ಶುಕ್ರವಾರ, ಏಪ್ರಿಲ್ 16, 2021
20 °C

ಕುಷ್ಟಗಿ: ಅಭಿವೃದ್ಧಿ ಅಧಿಕಾರಿಗಳಿಂದ ಬ್ಲಾಕ್‌ಮೇಲ್ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ:  ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕಾಗಿರುವ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ, ಹಳ್ಳಿಗಳಿಗೆ ಭೇಟಿ ನೀಡುವುದಿಲ್ಲ, ಚುನಾಯಿತ ಪ್ರತಿನಿಧಿಗಳನ್ನು ಲೆಕ್ಕಕ್ಕೆ ತೆಗೆದು ಕೊಳ್ಳುವುದಿಲ್ಲ, ಹೆಚ್ಚಿಗೆ ಕೇಳಿದರೆ ಯಾರೋ ಒಬ್ಬ ಪಿಡಿಒ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಹೇಳಿ ಸದಸ್ಯರನ್ನೇ ಬ್ಲಾಕ್‌ಮೇಲ್ ಮಾಡುತ್ತಿರುವ ಪಿಡಿಒಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ ಎಂದು ಸದಸ್ಯರು ಇ.ಒಗೆ ತಾಕೀತು ಮಾಡಿದರು.ಸೋಮವಾರ ನಡೆದ ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ಪರಶುರಾಮಪ್ಪ ನಂದ್ಯಾಳ ಪಿಡಿಒಗಳು ತಾ.ಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರೆ ಇತರೆ ಸದಸ್ಯರೂ ದನಿಗೂಡಿಸಿದರು.ಇ.ಒ ಅಳಲು: ಈ ಸಂದರ್ಭದಲ್ಲಿ ಸ್ವತಃ ಅಳಲು ತೋಡಿಕೊಂಡ ಇ.ಒ ಜಯಪ್ಪ, ಸಂಜೆಯಾದರೆ ಎಲ್ಲರ ಫೋನ್ ಸ್ವಿಚ್ಡ್‌ಆಫ್ ಆಗುತ್ತವೆ ಪಿಡಿಒಗಳಿಂದ ಕೆಲಸ ಹೇಗೆ ಮಾಡಿಸಿಕೊಳ್ಳಬೇಕೆಂಬುದೇ ತಿಳಿಯುತ್ತಿಲ್ಲ ಎಂದರು.ಇನ್ನು ಮುಂದೆ ತಾವು ಅಶಿಸ್ತು ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವುದನ್ನು ಸಹಿಸಿಕೊಳ್ಳುವುದಿಲ್ಲ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಸಭೆಗೆ ಭರವಸೆ ನೀಡಿದರು.2012-13ನೇ ವರ್ಷದ ತಾ.ಪಂ ಕ್ರಿಯಾಯೋಜನೆಗೆ ಅನುಮತಿ ಕೇಳಿದಾಗ, ಪಟ್ಟಿಯನ್ನು ಸದಸ್ಯರಿಗೆ ಒಂದು ವಾರ ಮೊದಲೇ ನೀಡಬೇಕಿತ್ತು, ಆದರೆ ಏಕಾಏಕಿ ಸಾಮಾನ್ಯ ಸಭೆ ಅನುಮೋದನೆ ನೀಡಿದ್ದೀರಿ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ವರ್ಷದಿಂದಲೂ ಅಧಿಕಾರಿಗಳು ಹಳೆಯ ಕೆಲಸ ಕಾಮಗಾರಿಗಳ ಮಾಹಿತಿಯನ್ನೇ ನೀಡುತ್ತಿದ್ದಾರೆ, ಹೊಸದೇನೂ ಇಲ್ಲ, ಅದನ್ನೇ ನೋಡಿ ನೋಡಿ ಸಾಕಾಗಿದೆ, ಬಿಡುಗಡೆಯಾಗಿರುವ ಮತ್ತು ಖರ್ಚಾಗಿರುವ ಅನುದಾನ ಹಾಗೂ ಅನುಷ್ಟಾನಕ್ಕೆ ಸಂಬಂಧಿಸಿದ ವಿವರಗಳನ್ನು ಲಿಖತ ರೂಪದಲ್ಲಿ ನೀಡಿ ಎಂದು ಸದಸ್ಯೆ ಸುವರ್ಣ ಕುಂಬಾರ ಅಧಿಕಾರಿಗಳನ್ನು ಒತ್ತಾಯಿಸಿದರು.ಆಂಗ್ಲ ಮಾಹಿತಿ: ಪಂ.ರಾ ಇಲಾಖೆಗೆ ಸೇರಿದ ಕೆಲ ಪ್ರಗತಿವರದಿ ಆಂಗ್ಲ ಭಾಷೆಯಲ್ಲಿ ಇದ್ದುದಕ್ಕೆ ಆಕ್ಷೇಪಿಸಿದ ಉಪಾಧ್ಯಕ್ಷೆ ಯಲ್ಲಮ್ಮ ಭೋವಿ, ವೀರೇಶ ಗುರಿಕಾರ, ಸಿದ್ದಪ್ಪ ಆವಿನ, ಶರಣು ತಳ್ಳಿಕೇರಿ, ಪರಶುರಾಮಪ್ಪ ಮೊದಲಾದವರು, ಬಹುತೇಕ ಸದಸ್ಯರು ಅನಕ್ಷರಸ್ಥರಿದ್ದಾರೆ, ಹೆಚ್ಚಿನವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ ಹೀಗಿದ್ದರೂ ಆಂಗ್ಲಭಾಷೆಯಲ್ಲಿ ವರದಿ ನೀಡಿ ಕಣ್ಣಿಗೆ ಮಣ್ಣೆರಚುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.ಈ ಸಂದರ್ಭದಲ್ಲಿ ಅಧಿಕಾರಿಗಳ ರಕ್ಷಣೆಗೆ ಮುಂದಾದ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಪೊಲೀಸಪಾಟೀಲ, `ಎಲ್ಲಾರೂ ಹೊಸಬ್ರು ಬಂದಾರ ಸ್ವಲ್ಪ ಕಾಲಾವಕಾಶ ಕೊಡ್ರಿ~ ಎಂದು ಆಕ್ಷೇಪವೆತ್ತಿದ ಸದಸ್ಯರಲ್ಲಿ ಪದೇಪದೇ ಮನವಿ ಮಾಡಿಕೊಳ್ಳುತ್ತಿದ್ದುದು ಕಂಡುಬಂದಿತು. ಮುಂದಿನ ಸಭೆಯಲ್ಲಿ ಕನ್ನಡದಲ್ಲೇ ವರದಿ ನೀಡುವಂತೆ ಕಾರ್ಯನಿರ್ವಹಣಾಧಿಕಾರಿ ಪಂ.ರಾ ಎ.ಇ.ಇ ಅವರಿಗೆ ಸೂಚಿಸಿದರು.ಚಕಮಕಿ: ಕುಡಿಯುವ ನೀರು, ವಿದ್ಯುತ್ ಸಂಪರ್ಕದ ವಿಷಯದಲ್ಲಿ ಜೆಸ್ಕಾಂ ಮತ್ತು ಪಂ.ರಾ ಇಲಾಖೆ ಎಂಜಿನಿಯರ್‌ಗಳ ಮಧ್ಯೆ ಮಾತಿನ ಚಕಮಕಿ ನಡೆದಾಗ ಸಮನ್ವಯದಿಂದ ಕೆಲಸ ನಿರ್ವಹಿಸಿ ಜನರ ತೊಂದರೆಗೆ ಸ್ಪಂದಿಸುವುದು ಅವಶ್ಯ ಎಂದು ಇ.ಒ ಮತ್ತು ಸದಸ್ಯರು ಎಂಜಿನಿಯರ್‌ಗಳಿಗೆ ತಿಳಿ ಹೇಳಬೇಕಾಯಿತು. ಕುಡಿಯುವ ನೀರು ಮತ್ತು ಕೊಳವೆಬಾವಿಗಳು ನೀರುಗಂಟಿಗಳ ಬೇಜವಾಬ್ದಾರಿಯಿಂದ ಹಾಳಾಗುತ್ತಿದ್ದು ಅವರ ಮೇಲೆ ಕ್ರಮ ಜರುಗಿಸುವಂತೆ ಪಂ.ರಾ ಎಂಜಿನಿಯರ್ ಹೇಳಿದರು.ಎಲ್ಲಿದೆ ಲೆಕ್ಕ?: ತಾ.ಪಂ ಕಚೇರಿಯಲ್ಲೇ ಬಂದವರಿಗೆ ಕುಡಿಯಲು ನೀರಿಲ್ಲ, ಕೂಡ್ರಲು ಕುರ್ಚಿ ಇಲ್ಲ, ಸಾಕಷ್ಟು ವ್ಯಾಪಾರ ಮಳಿಗೆಗಳಿವೆ, ಆದಾಯ, ಖರ್ಚುವೆಚ್ಚಗಳ ಲೆಕ್ಕವನ್ನೇ ಕೊಡುತ್ತಿಲ್ಲ. ಮೊದಲು ನಿಮ್ಮ ಮನೆ ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ಆಕ್ರೋಶ    ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.