ಗುರುವಾರ , ಜೂಲೈ 2, 2020
28 °C

`ಕೆಂಬಾವುಟ ಹಾರಿಸಿದ ಅಮರ ಜ್ಯೋತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕೆಂಬಾವುಟ ಹಾರಿಸಿದ ಅಮರ ಜ್ಯೋತಿ'

ಬೆಂಗಳೂರು: `ಕಾರ್ಮಿಕರು ಬೀದಿಗಿಳಿದು ಹೋರಾಟ ಆರಂಭಿಸಿದರೆ ಪೊಲೀಸ್ ಕಮಿಷನರ್ ಬದಲು ಲೇಬರ್ ಕಮಿಷನರ್ ಅವರನ್ನು ಕರೆಸಿ, ಸಮಸ್ಯೆ ಬಗೆಹರಿಸುತ್ತಿದ್ದ ಜ್ಯೋತಿಬಸು, ದೇಶದ ದುಡಿಯುವ ವರ್ಗ ಕಂಡ ಮಹಾನ್ ನಾಯಕ' ಎಂದು ಸಿಐಟಿಯು ರಾಷ್ಟ್ರೀಯ ಘಟಕದ ಅಧ್ಯಕ್ಷ ಎ.ಕೆ. ಪದ್ಮನಾಭನ್ ಹೇಳಿದರು.ನಗರದಲ್ಲಿ ಮಂಗಳವಾರ ಸಿಐಟಿಯು ವತಿಯಿಂದ ಏರ್ಪಡಿಸಲಾಗಿದ್ದ ಜ್ಯೋತಿಬಸು ಜನ್ಮ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಕೆಂಪು ಬಾವುಟವನ್ನು ದೇಶದಾದ್ಯಂತ ಹಾರಾಡುವಂತೆ ಮಾಡಿದ ಅಮರ ಪುರುಷ ಜ್ಯೋತಿಬಸು' ಎಂದು ಅವರು ಕೊಂಡಾಡಿದರು.`ಶ್ರಮಿಕರ ಪರ ಹೋರಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ಹಲವು ಹೋರಾಟಗಳ ಮೂಲಕ ಸರ್ಕಾರದ ನೀತಿಗಳಲ್ಲಿ ಬದಲಾವಣೆ ಆಗುವಂತೆ ಮಾಡಿದ್ದರು' ಎಂದು ಹೇಳಿದರು.`ಭಾರತ ಕಮ್ಯೂನಿಸ್ಟ್ ಪಕ್ಷ 1960ರ ದಶಕದಲ್ಲಿ ವಿಭಜನೆಯಾದಾಗ ಸಿಪಿಐ (ಎಂ) ಜತೆ ಗುರುತಿಸಿಕೊಂಡ ಜ್ಯೋತಿಬಸು, 1967ರಲ್ಲಿ ಪಶ್ಚಿಮ ಬಂಗಾಲದ ಉಪ ಮುಖ್ಯಮಂತ್ರಿಯಾಗಿದ್ದಾಗ ಕಾರ್ಮಿಕರ ವಿರುದ್ಧ ಪೊಲೀಸ್ ಬಲವನ್ನು ಬಳಕೆ ಮಾಡಬಾರದು ಎಂಬ ಆದೇಶ ಹೊರಡಿಸಿದ್ದರು' ಎಂದು ನೆನಪು ಮಾಡಿಕೊಂಡರು.`ಶಿಕ್ಷಕರ ಪರ ಚಳವಳಿ ನಡೆಸುವಾಗ ಏಳು ದಿನಗಳ ಕಾಲ ವಿಧಾನಸೌಧದಲ್ಲೇ ಉಳಿದು, ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದರು. ಮುಂದೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅವರು, 28 ವರ್ಷಗಳ ಸುದೀರ್ಘ ಆಡಳಿತದಲ್ಲಿ ಜನಹಿತಕ್ಕೆ ವಿರುದ್ಧವಾಗಿ ಎಂದಿಗೂ ನಡೆದುಕೊಳ್ಳಲಿಲ್ಲ' ಎಂದು ತಿಳಿಸಿದರು.`ಸಿಐಟಿಯು ಸಂಸ್ಥಾಪಕರಲ್ಲಿ ಜ್ಯೋತಿಬಸು ಕೂಡ ಒಬ್ಬರು' ಎಂದು ಸ್ಮರಿಸಿದರು. `ಕ್ರಾಂತಿಕಾರಿಯಾಗಿದ್ದ ಈ ಕಮ್ಯೂನಿಸ್ಟ್ ನಾಯಕ ನಮ್ಮೆಲ್ಲ ಹೋರಾಟಗಳಿಗೆ ದಾರಿದೀಪವಾಗಿದ್ದಾರೆ' ಎಂದು ಹೇಳಿದರು. ಕ್ಯಾಲೆಂಡರ್ ಬಿಡುಗಡೆ ಮಾಡಿದ ವಿ.ಜೆ.ಕೆ. ನಾಯರ್, `ದುಡಿಯುವವರಿಗೆ ಅವರ ಹಕ್ಕು ಸಿಗಲೇಬೇಕು. ದುಡಿಯದೆ ಇರುವವರಿಗೆ ಕೇಳುವ ಹಕ್ಕು ಇಲ್ಲ ಎಂಬುದಾಗಿ ಜ್ಯೋತಿಬಸು ಬಲವಾಗಿ ಪ್ರತಿಪಾದಿಸಿದ್ದರು' ಎಂದು ತಿಳಿಸಿದರು.`ಇಡೀ ದೇಶ ಅತ್ಯಂತ ಗೌರವದಿಂದ ಕಂಡ ಕಾರ್ಮಿಕ ಮುಖಂಡರಾಗಿದ್ದರು ನಮ್ಮ ನಾಯಕ' ಎಂದು ಸಿಪಿಐ (ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಹೇಳಿದರು.ಕೆ.ಎನ್. ಉಮೇಶ್ ಸ್ವಾಗತಿಸಿದರು. ಎಂ.ಎಸ್. ಮೀನಾಕ್ಷಿ ಸುಂದರಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೋಗಿಲು ಸಿದ್ದರಾಜು ಅವರ ಸಂಭ್ರಮ ತಂಡ ಕ್ರಾಂತಿಗೀತೆಗಳನ್ನು ಹಾಡಿತು. ಪ್ರೊ. ನರೇಂದ್ರ ನಾಯಕ್ ಅವರ ತಂಡ ಪವಾಡ ರಹಸ್ಯ ಬಯಲು ಪ್ರದರ್ಶನ ನೀಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.