ಬುಧವಾರ, ಜೂನ್ 23, 2021
30 °C

ಕುಣಿಗಲ್‌ನಲ್ಲಿ ಖೋಟಾ ನೋಟು ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಪಟ್ಟಣದಲ್ಲಿ ₨ 500 ಮುಖಬೆಲೆಯ ನಕಲಿ ನೋಟು ಹಾವಳಿ ಹೆಚ್ಚುತ್ತಿದೆ. ಬ್ಯಾಂಕ್ ಅಥವಾ ಪೆಟ್ರೋಲ್‌ಬಂಕ್‌ನಂಥ ಜನನಿಬಿಡ ಪ್ರದೇಶದಲ್ಲಿ ನಕಲಿ ನೋಟುಗಳ ಪತ್ತೆಯಾದಾಗ ಗ್ರಾಹಕರು ಮುಖಮುಚ್ಚಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.ನಗರದ ರಮಣ ಬ್ಲಾಕ್‌ನ ಗೃಹಿಣಿಯೊಬ್ಬರು ತಮ್ಮ ಆರ್‌ಡಿ ಖಾತೆಗೆ ಹಣ ಜಮಾ ಮಾಡಿದಾಗ ₨ 500ರ ನಕಲಿ ನೋಟು ಪತ್ತೆಯಾಗಿತ್ತು. ಈ ಸಂದರ್ಭ ಬ್ಯಾಂಕ್‌ ಸಿಬ್ಬಂದಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಅವರು ತತ್ತರಿಸಿದರು.ವಕೀಲರೊಬ್ಬರು ಕಕ್ಷಕಿದಾರರಿಂದ ಪಡೆದ ನೋಟುಗಳಲ್ಲಿ ಮತ್ತು ವೈನ್‌ಸ್ಟೋರ್ ಮಾಲೀಕರೊಬ್ಬರು ಬ್ಯಾಂಕ್‌ಗೆ ಪಾವತಿಸಿದ ಹಣದಲ್ಲಿಯೂ ನಕಲಿ ನೋಟುಗಳು ಪತ್ತೆಯಾದ ಸಂಗತಿ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.ಬ್ಯಾಂಕ್‌ಗಳಲ್ಲಿ ಖೋಟಾ ನೋಟು ಪತ್ತೆಯಾದಾಗ, ಬ್ಯಾಂಕ್ ಅಧಿಕಾರಿಗಳು ಗ್ರಾಹಕರನ್ನು ಒಳಗೆ ಕರೆಸಿ ಮಾಹಿತಿ ನೀಡುತ್ತಾರೆ. ಗ್ರಾಹಕರ ಮರ್ಯಾದೆ ಕಾಪಾಡಲು ಯತ್ನಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಮತ್ತೊಂದು ನೋಟ್ ಪಡೆದು ಖೋಟಾ ನೋಟು ನಾಶಪಡಿಸುತ್ತಾರೆ ಎಂದು ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಮಾಹಿತಿ ನೀಡಿದರು.ಹಣದ ವಹಿವಾಟು ಹೆಚ್ಚಾಗಿ ನಡೆಯುವ ಪೆಟ್ರೋಲ್ ಬಂಕ್, ವೈನ್ ಸ್ಟೋರ್, ಹೋಟೆಲ್‌ಗಳ ಮೂಲಕವೇ ನಕಲಿ ನೋಟುಗಳು ಗ್ರಾಹಕರ ಕಿಸೆ ತಲುಪುತ್ತಿವೆ ಎಂಬ ವದಂತಿ ದಟ್ಟವಾಗಿದೆ. ‘ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದ ವೇಳೆ, ನೋಟುಗಳ ಸಾಚಾತನ ಪರೀಕ್ಷಿಸಲು ಸಾಧ್ಯವಾಗುವುದಿಲ್ಲ’ ಎಂದು ವ್ಯಾಪಾರಿಗಳಾದ ರಮೇಶ್, ಸುನೀಲ್, ಕೃಷ್ಣಪ್ಪ ಪ್ರತಿಕ್ರಿಯಿಸಿದರು.ನಗರದ ಅನೇಕ ಚಿನ್ನ ಬೆಳ್ಳಿ ಅಂಗಡಿಗಳ ಮಾಲೀಕರು ಇದೀಗ ನೋಟುಗಳ ಸಾಚಾತನ ಪರೀಕ್ಷಿಸುವ ಯಂತ್ರ ತಂದಿಟ್ಟುಕೊಂಡಿದ್ದಾರೆ.‘ನಕಲಿ ನೋಟುಗಳ ಹಾವಳಿಯಿಂದ ಹೆಚ್ಚು ತೊಂದರೆ ಅನುಭವಿಸುವವರು ನಾವು. ನಕಲಿ ನೋಟು ವಹಿವಾಟಿಗೆ ಗ್ರಾಹಕರನ್ನು ದೂರುವಂತಿಲ್ಲ. ಏಕೆಂದರೆ ಅವರಿಗೆ ತಿಳಿಯದಂತೆ ಅವರ ಕಿಸೆಗೆ ನಕಲಿ ನೋಟು ಬಂದಿರುತ್ತದೆ. ಒಂದು ವೇಳೆ ದೂರು ನೀಡಿದರೆ ಇತರ ಗ್ರಾಹಕರು ನಮ್ಮ ಅಂಗಡಿಗೆ ಬರಲು ಹೆದರುತ್ತಾರೆ. ವಿಚಾರಣೆ ಕಿರಿಕಿರಿ ಅನುಭವಿಸುವುದಕ್ಕಿಂತ ಸುಮ್ಮನಿರುವುದೇ ಲೇಸು’ ಎಂದು ಕೆಲವು ವ್ಯಾಪಾರಸ್ಥರು ಹೇಳುತ್ತಾರೆ.ಪಟ್ಟಣದ ಕೆಲವು ಎಟಿಎಂಗಳಲ್ಲಿಯೇ ಗ್ರಾಹಕರಿಗೆ ನಕಲಿ ನೋಟು ಸಿಕ್ಕಿದೆ. ವಹಿವಾಟಿನ ನಿರ್ದಿಷ್ಟ ದಾಖಲೆ ತೋರಿಸಿದ ನಂತರ ಬ್ಯಾಂಕ್‌ ಸಿಬ್ಬಂದಿ ನೋಟ್‌ಗಳನ್ನು ಬದಲಿಸಿಕೊಟ್ಟ ಬಗ್ಗೆ ಅನೇಕ ಗ್ರಾಹಕರು ಅನುಭವ ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.