ಮಂಗಳವಾರ, ಮೇ 18, 2021
31 °C

ಕಿರು ಜಲವಿದ್ಯುತ್ ಯೋಜನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರು ಜಲವಿದ್ಯುತ್ ಯೋಜನೆಗೆ ವಿರೋಧ

ಶಿರಸಿ: ತಾಲ್ಲೂಕಿನ ಗಣೇಶಪಾಲ್‌ನಲ್ಲಿ ಶಾಲ್ಮಲಾ ನದಿಗೆ ಕಿರು ಜಲವಿದ್ಯುತ್ ಯೋಜನೆ ನಿರ್ಮಿಸುವ ಪ್ರಸ್ತಾಪಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಬೆಂಗಳೂರು ಮೂಲದ ಕಾರೆ ಪವರ್ ರಿಸೋರ್ಸ್‌ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯು ಪಟ್ಟಣದಲ್ಲಿ ಹರಿಯುವ ಹೊಳೆ ಹಾಗೂ ಸೋಂದಾ ಹೊಳೆ ಬಂದು ಸೇರುವ ಸ್ಥಳದಲ್ಲಿ 20 ಮೀಟರ್ ಎತ್ತರದ ಅಣೆಕಟ್ಟು ನಿರ್ಮಿಸಿ, 24 ಮೆ.ವಾ ವಿದ್ಯುತ್ ಉತ್ಪಾದಿಸುವ ಕಿರು ಜಲವಿದ್ಯುತ್ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಪರಿಸರ ತಜ್ಞರು, ವಿಜ್ಞಾನಿಗಳು, ಸ್ಥಳೀಯರು ಸೋಮವಾರ ಸ್ಥಳದಲ್ಲಿ ಸಮಾಲೋಚನೆ ನಡೆಸಿದರು.`ಸಹಸ್ರಲಿಂಗದಿಂದ ಗಣೇಶ ಫಾಲ್ಸ್‌ವರೆಗಿನ 15.7 ಕಿ.ಮೀ ಪ್ರದೇಶವನ್ನು ಸರ್ಕಾರವೇ ಶಾಲ್ಮಲಾ ನದಿ ಕಣಿವೆ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಈ ಸ್ಥಳದಲ್ಲಿ ಯಾವುದೇ ಪರಿಸರನಾಶ ಯೋಜನೆ ಅನುಷ್ಠಾನ ಗೊಳಿಸಿದರೆ 1972ರ ವನ್ಯಜೀವಿ ಕಾಯಿದೆ, ಜೀವವೈವಿಧ್ಯತಾ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಬಹುಭಾಗ ಸೂಕ್ಷ್ಮವಲಯ ವ್ಯಾಪ್ತಿಯಲ್ಲಿದೆ.ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಸಹ ತಾಲ್ಲೂಕಿನ ಶೇ 37ರ ಭಾಗ ಸೂಕ್ಷ್ಮವಲಯ ಆಗಿದೆ ಎಂಬ ಉಲ್ಲೇಖವಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಪಿ.ಆರ್.ಭಟ್ಟ ಹೇಳಿದರು.`ಪಶ್ಚಿಮಘಟ್ಟ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲವೆಂದು ಅರಣ್ಯ ಇಲಾಖೆ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಧಾರಣಾ ಸಾಮರ್ಥ್ಯ ಅಧ್ಯಯನ ವರದಿಯು ಜಿಲ್ಲೆಯಲ್ಲಿ ಯಾವುದೇ ಹೊಸ ಯೋಜನೆ ತಡೆದುಕೊಳ್ಳುವ ಸಾಮರ್ಥ್ಯ ಇಲ್ಲಿನ ಪರಿಸರಕ್ಕೆ ಇಲ್ಲ ಎಂಬ ಅಂಶವನ್ನು ಉಲ್ಲೇಖಿಸಿದೆ. ಎಲ್ಲ ಕಾನೂನುಗಳು ಜನರ ಪರವಾಗಿದ್ದು, ಜನ ಭಯಪಡುವ ಅಗತ್ಯವಿಲ್ಲ' ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಹೇಳಿದರು.`ಹರಿಯುವ ನೀರಿಗೆ ಯೋಜನೆ ರೂಪಿಸಿ ವಿದ್ಯುತ್ ಉತ್ಪಾದಿಸಿ, ಆದರೆ ನೀರನ್ನು ತಡೆದು ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಲು ನಾವು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ' ಎಂದು ಸ್ಥಳೀಯರ ಪರವಾಗಿ ವಿ.ಆರ್.ಹೆಗಡೆ ಮಣ್ಮನೆ, ಎನ್.ಎಸ್.ಹೆಗಡೆ ಬನಗೇರಿ, ಜಿ.ಆರ್.ಹೆಗಡೆ ಹೇಳಿದರು.ಸಭೆಯ ನಿರ್ಧಾರ

ಪ್ರಸ್ತಾಪಿತ ಗಣೇಶಪಾಲ್ ಯೋಜನೆಗೆ ಸ್ಥಳೀಯವಾಗಿ ಸಾಮೂಹಿಕ ವಿರೋಧ ವ್ಯಕ್ತವಾಗಿದ್ದು, ಈ ನಿರ್ಣಯವನ್ನು ಕಾರೆ ಕಂಪನಿ ಹಾಗೂ ಸರ್ಕಾರಕ್ಕೆ ಕಳುಹಿಸಲು ಸಭೆ ನಿರ್ಧರಿಸಿತು.`ಗ್ರಾಮಸ್ಥರ ಧ್ವನಿ ಗಟ್ಟಿಯಾಗಲಿ'

ಶಿರಸಿ: ಗ್ರಾಮ ಪಂಚಾಯ್ತಿ ಹಂತದಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿ ರಚನೆ ಹಾಗೂ ಗ್ರಾಮ ಅರಣ್ಯ ಸಮಿತಿ ಮೂಲಕ ಗ್ರಾಮೀಣ ಜನರು ತಮ್ಮನ್ನು ತಾವು ಬಲಗೊಳಿಸಿಕೊಳ್ಳಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪಿ.ಆರ್.ಭಟ್ಟ ಅಭಿಪ್ರಾಯಪಟ್ಟರು.ಕಾರೆ ಪವರ್ ರಿಸೋರ್ಸ್‌ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ತಾಲ್ಲೂಕಿನ ಗಣೇಶಪಾಲ್‌ನಲ್ಲಿ ಕಿರು ಜಲವಿದ್ಯುತ್ ಯೋಜನೆ ನಿರ್ಮಾಣ ಅನುಮತಿ ಕೋರಿ ಸರ್ಕಾರಕ್ಕೆ ವಿಸ್ತೃತ ಯೋಜನಾ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸೋಮವಾರ ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.`ಅರಣ್ಯ ನಾಶವಾಗುವ ಜಲವಿದ್ಯುತ್ ಯೋಜನೆಗಿಂತ ಪರ್ಯಾಯ ಶಕ್ತಿ ಮೂಲಗಳ ಕುರಿತು ಯೋಜನೆ ರೂಪಿಸಬೇಕಾಗಿದೆ' ಎಂದರು.`ಪಶ್ಚಿಮಘಟ್ಟ ಪ್ರದೇಶದಲ್ಲಿ ಯಾವುದೇ ಜಲವಿದ್ಯುತ್ ಯೋಜನೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ ಆಗಾಗ ಪ್ರಸ್ತಾಪವಾಗುವ ಜಲವಿದ್ಯುತ್ ಯೋಜನೆಗಳು, ಯೋಜನೆಗೆಂದು ನಡೆಯುವ ಸಮೀಕ್ಷೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸುತ್ತದೆ. ಜನರು, ಕೃಷಿಭೂಮಿ ರಕ್ಷಣೆಯ ಜೊತೆಗೆ ಜೀವವೈವಿಧ್ಯ, ಪರಿಸರ ಸಂರಕ್ಷಣೆ ಸಹ ಅಷ್ಟೇ ಪ್ರಾಮುಖ್ಯವಾಗಿದೆ' ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಜಿ.ಆರ್.ಭಟ್ಟ ಕುಂಬಾರಕೊಟ್ಟಿಗೆ ಹೇಳಿದರು.ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಮಾತನಾಡಿ, `ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಜನರು ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೇಡ್ತಿ, ಅಘನಾಶಿನಿ ಕಣಿವೆಗಳಲ್ಲಿ ಈವರೆಗೆ ಅಣೆಕಟ್ಟು ನಿರ್ಮಾಣಕ್ಕೆ ಅವಕಾಶ ನೀಡಿಲ್ಲ. ಸಮೀಕ್ಷೆಗೆ ಬರುವವರಿಗೆ ಸಮೀಕ್ಷೆ ನಡೆಸಲು ಬಿಡಬೇಡಿ. ಗಟ್ಟಿ ಧ್ವನಿಯಲ್ಲಿ ಸ್ಥಳೀಯರು ಎಚ್ಚರಿಕೆ ನೀಡಬೇಕು' ಎಂದರು.`ಅರಣ್ಯ ಕಣಿವೆ ಛಿದ್ರವಾದ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಮಾರುತಿ ಕಂಪನಿಯ ಜಲವಿದ್ಯುತ್ ಯೋಜನೆಯನ್ನು ಹೈಕೋರ್ಟ್ ಕಾಮಗಾರಿ ನಂತರ ಅರಣ್ಯ ನಾಶದ ಕಾರಣಕ್ಕಾಗಿ ರದ್ದು ಮಾಡಿದೆ' ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತ ಶಶಿಭೂಷಣ ಹೆಗಡೆ ಮಾತನಾಡಿ, `ಕಾರೆ ಕಂಪನಿ ಸರ್ಕಾರಕ್ಕೆ ಸಲ್ಲಿಸಿರುವ ಡಿಪಿಆರ್‌ನಲ್ಲಿರುವ ಸತ್ಯಾಸತ್ಯತೆಯ ಬಗ್ಗೆ ಕೂಲಂಕಷ ಚರ್ಚೆಯಾಗಬೇಕು' ಎಂದರು. ಪರಿಸರ ಕಾರ್ಯಕರ್ತ ನರಸಿಂಹ ಹೆಗಡೆ ವಾನಳ್ಳಿ ಮಾತನಾಡಿ, `ಅಭಿವೃದ್ಧಿ ಚಿಂತನೆ ಕೃಷಿ ಹಾಗೂ ಪರಿಸರ ಆಧಾರಿತ ಆಗಿರಬೇಕು. ಈ ನಿಟ್ಟನಲ್ಲಿ ಪ್ರಬಲ ಲಾಬಿ ಮಾಡುವ ಅಗತ್ಯವಿದೆ' ಎಂದರು.ತಾ.ಪಂ. ಸದಸ್ಯ ದತ್ತಾತ್ರೇಯ ವೈದ್ಯ, ಗ್ರಾ.ಪಂ. ಅಧ್ಯಕ್ಷೆ ವನಿತಾ ಹೆಗಡೆ, ಸದಸ್ಯ ರಾಮಾ ಪೂಜಾರಿ, ಎನ್. ಎಸ್.ಹೆಗಡೆ, ವಿ.ಆರ್.ಹೆಗಡೆ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.