ಶನಿವಾರ, ಜುಲೈ 24, 2021
23 °C

ಕುದುರೆ ಅಬ್ಬಿಪಾಲ್ಸ್: ಅಕ್ರಮ ಚಟುವಟಿಕೆ ತಾಣವಾಗುವ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲ್ದೂರು: ‘ಹಚ್ಚಹಸಿರ ದಟ್ಟ ಕಾನನದ ಮಧ್ಯೆ ಥಳುಕು ಬಳುಕಿನ ವಯ್ಯಾರದಿಂದ ಹರಿಯುತ್ತಿರುವ ಜಲಲ ಜಲಧಾರೆಯ ಸೊಬಗು ಒಂದೆಡೆಯಾದರೆ, ಅಮರ ಶಿಲ್ಪಿ ಜಕಣಾಚಾರಿಯೇ ಇಲ್ಲಿ ಬಂದು ಕಲ್ಲುಗಳ ಕಡೆದು, ಶಿಲಾ ಕಲಾಕೃತಿಗಳನ್ನು ನಿರ್ಮಿಸಿರುವನೋ ಎಂಬಂತೆ ಭಾಸವಾಗುವ ನುಣುಪಾದ ಕಲ್ಲು ಬಂಡೆಗಳು... ನೀರಿನೊಳಗೆ ಅವಿತು ಸಪ್ತಸ್ವರ ನುಡಿಸುತ್ತಿದ್ದಾರೆ ಎಂಬುದನ್ನು ಪುಷ್ಟೀಕರಿಸುವ ನೀರಿನ ಜುಳುಜುಳು ನಾದ, ನದಿ ದಡ ನೋಡುತ್ತಿದ್ದರೆ, ಮುಗಿಲು ಮುತ್ತಿಕ್ಕುವ ಪಚ್ಚೆ ಕಾನನ.ಇಲ್ಲಿನ ಭದ್ರಾ ನದಿ ಪರಿಸರದಲ್ಲಿ ಕಾಣಸಿಗುವ ನೈಸರ್ಗಿಕ ತಾಣ ಕಂಡವರ ಮನದಲ್ಲಿ ಅಚ್ಚಳಿಯದೆ ನೆನಪಿರುವಂತೆ ಮಾಡುವಷ್ಟು ನಯನಮನೋಹರ. ಅದು ಖಾಂಡ್ಯ ಹೋಬಳಿ ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ‘ಕುದುರೆ ಅಬ್ಬಿ ಪಾಲ್ಸ್’.ಮಳೆಗಾಲದಲ್ಲಿ ನೀರಿನ ವೇಗ ಕುದುರೆ ವೇಗದಂತೆ ರಭಸ. ಆ ಕಾರಣಕ್ಕಾಗಿ ಈ ಅಬ್ಬಿಗೆ ಕುದುರೆ ಅಬ್ಬಿ ಪಾಲ್ಸ್ ಎಂಬ ನಾಮಧೇಯ. ಆದರೆ ಇಂತಹ ಪ್ರಾಕೃತಿಕ ಸೌಂದರ್ಯ ತಾಣ ಇಲ್ಲಿನ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದಾಗಿ ಕಿಡಿಗೇಡಿಗಳಿಗೆ ಮೋಜಿನ ತಾಣವಾಗುತ್ತಿದೆ ಎಂಬುದು ಕೆಲವು ಪರಿಸರ ಪ್ರಿಯರ ಕೊರಗು.ಇಂತಹ ರಮಣೀಯ ಪರಿಸರ ಅನೈತಿಕ ಚಟುವಟಿಕೆಯ ತಾಣವಾಗಿಯೂ ಬಳಕೆ ಆಗುತ್ತಿದೆ. ಆಲ್ದೂರು- ಬಾಳೆಹೊನ್ನೂರು ರಾಜ್ಯ ಹೆದ್ದಾರಿಯಿಂದ 5ಕಿಮೀ ದೂರದಲ್ಲಿರುವ ಬಿದರೆ ಗ್ರಾಪಂ ವ್ಯಾಪ್ತಿಯ ಪುರಾಣ ಪ್ರಸಿದ್ಧ ಮಾರ್ಕಾಂಡೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತಿರುವ ಕುದುರೆ ಅಬ್ಬಿಪಾಲ್ಸ್ ನಿಸರ್ಗ ನಿರ್ಮಿತ ರಮ್ಯತಾಣ. ಅಕ್ಕಪಕ್ಕದ ಬೆಟ್ಟಗುಡ್ಡಗಳ ನಡುವೆ ಹರಿಯುತ್ತಿರುವ ಭದ್ರಾ ನುಣುಪಾದ ನದಿಯ ಕೊರಕಲು ಕಲ್ಲು ಬಂಡೆಗಳ ಮೇಲಿಂದ ಧುಮ್ಮಿಕ್ಕುವ ನದಿ ಸೊಬಗು ಪ್ರಮುಖ ಆಕರ್ಷಣೆ. ಸಮೀಪದ ಮಾರ್ಕಾಂಡೇಯ ದೇವಾಲಯಕ್ಕೆ ಬರುವ ಪ್ರವಾಸಿಗರು ಕುದುರೆ ಅಬ್ಬಿಗೆ ಭೇಟಿ ನೀಡದೇ ಹಿಂತಿರುಗಲಾರರು. ಆದರೆ ಎಚ್ಚರ ತಪ್ಪಿದರೆ ಮೃತ್ಯುಕೂಪವಾಗಿಯೂ ಇದು ಪರಿಣಮಿಸಬಹುದು.ಆದರೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕುದುರೆ ಅಬ್ಬಿಯ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಸೂಚನಾ ಫಲಕಗಳೂ ಇಲ್ಲ. ಅಕ್ರಮ ಪ್ರವೇಶ ನಿಷೇಧ ಎಂಬ ಸೂಚನಾ ಫಲಕದ ಹೊರತಾಗಿ ಅರಣ್ಯ ಇಲಾಖೆ ಯಾವುದೇ  ಕಟ್ಟುನಿಟ್ಟಿನ  ಕ್ರಮಗಳನ್ನು ನಿರ್ವಹಿಸುತ್ತಿಲ್ಲ. ಹತ್ತಿರದಲ್ಲಿ ಚೆಕ್ ಪೋಸ್ಟ್ ಇದೆಯಾದರೂ ಸಿಬ್ಬಂದಿಯ ಕಣ್ಣುತಪ್ಪಿಸಿ ಕಿಡಿಗೇಡಿಗಳು ಇಲ್ಲಿ ಕುಡಿತ, ಮೋಜು, ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ.ಬೇಸಿಗೆಯಲ್ಲಿ ನೀರು ಕಡಿಮೆ ಇರುವುದರಿಂದ ಅನೈತಿಕ ಚಟುವಿಟಿಕೆ ಹೆಚ್ಚು. ಕುಡಿತದ ಅಮಲಿನಲ್ಲಿದ್ದ ಯುವಕರ ಗುಂಪು ಛಾಯಾಗ್ರಾಹಕರ ಮೇಲೆ ಇತ್ತೀಚಿಗೆ ಹಲ್ಲೆ ನಡೆಸಿತ್ತು. ವಾರದ ಹಿಂದೆ ಮದ್ಯಪಾನ ಮಾಡುತ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಕುದುರೆ ಅಬ್ಬಿ ಫಾಲ್ಸ್ ಅನೈತಿಕ ಚಟುವಟಿಕೆ ತಾಣವಾಗುತ್ತಿರುವುದಕ್ಕೆ ಸಾಕ್ಷಿ ಎಂದೇ ಬಿಂಬಿಸಲಾಗುತ್ತಿದೆ.ಪರಿಸರ ಕಸದ ತೊಟ್ಟಿಯಾಗಿ ಮಾರ್ಪಾಡಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗೆ ಪರಿಸರದ ಸ್ಥಿತಿಯೇ ಸಾಕ್ಷಿ.ಅಪಾಯದ ಮಾಹಿತಿ ಇಲ್ಲ: ಕುದುರೆ ಅಬ್ಬಿಯ ಮಳೆಗಾಲದ ಸೊಬಗು ಕಣ್ತುಂಬಿಸಿಕೊಳ್ಳಲು ಅನೇಕ ಪ್ರವಾಸಿಗರು ಬರುತ್ತಾರೆ. ಅಬ್ಬಿಯ ಅಪಾಯಕಾರಿ ಸ್ಥಳಗಳ ಬಗ್ಗೆ ಸಚನೆಯೇ ಇಲ್ಲ. ಇದರಿಂದಾಗಿ ಈ ಸ್ಥಳದ ಅಪಾಯ ಅರಿವಾಗುವುದಿಲ್ಲ.‘ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಅನೇಕ ಮಂದಿ ಬಂದುತ್ತಿರುತ್ತಾರೆ. 24  ಗಂಟೆ ನಾವೇನ್ ಕಾಯೋಕಾಗುತ್ತಾ.., ನಾವು ಎಸ್ಟೇ ಕಾದ್ರೂ ಕದ್ದು ಮುಚ್ಚಿ ಬರ್ತಾರೆ, ಪಾರ್ಟಿ ಮಾಡ್ತಾರೆ, ಕಸ ಹಾಕಿ ಪರಿಸರ ಹಾಳು ಮಾಡ್ತಾರೆ.. ಒಂದಿಬ್ರು ಸೇರ್‌ಕೊಂಡು ಕಸ ತೆಗೆದು ಕ್ಲೀನ್ ಮಾಡ್ತಾ ಇರ್ತೀವಿ. ಆದ್ರೂ ಗಲೀಜು ಮಾಡ್ತಾರೆ...’ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

 ಅನುಕೂಲ ಬೇಕು....

ಕುದುರೆ ಅಬ್ಬಿ ಸಮೀಪದಲ್ಲಿ ಚೆಕ್‌ಪೋಸ್ಟ್ ಒಂದನ್ನು ನಿರ್ಮಿಸುವ ಮೂಲಕ ಪ್ರವಾಸಿಗರಿಂದ  ನಿರ್ದಿಷ್ಟ ಶುಲ್ಕ ಪಡೆದು ಮೂಲ ಸೌಕರ್ಯ ಕಲ್ಪಿಸಬೇಕು. ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಹಾಕುವ ಮೂಲಕ ಪ್ರವಾಸಿಗರ ಜೀವ ರಕ್ಷಣೆಗೆ ವನ್ಯ ಜೀವಿ ವಿಭಾಗದವರು ಕ್ರಮಕೈಗೊಳ್ಳಬೇಕು.ಹತ್ತಿರಲ್ಲೇ ದೇವಸ್ಥಾನ ಇರುವುದರಿಂದ ಇದನ್ನು ಪ್ರಸಿದ್ಧ ಪ್ರವಾಸಿ ತಾಣವನ್ನಾಗಿ ಮಾಡಬಹುದು ಎನ್ನುತ್ತಾರೆ ಪರಿಸರದ ನಾಗರಿಕರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.