ಕೆನ್ಯಾ ಅಥ್ಲೆಟಿಕ್ಸ್, ಅನಾಥಾಲಯ, ಕಪ್ಪು ಜನರ ಹಾಡು ಪಾಡು, ಇತ್ಯಾದಿ...

ರಿಯೊ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದ ಸುಂದರ ಕ್ಷಣಗಳನ್ನು ಜಗತ್ತಿನಾದ್ಯಂತ ಜನ ಟೆಲಿವಿಷನ್ನಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಭಾರತವೂ ಇದರಿಂದ ಹೊರತಲ್ಲ. ವಿಶ್ವಶಾಂತಿ, ಪರಿಸರ ಸಂರಕ್ಷಣೆಯ ಮಹಾಸಂದೇಶ ಅಂದಿನ ಕಾರ್ಯಕ್ರಮ ಗಳ ಮುಖ್ಯ ಆಶಯದಂತಿತ್ತು.
ಸಮಾಜಸೇವೆ ಸಲ್ಲಿಸಿದ ಒಲಿಂಪಿಯನ್ ಒಬ್ಬರನ್ನು ಗುರುತಿಸಿ ಆ ಸಮಾರಂಭದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ಒಲಿಂಪಿಕ್ಸ್ ಚರಿತ್ರೆಯಲ್ಲೇ ಇಂತಹದ್ದೊಂದು ಘಟನೆ ನಡೆದಿದ್ದು ಇದೇ ಮೊದಲು.
ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಒಲಿಂಪಿಯನ್ ಒಬ್ಬರಿಗೆ ನೀಡಿದ ಅತ್ಯುನ್ನತ ಗೌರವ ಇದು. ಬಿಳಿಯ ಅಂಗಿ ಧರಿಸಿದ್ದ ಸುಮಾರು ಇನ್ನೂರು ಪುಟ್ಟ ಮಕ್ಕಳು ನರ್ತಿಸುತ್ತಾ ಆ ಪ್ರಶಸ್ತಿ ಪುರಸ್ಕೃತ ವ್ಯಕ್ತಿಯನ್ನು ವೇದಿಕೆಯ ಬಳಿ ಕರೆದೊಯ್ದರು. ಆಗ ಐಒಸಿ ಮುಖ್ಯಸ್ಥ ಥಾಮಸ್ ಬಾಕ್ ಮಾತನಾಡಿ ‘ಜಗತ್ತು ಅಶಾಂತಿಯ ಬೇಗುದಿಯಲ್ಲಿದೆ.
ಮನುಷ್ಯರಾದ ನಾವೆಲ್ಲರೂ ಸಮಾನರು. ಎಂದೆಂದೂ ಒಗ್ಗೂಡಿ ನಡೆಯುವ’ ಎಂಬ ಆಶಯ ವ್ಯಕ್ತಪಡಿಸುತ್ತಲೇ, ಆ ಪ್ರಶಸ್ತಿ ವಿಜೇತನನ್ನು ಸ್ವಾಗತಿಸಿದರು. ಅಂತಹ ಶ್ರೇಷ್ಠ ಗೌರವಕ್ಕೆ ಪಾತ್ರರಾದವರು ಕೆನ್ಯಾ ದೇಶದ ಕಿಪ್ ಕೈನೊ. ಇಡೀ ಕ್ರೀಡಾಂಗಣದಲ್ಲಿ ಜನ ಎದ್ದು ನಿಂತು ಚಪ್ಪಾಳೆ ತಟ್ಟಿದ್ದನ್ನು ನಾವೆಲ್ಲರೂ ಟೆಲಿವಿಷನ್ನಲ್ಲಿ ನೋಡಿದೆವು. ಜಗತ್ತಿನಾ ದ್ಯಂತ ಹಳಬರು ಕಿಪ್ ಅವರನ್ನು ನೋಡಿ ರೋಮಾಂ ಚನದಿಂದ ಸಂಭ್ರಮಿಸಿದರೆ, ಹೊಸ ಪೀಳಿಗೆಯ ಮಂದಿ ಯಾರವರು ಎಂದು ಉದ್ಗಾರವೆತ್ತಿದ್ದರು.
ಕೆನ್ಯಾದ ಮೊದಲ ಚಿನ್ನ
ಕಿಪ್ ಕೈನೊ ಎನ್ನುವಾಗ ಮೆಕ್ಸಿಕೊ ಸಿಟಿಯಲ್ಲಿ ಸರಿಯಾಗಿ 48 ವರ್ಷಗಳ ಹಿಂದೆ ನಡೆದಿದ್ದ ಒಲಿಂಪಿಕ್ಸ್ ಕೂಟದ ನೆನಪು ಬರುತ್ತದೆ. ಆ ಕೂಟದಲ್ಲಿ ಪಾಲ್ಗೊಳ್ಳಲು ಹೋಗಿದ್ದ ಕೆನ್ಯಾ ದೇಶದ ತಂಡದಲ್ಲಿ ಕಿಪ್ ಕೈನೊ ಇದ್ದರು. ಅಲ್ಲಿಗೆ ಹೋಗುವಾಗಲೇ ಮೇದೋಜೀರಕ ಗ್ರಂಥಿಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಅಲ್ಲಿಗೆ ಹೋದ ಮೇಲೆ ಹೊಟ್ಟೆಯ ನೋವು ಇನ್ನಷ್ಟು ಉಲ್ಬಣಗೊಂಡಿತು. ಆದರೂ ಅವರು 10,000 ಮೀಟರ್ಸ್ ಓಟದಲ್ಲಿ ಪಾಲ್ಗೊಂಡರು.
ಕೊನೆಯ ಎರಡು ಸುತ್ತುಗಳಿವೆ ಎನ್ನುವಾಗಲೂ ಅವರು ಮುನ್ನಡೆಯಲ್ಲೇ ಇದ್ದರು. ಆಗ ಹೊಟ್ಟೆನೋವು ತೀವ್ರಗೊಂಡಿತ್ತು. ಕಣ್ಣುಕತ್ತಲೆ ಬಂದಂತಾಗಿ ಅವರು ಕುಸಿದು ಬಿದ್ದರು. ಅಂಚುಗೆರೆಯ ಬಳಿ ಅವರು ಓಡುತ್ತಿದ್ದುದರಿಂದ ಅವರ ಅರ್ಧದೇಹ ಅಂಚುಗೆರೆಯ ಹೊರಗಿತ್ತು. ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡ ಅವರು ಎದ್ದು ಓಡಿ ಗುರಿ ಮುಟ್ಟಿದ್ದರು. ಆದರೆ ಅಂಚುಗೆರೆಯ ಆಚೆ ಅವರ ದೇಹ ತಾಗಿದೆ ಎಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸ ಲಾಯಿತು. ಆಗ ಕೆನ್ಯಾದ ಇನ್ನೊಬ್ಬ ಓಟಗಾರ ನಫ್ತಾಲಿ ನೆಮು ಚಿನ್ನ ಗೆದ್ದರು. ಒಲಿಂಪಿಕ್ಸ್ನಲ್ಲಿ ಕೆನ್ಯಾ ಗಳಿಸಿದ ಮೊದಲ ಚಿನ್ನ ಅದು.
ವೈದ್ಯರ ಸಲಹೆ ಧಿಕ್ಕರಿಸಿದ್ದರಿಂದ ಗೆಲುವು!
ಕಿಪ್ ಅವರ ಆರೋಗ್ಯವನ್ನು ತಪಾಸಣೆ ಮಾಡಿದ್ದ ವೈದ್ಯರು ಯಾವುದೇ ಕಾರಣಕ್ಕೂ ಅವರು ಟ್ರ್ಯಾಕ್ಗೆ ಇಳಿಯಬಾರದು ಎಂದು ಸಲಹೆ ನೀಡಿದ್ದರು. ಆದರೆ ಕಿಪ್ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. 5,000 ಮೀಟರ್ಸ್ ಓಟದಲ್ಲಿ ಸ್ವರ್ಧಿಸಿದರು. ಆ ಸ್ವರ್ಧೆಯಲ್ಲಿ ಟುನಿಷಿಯಾದ ಮಹಮ್ಮದ್ ಗಮೌಡಿ ಮೊದಲಿಗರಾಗಿ ಗುರಿ ಮುಟ್ಟಿದರು. ಆದರೆ ಗಮೌಡಿ ಗೆಲುವಿನ ಗೆರೆ ದಾಟಿದಾಗ ಅವರಿಗಿಂತ ಕೇವಲ ಒಂದು ಮೀಟರ್ ಅಂತರದಲ್ಲಿ ಕಿಪ್ ಇದ್ದರು. ಕೇವಲ 2 ಸೆಕೆಂಡುಗಳ ಅಂತರದಿಂದಾಗಿ ಕಿಪ್ ಚಿನ್ನದ ಪದಕ ಕಳೆದುಕೊಂಡರು.
ಎರಡು ದಿನಗಳ ನಂತರ 1,500 ಮೀಟರ್ಸ್ ಓಟದ ಸ್ವರ್ಧೆ ಇತ್ತು. ‘ನೀನು ಮತ್ತೆ ಓಡಿದರೆ ಪ್ರಾಣವೇ ಹೋಗಬಹುದು. ಆರೋಗ್ಯ ಅಷ್ಟೊಂದು ಹದಗೆಟ್ಟಿದೆ’ ಎಂದು ವೈದ್ಯರು ಕಿಪ್ಗೆ ಸಲಹೆ ನೀಡಿದ್ದರು. ಆ ಓಟದ ಸ್ವರ್ಧೆಯಲ್ಲಂತೂ ಚಿನ್ನ ಗೆಲ್ಲುವುದು ಅಸಾಧ್ಯ ಎಂಬ ಮಾತು ಆಗ ಚಾಲ್ತಿಯಲ್ಲಿತ್ತು. ಏಕೆಂದರೆ ಆ ಸ್ವರ್ಧೆಯ ನೆಚ್ಚಿನ ಓಟಗಾರ ಅಮೆರಿಕಾದ ಜೇಮ್ಸ್ ರೊನಾಲ್ಡ್ ರ್್ಯುನ್ ಅವರು ಕಿಪ್ಗಿಂತ ಏಳು ವರ್ಷ ಚಿಕ್ಕವರು. ಮೂರು ವರ್ಷಗಳಿಂದ ಜೇಮ್ಸ್ ಎಲ್ಲಿಯೂ ಸೋತಿರಲಿಲ್ಲ.
ಸ್ವರ್ಧೆಯ ಹಿಂದಿನ ರಾತ್ರಿ ಕಿಪ್ಗೆ ಇದೇ ಯೋಚನೆ. ಆತಂಕ. ನಿದ್ದೆಯೇ ಬಂದಿರಲಿಲ್ಲ. ಬೆಳಿಗ್ಗೆ ನಿದ್ದೆ ಆವರಿಸಿ ಕೊಂಡು ಬಿಟ್ಟಿತು. ಆರೋಗ್ಯ ಸರಿ ಇರಲಿಲ್ಲವಾದ ಕಾರಣ ಜತೆಗಾರರೂ ಕಿಪ್ನನ್ನು ಏಳಿಸುವ ಗೋಜಿಗೇ ಹೋಗದೆ, ಕ್ರೀಡಾಂಗಣಕ್ಕೆ ತೆರಳಿ ಬಿಟ್ಟರು. ಕಿಪ್ ನಿದ್ದೆಯಿಂದೆದ್ದು ಗಡಿಯಾರ ನೋಡಿದಾಗ ಸ್ವರ್ಧೆಯ ಆರಂಭಕ್ಕೆ ಕೇವಲ ಒಂದು ಗಂಟೆಯಷ್ಟೇ ಉಳಿದಿತ್ತು. ಕಿಟ್ ಎತ್ತಿಕೊಂಡ ಕಿಪ್ ಓಡೋಡುತ್ತಲೇ ವಸತಿಗೃಹ ದಿಂದ ಹೊರಬಂದು, ಕ್ರೀಡಾಂಗಣದತ್ತ ಹೊರಟಿದ್ದ ವಾಹನವೊಂದನ್ನು ಏರಿ ಕುಳಿತರು.
ವೇಗವಾಗಿಯೇ ಹೊರಟ ವಾಹನ ಮಾರ್ಗಮಧ್ಯದಲ್ಲಿ ಸಂಚಾರದಟ್ಟಣೆ ಯಲ್ಲಿ ಸಿಕ್ಕಿಕೊಂಡಿತು. ಕ್ರೀಡಾಂಗಣಕ್ಕೆ ಇನ್ನೂ 2ಮೈಲು ದೂರವಿತ್ತು. ವಾಹನದಿಂದ ಇಳಿದ ಕಿಪ್ ಓಡುತ್ತಲೇ ಕ್ರೀಡಾಂಗಣ ತಲುಪಿದರು. ಸ್ವರ್ಧೆಯ ಆರಂಭಕ್ಕೆ ಕೇವಲ 20 ನಿಮಿಷಗಳಷ್ಟೇ ಬಾಕಿ ಇತ್ತು. ಆ ಉರಿ ಬಿಸಿಲಲ್ಲೇ ಓಡಿದ ಕಿಪ್ 3ನಿಮಿಷ 34.9 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು.
ಅವರು ಗುರಿ ಮುಟ್ಟಿದಾಗ 20 ಮೀಟರ್ಸ್ ಹಿಂದಿದ್ದ ಜೇಮ್ಸ್ ರಜತ ಪದಕ ಪಡೆದರು. ಮರುದಿನವೇ ವೈದ್ಯರು ಕಿಪ್ ಅವರನ್ನು ಜರ್ಮನಿಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ನಡೆಸಿ ದರು. ಈ ರೋಚಕ ಕಥನ ಅಂದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಕಿಪ್ ಅವರ ಈ ಸಾಮರ್ಥ್ಯ, ಸಾಧನೆ ಮತ್ತು ಕ್ರೀಡಾ ಸ್ಫೂರ್ತಿಯ ಬಗ್ಗೆ ನೂರಾರು ಲೇಖನಗಳು ಪ್ರಕಟಗೊಂಡಿವೆ.
ಅಂತರರಾಷ್ಟ್ರೀಯ ಅಥ್ಲೆಟಿಕ್ಸ್ನಲ್ಲಿ ಆಫ್ರಿಕಾ ಖಂಡದ ಓಟಗಾರರು ದಾಪುಗಾಲು ಇಡುವುದಕ್ಕೆ ಪ್ರೇರಣೆಯಾದ ಕೆಲವು ಅಥ್ಲೀಟ್ಗಳಲ್ಲಿ ಕಿಪ್ ಕೈನೊ ಕೂಡಾ ಒಬ್ಬರು. ಅವರ ಸ್ಫೂರ್ತಿಯಿಂದಲೇ ಕೆನ್ಯಾ ದೇಶ ಜಗತ್ತಿನ ಓಟಗಾರರ ಬಲುದೊಡ್ಡ ಕಣಜವಾಗಿ ರೂಪುಗೊಂಡಿತು ಎಂದರೆ ಅತಿಶಯೋಕ್ತಿಯಲ್ಲ.
ಸರಿಯಾಗಿ ಹದಿಮೂರು ವರ್ಷಗಳ ಹಿಂದೆ ಹೈದರಾಬಾದ್ನಲ್ಲಿ ಮೊದಲ ಆಫ್ರೋ ಏಷ್ಯನ್ ಕ್ರೀಡಾಕೂಟ ನಡೆದಿತ್ತು. ಆಗ ಕೆನ್ಯಾ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಕಿಪ್ಕೈನೊ ಅಲ್ಲಿಗೆ ಬಂದಿದ್ದರು. ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಗುಂಪಿನ ರಾಜೀವ್ ಕೊಳಶೇರಿ ಮತ್ತು ನಾನು ಆಕಸ್ಮಿಕವಾಗಿ ಅವರನ್ನು ಭೇಟಿಯಾಗಿದ್ದಲ್ಲದೆ, ಹಲವು ಗಂಟೆಗಳ ಕಾಲ ನಾವು ಮೂವರೇ ಮುಕ್ತವಾಗಿ ಹರಟಿದ್ದೆವು. ದೂರ ಓಟಕ್ಕೆ ಸಂಬಂಧಿಸಿದಂತೆ ನೂರಾರು ಅಂಕಿಸಂಖ್ಯೆಗಳೆಲ್ಲಾ ಅವರ ನಾಲಿಗೆಯ ತುದಿಯಲ್ಲೇ ಇದ್ದವು.
ದೂರ ಓಟಕ್ಕೆ ಸಂಬಂಧಿಸಿದ ವೈಜ್ಞಾನಿಕ ಆಯಾಮಗಳ ಬಗ್ಗೆಯೂ ಅವರಿಗೆ ಅಪಾರ ಅರಿವು ಇತ್ತು. ಆದರೆ ಕಿಪ್ ಮಾತಾಡಿದ್ದೆಲ್ಲಾ ಅವರ ಅನಾಥಾಶ್ರಮದ ಬಗ್ಗೆಯೇ. ಅಲ್ಲಿನ ಮಕ್ಕಳ ತುಂಟತನ, ಚುರುಕುತನ, ಸಾಧನೆಗಳ ಕುರಿತು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದರು. ಆಫ್ರಿಕ ಖಂಡದಲ್ಲಿ ಜನರನ್ನು ಕಾಡುತ್ತಿರುವ ಬಡತನ, ಹಸಿವು, ನಿರುದ್ಯೋಗಗಳ ಕುರಿತು ಭಾವನಾತ್ಮಕವಾಗಿ ಮಾತ ನಾಡಿದ್ದನ್ನು ಕೇಳಿಸಿಕೊಂಡ ನಂತರ ಕಿಪ್ ಎಲ್ಲರಂತಲ್ಲ ಎನಿಸಿತ್ತು.
ವಿಮೋಚನೆಯ ಮೂಸೆಯಿಂದ ಎದ್ದು ಬಂದವರು
ಆಫ್ರಿಕ ಖಂಡದಲ್ಲಿ ಸುಮಾರು ಐದಾರು ಶತಮಾನಗಳ ಹಿಂದೆ ಜನರು ತಮ್ಮಷ್ಟಕ್ಕೆ ತಾವು ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಯುರೋಪ್ ಮಂದಿ ಆ ಖಂಡದೊಳಗೆ ಕಾಲಿಟ್ಟಾಗ ಸಂಚಲನ ಶುರು ವಾಯಿತು. ಆ ಖಂಡದ ವಿವಿಧ ದೇಶಗಳು ಯುರೋಪಿ ಯನ್ನರ ಕಾಲೋನಿಗಳಾದವು. ಕೆಲವು ದೇಶಗಳು ಯುರೋಪಿಯನ್ನರ ಹಿಡಿತದಿಂದ ವಿಮೋಚನೆಗೊಂಡವು. ಕೆಲವು ಕಡೆ ಸೇನಾದಂಗೆಗಳು ನಡೆದವು. ಸರ್ವಾಧಿಕಾರಿಗಳು ಆಡಳಿತ ನಡೆಸಿದರು. ಪ್ರಜಾಸತ್ತಾತ್ಮಕ ವ್ಯವಸ್ಥೆಯೂ ಕೆಲವು ಕಡೆ ಮೂಡಿಬಂದಿತು.
ರೈತ ಚಳವಳಿ ನಡೆದವು. ರಾಷ್ಟ್ರೀಯ ವಾದ ಕೆಲವು ಪ್ರದೇಶಗಳಲ್ಲಿ ತಾರಕಕ್ಕೇರಿದವು. ಬುಡ ಕಟ್ಟುಗಳ ನಡುವಣ ಕಿತ್ತಾಟದಿಂದ ರಕ್ತಪಾತಗಳಾದವು. ಕ್ರೈಸ್ತ, ಇಸ್ಲಾಮ್ ಧರ್ಮಗಳೂ ಆ ಖಂಡದ ವಿವಿಧ ಕಡೆ ಬಿಗಿ ಹಿಡಿತ ಸಾಧಿಸಿದವು. ಆ ಖಂಡದಿಂದ ಬೇರೆಡೆಗೆ ಜನರ ವಲಸೆಯೂ ನಡೆಯಿತು. ಯುರೋಪ್ನಿಂದಲೂ ಸಹಸ್ರಾರು ಮಂದಿ ಹೋಗಿ ಆಫ್ರಿಕ ಖಂಡದ ವಿವಿಧ ಕಡೆ ನೆಲೆಸಿದರು. ಇಡೀ ಖಂಡವೇ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ನೆಲೆಯಲ್ಲಿ ಸ್ಥಿತ್ಯಂತರಗಳನ್ನು ಕಂಡಿತು. ಇಂತಹ ಎಲ್ಲಾ ಆಗುಹೋಗುಗಳಿಂದ ಕೆನ್ಯಾ ಹೊರತಾ ಗಿಲ್ಲ. ಕೆನ್ಯಾದೊಳಗಿನ ಇಂತಹ ತುಮುಲಗಳ ಮೂಸೆ ಯಿಂದಲೇ ಕಿಪ್ಕೈನೊ ಎದ್ದು ನಿಂತಿದ್ದೊಂದು ವಿಶೇಷ.
ಕೆನ್ಯಾದಲ್ಲಿ ಓಟಗಾರರ ಕ್ರಾಂತಿ
ಆಫ್ರಿಕ ಖಂಡದ ಪೂರ್ವ ಕರಾವಳಿಗೆ ತಾಗಿದಂತಿರುವ ಕೆನ್ಯಾದಲ್ಲಿ 1895ರ ಸುಮಾರಿಗೆ ಬ್ರಿಟಿಷರ ಪ್ರಭಾವ ಹೆಚ್ಚಾಯಿತು. ಸಾವಿರಾರು ಮಂದಿ ಬ್ರಿಟಿಷರು ಅಲ್ಲಿ ಹೋಗಿ ನೆಲೆಸಿದರು. ಕರಾವಳಿಯ ಪಟ್ಟಣ ಮೊಂಬಾಸದಿಂದ ಸಾವಿರ ಕಿ.ಮೀ. ದೂರದ ವಿಕ್ಟೋರಿಯ ಸರೋವರದವರೆಗೆ ಬ್ರಿಟಿಷರೇ ರೈಲು ಮಾರ್ಗ ನಿರ್ಮಿಸಿದರು. 1920ರಿಂದ 63ರವರೆಗೆ ಬ್ರಿಟಿಷರೇ ಆ ದೇಶವನ್ನು ನೇರವಾಗಿ ಆಳಿದ್ದರು.
ಆ ಕಾಲದಲ್ಲಿ ಕಾಫಿ, ಟಿ ತೋಟಗಳೂ ಅರಳಿದವು. ಕೆನ್ಯಾದ 2ಲಕ್ಷ ಮಂದಿ ಸೇನೆ ಸೇರಿ ಮೊದಲ ಮಹಾಯುದ್ಧದಲ್ಲಿ ಬ್ರಿಟಿಷರ ಪರ ಹೋರಾಡಿದ್ದರು. ಇಂತಹ ಬೆಳವಣಿಗೆಗಳ ನಡುವೆಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕ್ಕಾಗಿ ಚಳವಳಿ ನಡೆಯಿತು. 1944ರಲ್ಲಿ ಕೆನ್ಯಾ ಆಫ್ರಿಕಾ ಯೂನಿಯನ್ ಹುಟ್ಟು ಪಡೆಯಿತು. ಹೋರಾಟ ಹಿಂಸಾರೂಪ ತಳೆದಿತ್ತು.
1956ರಲ್ಲಿ ಬ್ರಿಟಿಷರು ವಿಮಾನದ ಮೂಲಕ ನೂರಾರು ಹಳ್ಳಿಗಳ ಮೇಲೆ ಬಾಂಬು ಹಾಕಿದ್ದರು. 12ಸಾವಿರಕ್ಕೂ ಅಧಿಕ ಮಂದಿ ಸತ್ತರು. ಲಕ್ಷ ಜನ ಜೈಲು ಸೇರಿದ್ದರು.1961ರಲ್ಲಿ ಹೋರಾಟಗಾರ ಜೋಮೊ ಕೆನ್ಯಾಟ ಬಿಡುಗಡೆಯಾದರು.
1964ರಲ್ಲಿ ಅವರು ಸ್ವತಂತ್ರ ಕೆನ್ಯಾ ದೇಶದ ಅಧ್ಯಕ್ಷರಾದರು. 1978ರವರೆಗೂ ಆ ಸ್ಥಾನದಲ್ಲಿದ್ದರು. 1992ರಲ್ಲಿ ನಡೆದ ಜನಾಂಗೀಯ ಘರ್ಷಣೆಯಿಂದ 2ಸಾವಿರಕ್ಕೂ ಹೆಚ್ಚು ಮಂದಿ ಸಾಯುತ್ತಾರೆ. ಕೇವಲ 15ವರ್ಷಗಳ ಹಿಂದೆ ಉತ್ತರ ಕೆನ್ಯಾದಲ್ಲಿ ಬರಗಾಲದಿಂದ 30ಲಕ್ಷಕ್ಕೂ ಅಧಿಕ ಮಂದಿ ತತ್ತರಿಸಿ ಹೋಗಿದ್ದರು. ಸಹಸ್ರಾರು ಮಂದಿ ಸತ್ತರು.
ಇಂತಹ ಏಳುಬೀಳುಗಳ ನಡುವೆಯೇ ಆ ದೇಶದಲ್ಲಿ ದೂರ ಅಂತರದ ಓಟಗಾರರ ವಿಶಿಷ್ಠ ಸಂಸ್ಕೃತಿಯೊಂದು ರೆಕ್ಕೆ ಬಿಚ್ಚಿ ಕೊಂಡಿದ್ದು ವಿಶೇಷವೇ ಹೌದು.ಬ್ರಿಟಿಷರು ದೀರ್ಘಕಾಲ ಕೆನ್ಯಾದಲ್ಲಿ ನೆಲೆಸಿದ್ದರಿಂದ ಅವರು ಆಡುತ್ತಿದ್ದ ಹಾಕಿ, ಫುಟ್ಬಾಲ್, ರಗ್ಬಿ, ಕ್ರಿಕೆಟ್ ಆಟಗಳನ್ನು ಸ್ಥಳೀಯರು ನೋಡುತ್ತಲೇ ಕಲಿತರು. ಆದರೆ 1951ರಲ್ಲಿ ಆರ್ಥರ್ ಇವಾನ್ಸ್ ಮತ್ತು ಡೆರಿಕ್ ಎಸ್ಕಿನ್ ಎಂಬ ಆಂಗ್ಲರು ಕಟ್ಟಿದ ಕೆನ್ಯಾ ಅಥ್ಲೆಟಿಕ್ ಸಂಸ್ಥೆಯು ಆ ನಾಡಿನ ಕ್ರೀಡಾ ಪರಂಪರೆಯಲ್ಲೊಂದು ಮೈಲುಗಲ್ಲಾಗಿ ಹೊಳೆಯುತ್ತಿದೆ. ಅವರಿಬ್ಬರ ಮಾರ್ಗದರ್ಶನದಲ್ಲೇ 1952ರಲ್ಲಿ ಪೂರ್ವ ಆಫ್ರಿಕಾ ಅಥ್ಲೆಟಿಕ್ ಕೂಟ ನಡೆಯುತ್ತದೆ.
ಅದರಲ್ಲಿ ಇಥಿಯೋಪಿಯ, ಸೋಮಾಲಿಯ, ಉಗಾಂಡ, ಕೆನ್ಯಾ, ಜಾಂಬಿಯ, ಮಲಾವಿ ದೇಶಗಳ ಕ್ರೀಡಾಪಟುಗಳು ಸ್ವರ್ಧಿಸಿದ್ದರು. ಅವರಿಬ್ಬರು ಮೊದಲ ಬಾರಿಗೆ ಕೆನ್ಯಾ ಓಟಗಾರರನ್ನು ಕಾಮನ್ವೆಲ್ತ್ ಕ್ರೀಡಾ ಕೂಟಗಳಿಗೂ ಕಳಿಸಿ ಕೊಟ್ಟಿದ್ದರು. ಆದರೆ ರಾಜಕೀಯ ಏರಿಳಿತಗಳ ಪರಿಣಾಮವಾಗಿ ಆರ್ಥರ್ ಮತ್ತು ಡೆರಿಕ್ ಇಂಗ್ಲೆಂಡ್ಗೆ ವಾಪಸಾದರು. ಹೀಗಾಗಿ 1964ರಲ್ಲಿ ಕಪ್ಪುವರ್ಣೀಯರೇ ಅಥ್ಲೆಟಿಕ್ ಸಂಸ್ಥೆಯ ಪದಾಧಿಕಾರಿ ಗಳಾದರು. ಅದೇ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ನ 800 ಮೀಟರ್ಸ್ ಓಟದಲ್ಲಿ ವಿಲ್ಸನ್ ಕಿಪ್ರುಗಟ್ ಚುಮೊ ಎಂಬುವವರು ಕಂಚಿನ ಪದಕ ಗೆದ್ದರು. ಒಲಿಂಪಿಕ್ಸ್ನಲ್ಲಿ ಕೆನ್ಯಾ ತನ್ನ ಪದಕದ ಖಾತೆ ತೆರೆಯಿತು. ಇಂತಹ ಬೆಳವಣಿಗೆಗಳ ನಡುವೆಯೇ ಕಿಪ್ಕೈನೊ ಸಾಕ್ಷಿಪ್ರಜ್ಞೆಯಂತೆ ನಡೆದು ಬರುತ್ತಾರೆ.
ಶಾಲೆ–ಮನೆ ನಡುವೆ ಓಟದ ಪಾಠ
‘ಬ್ರಿಟಿಷರ ಸಂಪರ್ಕವೇ ಇಲ್ಲದ ಹಳ್ಳಿಯೊಂದರಲ್ಲಿ ನಾನು ಹುಟ್ಟಿದೆ. ತಾಯಿಯನ್ನು ನೋಡಿದ ನೆನಪೇ ನನಗಿಲ್ಲ. ನನಗೆ ಎಂಟು ವರ್ಷ ವಯಸ್ಸಾಗಿದ್ದಾಗ ಕಪ್ಚೆಲೊಯೊವೊ ಎಂಬ ಊರಿನ ಶಾಲೆಗೆ ನನ್ನನ್ನು ಸೇರಿಸಿದ್ದರು. ನನ್ನೂರಿನಿಂದ ನಿತ್ಯವೂ ಅಲ್ಲಿಗೆ ಹೋಗಿ ಬರುತ್ತಾ 16ಕಿ.ಮೀ. ಸವೆಸುತ್ತಿದ್ದೆ. ಆ ಬಿರುಬಿಸಿಲಲ್ಲಿ ಬರಿಗಾಲಲ್ಲೇ ಓಡುತ್ತಾ ಹೋಗಿ ಬರುತ್ತಿದ್ದೆ. ಕಪ್ತುವೊ ಎಂಬ ಊರಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದೆ. ಆಗ ಸೇನೆಗೆ ಸೇರಲು ನನಗೆ ಒತ್ತಡ ಬಂದಿತ್ತು. ಆದರೆ ಆಕಸ್ಮಿಕವಾಗಿ ಪೊಲೀಸ್ ಇಲಾಖೆ ಸೇರಿದೆ.
ಈ ಎಲ್ಲಾ ಸಂದರ್ಭ ಗಳಲ್ಲಿಯೂ ತಂದೆಯ ಮಾರ್ಗದರ್ಶನ ನನ್ನ ಬೆನ್ನಿಗಿತ್ತು. ಆದರೆ ಅವರೂ ಬೇಗನೆ ತೀರಿಕೊಂಡರು. ಪೊಲೀಸ್ ಇಲಾಖೆಯಲ್ಲಿದ್ದಾಗ ಆಗಿನ ಹೋರಾಟಗಾರ ಜೋಮೊ ಕೆನ್ಯಾಟ ಅವರು ಗೃಹಬಂಧನದಲ್ಲಿದ್ದರು. ಅಲ್ಲಿದ್ದ ಕಾವಲು ಪಡೆಯಲ್ಲಿ ನಾನೂ ಒಬ್ಬನಾಗಿದ್ದೆ’ ಎನ್ನುವ ಕಿಪ್ ಅವರು ಆ ಕಾಲದ ಕೆನ್ಯಾದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡುತ್ತಲೇ ಜೋಮೊ ಕೆನ್ಯಾಟ ಅವರ ಮಾನವೀಯ ಮುಖಗಳನ್ನೂ ಪರಿಚಯಿಸುತ್ತಾರೆ.
ಒಲಿಂಪಿಕ್ಸ್ ಹಾದಿಯಲ್ಲಿ...
ಕೆನ್ಯಾ ಅಥ್ಲೆಟಿಕ್ ಸಂಸ್ಥೆಯು 50ರ ದಶಕದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಹೀಗಾಗಿ ಪೊಲೀಸ್ ಇಲಾಖೆಯಲ್ಲಿರುವಾಗಲೇ ಕಿಪ್ ಅನೇಕ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಅವರ ಪ್ರತಿಭೆ ಪ್ರಖರಗೊಂಡಿತ್ತು. 1959ರಲ್ಲಿ ಯುಎಇನಲ್ಲಿ ನಡೆದ ಅಥ್ಲೆಟಿಕ್ ಕೂಟದಲ್ಲಿ ಇವರು ಸ್ವರ್ಧಿಸಿದ್ದರು.
1960ರ ರೋಮ್ ಒಲಿಂಪಿಕ್ಸ್ಗೂ ಅರ್ಹತೆ ಗಳಿಸಿದ್ದರು. ಆದರೆ ಇನ್ನೂ ಚಿಕ್ಕವನೆಂಬ ಕಾರಣಕ್ಕೆ ಕೆನ್ಯಾ ತಂಡದಲ್ಲಿ ಸ್ಥಾನ ಪಡೆಯಲಾಗುವುದಿಲ್ಲ. ಆದರೆ 1962ರಲ್ಲಿ ಆಸ್ಟ್ರೇಲಿಯಾದ ಪರ್ತ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಕೆನ್ಯಾ ದೇಶದ ತಂಡದಲ್ಲಿ ಇವರು ಪಾಲ್ಗೊಂಡಿದ್ದರು. ಪರ್ತ್ ನಲ್ಲಿ ಕಂಚಿನ ಪದಕ ಕೂದಲೆಳೆಯುಷ್ಟು ಅಂತರ ದಿಂದ ತಪ್ಪಿಹೋಯಿತು.
1964ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿ 5000ಮೀಟರ್ಸ್ ಓಟದಲ್ಲಿ 4ನೇ ಸ್ಥಾನ ಪಡೆದರೆ, 5000ಮೀಟರ್ಸ್ ಓಟದಲ್ಲಿ 6ನೇ ಸ್ಥಾನ ಗಳಿಸಿದ್ದರು. ಆಲ್ ಆಫ್ರಿಕ ಕ್ರೀಡಾಕೂಟಕ್ಕೆ ನಮ್ಮ ಏಷ್ಯನ್ ಕ್ರೀಡಾ ಕೂಟದಷ್ಟೇ ಮಹತ್ವ ಇದೆ. 1965ರಲ್ಲಿ ಕಾಂಗೊದಲ್ಲಿ ನಡೆದಿದ್ದ ಆಲ್ ಆಫ್ರಿಕ ಕ್ರೀಡಾಕೂಟದಲ್ಲಿ ಕಿಪ್ಕೈನೊ ಅವರು ಕೆನ್ಯಾ ತಂಡದ ನಾಯಕರಾಗಿದ್ದರು. ಅದೇ ವರ್ಷ ಸ್ವೀಡನ್ನಲ್ಲಿ ನಡೆದಿದ್ದ ಅಂತರರಾಷ್ಟ್ರೀಯ ಕೂಟದಲ್ಲಿ ಎರಡು ವಿಶ್ವದಾಖಲೆಯ ಸಾಮರ್ಥ್ಯ ತೋರಿದ್ದರು.
ಅಲ್ಲಿ ಅವರು 3,000ಮೀಟರ್ಸ್ ದೂರವನ್ನು 7ನಿಮಿಷ 39.6ಸೆಕೆಂಡುಗಳಲ್ಲಿ ಕ್ರಮಿಸಿದ್ದರೆ, 5,000ಮೀಟರ್ಸ್ ದೂರವನ್ನು 13ನಿಮಿಷ 24.2ಸೆಕೆಂಡುಗಳಲ್ಲಿ ಕ್ರಮಿಸಿ ದ್ದರು. ಆ ನಂತರ 1968ರ ಮೆಕ್ಸಿಕೊ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದರು. 1972ರಲ್ಲಿ ಮ್ಯೂನಿಕ್ನಲ್ಲಿ ನಡೆದ ಒಲಿಂಪಿಕ್ಸ್ನಲ್ಲಿಯೂ ಇವರು 3,000 ಮೀಟರ್ಸ್ ಸ್ಟೀಪಲ್ಚೇಸ್ನಲ್ಲಿ ಚಿನ್ನ ಗೆದ್ದರಲ್ಲದೆ, 1,500 ಮೀಟರ್ಸ್ ಓಟದ ಸ್ವರ್ಧೆಯಲ್ಲಿ ಬೆಳ್ಳಿಯ ಪದಕ ಗಳಿಸಿದ್ದರು.
ಕಿಪ್ ಪಾಲ್ಗೊಂಡಿದ್ದ ಮೆಕ್ಸಿಕೊ ಒಲಿಂಪಿಕ್ಸ್ನಲ್ಲಿ ಕೆನ್ಯಾ ಮೊದಲ ಚಿನ್ನ ಗೆದ್ದಿತು. ಈವರೆಗೆ ಕೆನ್ಯಾ ದೇಶದ ಓಟಗಾರರು ಒಲಿಂಪಿಕ್ಸ್ನಲ್ಲಿ 24ಚಿನ್ನ, 31ಬೆಳ್ಳಿ ಮತ್ತು 24 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ಸ್, ಕಾಮನ್ವೆಲ್ತ್ ಕ್ರೀಡಾಕೂಟ, ಡೈಮಂಡ್ ಲೀಗ್ ಅಥ್ಲೆಟಿಕ್ಸ್, ವಿಶ್ವ ಅಥ್ಲೆಟಿಕ್ಸ್, ಆಲ್ ಆಫ್ರಿಕ ಕ್ರೀಡಾ ಕೂಟಗಳಲ್ಲಿ ಕೆನ್ಯಾ ಓಟಗಾರರ ದಾಖಲೆ ಸಾಹಸ ನಿರಂತರವಾಗಿದೆ. ಜೋಸೆಫ್್ ಎನ್ಗುಗಿ, ಮೋಸೆಸ್ ತನುಯ್, ಪಾಲ್ ಟರ್ಗೆಟ್, ಟೆಕ್ಲಾ ಲೊರುಪ್ ಮುಂತಾದ ಓಟದ ದಂತಕಥೆಗಳೂ ಮೂಡಿ ಬಂದಿವೆ.
1973ರಲ್ಲಿ ಇವರು ನಿವೃತ್ತಿ ಪ್ರಕಟಿಸಿದರು. ನಂತರ ಇವರು ಸ್ಕಾಟ್ಲೆಂಡ್ನ ಮಿಲಿಟರಿ ಶಾಲೆಯಲ್ಲಿ ತರಬೇತಿ ಪಡೆದರು. ತಮ್ಮೂರು ಎಲ್ಡೊರೆಟ್ನಲ್ಲಿ ಪುಟ್ಟ ಮನೆ ಕಟ್ಟಿಕೊಂಡು ನೆಲೆಸಿದರು. ತಮಗಿರುವ ಕೃಷಿ ಭೂಮಿ ಯಲ್ಲಿ ಕೃಷಿ ಮಾಡಿ ಸ್ವಾವಲಂಬಿ ಬದುಕು ಕಂಡು ಕೊಂಡರು. ಕಿಪ್ ಮತ್ತು ಫಿಲ್ಲಿ ದಂಪತಿಗೆ ಏಳು ಮಕ್ಕಳು. ತಮ್ಮ ಸಂಪರ್ಕಕ್ಕೆ ಬಂದ ಅನಾಥ ಮಕ್ಕಳನ್ನೆಲ್ಲಾ ಇದೇ ಮನೆಯಲ್ಲಿರಿಸಿಕೊಂಡು ಅವರೆಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸಿದ್ದಾರೆ.
ಅನಾಥಾಲಯ ಬೆಳೆದಿದೆ. ಅದೇ ಊರಿನ ಇನ್ನೊಂದು ಕಡೆ ಪ್ರಾಥಮಿಕ ಶಾಲೆ ಕಟ್ಟಿದ್ದಾರೆ. ಮಾಧ್ಯಮಿಕ ಶಾಲೆಯನ್ನೂ ನಡೆಸುತ್ತಿದ್ದಾರೆ. ಅಲ್ಲಿ ತಾವೇ ನಡೆಸುವ ಅನಾಥಾಲಯದಲ್ಲಿರುವ ನೂರಾರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಕ್ರೀಡಾ ತರಬೇತಿ ನೀಡಿದ್ದಾರೆ.
ಈಗ ಇದು ಕೆನ್ಯಾದ ಉತ್ತಮ ಶಾಲೆಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಹೊಂದಿದೆ. ಅದೇ ಊರಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವಲ್ಲಿ ಕಿಪ್ ಪಾತ್ರ ಬಲು ದೊಡ್ಡದು. ಇದೀಗ ರಿಯೊ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿರುವ ಕೆನ್ಯಾ ತಂಡದ ಅಥ್ಲೀಟ್ಗಳು ಇದೇ ಕ್ರೀಡಾಂಗಣದಲ್ಲಿ ತರಬೇತು ಪಡೆದಿದ್ದಾರೆ. ಲಂಡನ್ ಒಲಿಂಪಿಕ್ಸ್ನಲ್ಲಿ ಕೆನ್ಯಾ ಎರಡು ಚಿನ್ನ ಗೆದ್ದಿತ್ತು. ಅವರಿಬ್ಬರೂ ಎಲ್ಡೊರೆಟ್ನಲ್ಲಿ ಕಿಪ್ ಕೈನೊ ಅವರ ಬಳಿಯೇ ತರಬೇತು ಪಡೆದವರು.
ಎರಡು ವರ್ಷಗಳ ಹಿಂದೆ ಕಿಪ್ ಕೈನೊ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಕ್ಕಾಗಿಯೇ ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮುಖ್ಯಸ್ಥ ಥಾಮಸ್ ಬಾಕ್ ಅವರೇ ಎಲ್ಡೊರೆಟ್ಗೆ ಹೋಗಿದ್ದರು.
‘ನಾನು ಈ ಸಂಸ್ಥೆಯನ್ನು ಅತಿ ದೊಡ್ಡದಾಗಿ ಬೆಳೆಸಲು ಸಾಧ್ಯವಿದೆ. ಆದರೆ ಆ ರೀತಿ ಮಾಡುವುದಿಲ್ಲ. ಏಕೆಂದರೆ ಆಗ ಅದು ಉದ್ಯಮದ ಸ್ವರೂಪ ಪಡೆದುಕೊಂಡು ಮೂಲ ಪರಿಕಲ್ಪನೆಯೇ ಕಳೆದುಹೋಗುವ ಸಾಧ್ಯತೆ ಇದೆ. ನನ್ನ ಅನಾಥ ಮಕ್ಕಳು ಮತ್ತೆ ಅನಾಥರಾಗುವ ಅಪಾಯವಿದೆ’ ಎಂದು ಕಿಪ್ ಅವರು ತಮ್ಮ ಹೃದಯದ ಭಾವಗಳನ್ನು ಬಿಚ್ಚಿಡುತ್ತಾರೆ.
ಸ್ವಾತಂತ್ರ್ಯಾ ನಂತರ ಕೆನ್ಯಾ ಒಲಿಂಪಿಕ್ ಸಂಸ್ಥೆಗೆ ದಶಕದ ಕಾಲ ಅಧ್ಯಕ್ಷರಾಗಿದ್ದ ಕಿಪ್ ಕೈನೊ ಆ ದೇಶದ ಕ್ರೀಡಾಂದೋಲನ ಹೊಸ ಆಯಾಮ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
‘ನಾನು ಹುಟ್ಟುವಾಗ ಬೆತ್ತಲಾಗಿದ್ದೆ. ಹೋಗು ವಾಗಲೂ ಏನನ್ನೂ ಕೊಂಡು ಹೋಗುವುದಿಲ್ಲ. ಆದರೆ ನಾನು ಬದುಕಿರುವಷ್ಟೂ ವರ್ಷ ನನ್ನ ಅನಾಥಾಲಯದ ಮಕ್ಕಳ ಪ್ರೀತಿಯ ಸಿಹಿ ಸಂತಸ ನನ್ನನ್ನು ಅತೀವ ಖುಷಿಯಾಗಿಟ್ಟಿರುತ್ತದೆ. ಇದಕ್ಕಿಂತ ಇನ್ನೇನು ಬೇಕು’ ಎಂದು ಹೈದರಾಬಾದ್ನಲ್ಲಿ ಕಿಪ್ ಸಂತನಂತೇ ಮಾತನಾಡಿದ್ದು ಅನುರಣಿಸುತ್ತಲೇ ಇದೆ.
ಇದೀಗ ರಿಯೊ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿಯೂ ಅವರು ಅಂತಹದೇ ಮಾತು ಗಳನ್ನು ಹೇಳಿದ್ದಾರೆ. ‘ಇಲ್ಲದವರು, ಹಸಿದವರು ನಮ್ಮ ನಡುವೆ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಯಾವ ಯಾವುದೋ ಕಾರಣಗಳಿಂದಾಗಿ ಅನಾಥರಾದ ಅಸಂಖ್ಯ ಮಕ್ಕಳೂ ಇದ್ದಾರೆ. ಇವರೆಲ್ಲರಿಗೂ ಅನ್ನ, ಆಸರೆ ಕೊಡುವ ಬಗ್ಗೆ ನಾವು ಯೋಚಿಸೋಣ.ಕ್ರೀಡೆ ಎನ್ನುವುದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಲ್ಲರಿಗೂ ಪ್ರೀತಿ ಕೊಡುವಂತಿರಲಿ’ ಎಂದಿದ್ದಾರೆ.
***
ಜಗತ್ತನ್ನು ಬದಲಾಯಿಸುವ ಶಕ್ತಿ ಕ್ರೀಡೆಗಿದೆ. ಜೀವನೋತ್ಸಾಹ ತುಂಬುವ ಶಕ್ತಿಯೂ ಇದಕ್ಕಿದೆ. ಯುವಜನರ ಮನತಟ್ಟುವ ಭಾಷೆಯಲ್ಲಿ ಮಾತನಾಡುವ ಸಾಮರ್ಥ್ಯವೂ ಕ್ರೀಡೆಗಿದೆ.
–ನೆಲ್ಸನ್ ಮಂಡೇಲ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.