ಆಗಷ್ಟೇ ಹುಟ್ಟಿದ ಮಗುವಿನಂತೆ, ದಿನವೊಂದು ತನ್ನ ಮುಂಜಾವಿನ ಕಣ್ಣುಬಿಡುತ್ತಿರುವಾಗ ಕೃಷ್ಣಾ ತೀರದ ಆ ಬದಿಯ ರಸ್ತೆಯ ಮೇಲೆ ಸೈಕಲ್ಲೊಂದು ಚಲಿಸುತ್ತಿದೆ. ಆ ವ್ಯಕ್ತಿಯ ಆ ಸೈಕಲ್ ಪೆಡಲ್ ತುಳಿತದಲ್ಲಿ ಒಳಗಿನ ಎದೆ ಬಡಿತದ ಲಯವಿದೆ. ಆ ಲಯದ ಸಾವಧಾನ ನಮ್ಮ ನಿತ್ಯದ ಅವಸರವನ್ನು ನಾಚಿಸುತ್ತಿದೆ.

ಚಿಕ್ಕೋಡಿ ತಾಲ್ಲೂಕಿನ ಯಡೂರ, ಕಲ್ಲೋಳ ಗ್ರಾಮಗಳಲ್ಲಿ ಕೃಷ್ಣಾ ನದಿ ಸೃಷ್ಟಿಸಿರುವ ಸಣ್ಣ ಸಣ್ಣ ಮಡುಗಳ ರಚನೆಗಳಿವೆ. ಹರಿಯದೆ ಅಲ್ಲಲ್ಲಿ ನಿಂತಿರುವ ಕೃಷ್ಣೆಯ ಒಡಲಲ್ಲಿ, ಇದ್ದ ನೀರನ್ನೆಲ್ಲ ಕುಡಿದು, ನಿದ್ದೆ ತಿಳಿದು ಎದ್ದಂತೆ ಕಲ್ಲು ಬಂಡೆಗಳು ನಿಂತಿವೆ. ನೀರಿಗೆ ಕೊರೆಯಾದರೂ, ಬಂಡೆಗಳದೇ ಅಬ್ಬರವಾದರೂ, ಇಲ್ಲಿ ಉಲ್ಲಾಸ ಚಿಮ್ಮುತ್ತಿದೆ, ಒಳನದಿಯ ಜಲ ಕಾರಂಜಿಯಾಗಿ ಹೊಮ್ಮುವಂತೆ. ಯಾರಿಗೋ ಕಾದು ಕುಳಿತಿರುವ ಮೈನಾ, ಸಾವಿನಿಂದ ಮೈಲಿಗೆಯಾದ ಮನೆಯ ಬಟ್ಟೆಗಳನ್ನೆಲ್ಲ ಮಡಿಮಾಡಲು ಬಂದವರನ್ನು ಸಂತೈಸುತ್ತಿರುವ ಮಿಂಚುಳ್ಳಿ, ಕರಿಕಲ್ಲನ್ನು ಕಟೆದು ಜೀವ ತುಂಬಿದಂತಿರುವ ಬೆಸ್ತ, ನೂರಾರು ಮರಿಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಕೊಂಡಿ ಮುರಿದ ಕ್ಷಣವೇ ತನ್ನದೂ ಕುರುಹು ಉಳಿಯಲೆಂದು ಕುಡಿಗಳ ಹೊರಹಾಕಿದ ಬಲೆಗೆ ಬಿದ್ದ ಏಡಿ, ಇದೆಲ್ಲವೂ ನಮ್ಮದೇ ಎಂಬಂತೆ ತೇಲುತಿರುವ ಜೋಡಿಹಕ್ಕಿ... ಇಲ್ಲಿ ಎಲ್ಲವೂ ಎಲ್ಲರೊಂದಿಗೂ ಮಾತನಾಡುತ್ತಿವೆ, ತಮ್ಮದೇ ಭಾಷೆಯಲ್ಲಿ.

ಬರೆದು ಮುಗಿಸಲಾಗದ ಹಾಡಿದೆ ಇಲ್ಲಿ. ಬತ್ತಿದ ಹೊಳೆಯಾಗಿ, ಒಳನದಿಯಾಗಿ, ಆಕಾಶಗಂಗೆಯಾಗಿ ಎಲ್ಲವೂ ಇಂಪು, ಬಿಸಿಲೇರಿದಷ್ಟೂ ತಂಪು. ಎಲ್ಲೂ ಇಲ್ಲದ ಮೆಲುದನಿಯಲ್ಲಿ, ಕಂಡು ಕೇಳರಿಯದ ಲಯದಲ್ಲಿ, ಪ್ರತಿಕ್ಷಣ ಹೊಸದಾಗಿಯೇ ಶ್ರುತಿ ಹುಟ್ಟುತ್ತದೆ, ನಮ್ಮ ಸುತ್ತಮುತ್ತಲೇ.

ಕೃಷ್ಣಾ ತೀರದಲ್ಲಿ ಏನೆಲ್ಲಾ ಇದೆ, ಕಾಣುವ ಕಣ್ಣುಗಳು ಬೇಕಷ್ಟೇ. ಜಗದ ಬಹು ಸುಂದರ ಸತ್ಯಗಳೆಲ್ಲ ಹೀಗೆ ಸುತ್ತಮುತ್ತಲೇ ಸುಳಿಯುತ್ತಿರುತ್ತವೆ, ಪಿಸುಗುಡುತ್ತವೆ, ಮೌನವಾಗಿಯೂ ಇರುತ್ತವೆ. ನಮ್ಮ ಒಳಹೊರಗಿನ ಗದ್ದಲಗಳು ಯಾವುದನ್ನೂ ಲಕ್ಷಿಸಲು ಬಿಡುವುದಿಲ್ಲ. ಕೃಷ್ಣೆಯ ತೀರದಲ್ಲಿನ ಅಗಣಿತ ಚಿತ್ರಗಳ ಕಾಣುವಾಗ, ನಾವು ಕಾಣುವುದಕ್ಕಿಂತ ಹೆಚ್ಚು ಸುಂದರವಾಗಿ ಕ್ಯಾಮೆರಾ ಕಣ್ಣು ಕಾಣಿಸುತ್ತದೆ ಎನ್ನಿಸಿತು. ನಾವು ಕಾಣಲೇಬೇಕಾದ್ದನ್ನು ಕಾಣಿಸುತ್ತದೆ ಎಂಬುದು ಹೊಸ ಪಾಠ.

`ಏನನ್ನಾದರೂ ಯಾವಾಗಲೂ ಕುಡಿದಿರು' ಎಂದು ಬೋದಿಲೇರ್ ಹೇಳಿದ್ದರಲ್ಲಿ ಕಾವ್ಯ, ಮದಿರೆಯ ಜೊತೆಗೆ ಛಾಯಾಚಿತ್ರವನ್ನೂ ಸೇರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.