ಕೃಷ್ಣಮೃಗದಿಂದ ಪೈರಿಗೆ ಕುತ್ತು: ರೈತರ ಅಳಲು

7
ರೋಣ, ಯಲಬುರ್ಗಾದಲ್ಲಿ ಧಾಮ ಸ್ಥಾಪನೆಗೆ ಆಗ್ರಹ

ಕೃಷ್ಣಮೃಗದಿಂದ ಪೈರಿಗೆ ಕುತ್ತು: ರೈತರ ಅಳಲು

Published:
Updated:
ಕೃಷ್ಣಮೃಗದಿಂದ ಪೈರಿಗೆ ಕುತ್ತು: ರೈತರ ಅಳಲು

ಗಜೇಂದ್ರಗಡ: ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೃಷಿ ಜಮೀನಿನಲ್ಲಿ ಕೃಷ್ಣಮೃಗಗಳು ದಾಳಿ ನಡೆಸಿ ಬೆಳೆದ ಪೈರಿಗೆ ಕುತ್ತು ಉಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕೂಡಲೇ ರೋಣ ಮತ್ತು ಯಲಬುರ್ಗಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಮೃಗ ಧಾಮವನ್ನು ಆರಂಭಿಸಬೇಕು ಎಂಬುದು ಈ ಭಾಗದ ರೈತರ ಒಕ್ಕೊರಲ ಬೇಡಿಕೆಯಾಗಿದೆ.ಗದಗ ಮತ್ತು ಕೊಪ್ಪಳ ಜಿಲ್ಲಾಡಳಿತಗಳು 2006ರಲ್ಲಿಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಕೃಷ್ಣಮೃಗ ಧಾಮವನ್ನು ನಿರ್ಮಿಸಲು ಕೋರಿದ್ದವು. ಆದರೆ ಈ ಪ್ರಸ್ತಾವ ಇದುವರೆಗೆ ಕಾರ್ಯಗತವಾಗ ಹಿನ್ನೆಲೆಯಲ್ಲಿ ತಾಲ್ಲೂಕಿನ ಕೃಷ್ಣಮೃಗಗಳಿಗೆ ಕೃಷಿಕರ ಜಮೀನುಗಳೇ `ಕೃಷ್ಣಮೃಗ ಧಾಮ'ವಾಗಿ ಪರಿಣಮಿಸಿದೆ.ಜಿಲ್ಲೆಯಲ್ಲಿ ರೋಣ ತಾಲ್ಲೂಕು ಅತಿ ಹೆಚ್ಚು ಕೃಷ್ಣಮೃಗಗಳನ್ನು ಹೊಂದಿರುವ ಪ್ರದೇಶ ಎಂಬ ಹೆಗ್ಗಳಿಕೆ ಹೊಂದಿದೆ. ತಾಲ್ಲೂಕಿನ ಕೆಲ ಎರಿ (ಕಪ್ಪು ಮಣ್ಣಿನ) ಪ್ರದೇಶದ ಜಮೀನುಗಳಲ್ಲಿ ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ಕೃಷ್ಣಮೃಗಗಳು ಸಾಮೂಹಿಕವಾಗಿ ದಾಂಗುಡಿ ಇಟ್ಟು ಜಮೀನುಗಳಲ್ಲಿನ ಬೆಳೆಗಳನ್ನು ಬೇರು ಸಹಿತ ತಿಂದು ಹಾಕುತ್ತಿವೆ. ಪ್ರಸಕ್ತ ವರ್ಷವೂ ಕೃಷ್ಣಮೃಗ ಹಾವಳಿ ವ್ಯಾಪಕವಾಗಿದ್ದು, ಹಾವಳಿಯಿಂದ ಬೆಳೆ ಸಂರಕ್ಷಣೆ ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ.1,20,235 ಹೆಕ್ಟೇರ್ ಸಾಗುವಳಿ ಕ್ಷೇತ್ರವನ್ನು ಹೊಂದಿರುವ ರೋಣ ತಾಲ್ಲೂಕಿನಲ್ಲಿ 30,200 ಹೆಕ್ಟೇರ್ ಮಸಾರಿ (ಕೆಂಪು ಮಿಶ್ರಿತ ಜವಗು) ಪ್ರದೇಶ, 56,035 ಹೆಕ್ಟೇರ್ ಎರಿ (ಕಪ್ಪು ಮಣ್ಣಿನ) ಪ್ರದೇಶವಿದೆ. ಎರಿ ಪ್ರದೇಶವನ್ನೇ ಅಡಗುದಾಣವನ್ನಾಗಿ ಮಾಡಿಕೊಂಡಿರುವ ಕೃಷ್ಣಮೃಗಗಳು ಬೆಳೆ ತಿನ್ನುತ್ತಲೇ ಬದುಕುತ್ತಿವೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಈ ಭಾಗದಲ್ಲಿ 2,256 ಕೃಷ್ಣಮೃಗಗಳಿವೆ. 50ರಿಂದ 60 ಕೃಷ್ಣಮೃಗಗಳ ತಂಡ ಬೆಳೆಯನ್ನು ಬೇರು ಸಹಿತ ತಿಂದು ಹಾಕುತ್ತಿರುವುದು ಕೃಷಿಕರಿಗೆ ಮರ್ಮಾಘಾತವನ್ನುಂಟು ಮಾಡಿದೆ.ತಾಲ್ಲೂಕಿನ ಸೂಡಿ, ಕಳಕಾಪುರ, ನಿಡಗುಂದಿ, ಇಟಗಿ, ಹಿರೇ ಅಳಗುಂಡಿ, ಮುಗಳಿ, ನಿಡಗುಂದಿ, ಜಕ್ಕಲಿ, ಮಾರನಬಸರಿ ಮುಂತಾದ ಗ್ರಾಮಗಳಲ್ಲಿ ಚಿಕ್ಕ ಹಿಡುವಳಿದಾರರ ಸಂಖ್ಯೆಯೇ ಅಧಿಕ. ಎಕರೆ, ಎರಡೆಕರೆ ಜಮೀನುಗಳನ್ನು ಹೊಂದಿರುವ ಕೃಷಿಕರು ಸಾಲ-ಶೂಲ ಮಾಡಿ ಬೆಳೆದ ಬೆಳೆಗಳು ಕೃಷ್ಣಮೃಗ ಹಾವಳಿಯಿಂದ ಕೃಷಿಕರ ಕೈಸೇರುತ್ತಿಲ್ಲ.ಮುಂಗಾರು, ಹಿಂಗಾರು ಎನ್ನದೇ ವರ್ಷದ ಎಲ್ಲ ಕಾಲಕ್ಕೂ ಕೃಷ್ಣಮೃಗಗಳು ಬೆಳೆಗಳ ಮೇಲೆ ದಾಳಿ ಮಾಡುತ್ತವೆ. ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಬೆಳಿಗ್ಗೆಯಿಂದ ಸಂಜೆಯವರೆಗೂ ಜಮೀನುಗಳಲ್ಲಿ ಠಿಕಾಣಿ ಹೂಡುತ್ತಾರೆ. ಸೂರ್ಯ ತೆರೆಮರೆಗೆ ಸರಿಯುತ್ತಿದ್ದಂತೆ ಕೃಷಿಕರು ಮನೆಗಳತ್ತ ಧಾವಿಸುತ್ತಾರೆ. ಆದರೆ ರಾತ್ರಿ ಜಮೀನುಗಳಿಗೆ ನುಗ್ಗುವ ಕೃಷ್ಣಮೃಗಗಳು ದಾಳಿ ಇಡುತ್ತಿವೆ.`ಹತ್ ವರ್ಷದಿಂದ ಕೃಷ್ಣಮೃಗ ಕಾಟಕ್ಕೆ ವ್ಯವಸಾಯ ಸಾಕು ಅನಿಸಿಬಿಟ್ಟೈತಿ. ಒಂದ್ ವರ್ಷ ಲಾಭ ಬಂದಿಲ್ಲ, ಕೃಷ್ಣಮೃಗ ಸಲವಾಗಿ ಹೊಲಾನ್ ಬ್ಯಾಸ್ರಾಗ್ಯಾವ್ ನೋಡ್ರಿ... ಎಂದು ಕೃಷಿಕರ ಕಳಕಪ್ಪ ಬನ್ನಿಕಂಠಿ ಕಣ್ಣೀರಿಟ್ಟರು.ಕೃಷಿ ಇಲಾಖೆಗೆ ಪತ್ರ

ಕೃಷ್ಣಮೃಗ ಹಾವಳಿಗೆ ಸಂಬಂಧಿಸಿದ ನಷ್ಟ ಸಮೀಕ್ಷೆ ನಡೆಸಲು ಕೃಷಿ ಇಲಾಖೆಗೆ ಪತ್ರ ಬರೆಯಲಾಗಿದೆ. ನಷ್ಟಕ್ಕೆ ಒಳಗಾದ ಕೃಷಿಕರು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು.

ಎಸ್.ವೈ. ಬೀಳಗಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿಸಮೀಕ್ಷೆ ಸಾಧ್ಯವಿಲ್ಲ


ಕೃಷ್ಣಮೃಗ ಹಾವಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಬೇಕು. ಅದನ್ನು ಕೃಷಿ ಇಲಾಖೆ ನಡೆಸಲು ಸಾಧ್ಯವಿಲ್ಲ. ಬೆಳೆಗೆ ಸಂಬಂಧಿಸಿದ ನಷ್ಟವನ್ನು ಮಾತ್ರ ಕೃಷಿ ಇಲಾಖೆ ಅಂದಾಜಿಸಬಹುದು.

ಎಸ್.ಎ.ಸೂಡಿಶೆಟ್ಟರ್, ಸಹಾಯಕ ಕೃಷಿ ನಿರ್ದೇಶಕರುಕೃಷ್ಣಮೃಗ ಧಾಮ ಸ್ಥಾಪಿಸಿ

ತಾಲ್ಲೂಕಿನ ಕೃಷಿಕರಿಗೆ ಕೃಷ್ಣಮೃಗ ಹಾವಳಿಯಿಂದ ಉಂಟಾದ ನಷ್ಟವನ್ನು ಸರ್ಕಾರ ನೀಡಬೇಕು. ಜಿಂಕೆ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೃಷ್ಣಮೃಗ ಧಾಮ ಸ್ಥಾಪಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು.

ಕೂಡ್ಲೆಪ್ಪ ಗುಡಿಮನಿ, ಅಧ್ಯಕ್ಷರು, ಜಿಲ್ಲಾ ರೈತ ಸಂಘಕೃಷಿ ಹಾಗೂ ಅರಣ್ಯ ಇಲಾಖೆಯ ಅಂಕಿ- ಅಂಶಗಳ ಪ್ರಕಾರ ಕೃಷ್ಣಮೃಗಗಳ ಹಾವಳಿಯಿಂದ ನಷ್ಟಕ್ಕೀಡಾದ ಬೆಳೆ ವಿವರ ಇಂತಿದೆ

2001-02  12,235 ಹೆಕ್ಟೇರ್ ಮುಂಗಾರು,    9,245 ಹೆಕ್ಟೇರ್ ಹಿಂಗಾರು

2002-03  13,415 ಹೆಕ್ಟೇರ್ ಮುಂಗಾರು,    9,586 ಹೆಕ್ಟೇರ್ ಹಿಂಗಾರು

2003-04  14,895 ಹೆಕ್ಟೇರ್ ಮುಂಗಾರು,  12,548 ಹೆಕ್ಟೇರ್ ಹಿಂಗಾರು,

2004-05  15,478 ಹೆಕ್ಟೇರ್ ಮುಂಗಾರು,  14,587 ಹೆಕ್ಟೇರ್ ಹಿಂಗಾರು

2005-06  14,547 ಹೆಕ್ಟೇರ್ ಮುಂಗಾರು,  15,368 ಹೆಕ್ಟೇರ್ ಹಿಂಗಾರು

2006-07  16,245 ಹೆಕ್ಟೇರ್ ಮುಂಗಾರು,  14,548 ಹೆಕ್ಟೇರ್ ಹಿಂಗಾರು

2007-08  16,457 ಹೆಕ್ಟೇರ್ ಮುಂಗಾರು,  15,478 ಹೆಕ್ಟೇರ್ ಹಿಂಗಾರು

2008-09  15,985 ಹೆಕ್ಟೇರ್ ಮುಂಗಾರು,  15,789 ಹೆಕ್ಟೇರ್ ಹಿಂಗಾರು

2009-10  17,475 ಹೆಕ್ಟೇರ್ ಮುಂಗಾರು,  14,963 ಹೆಕ್ಟೇರ್ ಹಿಂಗಾರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry