ಭಾನುವಾರ, ಜೂನ್ 13, 2021
23 °C

ಕಾವೇರಿ ತಾಯಿ ಕಾರಣ...

ಡಿ.ಗರುಡ Updated:

ಅಕ್ಷರ ಗಾತ್ರ : | |

ಸುಮ್ಮನೇ ಕಲ್ಪನೆ ಮಾಡಿಕೊಳ್ಳಿ; ಉದ್ಯಾನನಗರಿಗೆ ಕಾವೇರಿ ನೀರು ಹರಿದು ಬರುವ ಪೈಪ್‌ಲೈನ್ ಮಾತನಾಡಿದ್ದರೆ! ಏನು ಹೇಳಬಹುದಿತ್ತು? ತನ್ನೊಡಲೊಳಗೆ ತಣ್ಣೀರು ಹರಿಸಿ ತಂದು ದಾಹ ತಣಿಸುವ ನಿತ್ಯ ಕಾಯಕ ಮಾಡುವ ಆ ಜೀವಜಲ ಮಾರ್ಗ ಏನೆಲ್ಲಾ ಕಥೆ ಹೇಳಿ ನೀತಿಯ ಮಾತುಗಳನ್ನು ಮನಕ್ಕೆ ಇಳಿಸಬಹುದು...? ಹಾಗೆ ಯೋಚಿಸಿಕೊಂಡು ಹರಿಸಿದ ಪದಗಳ ಸಾಲು ಇಲ್ಲಿವೆ ನಿಮಗಾಗಿ...!

 

ಕಾವೇರಿ ತಾಯಿ ಕಾರಣ; ನಾನಿಲ್ಲಿ ಕೇವಲ ಸಾಧನ! ಹೌದು; ನನ್ನ ಅಸ್ತಿತ್ವ ಇರುವುದೇ ಕಾವೇರಿ ನದಿ ನೀರಿನಿಂದ. ನದಿ ಕವಲೊಡೆದು ಕಾಲುವೆಯಾಗಿ ಹರಿದು ಬಂದು ಜಲಸಂಗ್ರಹ ಆದಲ್ಲಿನಿಂದ ನನ್ನೊಡಲು ಕೂಡ ತಣ್ಣಗೆ. ಅಲ್ಲಿಂದಲೇ ಉದ್ಯಾನನಗರಿಗೆ ಜೀವನಾಡಿಯಾಗಿ ತರುತ್ತೇನೆ ಜೀವಜಲ.ನೀವೆಲ್ಲ ನೀರು ಕುಡಿದು ದಾಹ ಮರೆತ ಪ್ರತಿಯೊಂದು ಕ್ಷಣವೂ ಸಾರ್ಥಕ ಭಾವ ನನ್ನಲ್ಲಿ. ನಾನಾರೆಂದು ನಿಮಗೆ ಗೊತ್ತಿರಲಿಕ್ಕಿಲ್ಲ. ಆದರೆ ನೀವು ಬಳಸುವ ಕಾವೇರಿ ನೀರಿನ ಪ್ರತಿಯೊಂದು ಹನಿಯೂ ನನ್ನ ನರನಾಡಿಯಲ್ಲಿ ಹರಿದು ಬಂದಿದ್ದು. ನಾನಿಲ್ಲದಿದ್ದರೆ ಈ ಮಹಾನಗರಿಯ ಬದುಕು ದುಸ್ತರ.

 

ಒಂದು ದಿನ ನನ್ನೊಳಗೆ ಜಲಧಾರೆ ಇಲ್ಲವೆಂದರೆ ಊರಿಗೆ ಊರಿಗೇ ತೀರದ ದಾಹ. ನಾನಿದ್ದೇನೆ ಇಲ್ಲಿ ನಿಮಗಾಗಿ. ಆದರೆ ನನ್ನಿಂದ ನೀವೆನ್ನುವ ಅಹಂ ಇಲ್ಲ. ಏಕೆಂದರೆ ನಾನಿಲ್ಲಿ ಸಾಧನ ಮಾತ್ರ. ತಾಯಿ ಕಾವೇರಿ ಹಾಗೂ ನಿಮ್ಮ ನಡುವಣ ಕರಳುಬಳ್ಳಿ ನಾನು.ಬಹು ಹಿಂದೆಯೇ ರಾಜ್ಯದ ರಾಜಧಾನಿಗೆ ಬಂದೆ. ಆಗೊಂದು ರೂಪ; ಈಗೊಂದು ರೂಪ. ತೆರೆದ ಕಾಲುವೆಯಾಗಿದ್ದೆ, ಈಗ ಮಾತ್ರ ಮೈತುಂಬಾ ವೃತ್ತಾಕಾರದ ಕವಚ. ಆದರೆ ಕಾಯಕ ಮಾತ್ರ ಒಂದೇ.ನೀರು ಹರಿಸಿಕೊಂಡು ತರುವುದು. ಬೆಂಗಳೂರಿನ ಬಾಗಿಲಿಗೆ ಬಂದ ನಂತರ ನನ್ನ ವಿಸ್ತಾರ ನೂರಾರು ಮೈಲಿ. ಅಚ್ಚರಿ ಪಡಬೇಡಿ! ದೊಡ್ಡ ಗಾತ್ರದ ನನ್ನೊಡಲಿನಿಂದ ನೂರಾರು ಸಣ್ಣ ಕರಳುಗಳು ಹರಡಿಕೊಂಡಿವೆ ನಗರದ ತುಂಬಾ.

 

ಕೆಲವೆಡೆ ಭೂಮಿಯಡಿಯಲ್ಲಿ, ಇನ್ನು ಹಲವೆಡೆ ಎದ್ದು ಕಾಡುವಹಾಗೆ ಹರಡಿಕೊಂಡಿದ್ದೇನೆ. ಭೂ ತಾಯಿಯ ಒಡಲಲ್ಲಿ ಇದ್ದೆಡೆ ಒಂದು ರೀತಿ ಸುರಕ್ಷೆ. ಹೊರಗೆ ಮುಖಮಾಡಿದಲ್ಲಿ ನನ್ನ ಸುತ್ತಲೊಂದು ವಿಶಿಷ್ಟವಾದ ಲೋಕ.ನಾನು ಸಾಗಿದಲ್ಲಿ ಅಂಟಿಕೊಂಡಿರುವ ರಸ್ತೆಗಳಿಗೆ ನನ್ನದೇ ಹೆಸರು. ಕಾವೇರಿ ಪೈಪ್‌ಲೈನ್ ರಸ್ತೆ! ಕೆಲವೆಡೆ ಅಧಿಕೃತವಾಗಿ ಇನ್ನು ಹಲವೆಡೆ ಜನರ ಮಾತಿನಲ್ಲಿ ಪೈಪ್‌ಲೈನ್ ಸೇರಿಕೊಂಡಿದೆ. ಅಂತೂ ನನ್ನ ಖ್ಯಾತಿ ಇದ್ದೇ ಇದೆ. ಮಣ್ಣಿನೊಳಗೆ ತಣ್ಣಗೆ ಅವಿತಿರುವಲ್ಲಿ ನಾನಿದ್ದೇನೆಂದು ಯಾರಿಗೂ ಗೊತ್ತಿಲ್ಲ.ಆದರೆ ಎದ್ದು ಕಾಣಿಸಿದಲ್ಲಿ ಮಾತ್ರ ಎಲ್ಲರಿಗೂ ಪರಿಚಿತಳು. ಅಲ್ಲೆಲ್ಲಾ ಬದುಕೊಂದು ತೆರೆದುಕೊಂಡಿದೆ. ನನ್ನ ಆಸರೆಯಲ್ಲಿಯೇ ಹಣ್ಣು-ತರಕಾರಿ ಮಾರುವವರಿಗೆ ಆಶ್ರಯ. ದೂರದೂರಿಂದ ಬಂದು ಕೂಲಿ ಬದುಕು ಆಶ್ರಯಸಿದವರಿಗೆ ತಾತ್ಕಾಲಿಕ ಬಿಡಾರ. ಸುಣ್ಣದ ಅಚ್ಚಿನಲ್ಲಿ ಬಣ್ಣದ ಪ್ರತಿಮೆಗಳ ಮಾಡಿ ಸಾಲಾಗಿ ಇಟ್ಟುಕೊಂಡು ಗ್ರಾಹಕರಿಗೆ ಕಾಯುವ ಉತ್ತರ ಭಾರತದವರು ಅದೆಷ್ಟೊಂದೋ; ಲೆಕ್ಕವಿಲ್ಲ.ಕೆಲವೊಮ್ಮೆ ಅನಿಸುತ್ತದೆ ನಾನು ಆಶ್ರಯದಾತೆ ಆಗಿರುವ ಜೊತೆಗೆ ಸುಂದರಿಯೂ ಆಗಿದ್ದೇನೆಂದು. ಅದೆಷ್ಟೊಂದು ಕ್ಯಾಮೆರಾ ಕಲಾವಿದರು ನನ್ನೊಂದಿಗೆ ಅಂಟಿಕೊಂಡಿರುವ ಜನರ ಬದುಕನ್ನು ಚಿತ್ರವಾಗಿಸಿಕೊಂಡಿದ್ದಾರೆ.ಮೊನ್ನೆ ಯಾವುದೋ ಒಂದು ಕಲಾಶಾಲೆಯ ಯುವಕ-ಯುವತಿಯರು ದಂಡುಕಟ್ಟಿಕೊಂಡು ಬಂದು ನನ್ನ ಬೆನ್ನಮೇಲೆ, ಅಕ್ಕಪಕ್ಕದಲ್ಲಿ ಕುಳಿತು ಅದೆಷ್ಟೊಂದು ಚಿತ್ರ ಬರೆದರು. ಎಲ್ಲದರಲ್ಲಿಯೂ ನಾನಿದ್ದೆ. ನನ್ನ ಜೊತೆಗೆ ಜನರಿದ್ದರು. ಒಟ್ಟಿನಲ್ಲಿ ಬಣ್ಣಗಳಲ್ಲಿ ನಂಟು ಬೆಸೆದುಕೊಂಡಿತ್ತು.ಗುಡಿಸಲುಗಳಿರುವ ದಾರಿಯಲ್ಲಿ, ಸಿರಿವಂತರ ಬಡಾವಣೆಗಳಲ್ಲಿ, ಶಾಲೆ-ಕಾಲೇಜುಗಳ ಅಂಚಿನಲ್ಲಿಯೂ ಸಾಗಿರುವ ನನಗೆ ಒಂದೊಂದೆಡೆ ಒಂದೊಂದು ರೀತಿಯ ಪ್ರೀತಿ. ತಿರಸ್ಕಾರವೂ ಇದೆ. ನಾನಿರುವುದು ತೊಡಕೆನ್ನುವಂತೆ ನೋಡುವವರೂ ಇದ್ದಾರೆ. ಆದರೆ ಒಳಿತುಗಳ ಜೊತೆಗೆ ಕೆಡಕುಗಳನ್ನು ಸ್ವೀಕರಿಸಿದ್ದೇನೆ.

 

ನನ್ನ ಸುತ್ತ ಸುಂದರವಾದ ಉದ್ಯಾನಗಳನ್ನು ಮಾಡಿ ಅಂದಗೊಳಿಸಿದವರಿಗೆ ಸದಾ ಕೃತಜ್ಞಳು. ಸಿನಿಮಾ ಪೋಸ್ಟರ್ ಅಂಟಿಸಿ ಅಂದಗೆಡಿಸಿದವರಿಗೆ ಹೇಗಾದರೂ ಹೇಳಲಿ ಬೇಡವೆಂದು, ಚೆಂದವಾಗಿಟ್ಟುಕೊಳ್ಳಿ ನಾನು ನಿಮ್ಮ ಮನೆಗೆ ನೀರು ತರುವವಳೆಂದು...?

 

ಹೋಗಲಿ ಬಿಡಿ! ಕೆಡಕುಗಳ ತೊಳೆದು ಒಳಿತುಗಳ ನೀಡುವ ಗುಣವನ್ನು ನನ್ನೊಳಗೆ ಹರಿಯುವ ಕಾವೇರಿ ತಾಯಿ ಕಲಿಸಿಕೊಟ್ಟಿದ್ದಾಳೆ. ಆದ್ದರಿಂದ ನನ್ನಂದ ಹಾಳುಮಾಡಿದವರಿಗೂ ಕ್ಷಮಿಸುವ ಹೃದಯವಂತೆ ನಾನು.ನಾನಿರುವಲ್ಲಿ ಕೊಳೆ ಮಾಡುವ, ನಿತ್ಯ ಪ್ರಾತಃಕ್ರಿಯೆಯನ್ನು ನನ್ನ ಸುತ್ತ ಹಾಗೂ ನನ್ನ ಮೈಮೇಲೆ ಮಾಡುವ ಜನರಿಗೆ ಏನೆಂದು ಹೇಳಲಿ? ಅಪವಿತ್ರಗೊಳಿಸಿದರೆ ಅದೇ ನೀರು ನಿಮ್ಮ ದೇವರುಗಳ ಮೇಲೆಯೂ ಬೀಳುತ್ತದೆ ಎಂದು ಬಿಡಿಸಿ ಬಿಡಿಸಿ ಹೇಳಬೇಕೆ? ಬೇಡ ಇನ್ನಾದರೂ ಪೈಪ್‌ಲೈನ್ ಎಂದು ಏನೆಲ್ಲಾ ಮಾಡಬೇಡಿ, ನೀವು ಕುಡಿಯುವ ನೀರಿಗಾದರೂ ಗೌರವ ಕೊಡಿ.

 

ಅಷ್ಟೇ ಅಲ್ಲ; ನನ್ನ ನಿರ್ವಹಣೆ ಹಾಗೂ ದುರಸ್ತಿ ಮಾಡುವವರೂ ಭ್ರಷ್ಟತೆಯ ಸೋಂಕು ತರಬೇಡಿ. ಓ... ಸಾಕು; ಬೇಡಿದ್ದು ಬಹಳ ಆಯಿತು. ನೀವೇ ಯೋಚನೆ ಮಾಡಿ; ನಾನೀಗ ಮತ್ತೆ ನನ್ನ ಮಾತನ್ನು ಸಂತಸದ ಕಡೆಗೆ ಹರಿಸುತ್ತೇನೆ.ನನಗೂ ಇಷ್ಟಗಳಿವೆ. ಅದೆಷ್ಟೊಂದು ಪುಟಾಣಿ ಮಕ್ಕಳು ನನ್ನ ಬೆನ್ನ ಮೇಲೆ ಆಟವಾಡಿ ಸಂತಸ ಪಡುತ್ತಾರೆ. ಅವರಿಗೆ ನಾನೇ ಜಾರುಬಂಡೆ, ಸಮತೋಲನ ಕಾಯ್ದುಕೊಂಡು ನಡೆಯುವ ಕಸರತ್ತಿಗೆ ಬೀಮ್.ಮಕ್ಕಳಾಟವಾಡಿ ಕಿಲಕಿಲ ನಕ್ಕಾಗ ಅದೇನೋ ಒಂಥರಾ ಸಂತಸ. ಪುಟ್ಟ ಪುಟ್ಟ ಪಾದಗಳನ್ನು ಇಟ್ಟು ನಡೆದಾಗ ಮುತ್ತಿಟ್ಟ ಹಿತ. ಅಕ್ಷರ ಕಲಿಯದ ಮಗುವೂ ಚಾಕ್ ಹಿಡಿದು ನನ್ನೆದೆಯ ಮೇಲೆ ಚಿತ್ರ ಬರೆಯಲು ಯತ್ನಿಸಿದ್ದು ಅದೆಷ್ಟೊಂದು ಸುಂದರ. ಕಷ್ಟಪಟ್ಟು ನನ್ನ ಬೆನ್ನೇರುವ ಸಾಹಸ ಮಾಡಿದ ಮಗುವಿಗೆ ಅಪ್ಪ-ಅಮ್ಮ `ಕೇರ್‌ಫುಲ್...~ ಎಂದು ಹೇಳಿದಾಗ ನನಗೂ ಕಾಳಜಿ. ಅದು ಕಾವೇರಿ ತಾಯಿಯು ತನ್ನ ಕಂದಮ್ಮಗಳನ್ನು ಕರುಣೆಯಿಂದ ಕಾಣುವಂಥ ರೀತಿ ಹಾಗೂ ಪ್ರೀತಿ!ಬೆಳಗಿನ ವಾಕಿಂಗ್ ಮುಗಿಸಿ, ಸೂರ್ಯನ ಕಡೆಗೆ ಮುಖಮಾಡಿ ಕುಳಿತು ಧ್ಯಾನ ಮಾಡುವ ಕೆಲವರಿಗೆ ನಾನೇ ಆಸನ. ಇಳಿವಯಸ್ಸಿನವರು ಒಂದಾಗಿ ಬಂದು ಕುಳಿತು ಹರಟೆ ಹೊಡೆಯುವ ತಾಣ.ಸಂಜೆ ಆದರೆ ನನ್ನ ಸುತ್ತಲೂ ಪಾನಿಪುರಿ, ಭೇಲ್‌ಪುರಿ... ಮಾರುವವರಿಗೆ ಸೂಕ್ತ ವ್ಯಾಪಾರಿ ತಾಣ. ಏಕೆಂದರೆ ನನ್ನ ಸುತ್ತಲೊಂದಿಷ್ಟು ಖಾಲಿ ಜಾಗ ಇದ್ದೇ ಇರುತ್ತದೆ. ಅದರಯೂ ದೊಡ್ಡ ಲೇಔಟ್‌ಗಳ ನಡುವೆ ನುಗ್ಗಿರುವ ಕಡೆಗೆಲ್ಲಾ ನಾನೇ ಕೇಂದ್ರ ಸ್ಥಾನ. ಅಲ್ಲಿಯೇ ಸಂಜೆಯ ವಿಶಿಷ್ಟವಾದ ವಿರಾಮದ ಬದುಕು ತೆರೆ ತೆರೆದುಕೊಳ್ಳುತ್ತದೆ. ಇದೆಲ್ಲವೂ ಹಿತವೆನಿಸುತ್ತದೆ.ಆದರೆ ಬೇಸರವಾಗುವುದು ಕೆಲಸ ಮಾಡದ ಮೈಗಳ್ಳರು ಬಂದು ನನ್ನ ಮೇಲೊರಗಿ ನಿದ್ರೆ ಮಾಡಿದಾಗ, ಇಸ್ಪೀಟ್ ಎಲೆಗಳ ಹರಡಿ ಪಣ ಕಟ್ಟತೊಡಗಿದಾಗ, ಸಮಾಜ ಘಾತುಕರು ಗುಂಪು ಕಟ್ಟಿಕೊಂಡು ಹೊಂಚು ಹಾಕಿದಾಗ...! ಆಗ ನನ್ನ ಒಡಲೊಳಗೆ ಹರಿಯುವ ಕಾವೇರಿ ತಾಯಿಯೂ ಹೇಳುತ್ತಾಳೆ `ಬೇಡ ಮಕ್ಕಳೆ ಕೆಡಕುಗಳ ಸಹವಾಸ ಬೇಡ~ ಎಂದು. ಕೇಳಿಸಿಕೊಂಡು ಬದಲಾಗುತ್ತಾರಾ ಕಾವೇರಿ ಜೀವಜಲ ಕುಡಿದವರು...!?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.