ಗುರುವಾರ , ಆಗಸ್ಟ್ 18, 2022
25 °C

ಕುಲಪತಿಗಳ ಅವಧಿ ವಿಸ್ತರಣೆಗೆ ಯತ್ನ?

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ಅಧಿಕಾರ ಅವಧಿಯನ್ನು ಈಗಿರುವ 4 ರಿಂದ 5 ವರ್ಷಕ್ಕೆ ಹಾಗೂ ನಿವೃತ್ತಿಯ ವಯೋಮಿತಿಯನ್ನು 70 ವರ್ಷಕ್ಕೆ ಹೆಚ್ಚಿಸಲು ಸರ್ಕಾರ ತರಾತುರಿಯಲ್ಲಿ ಸಿದ್ಧತೆ ನಡೆಸಿದೆ.ಸರ್ಕಾರದ ಈ ಕ್ರಮದ ಹಿಂದೆ ಇನ್ನೇನು ಅಧಿಕಾರ ಅವಧಿ ಮುಗಿಸಲಿರುವ ಕುಲಪತಿಗಳ ಒತ್ತಡ ಹಾಗೂ ಕಾರ್ಯತಂತ್ರ ಕಾರಣವಾಗಿದ್ದು, ಕುಲಪತಿಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕೈ ಜೋಡಿಸಿದ್ದಾರೆ. ರಾಜ್ಯಪಾಲರು ಕೂಡ ಇದರ ಪರವಾಗಿಯೇ ಇದ್ದಾರೆ. ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರನ್ನು ಅಧಿಕಾರಿಗಳು ದಾರಿ ತಪ್ಪಿಸಿದ್ದಾರೆ ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಂದು ವಿಶ್ವವಿದ್ಯಾಲಯಗಳ ಕುಲಪತಿ ಸ್ಥಾನ ವಹಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಚ್ಚರಿಗೆ ಕಾರಣವಾದ ಇಬ್ಬರು ಕುಲಪತಿಗಳ ಹಿತಾಸಕ್ತಿ ಕಾಪಾಡಲು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರ ವಿಶ್ವವಿದ್ಯಾನಿಲಯ ಮಸೂದೆಗೆ ತಿದ್ದುಪಡಿ ತರಲು ಹೋಗಿ ಮುಖಭಂಗ ಅನುಭವಿಸಿತ್ತು.ಆದರೆ ಈಗ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ವಿ.ವಿ ಕಾಯ್ದೆಗೆ ತಿದ್ದುಪಡಿ ತರುವ ಹುನ್ನಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿರುವ ತುಮಕೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕಿತ್ತೂರು ರಾಣಿ ಚೆನ್ನಮ್ಮ, ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಕಾಯ್ದೆ ತಿದ್ದುಪಡಿ ಮೂಲಕ ಅನುಕೂಲ ಮಾಡಿಕೊಡುವ ಉದ್ದೇಶ ಇದೆ. ಹೀಗಾಗಿಯೇ ಸರ್ಕಾರದ ಅಧಿಕಾರವಧಿಯ ಕಡೇ ಗಳಿಗೆಯಲ್ಲಿ ಯಾವುದೇ ಚರ್ಚೆ ಇಲ್ಲದೇ ಕಾಯ್ದೆ ತಿದ್ದುಪಡಿಗೆ ತರಾತುರಿಯಲ್ಲಿ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕುಲಪತಿ ಅಧಿಕಾರ ಅವಧಿ ಐದು ವರ್ಷ ಹಾಗೂ ನಿವೃತ್ತಿ ವಯಸ್ಸು 70 ಆಗಿದೆ. ಇದನ್ನು ಮಾನದಂಡವಾಗಿ ಇಟ್ಟುಕೊಂಡು ಕುಲಪತಿಗಳ ಅಧಿಕಾರ ಅವಧಿ ಹೆಚ್ಚಿಸುವ ಹುನ್ನಾರ ನಡೆದಿದೆ ಎಂದು ಹೇಳಲಾಗುತ್ತಿದೆ.`ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಅಧಿಕಾರ ಅವಧಿ ಐದು ವರ್ಷವಿದೆ. ರಾಜ್ಯದಲ್ಲಿ ಈಗಿರುವ ಕುಲಪತಿಗಳಿಗೆ ಇದನ್ನೇ ಅನ್ವಯಿಸಿದರೆ ಅದೊಂದು ದುರುದ್ದೇಶಪೂರಿತ ಕ್ರಮವೇ ಹೊರತು ಬೇರೇನು ಅಲ್ಲ' ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಸ್.ತಿಮ್ಮಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಮಾರ್ಗದರ್ಶಿ ಸೂತ್ರ ಉಲ್ಲಂಘನೆ: ಕುಲಪತಿ ಆಯ್ಕೆ ವಿಚಾರವಾಗಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹದಿನೈದು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ. ರಾಜ್ಯದಲ್ಲಿ ಈಗಿರುವ ಯಾವುದೇ ವಿಶ್ವವಿದ್ಯಾಲಯದ ಕುಲಪತಿಯೂ ಈ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಆಯ್ಕೆಗೊಂಡಿಲ್ಲ. ಕಾಯ್ದೆಗೆ ತಿದ್ದುಪಡಿ ಮಾಡಿದರೆ ಮುಂದೆ ಹೊಸದಾಗಿ ಯುಜಿಸಿ ನಿಯಮಾವಳಿಗಳ ಪ್ರಕಾರ ನೇಮಕಗೊಳ್ಳಲಿರುವ ಕುಲಪತಿಗಳಿಗಷ್ಟೇ ಅನ್ವಯವಾಗುವಂತಿರಬೇಕು ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.