ಭಾನುವಾರ, ಜುಲೈ 25, 2021
28 °C

ಕೆಪಿಸಿಸಿ ಶೀಘ್ರ ಪುನರ್‌ರಚನೆ: ಪರಮೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸದ್ಯದಲ್ಲೇ ಕೆಪಿಸಿಸಿಯನ್ನು ಪುನರ್‌ರಚಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.ಪ್ರದೇಶ ಕಾಂಗ್ರೆಸ್ ಸಮಿತಿಯ ಕೆಲವು ಪದಾಧಿಕಾರಿಗಳು ಸಂಪುಟಕ್ಕೆ ಸೇರಿದ್ದಾರೆ. ಒಬ್ಬರಿಗೆ ಒಂದು ಹುದ್ದೆ ತತ್ವದ ಪ್ರಕಾರ ಸಚಿವರಾಗಿರುವವರು ಪಕ್ಷದ ಹುದ್ದೆ ಬಿಡಬೇಕಾಗುತ್ತದೆ. ಹೀಗಾಗಿ ಕೆಪಿಸಿಸಿ ಪುನರ್‌ರಚಿಸುವ ಅಗತ್ಯವಿದೆ. ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಅವರು ಬೆಂಗಳೂರಿಗೆ ಬಂದು ಹೋದ ನಂತರ ಈ ಪ್ರಕ್ರಿಯೆ ನಡೆಯಲಿದೆ ಎಂದು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಜುಲೈ 1ರಂದು ಬೆಂಗಳೂರಿಗೆ ಬರಲಿರುವ ದಿಗ್ವಿಜಯ್‌ಸಿಂಗ್ ಅವರು ಕೆಪಿಸಿಸಿ ಸಾಮಾನ್ಯ ಸಭೆ ಮತ್ತು ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಮುಖಂಡರನ್ನು ಅವರು ಭೇಟಿ ಮಾಡಲಿದ್ದಾರೆ ಎಂದರು.ವೀಕ್ಷಕರ ನೇಮಕ: ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯದ 28 ಕ್ಷೇತ್ರಗಳಿಗೂ ವೀಕ್ಷಕರನ್ನು ನೇಮಕ ಮಾಡಿದ್ದು, ಒಂದು ತಿಂಗಳಲ್ಲಿ ವರದಿ ನೀಡಲಿದ್ದಾರೆ. ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೆ ಮೂವರು ವೀಕ್ಷಕರನ್ನು ನೇಮಿಸಲಾಗಿದೆ. ಕ್ಷೇತ್ರದಲ್ಲಿನ ಕಾರ್ಯಕರ್ತರು, ಮುಖಂಡರು, ಪಕ್ಷದ ಪರ ಒಲವು ಹೊಂದಿರುವವರನ್ನು ಭೇಟಿಯಾಗಿ ಅಭ್ಯರ್ಥಿಗಳ ಆಯ್ಕೆ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.`ಜುಲೈ ತಿಂಗಳಲ್ಲಿ ವೀಕ್ಷಕರು ಪ್ರವಾಸ ಮಾಡಲಿದ್ದಾರೆ. ಅವರೊಂದಿಗೆ ಕೆಪಿಸಿಸಿಯ ಜಿಲ್ಲಾ ಉಸ್ತುವಾರಿ ಪದಾಧಿಕಾರಿಗಳೂ ಇರುತ್ತಾರೆ. ಇದಾದ ನಂತರ ನಾನೂ ಸಹ 28 ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇನೆ. ವೀಕ್ಷಕರು ನೀಡುವ ವರದಿ ಹಾಗೂ ಪ್ರವಾಸ ಸಂದರ್ಭದಲ್ಲಿ ಕಾರ್ಯಕರ್ತರಿಂದ ನನಗೆ ಬರುವ ಮಾಹಿತಿಯನ್ನು ಕ್ರೋಡೀಕರಿಸಿ ಪಕ್ಷದ ಹೈಕಮಾಂಡ್‌ಗೆ ವರದಿ ನೀಡಲಾಗುವುದು' ಎಂದರು.ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಜಯಗಳಿಸುವ ವಿಶ್ವಾಸವಿದೆ. ಹಾಲಿ ಲೋಕಸಭಾ ಸದಸ್ಯರಿಗೆ ಟಿಕೆಟ್ ದೊರೆಯುವುದು ಖಚಿತ. ಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಅಗತ್ಯಬಿದ್ದರೆ ಕೆಲವು ಸಚಿವರೂ ಕಣಕ್ಕೆ ಇಳಿಯಬಹುದು ಎಂದರು.ತಿಂಗಳಿಗೆ ಒಮ್ಮೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡುವಂತೆ ಎಲ್ಲ ಸಚಿವರಿಗೂ ಸೂಚಿಸಲಾಗಿದೆ. ಈ ಸಂಬಂಧ ವೇಳಾಪಟ್ಟಿ ಸಿದ್ಧಪಡಿಸಲಾಗುವುದು. ಸಿದ್ದರಾಮಯ್ಯ ಸೇರಿದಂತೆ ಎಲ್ಲ ಸಚಿವರೂ ಕಚೇರಿಗೆ ಬರಲಿದ್ದಾರೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.