ಶನಿವಾರ, ಜೂನ್ 19, 2021
26 °C

ಕಿಲಾರಹಟ್ಟಿಗೆ ಸೌಲಭ್ಯಗಳದೇಚಿಂತೆ!

ಪ್ರಜಾವಾಣಿ ವಾರ್ತೆ/ –ಶರಣಪ್ಪ ಆನೆಹೊಸೂರು Updated:

ಅಕ್ಷರ ಗಾತ್ರ : | |

ಮುದಗಲ್ಲ: ತಾಲ್ಲೂಕಿನ ಕಿಲಾರಹಟ್ಟಿ ಗ್ರಾಮ ಬೆಳೆಯುತ್ತಿದೆ. ಗ್ರಾಮದ ಜನರಿಗೆ  ರಸ್ತೆ, ಸಾರಿಗೆ, ಶೌಚಾಲಯ, ಆರೋಗ್ಯ, ಪಡಿತರ, ಕುಡಿಯುವ ನೀರು, ಶಿಕ್ಷಣ, ವಸತಿ ಸೇರಿ ಇನ್ನಿತರ ಸೌಲಭ್ಯಗಳು ಸಿಗದಂಥ ಸ್ಥಿತಿ ಇದೆ.ಇದು ಜಿಲ್ಲೆಯ ಖೈರವಾಡಗಿ ತಾಲ್ಲೂಕು ಪಂಚಾಯಿತಿ ಉಪ್ಪಾರ ನಂದಿಹಾಳ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಗ್ರಾಮ. ಇಲ್ಲಿ 3 ಜನ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ತಾಲ್ಲೂಕಿನಿಂದ 0 ಕಿ.ಮೀ. ದೂರದಲ್ಲಿದ್ದರೂ ಅಭಿವೃದ್ಧಿ ಜನರಿಗೆ ಸಿಗುತ್ತಿಲ್ಲ. ಗ್ರಾಮದಲ್ಲಿ 1000 ಕ್ಕೂ ಹೆಚ್ಚು ಜನರು ಇದ್ದಾರೆ. ಇಲ್ಲಿ ಕುರುಬರು, ಲಿಂಗಾಯತ, ಹರಿಜನ, ಚಲವಾದಿ, ಉಪ್ಪಾರ ಸೇರಿದಂತೆ  ಹಲವು ಸಮುದಾಯ ಜನರು ಇದ್ದಾರೆ.ಈ ಗ್ರಾಮ ಸುವರ್ಣ ಗ್ರಾಮ ಯೋಜನೆಗೆ ಒಳಪಟ್ಟಿದೆ. ಆದರೂ ಅಭಿವೃದ್ಧಿ ಕಂಡಿಲ್ಲ. ರಸ್ತೆ, ಸಾರಿಗೆ, ಕುಡಿಯುವ ನೀರು, ಪಡಿತರ, ಶಿಕ್ಷಣ, ಆರೋಗ್ಯ, ಆಶ್ರಯ ಮನೆಯಂಥ ಹತ್ತು ಹಲವು ಸಮಸ್ಯೆಗಳನ್ನು ಇಲ್ಲಿನ ಜನರು ಎದುರಿಸುತ್ತಾರೆ. ಗ್ರಾಮದ ಎಸ್‌.ಸಿ. ಕಾಲೊನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಮಾಡಲಾಗಿದೆ. ಉಳಿದ ಕಾಲೊನಿಯ ರಸ್ತೆಗಳು ಹದಗೆಟ್ಟಿವೆ. ರಸ್ತೆಯ ನಡುವೆಯೇ ಹೊಂಡಗಳು ಬಿದ್ದಿವೆ. ಗ್ರಾಮದ  ಅಭಿವೃದ್ಧಿಗೆ ಪಂಚಾಯಿತಿಗೆ ಸಾಕಷ್ಟು ಅನುದಾನ ಬಿಡುಗಡೆಯಾದರೂ, ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು  ಕಾಲೊನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.ಕಿಲಾರಹಟ್ಟಿ ಗ್ರಾಮ ಮುದಗಲ್ಲ ಸಮುದಾಯ ಆರೋಗ್ಯ ಕೇಂದ್ರ ವ್ಯಾಪ್ತಿಗೆ ಒಳಪಡುತ್ತದೆ. ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದೆ. ಜನರಿಗೆ ಉತ್ತಮ ಆರೋಗ್ಯ ಭಾಗ್ಯವು ಸಿಗದಂಥ ವಾತಾವರಣ ಇದೆ.ಆಶ್ರಯ ಮನೆಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ನ್ಯಾಯ ಬೆಲೆ ಅಂಗಡಿಯಲ್ಲಿ ಸಮರ್ಪಕವಾದ  ಪಡಿತರ ಧಾನ್ಯಗಳನ್ನು ಪೂರೈಕೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.2011–12 ನೇ ಸಾಲಿನ ಎನ್‌ ಆರ್‌ ಡಿ ಡಬ್ಲ್ಯೂ ಪಿ ಯೋಜನೆ ಅಡಿಯಲ್ಲಿ ₨ 20 ಲಕ್ಷಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾರ್ಯ ನಡೆದಿದೆ. ನಿರ್ಮಾಣದ ಕೆಲ ಕಾಮಗಾರಿ ಬಾಕಿ ಇದೆ. ಕಾಮಗಾರಿ ಮುಗಿದಿದೆ ಎಂದು ಪಂಚಾಯಿತಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರಾದ ಬಸವರಾಜ ಆರೋಪ.ಗ್ರಾಮದಲ್ಲಿ  ಎರಡು ನೀರು ಸರಬರಾಜು ಟ್ಯಾಂಕ್‌ಗಳಿವೆ. ಅವು ದುರಸ್ತಿಗೆ ಬಂದಾಗ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಮಹಿಳೆಯರು ನಿತ್ಯವೂ ಕುಡಿಯುವ ನೀರಿನ ತೊಟ್ಟಿ ಹತ್ತಿರವೇ ಬಟ್ಟೆ ತೊಳೆಯುತ್ತಾರೆ. ಗ್ರಾಮದಲ್ಲಿ ವಿದ್ಯುತ್ ಕೈ ಕೊಟ್ಟರೆ ನೀರಿಗಾಗಿ ಹಾಹಾಕಾರ ನಿರ್ಮಾಣವಾಗುತ್ತದೆ. ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ದಿಕ್ಕು ತಪ್ಪುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.ಗ್ರಾಮದಲ್ಲಿ ಮಹಿಳಾ ಶೌಚಾಲಯವಿಲ್ಲದೇ ರಸ್ತೆ ಬದಿಯಲ್ಲಿ ಕುಳಿತು ಶೌಚಾಲಯ ಮಾಡುವ ಸ್ಥಿತಿ ಇದೆ. ರಸ್ತೆಯಲ್ಲಿ ಸಂಚಾರ ಮಾಡುವಾಗಲೇ ಬೀದಿ ಬದಿಯಲ್ಲಿ ಶೌಚಾಲಯಕ್ಕೆ ಕುಳಿತುಕೊಳ್ಳುವ ಸನ್ನಿವೇಶಗಳ ಸಾಮಾನ್ಯವಾಗಿವೆ. ವ್ಯವಸ್ಥಿತ ಶೌಚಾಲಯ ನಿರ್ಮಾಣಕ್ಕೆ ಮುಂದಾಗದೇ ಇರುವುದು ಅಮಾನವೀಯ ಎಂದು ಮಹಿಳೆಯರು ಆರೋಪಿಸಿದರು.ಗ್ರಾಮದಲ್ಲಿ ಶಾಲೆ ಇದೆ. 7 ನೇ  ತರಗತಿವರೆಗೆ ವಿದ್ಯಾರ್ಥಿಗಳು ಇಲ್ಲಿಯೇ ವ್ಯಾಸಂಗ ಮಾಡುತ್ತಾರೆ.   ಶಾಲಾ ಆವರಣದಲ್ಲಿಯೇ ಗ್ರಾಮಸ್ಥರು ತಿಪ್ಪೆ ಗುಂಡಿ ಹಾಕಿದ್ದಾರೆ. ಇದರಿಂದ ಗಬ್ಬು ವಾಸನೆ ಬಂದು ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ.  ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಆಮದಿಹಾಳ–ಸಜ್ಜಲಗುಡ್ಡ ರಸ್ತೆ ದುರಸ್ತಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸಂಚಾರಕ್ಕೆ ವ್ಯವಸ್ಥಿತವಾದ ಬಸ್‌ ಇಲ್ಲ ಎಂದು ಆರೋಪಿಸಿದರು.‘ತಿಪ್ಪೆ ತೆರವಿಗೆ ಆಗ್ರಹ’

ಶಾಲಾ ಆವರಣದಲ್ಲಿನ ತಿಪ್ಪೆ ಗುಂಡಿಗಳನ್ನು ತೆರವು ಗೊಳಿಸಬೇಕು. ಮಕ್ಕಳ ಓದಿನ ಮೇಲೆ ವ್ಯತಿರಿಕ್ತ ವಾತಾವರಣ ನಿರ್ಮಾಣವಾಗು­ವುದರಿಂದ ತಿಪ್ಪೆ ಗುಂಡಿಗಳನ್ನು ತೆರವು ಮಾಡುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ತೆರವುಗೊಳಿಸುತ್ತಿಲ್ಲ.

–ಹನುಮನಗೌಡ ಕಿಲಾರಹಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ.‘ಸಿಬ್ಬಂದಿ ಕೊರತೆ’

ಕಿಲಾರಹಟ್ಟಿ ಗ್ರಾಮದ ಆರೋಗ್ಯ ಸಹಾಯಕರು ಮುದಗಲ್ಲನಲ್ಲಿಯೂ, ಕೆಲಸ ಮಾಡುವುದರಿಂದ ತಿಂಗಳಿಗೆ ಒಂದು ಬಾರಿ ಗ್ರಾಮಕ್ಕೆ ಭೇಟಿ ನೀಡುವ ಸ್ಥಿತಿ ಇದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಿಬ್ಬಂದಿ ಕೊರತೆ ಇದೆ.

 - ಡಾ. ರಾಜೇಂದ್ರಕುಮಾರ ಮನಗೂಳಿ,  ವೈದ್ಯಾಧಿಕಾರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.