ಗುರುವಾರ , ಜನವರಿ 23, 2020
22 °C

ಕಿವಿ ಕೇಳದವರ ಕಲಾ ಪ್ರೀತಿ

–ಇ.ಎಸ್‌. ಸುಧೀಂದ್ರ ಪ್ರಸಾದ್‌ Updated:

ಅಕ್ಷರ ಗಾತ್ರ : | |

‘ಮಾತು ಬೆಳ್ಳಿ ಮೌನ ಬಂಗಾರ’ ಎಂಬ ಗಾದೆ ಮಾತಿದೆ. ಮೌನದಲ್ಲೇ ನೆಮ್ಮದಿ ಕಾಣುತ್ತ, ಅದರಲ್ಲೇ ಏನಾದರೂ ಸಾಧಿಸಬೇಕೆಂಬ ಛಲವುಳ್ಳ ವಾಕ್‌ ಹಾಗೂ ಶ್ರವಣ ದೋಷವಿರುವ ಬಹಳಷ್ಟು ಮಂದಿ ನಮ್ಮ ನಡುವೆ ಇದ್ದಾರೆ. ತುಟಿ ಚಲನೆ, ಕೈ ಸನ್ನೆಯಿಂದಲೇ ವ್ಯಕ್ತಿಗಳೊಂದಿಗೆ ಸಂವಹನ ನಡೆಸುವ ಇವರು ಸಾಮಾನ್ಯರನ್ನು ಮೀರಿಸುವಂತಹ ಕ್ರೀಡಾ ಹಾಗೂ ಕಲಾನೈಪುಣ್ಯ ಹೊಂದಿದವರು.ಇಂಥ ಕಲಾಸಕ್ತಿ ಹೊಂದಿರುವ ವಿಶೇಷ ಸಾಮರ್ಥ್ಯ ಇರುವವರಿಗಾಗಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಸವನಗುಡಿಯಲ್ಲಿರುವ ‘ಫೌಂಡೇಷನ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚರ್‌ ಫಾರ್‌ ಡೆಫ್‌’ ಎಂಬ ಸಂಸ್ಥೆ ಕಳೆದ ಒಂಬತ್ತು ವರ್ಷಗಳಿಂದ ಕೆಲಸ ಮಾಡುತ್ತಿದೆ.2004ರಲ್ಲಿ ಆರಂಭವಾದ ಈ ಪ್ರತಿಷ್ಠಾನದ ರೂವಾರಿ ಎ.ಕೆ. ಉಮೇಶ್‌. ಅಂತರರಾಷ್ಟ್ರೀಯ ಟೇಬೆಲ್‌ ಟೆನ್ನಿಸ್‌ ಕ್ರೀಡಾಪಟುವಾದ ಇವರು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರೂ ಹೌದು. ಉಮೇಶ್‌ ಬಾಲ್ಯದಲ್ಲೇ ವಿದ್ಯುತ್‌ ಆಘಾತಕ್ಕೊಳಗಾಗಿ ಶ್ರವಣಶಕ್ತಿಯನ್ನು ಕಳೆದುಕೊಂಡರು. ತಮ್ಮಂತೆಯೇ ಶ್ರವಣ ದೋಷ ಇರುವ ಪ್ರತಿಭೆಗಳ ಅನಾವರಣಕ್ಕಾಗಿ ಪ್ರತಿಷ್ಠಾನ ಆರಂಭಿಸುವ ಮನಸ್ಸು ಮಾಡಿದರು. ಇವರ ಈ ಪ್ರಯತ್ನಕ್ಕೆ ಸಾಥ್‌ ನೀಡಿದವರು ಇವರ ಪತ್ನಿ, ಶಿಕ್ಷಕಿ ಎಸ್‌. ಗಿರಿಜಾ. ಪತಿಯ ಮೌನಕ್ಕೆ ಮಾತಾಗಿದ್ದೇ ಅಲ್ಲದೆ ಅವರ ಪ್ರಯತ್ನಕ್ಕೆ ಸಾಥ್‌ ನೀಡುತ್ತಿರುವ ಇವರು ಈಗ ಪ್ರತಿಷ್ಠಾನದ ಚುಕ್ಕಾಣಿ ಹಿಡಿದಿದ್ದಾರೆ. ಇವರೊಂದಿಗೆ ಟಿ.ಎನ್‌. ರಮೇಶ್‌ ಕೂಡ ಜತೆಗಿದ್ದಾರೆ.ಕಿವಿ ಕೇಳಿಸದ, ಮಾತೂ ಬಾರದ 15 ಮಂದಿ ಪ್ರತಿಭಾವಂತ ಕಲಾವಿದರು ಪ್ರತಿಷ್ಠಾನದ ಮೂಲಕ ವೇದಿಕೆ ಕಂಡುಕೊಂಡಿದ್ದಾರೆ. ರಜಿನಿ, ಅನುರಾಧಾ, ಪ್ರಿಯಾಂಕಾ, ಅರ್ಚನಾ, ರಾಧಾ, ಗಣೇಶ್ ಸೇರಿದಂತೆ ಸಂಸ್ಥೆ ಕಲಾವಿದರು ತಂಜಾವೂರು, ಬಾಟಿಕ್‌, ರೇಖಾಚಿತ್ರ, ನವೀನ ಶೈಲಿಯ ಕಲಾಕೃತಿ ರಚನೆ, ಶಿಲ್ಪ ಕಲೆ ಸೇರಿದಂತೆ ಹಲವು ಪ್ರಕಾರಗಳ ಕಲಾಕೃತಿಗಳನ್ನು ರಚಿಸುವ ಸಾಮರ್ಥ್ಯ ಹೊಂದಿದ್ದಾರೆ. ಭಾರತೀಯ ವಿದ್ಯಾಭವನ, ವೆಂಕಟಪ್ಪ ಆರ್ಟ್‌ ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್‌ ನಡೆಸುವ ಚಿತ್ರಸಂತೆ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರತಿಷ್ಠಾನವು ಆಯೋಜಿಸುವ ಕಲಾಪ್ರದರ್ಶನದಲ್ಲಿ ಈ ವಿಶೇಷ ಸಾಮರ್ಥ್ಯದ ಕಲಾವಿದರ ಕಲಾಕೃತಿಗಳು ಪ್ರದರ್ಶನ ಕಂಡಿವೆ. ಇಷ್ಟು ಮಾತ್ರವಲ್ಲದೇ ಸಿಂಗಪುರ, ಬೆಹರೆನ್‌, ಅಬುದಾಬಿಯಲ್ಲಿ ನಡೆದ ವಿಶ್ವ ಕನ್ನಡ ಸಾಂಸ್ಕೃತಿಕ ಸಮ್ಮೇಳನದಲ್ಲೂ ಕಲಾಕೃತಿಗಳನ್ನು ಪ್ರದರ್ಶಿಸಿ ಈ ಕಲಾವಿದರು ಮಿಂಚಿದ್ದಾರೆ.‘ಸಮಾಜದ ನಿರ್ಲಕ್ಷ್ಯಕ್ಕೊಳಗಾದ ಶ್ರವಣ ದೋಷವುಳ್ಳವರ ಏಳಿಗೆಗೆ ಶ್ರಮಿಸುವ ಹಾಗೂ ಅವರಿಗೆ ಹೆಚ್ಚಿನ ಪ್ರೋತ್ಸಾಹ ದೊರಕಿಸುವ ಗುರಿಯಿಂದ ಈ ಸಂಸ್ಥೆಯನ್ನು ಆರಂಭಿಸಲಾಯಿತು. ಕಲಾವಿದರಿಗೆ ಮಾತ್ರವಲ್ಲ ವಾಕ್‌ ಹಾಗೂ ಶ್ರವಣ ದೋಷವನ್ನು ಹೊಂದಿದ ಮಕ್ಕಳಲ್ಲಿ ಇರುವ ಸಾಂಸ್ಕೃತಿಕ ಕಲೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ’ ಎಂದು ಗಿರಿಜಾ ಅವರು ತಿಳಿಸಿದರು.ಕರ್ನಾಟಕದ ಕಲಾವಿದರು ಸೇರಿದಂತೆ ನೆರೆಯ ರಾಜ್ಯ ಹಾಗೂ ರಾಷ್ಟ್ರಗಳ ವಾಕ್‌ ಹಾಗೂ ಶ್ರವಣ ದೋಷವಿರುವ ಕಲಾವಿದರಿಗಾಗಿ  ಕಲಾಕೃತಿ ಪ್ರದರ್ಶನವನ್ನು ಏರ್ಪಡಿಸಿದ ಹೆಗ್ಗಳಿಕೆ ಸಂಸ್ಥೆಯದ್ದು. ‘ಹೊರ ರಾಜ್ಯದಿಂದ ಬಂದ ಬಹಳಷ್ಟು ಕಲಾವಿದರು ಇಂಥ ವಿಶೇಷ ಸಾಮರ್ಥ್ಯ ಇರುವವರಿಗೆ ಕರ್ನಾಟಕದಲ್ಲಿ ಸಿಗುತ್ತಿರುವ ಪ್ರೋತ್ಸಾಹ ಕಂಡು ಬೆರಗಾಗಿ ಆಡಿದ ಪ್ರೋತ್ಸಾಹದ ಮಾತುಗಳು ನಮಗೆ ಸ್ಫೂರ್ತಿ. 2009ರಲ್ಲಿ ಇಂಡೋ–ನೇಪಾಳ್ ಕಲಾಕೃತಿ ಪ್ರದರ್ಶನ ಆಯೋಜಿಸಿದ್ದಾಗ ಅಲ್ಲಿಂದ ಬಂದ ಆರು ಕಲಾವಿದರು ನಮ್ಮ ಕಲಾವಿದರೊಂದಿಗೆ ಬೆರೆತು ರಚಿಸಿದ ಕಲಾಕೃತಿಗಳು ಅವಿಸ್ಮರಣೀಯ’ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.ಕಲಾವಿದರ ಪ್ರೋತ್ಸಾಹ ಮಾತ್ರವಲ್ಲದೇ ಪ್ರತಿಷ್ಠಾನವು ಶ್ರವಣ ದೋಷವಿರುವ ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಂಡು ಓದಿಸುತ್ತಿದೆ. ಪಿಯುಸಿ, ಡಿಪ್ಲೊಮಾ, ಎಂಜಿನಿಯರಿಂಗ್‌ನಲ್ಲಿ ಶೇ 60ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಟೈಟನ್ ಸಂಸ್ಥೆಯ ಜತೆಗೂಡಿ ಬಹುಮಾನ ನೀಡಿ ಪ್ರೋತ್ಸಾಹಿಸುವುದು ಹಾಗೂ ಅವರಿಗೆ ಕೆಲವು ಕೌಶಲಗಳ ತರಬೇತಿ ನೀಡುವ ಕಾರ್ಯಾಗಾರಗಳನ್ನು ಈ ಸಂಸ್ಥೆ ಆಯೋಜಿಸುತ್ತಾ ಬಂದಿದೆ.ಅಂತರರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವಾಕ್‌ ಹಾಗೂ ಶ್ರವಣ ದೋಷವಿರುವ ಮಹಿಳೆಯರನ್ನು ಗುರುತಿಸಿ ‘ಮಹಿಳಾರತ್ನ’ ಎಂಬ ಬಿರುದು ನೀಡಿ ಸನ್ಮಾನಿಸುತ್ತಿದೆ. ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಬೋಧಿಸುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ, ಅವರ ಬೆನ್ನುತಟ್ಟುತ್ತಿದೆ.ವಿದ್ಯಾರ್ಥಿಗಳು ಮಾತ್ರವಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆಗಳ ಹಾಗೂ ಬ್ಯಾಂಕ್‌ ನೌಕರರನ್ನು ಸೇರಿಸಿಕೊಂಡು 75 ಮೀ. ಉದ್ದದ ಕ್ಯಾನ್ವಾಸ್‌ ಮೇಲೆ ಪೇಂಟಿಂಗ್‌ ಮಾಡುವ ಮೂಲಕ ತಮ್ಮನ್ನು ನಿರ್ಲಕ್ಷಿಸುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದು ಸಂಸ್ಥೆಯ ಚಟುವಟಿಕೆಗಳಲ್ಲಿ ಒಂದು. ನೃತ್ಯ, ನಾಟಕ, ಚಿತ್ರಕಲೆ, ಫ್ಯಾಷನ್‌ ಕುರಿತ ಕಾರ್ಯಕ್ರಮಗಳನ್ನು ಕೂಡ ಸಂಸ್ಥೆ ಆಯೋಜಿಸಿಕೊಂಡು ಬರುತ್ತಿದೆ.ಪ್ರತಿಷ್ಠಾನದ ಕೆಲಸವನ್ನು ಪ್ರೋತ್ಸಾಹಿಸುತ್ತಿರುವ ದಾನಿಗಳ ನೆರವಿನಿಂದ ವಾಕ್‌ ಹಾಗೂ ಶ್ರವಣ ದೋಷ ಇರುವವರಲ್ಲಿ ಅಡಗಿರಬಹುದಾದ ಕಲೆ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಹೊರಹಾಕುವಲ್ಲಿ ಫೌಂಡೇಷನ್‌ ತನ್ನ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ಅದು ದಶಮಾನೋತ್ಸವದ ಹೊಸ್ತಿಲಲ್ಲಿದೆ.

ಮಾಹಿತಿಗೆ: silentartculture.org, 94480 49352.

ಪ್ರತಿಕ್ರಿಯಿಸಿ (+)