬೇಕು ಎಂಬುದು ಕಣಿವೆ ಸುತ್ತಮುತ್ತಲಿನ ಗ್ರಾಮಗಳ ಜನರ ಹಲವು ದಶಕಗಳ ಕನಸು. ಅದೀಗ ನನಸಾಗಿದೆ. ತೂಗು ಸೇತುವೆ ನದಿಯ ಎರಡೂ ದಂಡೆಗಳ ಹಳ್ಳಿಗಳ ಜನರ ಸಂಪರ್ಕದ ಕೊಂಡಿಯಾಗಿದೆ.ಈ ತೂಗು ಸೇತುವೆ ಕಣಿವೆಯ ಮಧ್ಯದಲ್ಲಿ ದಕ್ಷಿಣ ದಿಕ್ಕಿನಿಂದ ಉತ್ತರಾಭಿಮುಖವಾಗಿ ಹರಿಯುವ ಕಾವೇರಿ ನದಿ ದಂಡೆಗಳ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿಭಾಗದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ತೂಗು ಸೇತುವೆ ಕಣಿವೆಯ ಸುಂದರ ಪರಿಸರಕ್ಕೆ ಹೊಸ ಮೆರಗು ನೀಡಿದೆ. ಹಾರಂಗಿ ಜಲಾಶಯದ ನೀರನ್ನು ಕೊಡಗಿನಿಂದ ನೆರೆಯ ಮೈಸೂರು ಜಿಲ್ಲೆಗೆ ಕೊಂಡೊಯ್ಯಲು ಕಾವೇರಿ ನದಿಗೆ ಅಡ್ಡಲಾಗಿ ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸಿರುವ ಮೇಲ್ಗಾಲುವೆ ಮತ್ತು ಕೆಳಭಾಗದಲ್ಲಿ ಹೊಸದಾಗಿ ನಿರ್ಮಿಸಿರುವ ಈ ಸೇತುವೆ  ಈ ಪರಿಸರದ ಸೌಂದರ್ಯವನ್ನು ಹೆಚ್ಚಿಸಿವೆ.ಕಣಿವೆಯ ಎರಡೂ ಭಾಗದ ನದಿ ದಂಡೆಗಳ ಹಳ್ಳಿಗಳ ಜನರು  ಮಳೆಗಾಲದಲ್ಲಿ ನದಿ ದಾಟಲು ಸೂಕ್ತ ದೋಣಿ ಸೌಲಭ್ಯ ಇಲ್ಲದೆ ಅಪಾರ ತೊಂದರೆ ಅನುಭವಿಸುತ್ತಿದ್ದರು. ನದಿಯಲ್ಲಿ ಪ್ರವಾಹ ಬಂದಾಗ ಜನರು ಅನುಭವಿಸುತ್ತಿದ್ದ ತೊಂದರೆಗಳನ್ನು ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಸುಮಾರು 20 ರಿಂದ 25 ಕಿ.ಮೀ. ದೂರ ಬಸ್ಸಿನಲ್ಲಿ ಪ್ರಯಾಣ ಮಾಡಿ  ಕುಶಾಲನಗರದ ಮೂಲಕ ಕೊಡಗು ಜಿಲ್ಲೆಯ ಇತರ ಊರುಗಳಿಗೆ ಜನರು ಹೋಗಬೇಕಿತ್ತು. ಈ  ಸೇತುವೆಯಿಂದ ಕೊಡಗಿನ ಕಣಿವೆ, ಕೂಡಿಗೆ, ಹೆಬ್ಬಾಲೆ, ಹುಲುಸೆ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ನದಿ ಪಾತ್ರದ ಗಡಿ ಗ್ರಾಮಗಳ ನಡುವಣ ಸಂಪರ್ಕ ಸುಗಮವಾಗಿದೆ.ನದಿ ಆಚೆಗಿನ ಮೈಸೂರು ಜಿಲ್ಲೆಯ ದೊಡ್ಡಕಮರವಳ್ಳಿ, ಚಿಕ್ಕಕಮರವಳ್ಳಿ, ಶ್ಯಾನುಭೋಗನಹಳ್ಳಿ, ದಿಂಡಗಾಡು ಮತ್ತಿತರ ಹಳ್ಳಿಗಳಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಕೊಡಗಿನ ಕಣಿವೆ, ಹೆಬ್ಬಾಲೆ, ಶಿರಂಗಾಲ, ಕೂಡಿಗೆ, ಕುಶಾಲನಗರಗಳ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಹತ್ತಾರು ಮಂದಿ ಕೂಲಿ ಕಾರ್ಮಿಕರು ಕೊಡಗಿನ ಕಾಫಿ ಕ್ಯೂರಿಂಗ್ ಕಂಪೆನಿಗಳಲ್ಲಿ ದುಡಿಯಲು ಮತ್ತು ತೋಟದ ಕೆಲಸಗಳಿಗೆ ಹೋಗಿ ಬರುತ್ತಾರೆ. ರೈತರು, ಗ್ರಾಮಸ್ಥರು ಅಗತ್ಯ ವಸ್ತುಗಳ ಖರೀದಿಗೆ ಕೊಡಗು ಜಿಲ್ಲೆಯ ಊರುಗಳಿಗೆ ಬರುತ್ತಾರೆ.ಈ ತೂಗು ಸೇತುವೆಯ ರೂವಾರಿ ಸುಳ್ಯದ ಗಿರೀಶ್ ಭಾರದ್ವಾಜ್. ಹೊಸ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಎರಡೂವರೆ ತಿಂಗಳಲ್ಲಿ ಆಕರ್ಷಕವಾಗಿ ತೂಗು ಸೇತುವೆಯನ್ನು ನಿರ್ಮಿಸಿಕೊಟ್ಟಿದ್ದಾರೆ.ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ಈ ಕಣಿವೆ ಪ್ರದೇಶಕ್ಕೆ ಬಂದು ನದಿದಂಡೆಯಲ್ಲಿ ಮರಳಿನಿಂದ ಶಿವಲಿಂಗನನ್ನು ಪ್ರತಿಷ್ಠಾಪಿಸಿದ ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಪುರಾಣ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಈ ಕಣಿವೆಯಲ್ಲಿ ಹೊಸದಾಗಿ ನಿರ್ಮಿಸಿರುವ ತೂಗು ಸೇತುವೆಯು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ರೂಪುಗೊಂಡಿದೆ ಎನ್ನುತ್ತಾರೆ ಸ್ಥಳೀಯರಾದ ಭಾರದ್ವಾಜ್ ಕೆ.ಆನಂದತೀರ್ಥ. ಹಾರಂಗಿ ನೀರಾವರಿ ಪ್ರದೇಶದಲ್ಲಿ ಸದಾ ಹಚ್ಚಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳಿಂದ ಸುತ್ತುವರಿದಿರುವ ಕಣಿವೆಯ ಪರಿಸರದಲ್ಲಿ ನಿರ್ಮಾಣಗೊಂಡಿರುವ ತೂಗು ಸೇತುವೆಯು ನಿಸರ್ಗಕ್ಕೆ ಹಿಡಿದ ಕೈಗನ್ನಡಿಯಾಗಿದೆ.ಇಪ್ಪತ್ತು ಮಂದಿ ನುರಿತ ಕಾರ್ಮಿಕರ ಸಹಾಯದಿಂದ ಸತತವಾಗಿ ಎರಡು ತಿಂಗಳ ಕಾಲ ಸ್ಥಳದಲ್ಲೇ ಬೀಡುಬಿಟ್ಟು ಸುಸಜ್ಜಿತ ತೂಗು ಸೇತುವೆ ನಿರ್ಮಿಸಿರುವ ಸುಳ್ಯದ ಗಿರೀಶ್ ಭಾರದ್ವಾಜ್ ಗ್ರಾಮಸ್ಥರ ಪ್ರೀತಿ - ವಿಶ್ವಾಸಕ್ಕೆ ಕಾರಣರಾಗಿದ್ದಾರೆ. ನದಿಯ ಎರಡೂ ದಂಡೆ ಬಳಿ ಎರಡು ಮೀಟರ್ ವ್ಯಾಸದಲ್ಲಿ 33 ಅಡಿಗಳ ಎತ್ತರದ ಎರಡು ಕಾಂಕ್ರಿಟ್ ಸಿಮೆಂಟ್ ಕಂಬಗಳನ್ನು ನಿರ್ಮಿಸಿ ಅವುಗಳ ಮೇಲ್ಭಾಗದಿಂದ ಕಬ್ಬಿಣದ ರೋಪ್‌ನಿಂದ 83.5 ಮೀಟರ್ ಉದ್ದದ ಸೇತುವೆಯನ್ನು ತೂಗು ಬಿಡಲಾಗಿದೆ.ಬಿಸಿಲು ಮಳೆಗೆ ಕಬ್ಬಿಣಕ್ಕೆ ತುಕ್ಕು ಹಿಡಿಯದಂತೆ ಕಂಬಗಳ ನಡುವೆ ಅಳವಡಿಸಿರುವ ಸ್ಟೀಲ್ ರೋಪ್‌ಗೆ ಎಚ್‌ಟಿಎಸ್ (ಹೈ ಟೆನ್‌ಸೇಲ್ ಸ್ಟ್ರೆಂತ್)ಮಾಡಲಾಗಿದೆ. ದೊಡ್ಡರೋಪ್‌ನ ಮೇಲ್ಭಾಗದಿಂದ ಸೇತುವೆಯ ಕಾಲುದಾರಿಯ ಅಂಚಿಗೆ ಅಪಾಯ ಸಂಭವಿಸಿದಂತೆ ಗಾಲ್ವನೈಸಿಡ್ ಕಬ್ಬಿಣದ ತಂತಿ ರೂಪದ ರೋಪ್ ಮತ್ತು ಸೇತುವೆಯಲ್ಲಿ ನಡೆದಾಡಲು ಫೆರೋಸಿಮೆಂಟ್ ಸ್ಲಾಬ್‌ಗಳನ್ನು ಅಳವಡಿಸಲಾಗಿದೆ.ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಲ್ಲಿ ನಿರ್ಮಿಸಿರುವ ಈ ತೂಗು ಸೇತುವೆಗೆ ಆಗಿಂದಾಗ್ಗೆ ಬಣ್ಣ ಮತ್ತು ಗ್ರೀಸ್ ಹಾಕುತ್ತಾ ನಿರ್ವಹಣೆ ಮಾಡಿದರೆ ಸೇತುವೆ 100 ವರ್ಷಗಳ ಕಾಲ ಬಾಳಿಕೆ ಬರುತ್ತದೆ ಎನ್ನುತ್ತಾರೆ ತಜ್ಞ ಗಿರೀಶ್ ಭಾರದ್ವಾಜ್.ತೂಗು ಸೇತುವೆ ಸರದಾರ

ನದಿ ದಂಡೆಗಳ, ಹಳ್ಳಕೊಳ್ಳಗಳ ನಡುವೆ ತೂಗು ಸೇತುವೆ ನಿರ್ಮಿಸುವಲ್ಲಿ ಹೆಸರುವಾಸಿಯಾಗಿದ್ದಾರೆ ಗಿರೀಶ್ ಭಾರದ್ವಾಜ್. ಇದುವರೆಗೆ ಅವರು 101 ತೂಗು ಸೇತುವೆಗಳನ್ನು ನಿರ್ಮಿಸಿಕೊಟ್ಟು ಸಾವಿರಾರು ಹಳ್ಳಿಗಳ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆದ ಗಿರೀಶ್ ಅವರು ಸುಳ್ಯದಲ್ಲಿ ವೆಲ್ಡಿಂಗ್ ವರ್ಕ್‌ಷಾಪ್ ನಡೆಸುತ್ತಾರೆ. ಗ್ರಾಮೀಣ ಪ್ರದೇಶಗಳ ನದಿ, ಹಳ್ಳಕೊಳ್ಳಗಳ ಜನರು ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಲು ಪ್ರಯಾಸ ಪಡುತ್ತ್ದ್ದಿದುದನ್ನು ಸ್ವತಃ ಕಂಡು ಮರುಗಿದ ಅವರು ಕಡಿಮೆ ವೆಚ್ಚದಲ್ಲಿ ತೂಗು ಸೇತುವೆಗಳನ್ನು ನಿರ್ಮಿಸಲು ಮುಂದಾದರು.ಇಪ್ಪತ್ತು ವರ್ಷಗಳ ಹಿಂದೆ ಮೊದಲ ಸಲ ಕುಶಾಲನಗರ ಸಮೀಪದ ದ್ವೀಪದಂತಿರುವ ಪ್ರವಾಸಿ ಕೇಂದ್ರ `ಕಾವೇರಿ ನಿಸರ್ಗಧಾಮ~ಕ್ಕೆ ತೆರಳಲು ನದಿಗೆ ಅಡ್ಡಲಾಗಿ ಮರದ ಹಲಗೆಗಳನ್ನು ಬಳಸಿಕೊಂಡು ತೂಗು ಸೇತುವೆ ನಿರ್ಮಿಸಿದರು. ಆನಂತರ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತ ಹೋದ ಅವರು ತೂಗು ಸೇತುವೆಗಳ ವಿನ್ಯಾಸ ಹಾಗೂ ಕೌಶಲ್ಯಗಳನ್ನು  ಮೈಗೂಡಿಸಿಕೊಂಡು. ಕಡಿಮೆ ಖರ್ಚಿನಲ್ಲಿ ತೂಗು ಸೇತುವೆಗಳನ್ನು ನಿರ್ಮಿಸಲು ಪ್ರಯತ್ನಿಸಿ ಯಶಸ್ವಿಯಾದರು. ಕಾವೇರಿ ನಿಸರ್ಗ ಧಾಮದಲ್ಲಿ ತೂಗು ಸೇತುವೆ ಸೇರಿದಂತೆ ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳ ಹಲವು ಕಡೆ ಸೇರಿದಂತೆ ಕರ್ನಾಟಕ ಹಾಗೂ ನೆರೆ ರಾಜ್ಯಗಳಲ್ಲಿ ಅವರು ತೂಗು ಸೇತುವೆಗಳನ್ನು ನಿರ್ಮಿಸಿದ್ದಾರೆ!ರಾಮಸ್ವಾಮಿ ಕಣಿವೆ ತೂಗು ಸೇತುವೆ ಅವರ 101ನೆಯ ಸೇತುವೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಸಕಲೇಶಪುರ ಬಳಿ ತೂಗು ಸೇತುವೆಯೊಂದನ್ನು ನಿರ್ಮಿಸುತ್ತಿದ್ದಾರೆ. ಕೊಡಗಿನ ಗುಡ್ಡೆಹೊಸೂರು ಬಳಿಯ ತೆಪ್ಪದಕಂಡಿ ಎಂಬ ಸ್ಥಳದಿಂದ ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸಲು (ಕಾವೇರಿಗೆ ಅಡ್ಡಲಾಗಿ) ತೂಗು ಸೇತುವೆ ನಿರ್ಮಿಸುವ ಜವಾಬ್ದಾರಿಯನ್ನೂ ಅವರು ಹೊತ್ತಿದ್ದಾರೆ.ಭಾರದ್ವಾಜ್ ಅವರು ಕೇರಳ ರಾಜ್ಯದಲ್ಲಿ ಮೂವತ್ತು ಮತ್ತು ಆಂಧ್ರಪ್ರದೇಶದಲ್ಲಿ ಮೂರು ತೂಗು ಸೇತುವೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.ಭಾರದ್ವಾಜ್ 1960ರ ದಶಕದಲ್ಲಿ ಸುಳ್ಯದ ಜಿಲ್ಲಾ ಬೋರ್ಡ್ ಪ್ರೌಢ ಶಾಲೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಕಿರಿಯ ಸಹಪಾಠಿಯಾಗಿದ್ದರು. ಸುಳ್ಯದ ಪಯಸ್ವಿನಿ ನದಿ ಬಳಿ ಇತ್ತೀಚೆಗೆ ಅವರು ನಿರ್ಮಿಸಿಕೊಟ್ಟ ತೂಗು ಸೇತುವೆ ಉದ್ಘಾಟನೆಗೆ ಬಂದಿದ್ದ ಸದಾನಂದ ಗೌಡರು ತಮ್ಮ ಬಾಲ್ಯದ ನೆನಪನ್ನು ಮೆಲುಕು ಹಾಕಿ ಗ್ರಾಮೀಣ ಜನರ ಕೊಂಡಿಯಾದ ತೂಗು ಸೇತುವೆ ನಿರ್ಮಾಣಕ್ಕೆ ನೆರವು ನೀಡುವ ಭರವಸೆ ನೀಡಿದ್ದರು. ಭಾರದ್ವಾಜ್ ಅವರ ಸೇತುವೆ ನಿರ್ಮಾಣದ ಕಾಳಜಿಯನ್ನು ಅವರು ಸ್ಮರಿಸಿದ್ದರು. ಉತ್ತರ ಭಾರತದಲ್ಲಿ ತೂಗು ಸೇತುವೆ ನಿರ್ಮಿಸಲು ಗಿರೀಶ್ ಅವರಿಗೆ ಬೇಡಿಕೆ ಬಂದಿದೆ. ಅವರ ತಾಂತ್ರಿಕ ಮಾರ್ಗದರ್ಶನದಲ್ಲಿ ಒಡಿಶಾದ ರಾಯಗಡ ಜಿಲ್ಲೆಯಲ್ಲಿ (ನಾಗವಳ್ಳಿ ನದಿಗೆ) ತೂಗು ಸೇತುವೆ ನಿರ್ಮಿಸುವ ಕೆಲಸ ನಡೆಯುತ್ತಿದೆ.ತೂಗು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ತಾಂತ್ರಿಕ ಸಲಹೆ ಬೇಕಿದ್ದವರು ಗಿರೀಶ್ ಭಾರದ್ವಾಜ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ನಂಬರ್ : 94481 23475.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.