ಶುಕ್ರವಾರ, ಮೇ 14, 2021
32 °C

ಕೃಷಿ ಅಡಮಾನ ಸಾಲ ಪಡೆಯಲು ರೈತರ ನಿರಾಸಕ್ತಿ!

ಪ್ರಜಾವಾಣಿ ವಾರ್ತೆ/ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ: ರೈತರು ಕೊಯಿಲು ಸಂದರ್ಭದಲ್ಲಿ ಸಿಕ್ಕಷ್ಟು ಬೆಲೆಗೆ ಕೃಷಿ ಉತ್ಪನ್ನ ಮಾರಾಟ ಮಾಡಿ ಹಾನಿ ಅನುಭವಿಸುವುದನ್ನು ತಪ್ಪಿಸಲು ಮತ್ತು ಅವರ ತಕ್ಷಣದ ಹಣಕಾಸಿನ ಅವಶ್ಯಕತೆ ಈಡೇರಿಸಲು ಸರ್ಕಾರ `ಕೃಷಿ ಉತ್ಪನ್ನ ಅಡಮಾನ ಸಾಲ ಯೋಜನೆ' ಜಾರಿಗೆ ತಂದಿದೆ. ಈ ಯೋಜನೆ ಆರಂಭಗೊಂಡು ಆರು ವರ್ಷವಾದರೂ ಜಿಲ್ಲೆಯ ಒಬ್ಬ ರೈತರೂ ಇದರ ಪ್ರಯೋಜನ ಪಡೆದಿಲ್ಲ!ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ನಿಗದಿಪಡಿಸಿದ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟು ರಸೀತಿ ತಂದರೆ ಆ ಉತ್ಪನ್ನದ ಒಟ್ಟು ಮೌಲ್ಯದ ಶೇ 60ರಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ. ಈ ಹಣಕ್ಕೆ 90 ದಿನಗಳ ವರೆಗೆ ಯಾವುದೇ ಬಡ್ಡಿ ಆಕರಿಸುವುದಿಲ್ಲ. ರೈತರಿಗೆ ವರದಾನದಂತಿರುವ ಈ ಯೋಜನೆ ವಿಜಾಪುರ ಸೇರಿದಂತೆ ರಾಜ್ಯದ ಬಹುತೇಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಜಾರಿಯಲ್ಲಿದ್ದರೂ ರೈತರು ಅದನ್ನು ಪಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.ಚಿಕ್ಕಪುಟ್ಟ ಸಾಲ, ಇತರ ಹಣಕಾಸಿನ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಲು ರೈತರು ಸುಗ್ಗಿಯ ಸಮಯದಲ್ಲಿ ಆತುರದಿಂದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದು. ಆ ಸಂದರ್ಭದಲ್ಲಿ ಪೂರೈಕೆ ಹೆಚ್ಚಿ, ಬೆಲೆ ಕಡಿಮೆಯಾಗುವುದು ಸಾಮಾನ್ಯ. ಈ ಸಮಸ್ಯೆ ನಿವಾರಣೆಗಾಗಿಯೇ ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳಿ ಈ ಯೋಜನೆ ರೂಪಿಸಿದೆ.ಈ ಯೋಜನೆ ಅನ್ವಯ ಎಪಿಎಂಸಿಗಳಲ್ಲಿ ಪ್ರತ್ಯೇಕ ಆವರ್ತ ನಿಧಿ ಸ್ಥಾಪಿಸಲಾಗಿದೆ. ಆ ಎಪಿಎಂಸಿಯ ಒಟ್ಟು ಆದಾಯದಲ್ಲಿ ಶೇ 10ರಷ್ಟನ್ನು ಈ ಆವರ್ತ ನಿಧಿಗೆ ವರ್ಗಾಯಿಸಿ, ಆ ಹಣನ್ನು ಅಡಮಾನ ಸಾಲವಾಗಿ ನೀಡಬೇಕು ಎಂಬುದು ನಿಯಮ.ಎಪಿಎಂಸಿ, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳು ಅಥವಾ ರಾಜ್ಯ-ಕೇಂದ್ರ ಸರ್ಕಾರಗಳ ಉಗ್ರಾಣ ನಿಗಮಗಳ ಗೋದಾಮುಗಳಲ್ಲಿ ರೈತರು ತಮ್ಮ ಕೃಷಿ ಉತ್ಪನ್ನವನ್ನು ದಾಸ್ತಾನು ಮಾಡಬೇಕು. ಆ ಕುರಿತು ರಸೀತಿ ತಂದರೆ ಎಪಿಎಂಸಿಗಳು ಅವರಿಗೆ ಮುಂಗಡ ಸಾಲ ನೀಡುತ್ತವೆ. ಒಬ್ಬ ರೈತರಿಗೆ ್ಙ 2 ಲಕ್ಷದ ವರೆಗೆ ಸಾಲ ನೀಡಲು ಅವಕಾಶವಿದೆ. ಹೀಗೆ ನೀಡಿದ ಸಾಲಕ್ಕೆ 90 ದಿನಗಳವರೆಗೆ ಯಾವುದೇ ಬಡ್ಡಿ ಆಕರಿಸುವುದಿಲ್ಲ. ಆ ನಂತರದ ಅವಧಿಗೆ ಸಾಲದ ಮೊತ್ತಕ್ಕೆ ಅನುಗುಣವಾಗಿ ಶೇ 4ರಿಂದ ಶೇ 10ರ ವರೆಗೆ ಬಡ್ಡಿ ಆಕರಿಸಲಾಗುತ್ತದೆ. ಈ ಸಾಲ ಮರುಪಾವತಿಗೆ 180 ದಿನ (ಆರು ತಿಂಗಳು) ಕಾಲಾವಕಾಶ ಇರುತ್ತದೆ. ಹೀಗೆ ಸಾಲ ಪಡೆದು, ಮಾರುಕಟ್ಟೆಯಲ್ಲಿ ಬೆಲೆ ಬಂದಾಗ ರೈತರು ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಿ ಲಾಭ ಮಾಡಿಕೊಳ್ಳಬೇಕು ಎಂಬುದು ಈ ಯೋಜನೆಯ ಉದ್ದೇಶ.`ವಿಜಾಪುರ ಜಿಲ್ಲೆಯಲ್ಲಿ ತೊಗರಿ, ಕಡಲೆ, ಮೆಕ್ಕೆಜೋಳ, ಬಿಳಿಜೋಳ, ಸೂರ್ಯಕಾಂತಿ ಉತ್ಪನ್ನಗಳ ಮೇಲೆ ಈ ಸಾಲ ಪಡೆಯಲು ಅವಕಾಶವಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಇದ್ದ ಈ ಯೋಜನೆಯನ್ನು  ಎಲ್ಲ ವರ್ಗದ ರೈತರಿಗೂ ವಿಸ್ತರಿಸಿ ಸಾಕಷ್ಟು ಪ್ರಚಾರ-ತಿಳಿವಳಿಕೆ ನೀಡಿದ್ದೇವೆ. ಆದರೆ, ನಮ್ಮಲ್ಲಿ ಈ ವರೆಗೆ ಯಾವೊಬ್ಬ ರೈತರೂ ಈ ಸಾಲ ಪಡೆದಿಲ್ಲ' ಎನ್ನುತ್ತಾರೆ ಇಲ್ಲಿಯ ಎಪಿಎಂಸಿ ಕಾರ್ಯದರ್ಶಿ ಆರ್.ಎಂ. ಕುಮಾರಸ್ವಾಮಿ.`ಯೋಜನೆ ಜಾರಿಯಾದ ಆರಂಭದ ಎರಡು ತಿಂಗಳು ನಮ್ಮ ಸಮಿತಿ ಆದಾಯದ ಶೇ.10ರಷ್ಟು ಹಣ ್ಙ 9 ಲಕ್ಷವನ್ನು ಈ ನಿಧಿಗೆ ವರ್ಗಾಯಿಸಿದೆವು. ಒಬ್ಬ ರೈತರೂ ಸಾಲ ಪಡೆಯದ ಕಾರಣ ನಿಧಿ ವರ್ಗಾವಣೆ ನಿಲ್ಲಿಸಿದ್ದೇವೆ. ಸರ್ಕಾರದ ಅನುಮತಿ ಇಲ್ಲದೆ ಈ ನಿಧಿಯನ್ನು ಅನ್ಯ ಕಾರ್ಯಕ್ಕೆ ಬಳಸಲು ಅವಕಾಶ ಇಲ್ಲ. ಕೆಲವೊಂದು ಎಪಿಎಂಸಿಗಳಲ್ಲಿ ಕೋಟಿಗಟ್ಟಲೆ ಈ ನಿಧಿ ಬಳಕೆಯಾಗದೆ ಉಳಿದಿದೆ' ಎಂದು ಅವರು ಹೇಳಿದರು.`ರೈತರಲ್ಲಿ ಜಾಗೃತಿ ಮತ್ತು ಆರ್ಥಿಕ ಸಬಲತೆ ಇಲ್ಲದಿರುವುದು. ಅವರು ಇನ್ನೂ ಕಮಿಷನ್ ಏಜೆಂಟರ ಕಪಿಮುಷ್ಟಿಯಲ್ಲಿರುವುದು. ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆಯುವ ಉತ್ಪನ್ನವೂ ಅಲ್ಪಸ್ವಲ್ಪ. ಸಾಲ ಮಾಡಿಕೊಂಡಿರುವ ಆ ರೈತರು ತಮ್ಮ ಹೊಲಗಳಲ್ಲಿಯೇ ವರ್ತಕರಿಗೆ ಮಾರಾಟ ಮಾಡಿ ಬಿಡುತ್ತಾರೆ. ಈ ಎಲ್ಲ ಸಂಗತಿಗಳು ಕೃಷಿ ಉತ್ಪನ್ನ ಅಡಮಾನ ಸಾಲ ಪಡೆಯದಿರುವುದಕ್ಕೆ ಕಾರಣ' ಎನ್ನುತ್ತಾರೆ ಕೃಷಿ ಪರಿಣಿತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.