ಕೀಟಗಳ ಆಕರ್ಷಿಸಲೊಂದು ತೋಟ

7

ಕೀಟಗಳ ಆಕರ್ಷಿಸಲೊಂದು ತೋಟ

Published:
Updated:

ರಾಸಾಯನಿಕಗಳ ಹಂಗಿಲ್ಲದೇ ನೈಸರ್ಗಿಕವಾಗಿ ಬೆಳೆಗಳ ಇಳುವರಿ ಹೆಚ್ಚಿಸಬೇಕೆಂದರೆ ಅದು ಪರಾಗಸ್ಪರ್ಶ ಕ್ರಿಯೆಯಿಂದ ಮಾತ್ರ ಸಾಧ್ಯ. ಆದರೆ  ರಾಸಾಯನಿಕಗಳ ಅಬ್ಬರ ಹಾಗೂ ಏಕ ರೂಪದ ಬೆಳೆಗಳ ಉತ್ಪಾದನೆ ಹೆಚ್ಚಳದಿಂದಾಗಿ ಪರಾಗಸ್ಪರ್ಶ ಮಾಡುವ ಕೀಟಗಳೆಲ್ಲ ಕಣ್ಮರೆಯಾಗುತ್ತಿವೆ. ಪರಿಣಾಮವಾಗಿ ಇಳುವರಿ ಕುಂಠಿತವಾಗಿ, ಗುಣಮಟ್ಟದ ಬೆಳೆಗಳ ಲಭ್ಯತೆ ಕುಗ್ಗಿದೆ. ಇದನ್ನು ಸರಿಪಡಿಸಲು, ಪರಾಗಸ್ಪರ್ಶ ಹೆಚ್ಚಿಸಲು ಕೀಟಗಳನ್ನು ಆಕರ್ಷಿಸುವ ಗಿಡಗಳನ್ನು ತೋಟಗಳಲ್ಲಿ ಬೆಳೆಸುವುದು ಮುಖ್ಯವಾಗಿದೆ. ಇದರ ಬಗ್ಗೆ ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟಗಳ ಪ್ರಾಮುಖ್ಯ ಸಂಪನ್ಮೂಲ (ಎನ್‌ಬಿಎಐಆರ್‌) ಸಂಸ್ಥೆ ರೈತರಿಗೆ ಮಾಹಿತಿ ನೀಡುತ್ತಿದೆ.

‘ಪರಾಗಸ್ಪರ್ಶ’ ಎಂದಾಕ್ಷಣ ನೆನಪಿಗೆ ಬರುವುದು ಜೇನ್ನೊಣ. ಆದರೆ ಇದನ್ನು ಹೊರತುಪಡಿಸಿ ಇನ್ನೂ ಸಾವಿರಾರು ಚಿಟ್ಟೆ, ಪಾತರಗಿತ್ತಿ, ಒಂಟಿ ಜೇನು, ಗುಡ್ಡದ ಜೇನು, ದುಂಬಿ, ಜೀರುಂಡೆ, ಬಡಗಿ ಜೇನು, ನೊಣ, ಕಾರ್ಪೆಂಟರ್‌ ಜೇನು, ಚಿಟ್ಟೆ, ಮೊತ್‌, ಚಿಕ್ಕ ಚಿಕ್ಕ ಜೇನು ಹುಳು ಅಷ್ಟೇ ಅಲ್ಲದೇ ಕೆಲವು ಬಗೆಯ ಇರುವೆಗಳೂ ಪರಾಗಸ್ಪರ್ಶ ಕೀಟಗಳೇ.ರೈತರಿಗೆ ಹಾಗೂ ಪರಿಸರಕ್ಕೆ ಒಂದಲ್ಲ ಒಂದು ರೀತಿ ಉಪಯೋಗವಾಗುವ ಲಕ್ಷಾಂತರ ಕೀಟಗಳು ದೇಶದಲ್ಲಿವೆ. ಅವುಗಳಲ್ಲಿ ಸದ್ಯಕ್ಕೆ 60 ಸಾವಿರ ಕೀಟಗಳನ್ನು ಮಾತ್ರ ಅಧಿಕೃತವಾಗಿ ಪತ್ತೆ ಮಾಡಲಾಗಿದೆ. ಇವುಗಳಲ್ಲಿ ಪರಾಗಸ್ಪರ್ಶ ಮಾಡುವ ಕೀಟಗಳು ಸಾವಿರಾರು. ಇವುಗಳಲ್ಲಿ ಕೆಲವು ಅರಣ್ಯಗಳಲ್ಲಿದ್ದರೆ, ಮತ್ತೆ ಕೆಲವು ಜನವಸತಿ ಪ್ರದೇಶಗಳಲ್ಲಿ ಜೀವಿಸುತ್ತವೆ. ಅರಣ್ಯಗಳಲ್ಲಿರುವ ಕೀಟಗಳು ವಾತಾವರಣ ಬದಲಾದಂತೆ ವಲಸೆಯೂ ಬರುತ್ತವೆ.ಸದ್ಯಕ್ಕೆ ಮೂರರಿಂದ ನಾಲ್ಕು ಸಾವಿರ ಕೀಟಗಳು ಮಾತ್ರ ರಾಜ್ಯದಲ್ಲಿವೆ. ಇವುಗಳು ವಾತಾವರಣ ಹಾಗೂ ಅವುಗಳ ಅಗತ್ಯಕ್ಕೆ ತಕ್ಕಂತೆ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಜೀವಿಸುತ್ತಿವೆ. ಒಂದೊಂದು ಪರಾಗಸ್ಪರ್ಶ ಕೀಟವೂ ಐದಕ್ಕೂ ಹೆಚ್ಚು ಬೆಳೆಗಳಲ್ಲಿ ಪರಾಗಸ್ಪರ್ಶ ಮಾಡುತ್ತವೆ. ಆದರೆ ಪರಾಗಸ್ಪರ್ಶ ಮಾಡಲು ಬರುವ ಕೀಟಗಳು ಜೀವಿಸಲು ಆಹಾರ, ವಾಸಿಸಲು ಗೂಡು ಹಾಗೂ ಅಗತ್ಯ ವಾತಾವರಣವನ್ನು ನೋಡಿ ಅಲ್ಲಿ ವಾಸಿಸುತ್ತವೆ. ಅದಕ್ಕಾಗಿ ಪರಾಗಸ್ಪರ್ಶ ಮಾಡುವ ಕೀಟಗಳನ್ನು ಆಕರ್ಷಣೆ ಮಾಡಲು ಪ್ರತ್ಯೇಕವಾಗಿ ಕೆಲವೊಂದು ಗಿಡಗಳನ್ನು ನೆಡಬೇಕು.ಮನೆಯ ಬಳಿ ನೆಡುವ ಬಿಳಿ ಎಕ್ಕದ ಗಿಡ, ನೀಲಿ ಎಕ್ಕದ ಗಿಡ, ಕಪ್ಪು ತುಳಸಿ, ಜ್ಯೂಸ್‌ ಕಾಯಿಯ ಬಳ್ಳಿ, ಸಿಝಾನ್‌ ಫೀನಿಯಾ ಪಲ್ಚರಿಯಾ, ಅಮೃತ ಬಳ್ಳಿ ಹೀಗೆ ನೂರಾರು ಗಿಡಗಳು ನಾನಾ ರೀತಿಯ ದುಂಬಿ, ಚಿಟ್ಟೆ, ಜೇನು ನೊಣಗಳನ್ನು ಆಕರ್ಷಿಸುತ್ತವೆ.ಪರಾಗಸ್ಪರ್ಶ ಕ್ರಿಯೆಯಲ್ಲಿ ತೊಡಗುವ ಕೀಟಗಳು ಮತ್ತು ಅವುಗಳನ್ನು ಆಕರ್ಷಿಸುವ ಗಿಡಗಳ ಕುರಿತಂತೆ ಸತತವಾಗಿ ಸಂಶೋಧನೆ ನಡೆಸುತ್ತಿರುವ ಎನ್‌ಬಿಎಐಆರ್‌, ಪರಾಗಸ್ಪರ್ಶ ಮಾಡುವ ಕೀಟಗಳನ್ನು ಆಕರ್ಷಿಸುವ ಗಿಡಗಳು, ಯಾವ ಬೆಳೆಗೆ ಯಾವ ಗಿಡಗಳನ್ನು ನೆಡಬೇಕು, ಎಷ್ಟು ಎಕರೆಗೆ ಎಷ್ಟು ಗಿಡಗಳನ್ನು ನೆಡಬೇಕು ಎಂದು ರೈತರಿಗೆ ಉಚಿತವಾಗಿ ಮಾಹಿತಿ ನೀಡುತ್ತಿದೆ. ಇದರೊಂದಿಗೆ ಸಂಶೋಧನೆ ನಡೆಸುತ್ತಿರುವ ಸ್ಥಳದಲ್ಲಿ ನಿರ್ಮಿಸಿರುವ ಪರಾಗಸ್ಪರ್ಶ ಕೀಟಗಳ ಸಂರಕ್ಷಣೆ ಹಾಗೂ ಅವುಗಳನ್ನು ಆಕರ್ಷಿಸುವ ಉದ್ಯಾನದಲ್ಲಿ ಕೀಟಗಳು ಮತ್ತು ಗಿಡಗಳನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನೂ ಕಲ್ಪಿಸಿದೆ.‘ಸದ್ಯಕ್ಕೆ ಈ ಉದ್ಯಾನದಲ್ಲಿ 200ಕ್ಕೂ ಹೆಚ್ಚು ವಿಭಿನ್ನ ರೀತಿಯ ಗಿಡಗಳನ್ನು ನೆಡಲಾಗಿದ್ದು, ನೂರಕ್ಕೂ ಹೆಚ್ಚು ಪರಾಗಸ್ಪರ್ಶ ಮಾಡುವ ಕೀಟಗಳ ಸಂರಕ್ಷಣೆ ಮಾಡಲಾಗಿದೆ. ಹೀಗಾಗಿ ರೈತರು ತಾವು ಬೆಳೆಯುವ ಬೆಳೆಗೆ ತಕ್ಕಂತೆ ಕೀಟಗಳನ್ನು ಆಕರ್ಷಿಸುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ಗಿಡಗಳನ್ನು ಬೆಳೆಗಳ ಮಧ್ಯದಲ್ಲಿ ಒಂದು ಅಥವಾ ಎರಡನ್ನು ನೆಡಬಹದು. ಉಳಿದಂತೆ ಬದುಗಳ ಮೇಲೆ, ಬೇಲಿ ಇರುವ ಸ್ಥಳದಲ್ಲಿ ಅಂಬುಗಳ ರೂಪದಲ್ಲಿ  ಬೆಳೆಸಬಹುದು. ಇದರಿಂದಾಗಿ ಈ ಗಿಡಗಳಿಗೆಂದೇ ಸ್ಥಳವನ್ನು ಮೀಸಲಾಗಿಡುವ ಅಗತ್ಯ ಇರುವುದಿಲ್ಲ’ ಎಂದು ವಿವರಿಸುತ್ತಾರೆ ಎನ್‌ಬಿಎಐಆರ್‌ ಸಂಸ್ಥೆಯ ನಿರ್ದೇಶಕ ಅಬ್ರಾಹಂ ವರ್ಗೀಸ್‌.‘ಪರಾಗಸ್ಪರ್ಶ ಮಾಡುವ ಕೀಟಗಳನ್ನು ಒಮ್ಮೆ ಆಕರ್ಷಿಸಿದರೆ ಸಾಕು, ಅವುಗಳು ಸುತ್ತಮುತ್ತಲಿನ ಪ್ರದೇಶದಲ್ಲಿರುವ 10 ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಪರಾಗಸ್ಪರ್ಶ ಮಾಡುತ್ತವೆ. ಆದರೆ ಕ್ರಿಮಿನಾಶಕ ಹಾಗೂ ಕೀಟನಾಶಗಳ ಬಳಕೆ ಹೆಚ್ಚಾಗಿದ್ದರೆ ಈ ಕೀಟಗಳು ಬದುಕುವ ಅವಕಾಶ ತೀರಾ ವಿರಳ. ಅದಕ್ಕಾಗಿ ಇಂತಹ ಕೀಟಗಳನ್ನು ಆಕರ್ಷಿಸುವ ಗಿಡಗಳನ್ನು ನೆಡುವ ರೈತರು ಕ್ರಿಮಿನಾಶಕಗಳ ಬಳಕೆ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಬೆಳೆಗಳನ್ನು ಹಾಳು ಮಾಡುವ ಕೀಟಗಳ ನಾಶಕ್ಕೆ ನಾವೇ ಅಭಿವೃದ್ಧಿಪಡಿಸಿರುವ ಜೈವಿಕ ಕೀಟನಾಶಕಗಳನ್ನು(ಹಾನಿಕಾರಕ ಕೀಟಗಳನ್ನು ಕೊಲ್ಲುವ ಉಪಯುಕ್ತ ಕೀಟಗಳು) ನೀಡುತ್ತೇವೆ. ಇದರಿಂದ ಕ್ರಿಮಿನಾಶಕಗಳ ಬಳಕೆ ತಡೆಯಬಹುದು’ ಎನ್ನುತ್ತಾರೆ ಅವರು.ಒಂದೊಂದು ಗಿಡಗಳು ಕನಿಷ್ಠ 5ಕ್ಕೂ ಹೆಚ್ಚು ಕೀಟಗಳನ್ನು ಆಕರ್ಷಿಸುತ್ತವೆ. ಅದರಲ್ಲೂ ಕೆಲವೊಂದು ಹತ್ತು ಹನ್ನೊಂದು ಕೀಟಗಳನ್ನು ಆಕರ್ಷಿಸುತ್ತವೆ. ಹೀಗಾಗಿ ಕೇವಲ ಒಂದು ಬೆಳೆಗೆ ಅಗತ್ಯವಾದ ಗಿಡಗಳನ್ನು ನೆಡುವ ಬದಲು ಎರಡು ಮೂರು ರೀತಿಯ ಗಿಡಗಳನ್ನು ತೋಟ ಅಥವಾ ಜಮೀನಿನಲ್ಲಿ ವ್ಯರ್ಥವಾಗಿ ಇರುವ ಸ್ಥಳಗಳಲ್ಲಿ ನಟ್ಟರೆ ಉತ್ತಮ.

ಫುಲ್‌ ಜೂಮ್‌

ಯಾವುದೇ ಬೆಳೆಯಲ್ಲಿ ಹೂಗಳು ಸಂಪೂರ್ಣವಾಗಿ ಅರಳಿದ ವೇಳೆ ಅವುಗಳಿಗೆ ಕ್ರಿಮಿನಾಶಕ ಹಾಗೂ ರಾಸಾಯನಿಕ ಸಿಂಪಡಿಸಬಾರದು. ಕಾರಣ ಹೂಗಳು ಅರಳಿದ ಸಮಯದಲ್ಲಿ ಪರಾಗಸ್ಪರ್ಶ ಹೆಚ್ಚಾಗಿ ನಡೆಯುತ್ತಿರುತ್ತದೆ.  ಇದನ್ನು ‘ಫುಲ್‌ ಜೂಮ್‌’ ಎಂದು ಕರೆಯಲಾಗುತ್ತದೆ. ಹೂ ಅರಳಿದ ಎರಡು ವಾರ ಮೊದಲು ನಂತರದ ಒಂದು ವಾರ  ಔಷಧಿ ಸಿಂಪಡಿಸಿದರೆ ಉಪಯುಕ್ತ ಕೀಟಗಳು ಸಾವನ್ನಪ್ಪುತ್ತವೆ. ಅದಕ್ಕಾಗಿ ಕಾಯಿ ಕಚ್ಚಿದ ನಂತರ ಅಥವಾ ಹೂ ಅರಳುವ ಮುನ್ನವೇ ರಾಸಾಯನಿಕಗಳನ್ನು ಸಿಂಪಡಿಸಬೇಕು.ಮಾಹಿತಿಗೆ080–23511982, ವಿಳಾಸ– ಎನ್‌ಬಿಎಐಆರ್‌ ಸಂಸ್ಥೆ, ಪರಾಗಸ್ಪರ್ಶ ಕೀಟಗಳನ್ನು ಆಕರ್ಷಿಸುವ ಉದ್ಯಾನ, ಮದರ್‌ ಡೈರಿ ಸಮೀಪ, ಯಲಹಂಕ, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry