ಮಂಗಳವಾರ, ಮೇ 11, 2021
27 °C

ಕುಪ್ಪಳ್ಳಿಯಲ್ಲೊಂದು ಮಾದರಿ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: `ಕುಪ್ಪಳ್ಳಿ~ ಎಂದಾಕ್ಷಣ ನಮಗೆ ನೆನಪಾಗುವುದು ಕುವೆಂಪುರವರ ತವರೂರು ಶಿವಮೊಗ್ಗದ ಕುಪ್ಪಳ್ಳಿ. ಈಗ ಹೇಳ ಹೊರಟಿರುವುವುದು ಪಾಂಡವಪುರ ತಾಲೂಕಿನ ಕುಪ್ಪಳ್ಳಿ ಎಂಬ ಕುಗ್ರಾಮದ ಕುರಿತು.

ಪಾಂಡವಪುರದಿಂದ ಸುಮಾರು 18 ಕಿ ಮೀ ದೂರದಲ್ಲಿರುವ ಕುಗ್ರಾಮದಲ್ಲಿ ಕೇವಲ 45 ಮನೆಗಳಿವೆ. ಜನಸಂಖ್ಯೆ 140ರ ಆಸುಪಾಸು ಅಷ್ಟೆ. ಇಂತಹ ಕುಗ್ರಾಮದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಏಕೋಪಾದ್ಯಾಯ ಶಾಲೆ, ಗ್ರಾಮಸ್ಥರು, ಶಿಕ್ಷಕಿ ಎಲ್. ಹೇಮಾವತಿ ಶ್ರಮದಿಂದಾಗಿ ಮಾದರಿ ಸರ್ಕಾರಿ ಶಾಲೆಯಾಗಿ ರೂಪುಗೊಂಡಿದೆ.ಖಾಸಗಿ ಶಾಲೆಯನ್ನೂ ನಾಚಿಸುವಂತಹ ಶಿಸ್ತು, ವಿದ್ಯಾಭ್ಯಾಸದ ಕಲಿಕೆ, ಸಾಂಸ್ಕೃತಿಕ ಪ್ರಗತಿ ಇಲ್ಲಿಯ ವಿದ್ಯಾರ್ಥಿಗಳದು. ಈ ಸಾಲಿನಲ್ಲಿ 15 ವಿದ್ಯಾರ್ಥಿಗಳು ವ್ಯಾಸಂಗ, ಮಾಡುತ್ತಿದ್ದಾರೆ. 1ರಿಂದ 4 ನೇ ತರಗತಿಗಳಿದ್ದು ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಪರಿಸರ ಹಾಗೂ ಕೃಷಿ ಕೇಂದ್ರದ ಶಾಲೆಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ.12 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಹೇಮಾವತಿ ಅವರ ಶ್ರಮ ಮತ್ತು ಕಾಳಜಿ ಇಂದು ಸಾರ್ಥಕತೆ ಪಡೆದಿದೆ. ಶಾಲೆಯ ಕಲಿ-ನಲಿ ಕಾರ್ಯಕ್ರಮದ ಕಲಿಕಾ ಚಪ್ಪರ ಆಕರ್ಷಕವಾಗಿದೆ.ವಿದ್ಯಾರ್ಥಿಗಳಲ್ಲಿನ ಆಸಕ್ತಿ, ಕುತೂಹಲವನ್ನು ಇಮ್ಮಡಿಗೊಳಿಸಿದೆ. ಸುಸಜ್ಜಿತ ಅಡುಗೆ ಮನೆ, ಕಾಂಪೌಂಡ್, ಶೌಚಾಲಯ ಇವೆಲ್ಲಕ್ಕಿಂತ ಹೆಚ್ಚಾಗಿ ಊಟ ಮಾಡಲು ಕಲ್ಲು ಬೆಂಚಿನ ವ್ಯವಸ್ಥೆ ಇಲ್ಲಿದೆ. ಬಗೆಬಗೆಯ ಹೂವಿನ ಗಿಡಗಳು, ತರಕಾರಿ ಸಸಿಗಳು, ಅಲಂಕಾರಿಕ ಗಿಡಗಳು ಶಾಲೆಯ ಪರಿಸರದ ಸೌಂದರ್ಯ ಹೆಚ್ಚಿಸಿವೆ. ಶಾಲೆಗೆ ನೀರಿನ ಸಂಪರ್ಕವಿಲ್ಲ. ಊರ ಹೊರನ ಕೊಳದಿಂದ ನೀರು ತಂದು ಉದ್ಯಾನ ಅಭಿವೃದ್ಧಿಗೆ  ವಿದ್ಯಾರ್ಥಿಗಳೂ ಕೈಜೋಡಿಸಿದ್ದಾರೆ.ಇಲಾಖೆ ಯೋಜನೆಗಳನ್ನು ಪ್ರಾಮಾಣಿಕವಾಗಿ, ಅವಿರತ ಶ್ರದ್ದೆಯಿಂದ ಜಾರಿಗೊಳಿಸಿದ್ದೇ ಅಭಿವೃದ್ದಿಗೆ ಕಾರಣ ಎನ್ನುತ್ತಾರೆ ಶಿಕ್ಷಕಿ ಹೇಮಾವತಿ. ಹಿಂದಿನ ಎಸ್‌ಡಿಎಂಸಿ ಅಧ್ಯಕ್ಷರಾದ ಗಂಗಾಧರ್, ರಾಮೇಗೌಡ, ಗೋವಿಂದೆಗೌಡ, ಈಗಿನ ಅಧ್ಯಕ್ಷ ಮಹದೇವು ಅವರ ಸಹಕಾರವನ್ನು ಶಿಕ್ಷಕಿ ಸ್ಮರಿಸುತ್ತಾರೆ.`ಸ್ಕೂಲು ಚೆನ್ನಾಗಿದೆ, ಗಿಡಗಳಿಗೆ ಎಲ್ರೂ ನೀರಾಕ್ತಿವಿ, ದೇವಸ್ಥಾನ ಇದ್ದ ಹಾಗಿದೆ~ ಎನ್ನುವ ಅಭಿಪ್ರಾಯ 4ನೇ ತರಗತಿ ವಿದ್ಯಾರ್ಥಿನಿ ರಾಧಾಳದು. ಅಂತೆಯೇ `ನಮ್ ಮೇಡಮ್ ಚೆನ್ನಾಗಿ ಕಲಿಸ್ತಾರೆ~ ಎನ್ನುತ್ತಾರೆ 4ನೇ ತರಗತಿಯ ನವೀನ್. ಮಾಣಿಕ್ಯನಹಳ್ಳಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಗೆ ಸೇರಿದ ಈ ಶಾಲೆಗೆ ತುರ್ತಾಗಿ ಬೇಕಿರು ವುದು ನೀರಿನ ಸಂಪರ್ಕ ಮಾತ್ರ. ಗ್ರಾಮ ಪಂಚಾ ಯಿತಿಯ ಆಡಳಿತ ಇತ್ತ ಗಮನಹರಿಸಬೇಕಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.