ಭಾನುವಾರ, ಮೇ 16, 2021
28 °C

ಕೀಟನಾಶಕ ಮಾರಾಟ: ನಿರ್ಬಂಧಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಪರವಾನಗಿ ಇಲ್ಲದೇ ಜಿಲ್ಲೆಯಲ್ಲಿ ಜೈವಿಕ ಕೀಟ ನಾಶಕಗಳ ಮಾರಾಟ ನಡೆಯುತ್ತಿದ್ದು, ಇದನ್ನು ಕೂಡಲೇ ನಿಯಂತ್ರಿಸಬೇಕು ಎಂದು ಅಗ್ರಿ ಇನ್‌ಪುಟ್ಸ್ ಆಫೀಸರ್ಸ್‌ ಅಸೋಸಿಯೇಶನ್‌ನ ಪದಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.ಜೈವಿಕ ಕೀಟ ನಾಶಕಗಳ ಹೆಸರಿನಲ್ಲಿ ಅಬಕಾರಿ ಸುಂಕ ಪಾವತಿಸುವುದರಿಂದ ತಪ್ಪಿಸಿಕೊಳ್ಳುತ್ತಿರುವ ಕಂಪೆನಿಗಳು, ಯಾವುದೇ ಪರವಾನಗಿ ಇಲ್ಲದೇ ಜಿಲ್ಲೆಯಲ್ಲಿ ಡೀಲರ್‌ಗಳು, ರೈತರು, ಪಾನ್‌ಶಾಪ್‌ಗಳು, ಗ್ರಾಮಗಳಲ್ಲಿ ಅನಧೀಕೃತ ಮಾರಾಟಗಾರರ ಮೂಲಕ ಎಗ್ಗಿಲ್ಲದೇ ಇಂತಹ ಜೈವಿಕ ಕೀಟನಾಶಕಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಒಂದೆಡೆ ಸರ್ಕಾರಕ್ಕೆ ತೆರಿಗೆ ವಂಚಿಸಲಾಗುತ್ತಿದ್ದು, ರೈತರಿಗೂ ಮೋಸ ಮಾಡಲಾಗುತ್ತಿದೆ ಎಂದು ದೂರಿದರು.ಕೀಟನಾಶಕ ಕಾಯ್ದೆಯ ಪ್ರಕಾರ ಕೇಂದ್ರ ಕೀಟನಾಶಕ ಮಂಡಳಿಯಲ್ಲಿ ಈ ಕಂಪೆನಿಗಳು ನೋಂದಣಿಯಾಗಿಲ್ಲ. ಜೈವಿಕ ಕೀಟನಾಶಕಗಳ ಹೆಸರಿನಲ್ಲಿ ರಾಸಾಯನಿಕಗಳನ್ನು ನೀಡುತ್ತಿರುವ ಈ ಕಂಪೆನಿಗಳು ರೈತರಿಗೆ ಮೋಸ ಮಾಡುತ್ತಿರುವುದು ಪ್ರಯೋಗಾಲಯಗಳ ಪರೀಕ್ಷೆಯಿಂದ ಸ್ಪಷ್ಟವಾಗಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಇಂತಹ ಕಂಪೆನಿಗಳನ್ನು ನಿರ್ಬಂಧಿಸಲಾಗಿದ್ದು, ಇಲ್ಲಿಯ ರೈತರಿಗೂ ಮೋಸ ಆಗಬಾರದು ಎಂಬ ಉದ್ದೇಶದಿಂದ ಇಂತಹ ಜೈವಿಕ ಕೀಟ ನಾಶಕಗಳ ಮಾರಾಟವನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.ಈ ರೀತಿಯ ಜೈವಿಕ ಕೀಟನಾಶಕಗಳ ಬಳಕೆಯಿಂದ ಆಹಾರ ಪದಾರ್ಥಗಳ ಮೇಲೂ ಸಾಕಷ್ಟು ಪರಿಣಾಮ ಉಂಟಾಗಲಿದೆ. ಬೆಳೆ ಹಾನಿ, ಬೆಳೆಯ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದು, ಬೆಳೆ ಹಾಗೂ ಮಣ್ಣಿಗೆ ಹಾನಿ ಮಾಡುವ ಮೂಲಕ ರೈತರ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಲಿದೆ ಎಂದು ಎಚ್ಚರಿಸಿದರು.ಪಕ್ಕದ ಗುಲ್ಬರ್ಗ, ವಿಜಾಪುರ ಜಿಲ್ಲೆಗಳಲ್ಲಿ ಈಗಾಗಲೇ ಪರವಾನಗಿ ಇಲ್ಲದ ಇಂತಹ ಜೈವಿಕ ಕೀಟನಾಶಕಗಳ ಮಾರಾಟವನ್ನು ನಿರ್ಬಂಧಿಸಲಾಗಿದೆ. ಮಾರಾಟ ಮಾಡುವುದು ಕಂಡುಬಂದಲ್ಲಿ, ಕೀಟನಾಶಕ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಯಾವುದೇ ನಿರ್ಬಂಧ ವಿಧಿಸಿಲ್ಲ. ಹೀಗಾಗಿ ರೈತರು ಹಾಗೂ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.ಈ ಕುರಿತು ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಅಮಾನ್ ಶಕೀಬ್, ಜೈವಿಕ ಕೀಟನಾಶಕಗಳ ಕುರಿತು ಮೇಲಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಸೂಚಿಸಲಾಗಿದೆ. ಇನ್ನೆರಡು ದಿನದಲ್ಲಿ ಇಂತಹ ಜೈವಿಕ ಕೀಟನಾಶಕಗಳ ಮಾರಾಟವನ್ನು ನಿರ್ಬಂಧಿಸುವ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಬೋರಬಂಡ್ ಮನವಿ ಸ್ವೀಕರಿಸಿದರು. ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್, ವಿರೋಧ ಪಕ್ಷದ ನಾಯಕ ಎಚ್.ಸಿ. ಪಾಟೀಲ, ಸಾಯಿಬಣ್ಣ ಬೋರಬಂಡ್, ಸಂಘದ ಪದಾಧಿಕಾರಿಗಳಾದ ಶಂಕರಗೌಡ ನಿಡಗುಂದಿ, ಅಪ್ಪಾಸಾಬ ಚಿಕ್ಕರಡ್ಡಿ, ವೆಂಕಟೇಶ ದೊರೆ, ರಾಜಕುಮಾರ ದಿಗ್ಗೇವಾಡಿ, ಚೆನ್ನಪ್ಪ ಹೂಗಾರ, ರಘುನಾಥರೆಡ್ಡಿ, ಮೌನೇಶ ಎಸ್.ಎಚ್. ಆನಂದ ಹೊಳಕುಂದಿ, ಸಾಯಿನಾಥ ಸಾಹುಕಾರ ಮುಂತಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.