ಶನಿವಾರ, ಏಪ್ರಿಲ್ 17, 2021
32 °C

ಕುವೆಂಪು ನಗರದಲ್ಲಿ ಕಳ್ಳರ ಹಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗದು, ಕ್ಯಾಮೆರಾ, ಒಡವೆ... ಹೀಗೆ ಸಣ್ಣ-ಪುಟ್ಟ ವಸ್ತುಗಳನ್ನು ಕದ್ದರೆ ಅದು ಕಳೆದುಕೊಂಡವರ ನಿರ್ಲಕ್ಷ್ಯ ಅನ್ನಬಹುದು. ಆದರೆ ಮನೆಯ ತಾರಸಿಯಲ್ಲಿದ್ದ ಸೋಲಾರ್ ವಾಟರ್ ಹೀಟರ್‌ನಂತಹ ವಸ್ತುಗಳನ್ನು ಕಳವು ಮಾಡಿದರೂ ಪೊಲೀಸರು ಇತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕುವೆಂಪುನಗರ ಗುರುಲೇಔಟ್ ನಿವಾಸಿ ಜಯಲಕ್ಷ್ಮಮ್ಮ.`ಐವತ್ತು ಸಾವಿರ ಮೊತ್ತದ ಸೋಲಾರ್ ವಾಟರ್ ಹೀಟರ್ ಕಳವಾಗಿ ಒಂದು ವರ್ಷ ಆಯಿತು. ಈವರೆಗೆ ಪತ್ತೆಯಾಗಿಲ್ಲ. ಪೊಲೀಸರಿಗೆ ದೂರು ನೀಡಿದ ನಂತರವಾದರೂ ಕಳವು ಪ್ರಕರಣ ಕಡಿಮೆಯಾಗಬೇಕಿತ್ತು. ಆದರೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ~ ಎಂದು ಈ ಭಾಗದ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಕಳೆದ ಒಂದು ತಿಂಗಳಲ್ಲಿ ಕುವೆಂಪು ನಗರದಲ್ಲಿ 50ಕ್ಕೂ ಹೆಚ್ಚು ಕಳವು ಪ್ರಕರಣ ನಡೆದಿದೆ. ಆದರೆ ದೂರು ನೀಡಲು ಹೋದವರಿಂದ ಹೊಸ ಬಡಾವಣೆ ಪೊಲೀಸರು ಕನಿಷ್ಠ 10 ಪ್ರಕರಣವನ್ನೂ ದಾಖಲಿಸಿಕೊಂಡಿಲ್ಲ.ದೂರು ನೀಡಲು ಠಾಣೆಗೆ ಹೋದರೆ, `ನಿಮ್ಮ ಮನೆಯಲ್ಲಿ ಕಳುವಾಗಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಸುಮ್ಮನೆ ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ. ಯಾವತ್ತಾದರೂ ಕಳ್ಳರು ಸಿಕ್ಕರೆ, ಅವರ ಬಳಿ ನಿಮ್ಮ ವಸ್ತು ಪತ್ತೆಯಾದರೆ ತಿಳಿಸುತ್ತೇವೆ~ ಎಂದು ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ನಿರ್ಲಕ್ಷ್ಯದಿಂದ ಉತ್ತರಿಸುತ್ತಾರೆ ಎಂದು ನಾಗರಿಕರು ಆರೋಪಿಸುತ್ತಾರೆ.ಗುರು ಲೇಔಟ್ ಗಣಪತಿ ದೇಗುಲ ಮುಂಭಾಗದ ಮನೆಯಲ್ಲಿರುವ ಶಿಕ್ಷಕರ ಮನೆಯಿಂದ ರೂ. 13 ಸಾವಿರ ಕಳುವಾಗಿತ್ತು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು `ಹೇಗೂ ಕಳೆದು ಹೋದ ದುಡ್ಡು ಸಿಗಲ್ಲ, ದೂರು ಕೊಟ್ಟು ಸಮಯ ಯಾಕೆ ಹಾಳುಮಾಡ್ತೀರಿ?~ ಎಂದು ನಮ್ಮನ್ನೇ ದಬಾಯಿಸಿದರು ಎಂದು ಸಹಾಯಕತೆ ವ್ಯಕ್ತಪಡಿಸುತ್ತಾರೆ.ಇತ್ತೀಚೆಗೆ ಬಿಇಡಿ ಪದವಿ ಮುಗಿಸಿರುವ ನಿರುದ್ಯೋಗಿ ಶಿವಕುಮಾರ ಹೊಟ್ಟೆಪಾಡಿಗಾಗಿ ಫೋಟೋಗ್ರಫಿ ಪ್ರಾರಂಭಿಸಿದ್ದರು. ಅವರಿವರ ಬಳಿ ಸಾಲ ಮಾಡಿ ಖರೀದಿಸಿದ್ದ ರೂ. 23 ಸಾವಿರ ಬೆಲೆ ಬಾಳುವ ಡಿಜಿಟಲ್ ಕ್ಯಾಮೆರಾ ಕಳುವಾಗಿದೆ. ಒಂದು ತಿಂಗಳ ಹಿಂದೆಯೇ ದೂರು ದಾಖಲಾಗಿದೆ. ಕೇವಲ 100 ಅಡಿ ಸುತ್ತಳತೆಯ ಮನೆಗಳಲ್ಲಿ ಪದೇ ಪದೆ ಕ್ಯಾಮೆರಾ, ನಗದು, ನೀರೆತ್ತುವ ಮೋಟರ್ ಕಳವಾಗುತ್ತಿದೆ. ಇನ್ನು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಟನ್‌ಗಟ್ಟಲೆ ಕಬ್ಬಿಣ, ಸೋಲಾರ್ ಯಂತ್ರ ಕಳುವಾಗಿದೆ. ಆದರೆ ಒಂದು ಪ್ರಕರಣದಲ್ಲೂ ಆರೋಪಿಗಳು ಸಿಕ್ಕಿಲ್ಲ.ಗಸ್ತು ವೈಫಲ್ಯ: ಕುವೆಂಪುನಗರ ಬಡಾವಣೆಯಲ್ಲಿ ಪೊಲೀಸರು ಸರಿಯಾಗಿ ಗಸ್ತು ತಿರುಗುತ್ತಿಲ್ಲ ಎನ್ನುವುದು ನಾಗರಿಕರ ಹಳೆಯ ದೂರು. ರಾತ್ರಿ 11ಕ್ಕೆ ಸೀಟಿ ಊದುವ ಪೊಲೀಸರು ಮತ್ತೆ ಮರುದಿನ ರಾತ್ರಿ 11ಕ್ಕೆ ಪ್ರತ್ಯಕ್ಷವಾಗುತ್ತಾರೆ. ಬಹುತೇಕ ಕಳವು ಪ್ರಕರಣಗಳು ನಸುಕಿನ 3ರಿಂದ 6 ಗಂಟೆ ವೇಳೆಯಲ್ಲಿ ನಡೆಯುತ್ತಿವೆ ಎಂದು ಗೊತ್ತಿದ್ದರೂ ಪೊಲೀಸರು ಗಸ್ತು ಹೆಚ್ಚಿಸಿಲ್ಲ ಎಂದು 3ನೇ ಬ್ಲಾಕ್ ನಿವಾಸಿ ರಾಜೇಶ್ ದೂರುತ್ತಾರೆ.

ಕ್ರಮ ಶೂನ್ಯ: ಬಡಾವಣೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕೊಟ್ಟರೂ ಪೊಲೀಸರು ಯಾವುದೇ ಕ್ರಮ ಜರುಗಿಸುವುದಿಲ್ಲ.`ನಿಮ್ಮ ಮಾತು ಕೇಳಿ ನಾವು ಕೆಲ್ಸ ಮಾಡೋಕೆ ಆಗುತ್ತೇನ್ರೀ?~ ಎಂದು ನಮ್ಮನ್ನೇ ಗದರಿಸುತ್ತಾರೆ. ಮಾಹಿತಿ ನೀಡಿದಾಗಲೇ ಶಂಕಿತ ವ್ಯಕ್ತಿಗಳ ಮೇಲೆ ಕ್ರಮ ಜರುಗಿಸಿದ್ದರೆ ಇಷ್ಟು ಕಳ್ಳತನ ನಡೆಯುತ್ತಿರಲಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.