ಶುಕ್ರವಾರ, ಜೂನ್ 25, 2021
30 °C

ಕೆಂಪು ಕೋಟೆಗೆ ಲಗ್ಗೆ ಇಟ್ಟ 26ರ ಯುವ ನಾಯಕ!

ಸುರೇಶ್‌ ಎಡನಾಡು/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: 1969ರಲ್ಲಿ ಕಾಂಗ್ರೆಸ್ ಪಕ್ಷ  ಕಾಂಗ್ರೆಸ್­(ಆರ್‌) ಮತ್ತು ಕಾಂಗ್ರೆಸ್(ಒ) ಆಗಿ ವಿಭಜನೆಯಾಯಿತು. ಇದು ‘ಇಂದಿರಾ ರಾಜಕಾರಣ’ದ ಪರ್ವಕಾಲಕ್ಕೆ ನಾಂದಿ ಹಾಡಿತು. ಹೀಗಾಗಿ ಚುನಾವಣೆಗೆ ಇನ್ನೂ ಒಂದು ವರ್ಷ ಇರುವಾಗಲೇ 1970ರ ಡಿ.27ರಂದು ಇಂದಿರಾಗಾಂಧಿ  ಲೋಕಸಭೆಯನ್ನು ವಿಸರ್ಜಿಸಿದರು.1971ರ ಫೆಬ್ರವರಿ ತಿಂಗಳಲ್ಲಿ 5ನೇ ಲೋಕಸಭಾ ಚುನಾವಣೆ ನಡೆಯಿತು. ಕಾಂಗ್ರೆಸ್‌(ಒ), ಭಾರತೀಯ ಜನಸಂಘ, ಸ್ವತಂತ್ರ ಪಕ್ಷ, ಸಂಯುಕ್ತ ಸಮಾಜವಾದಿ ಪಕ್ಷ(ಎಸ್‌ಎಸ್‌ಪಿ) ‘ಮಹಾ­ಒಕ್ಕೂಟ’ವನ್ನು ರಚಿಸಿಕೊಂಡು ‘ಇಂದಿರಾ ಹಟಾವೋ’ ಎಂಬ ಘೋಷಣೆ ಮುಂದಿರಿಸಿ ಚುನಾವಣೆಗಿಳಿಯಿತು. ಆದರೆ ಇಂದಿರಾಗಾಂಧಿ ಆರ್ಥಿಕ ಮತ್ತು ಸಾಮಾಜಿಕ ಬದಲಾ­ವಣೆಗಳ ಯೋಜನೆಯನ್ನು ಮುಂದಿರಿಸಿ ‘ಗರೀಬಿ ಹಟಾವೋ’ ಎಂಬ ಘೋಷಣೆಯೊಂದಿಗೆ ಚುನಾವಣಾ ಅಖಾಡಕ್ಕಿಳಿದರು. ಇದು ಜನತೆಗೆ ಆಪ್ಯಾಯಮಾನ ಸಂಗತಿಯಾಗಿತ್ತು. ಲೋಕಸಭೆಯ 518 ಸ್ಥಾನಗಳಲ್ಲಿ ಅವರ ಪಕ್ಷ 352 ಸ್ಥಾನಗಳನ್ನು ಪಡೆಯಿತು. ಇಷ್ಟೊಂದು ಬಹುಮತ ನೆಹರೂ ಕೂಡಾ ಗಳಿಸಿರಲಿಲ್ಲ!ದೇಶದ ರಾಜಕೀಯ ಪ್ರಭೆ ಕೇರಳದಲ್ಲಿಯೂ ಪ್ರತಿಫಲನ­ಗೊಂಡಿತು. ಸಿಪಿಎಂ ಬಣದಲ್ಲಿದ್ದ ಮುಸ್ಲಿಂ ಲೀಗ್ ಮತ್ತು ಸಿಪಿಐ ಕಾಂಗ್ರೆಸ್‌ಗೆ ಬೆಂಬಲ ನೀಡಿತು. ಇಂದಿರಾಗಾಂಧಿ­ಯವರ ಪ್ರಭಾವ, ರಾಜ್ಯದ ಕಾಂಗ್ರೆಸ್ ಮುಖಂಡ ಕೆ.ಕರುಣಾಕರನ್‌ ಅವರ ನಾಯಕತ್ವ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಭದ್ರಕೋಟೆಯನ್ನು ಮುರಿಯಲು ಯುವ ನಾಯಕನನ್ನು ಅಭ್ಯರ್ಥಿಯಾಗಿ ಕಣಕ್ಕಿ­ಳಿಸಿತು. ಅವರೇ ರಾಮಚಂದ್ರನ್‌ ಕಡನ್ನಪ್ಪಳ್ಳಿ. ಕಣ್ಣೂರಿನಲ್ಲಿ ಹುಟ್ಟಿ ಪಯ್ಯನ್ನೂರಿನ ಕಡನ್ನಪಳ್ಳಿಯಲ್ಲಿ ಬೆಳೆದವರು. ಚುನಾವಣೆಗೆ ನಿಂತಿದ್ದಾಗ ಅವರಿಗೆ ಕೇವಲ 26 ವರ್ಷ!‘1971ರಲ್ಲಿ ನಾನು ತಿರುವನಂತಪುರದ ಲಾ ಅಕಾಡೆಮಿ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಕೆಎಸ್‌ಯು(ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ) ರಾಜ್ಯ ಘಟಕದ ಅಧ್ಯಕ್ಷನೂ ಆಗಿದ್ದೆ. ತ್ರಿಶೂರ್‌ನಲ್ಲಿ ನಡೆಯುತ್ತಿದ್ದ ಕೆಎಸ್‌ಯು ರಾಜ್ಯ ಸಮ್ಮೇಳನ ಮುಗಿಸಿ ನೇರವಾಗಿ ಕಾಸರಗೋಡಿಗೆ ಬಂದು ಚುನಾವಣಾ ಅಖಾಡಕ್ಕಿಳಿದೆ’ ಎಂದು ರಾಮಚಂದ್ರನ್‌ ಕಡನ್ನಪ್ಪಳ್ಳಿ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.  ಎ.ಕೆ.ಜಿ. ಕಟ್ಟಿದ್ದ ಕಮ್ಯೂನಿಸ್ಟ್‌ ಗೋಡೆಯನ್ನು ಮುರಿ­ಯಲು ಯುವ ಜನತೆಯ ಮನಸ್ಸನ್ನು ತಟ್ಟುವ ಪ್ರಚಾರದಲ್ಲಿ ಮುಳುಗಿದೆವು. ಅಂದು ಈಗಿನಂತೆ ಅಬ್ಬರದ ಪ್ರಚಾರವೂ ಇರಲಿಲ್ಲ; ಸೌಕರ್ಯವೂ ಇರಲಿಲ್ಲ. ಲಲಿತವಾದ ಪ್ರಚಾರ ಶೈಲಿ. ಮುಂದಿನಿಂದ ಪ್ರಚಾರದ ವಾಹನ ಹೊರಟರೆ ಅದರ ಹಿಂದಿನಿಂದ ಅಭ್ಯರ್ಥಿ ಸಾಗುವುದೇ ಅಂದಿನ ಕ್ರಮ. ಅಚ್ಚ ಬಿಳಿಯ ಗೋಡೆಯಲ್ಲಿ ನೀಲಿ ಅಕ್ಷರಗಳೇ ಅಂದು ಮಿಂಚು­ತ್ತಿತ್ತು. ಕಲಾವಿದರನ್ನು ಬಳಸಿ ಬರೆಸುವ ಪ್ರವೃತ್ತಿ ಇರಲಿಲ್ಲ.ಎಲ್ಲಕ್ಕಿಂತ ಮಿಗಿಲಾಗಿ ಇಂದಿರಾಗಾಂಧಿ ಅವರ ಪ್ರಭಾವ, ಚೈತನ್ಯ, ಬೆಂಬಲವೇ ಗೆಲುವಿಗೆ ರಹದಾರಿಯಾಯಿತು.  ಕಾಸರಗೋಡಿನಲ್ಲಿ ಆಗ ವಿಲೀನೀಕರಣ ವಿವಾದವಿದ್ದರೂ ತುಳುವರು ಮತ್ತು ಕನ್ನಡಿಗರು ಬೆಂಬಲ ನೀಡಿದ್ದರು ಎಂದು ಕಡನ್ನಪ್ಪಳ್ಳಿ ಸ್ಮರಿಸುತ್ತಾರೆ.‘ತೀರ ಬಡತನದಲ್ಲಿದ್ದ ರಾಮಚಂದ್ರನ್‌ ಕಡನ್ನಪ್ಪಳ್ಳಿ ಕಾನೂನು ಓದಿದರೂ ಫೇಲಾದರು. ಅವರನ್ನು ಇಂದಿರಾ­ಗಾಂಧಿಯೇ ಬೆಳಕಿಗೆ ತಂದರು. ಅಭ್ಯರ್ಥಿಯಾಗಿ ನಿಂತ ಕಡನ್ನಪ್ಪಳ್ಳಿಗೆ ‘ಲೀಡರ್‌’ ಕೆ.ಕರುಣಾಕರನ್ ಸಂಪೂರ್ಣ ಸಹಾಯ–ಸಹಕಾರ ನೀಡಿದರು. ಪಕ್ಷವೇ ಖರ್ಚು ವೆಚ್ಚ­ಗಳನ್ನು ಭರಿಸಿತು. ಕಣ್ಣೂರು ಡಿಸಿಸಿ ಅಧ್ಯಕ್ಷ ಎನ್‌.ರಾಮ­ಕೃಷ್ಣನ್‌ ಪಕ್ಷದ ಚುನಾವಣಾ ಜವಾಬ್ದಾರಿ ಹೊತ್ತು ಗೆಲುವಿಗೆ ಕಾರ್ಯತಂತ್ರ ಹೆಣೆದರು.ಕಾಞಂಗಾಡಿನಲ್ಲಿ ಚುನಾವಣಾ ಸಮಿತಿ ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಕಾಸರಗೋಡು ಮತ್ತು ಮಂಜೇಶ್ವರ ಪ್ರದೇಶಗಳಲ್ಲಿ ಐ.ರಾಮ ರೈ ಮತ್ತು ಎಣ್ಮಕಜೆ ನಾರಾಯಣ ರೈ, ಉದುಮದಲ್ಲಿ ಎನ್‌.ಕೆ.­ಬಾಲಕೃಷ್ಣನ್, ಪಯ್ಯನ್ನೂರಿನಲ್ಲಿ ಕೆ.ಪಿ.ನೂರುದ್ದೀನ್ ಮೊದಲಾದವರ ಪ್ರಾಮಾಣಿಕ ಸೇವೆ, ಮುಸ್ಲಿಂ ಲೀಗ್ ಮತ್ತು ಸಿಪಿಐ ನಾಯಕರ ಬೆಂಬಲ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಕಾರಣವಾಯಿತು ಎನ್ನುತ್ತಾರೆ ಕಾಂಗ್ರೆಸ್ಸಿನ ಹಿರಿಯ ನಾಯಕ ನೀಲೇಶ್ವರದ ಮಹೇಂದ್ರ ಪ್ರತಾಪ್.ಇಂದಿರಾ ಯಾತ್ರೆ!: ಕಡನ್ನಪ್ಪಳ್ಳಿ ರಾಮಚಂದ್ರನ್ ಪರವಾಗಿ ಪ್ರಚಾರಕ್ಕೆ ಇಂದಿರಾಗಾಂಧಿ ಕಾಸರಗೋಡಿಗೆ ಭೇಟಿ ನೀಡಿ­ದ್ದರು. ಮಂಗಳೂರಿನಿಂದ ಕಾಸರಗೋಡು ದಾರಿಯಾಗಿ ಕಣ್ಣೂರಿಗೆ ಸಂಚರಿಸಿದಾಗ ಮತದಾರರದಲ್ಲಿ ಮಿಂಚಿನ ಸಂಚಾರವಾಗಿತ್ತು. ಈ ಯಾತ್ರೆ ಜಿಲ್ಲೆಯಲ್ಲಿ ಯುವಕರು–ಮಹಿಳೆ–ಹಿರಿಯರಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು. ತೆರೆದ ಜೀಪಿನಲ್ಲಿ ಸಂಚರಿಸಿದ ಅವರನ್ನು ವೀಕ್ಷಿಸಲು ಜನಸಾಗರವೇ ಸೇರಿತ್ತು.ಸಿಪಿಐ ನಾಯಕ, ಮಾಜಿ ಸಚಿವ ಕುಞ್ಞಂಬು ಅವರ ನೇತೃತ್ವದಲ್ಲಿ 40 ಮಂದಿ ಕಾಂಗ್ರೆಸ್ ಬೆಂಬಲಿಗರು ಮಡಿಕೈಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ಗುಡ್ಡದ ಮೇಲೆ ನಿಂತ ನೂರಾರು ಸಿಪಿಎಂ ಬೆಂಬಲಿಗರು ಕಲ್ಲಿನ ಸುರಿಮಳೆಗರೆದರು. ಪ್ರಕರಣದಲ್ಲಿ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದರು ಎಂದು ಮಹೇಂದ್ರ ಪ್ರತಾಪ್ ವಿವರಿಸುತ್ತಾರೆ.  1971ರಲ್ಲಿ ನಡೆದ 5ನೇ ಲೋಕಸಭಾ ಚುನಾವಣೆಯ ಬಳಿಕ ಇಂದಿರಾಗಾಂಧಿ ಪ್ರಧಾನಿಯಾದರು. ಇದೇ ವರ್ಷ ಪಾಕಿಸ್ತಾನದ ಜತೆಗೆ ನಡೆದ ಯುದ್ಧದ ಜಯದಿಂದ ಇಂದಿರಾಗಾಂಧಿಯ ಖ್ಯಾತಿ ಮುಗಿಲು ಮುಟ್ಟಿತು. ‘ಇಂದಿರೆ ಅಂದರೆ ಇಂಡಿಯ, ಇಂಡಿಯ ಎಂದರೆ ಇಂದಿರೆ’ ಎಂದು ಭಟ್ಟಂಗಿಗಳು ಹೊಗಳಿದರು. ಇದರಿಂದ ದೇಶದ ನಿರು­ದ್ಯೋಗ, ಬಡತನ, ಹಣದುಬ್ಬರಕ್ಕೆ ಪರಿಹಾರ ಸಿಗಲಿಲ್ಲ. ಸಮಸ್ಯೆ ಬಿಗಡಾಯಿಸಿದ ಕಾರಣ 1975ರ ಜೂ.25ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ಇದರ ಪರಿಣಾಮ ಆರ್‌ಎಸ್‌ಎಸ್‌, ಸಿಪಿಐ(ಎಂ)ನ್ನು  ನಿಷೇಧಿಸಲಾ-ಯಿತು. ಆದರೆ ಸಿಪಿಐ ಇಂದಿರಾ ಗಾಂಧಿಯವರನ್ನು ಬೆಂಬಲಿಸಿತು.1977ರಲ್ಲಿ 6ನೇ ಲೋಕಸಭಾ ಚುನಾವಣೆ­ಯನ್ನು ಘೋಷಿಸಲಾಯಿತು. ಈ ಚುನಾವಣೆಯಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ರಾಮಚಂದ್ರ ಕಡನ್ನಪ್ಪಳ್ಳಿ ಇದೇ ಕ್ಷೇತ್ರದಲ್ಲಿ ಪುನರಾಯ್ಕೆಯಾದಾಗ ಇಂದಿರಾಗಾಂಧಿ ಸೋತರು.  

1971 ಮತ್ತು 1977ರ ಎರಡೂ ಚುನಾವಣೆಗಳಲ್ಲಿ  ಸಿಪಿಐ, ಮುಸ್ಲಿಂ ಲೀಗ್, ಆರ್‌ಎಸ್‌ಪಿ, ಪಿಎಸ್‌ಪಿ ಮತ್ತು ಕೇರಳ ಕಾಂಗ್ರೆಸ್ ಸೇರಿ ‘ಐಕ್ಯ ಜನಾಧಿಪತ್ಯ ಮುನ್ನಣಿ’­(ಐಕ್ಯರಂಗ) ಮತದಾರರನ್ನು ಸೆಳೆಯಿತು.ಫಲನೀಡದ ಭೂಸುಧಾರಣೆ: 72ರಲ್ಲಿ ಬಂದ ಭೂ ಮಸೂದೆ ಕಮ್ಯೂನಿಸ್ಟ್ ಹೋರಾಟದ ಬಳುವಳಿ. ಇದರ ಪರಿಣಾಮ ಉಳುವವನೇ ಹೊಲದೊಡೆಯನಾದ. ಇದು ದೇಶದ ಉಳಿದ ರಾಜ್ಯಗಳಿಗೆ ಮಾದರಿಯಾಯಿತು. ಹೊಲ­ದೊಡೆಯರಾದ ಬಹುತೇಕ ಜನರು ಕಮ್ಯೂನಿಸ್ಟ್ ಚಳವಳಿ, ಅದಕ್ಕಾಗಿ ಹುತಾತ್ಮರಾದವರನ್ನು ಮರೆತರು. ಜನರು ಇತರ ಪಕ್ಷಗಳತ್ತ ಒಲವು ತೋರಿದರು. ಜಾತಿ ಮತ್ತು ಮತೀಯ ಭಾವನೆ ಈ ನೆಲದಲ್ಲಿ ಬೇರೂರಿತು. ಕಾಸರ­ಗೋಡು ಮತ್ತು ಮಂಜೇಶ್ವರ ಪ್ರದೇಶ ಈಗಲೂ ಸಿಪಿಎಂಗೆ ಸವಾಲಾಗಿ ಪರಿಣಮಿಸಿದೆ.1971:              ಮತದಾರರು 5,79,127;                      ಚಲಾಯಿತ ಮತ: 4,15,761 (71.79)1) ರಾಮಚಂದ್ರನ್‌ ಕಡನ್ನಪ್ಪಳ್ಳಿ        (ಕಾಂಗ್ರೆಸ್‌)  1,89,486     (ಶೇ 45.98)

2) ಇ.ಕೆ. ನಾಯನಾರ್‌                 (ಸಿಪಿಎಂ)     1,61,082    (ಶೇ 39.09)

3) ಯು. ಈಶ್ವರ ಭಟ್‌                  (ಬಿಜೆಎಸ್‌)    43,564      (ಶೇ 10.57) 1977:             ಮತದಾರರು 5,78,474;                ಚಲಾಯಿತ ಮತ: 4,62,875 (80.02)1) ರಾಮಚಂದ್ರನ್‌ ಕಡನ್ನಪ್ಪಳ್ಳಿ           (ಕಾಂಗ್ರೆಸ್‌)         2,27,305     (ಶೇ 50.56)

2) ಎಂ.ರಾಮಣ್ಣ ರೈ                        (ಸಿಪಿಎಂ)           2,22,263     (ಶೇ 49.44)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.