ಶುಕ್ರವಾರ, ಮಾರ್ಚ್ 5, 2021
27 °C

ಕೆರೆ ಇದೆ: ಸಮಸ್ಯೆಯೂ ಸಮುದ್ರದಷ್ಟಿದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆ ಇದೆ: ಸಮಸ್ಯೆಯೂ ಸಮುದ್ರದಷ್ಟಿದೆ!

ಹಳೇಬೀಡು: ಯಗಚಿ ನದಿ ಏತ ನೀರಾವರಿ ಯೋಜನೆಯಿಂದ ವಂಚಿತವಾಗಿರುವ ಹಳೇಬೀಡಿನ ದ್ವಾರಸಮುದ್ರ ಕೆರೆ ಐತಿಹಾಸಿಕ ಮಹತ್ವ ಹೊಂದಿದ್ದರೂ ಹಲವಾರು ಸಮಸ್ಯೆಗಳಿಂದ ನಲುಗಿದೆ.ಹಾಸನ ಜಿಲ್ಲೆಯಲ್ಲಿಯೇ ದೊಡ್ಡದಾದ ದ್ವಾರಸಮುದ್ರ ಕೆರೆ ಮಳೆ ಕೊರತೆಯಿಂದ ಬರಿದಾಗುವ ಹಂತದಲ್ಲಿದೆ. ಸಂಗ್ರಹವಾಗಿರುವ ನೀರು ತಳ ಮುಟ್ಟುತ್ತಿರುವುದಲ್ಲದೇ ತೀರಾ ಹಳೇಯದಾಗಿದ್ದು, ಹಸಿರು ಬಣ್ಣಕ್ಕೆ ತಿರುಗಿ ತಾಜಾತನ ಕಳೆದುಕೊಳ್ಳುತ್ತಿದೆ.ಕೆರೆ ನೀರನ್ನು ಜಾನುವಾರು ಸಹ ಕುಡಿಯಲು ಹಿಂಜರಿಯುತ್ತಿವೆ. ಒಮ್ಮೆ ನೀರಿನಲ್ಲಿ ಮುಳುಗಿ ಮೇಲೆದ್ದರೆ ಮೈಕೈ ತುರಿಕೆ ಬರುತ್ತದೆ ಎಂಬ ಮಾತು ಈಜು ಪ್ರೀಯರಿಂದ ಕೇಳಿಬರುತ್ತಿದೆ.ಕೆರೆಯಲ್ಲಿ ಹತ್ತಾರು ಜಾತಿಯ ಸ್ವದೇಶಿ ಪಕ್ಷಿ ನೆಲೆಸಿರುವುದಲ್ಲದೆ, ಕೆರೆ ಮಧ್ಯದಲ್ಲಿರುವ ಕಾಗೆಗುತ್ತಿ ಹಾಗೂ ಚಿಕ್ಕಗುತ್ತಿಗೆ ಕಾಲಮಾನದಲ್ಲಿ ವಿದೇಶಿ ಹಕ್ಕಿಗಳು ಬಂದು ವಾಸ್ತವ್ಯ ಮಾಡುತ್ತವೆ. ಪಕ್ಷಿ ಪ್ರೀಯರಿಗೆ ಸುಂದರವಾದ ತಾಣವಾಗಿರುವ ಕೆರೆ ಸ್ವಚ್ಚತೆಗೆ ಗಮನ ಹರಿಸಬೇಕು ಎನ್ನುತ್ತಾರೆ ಸ್ಥಳೀಯರು.ರಾಷ್ಟ್ರಕೂಟರ ಪ್ರಸಿದ್ಧ ದೊರೆ ಧ್ರುವಮಹಾರಾಜ ಕೆರೆ ನಿರ್ಮಿಸಿದ್ದ. ವಿಶಾಲವಾದ ಕೆರೆ ನೋಡಿದ ಹೊಯ್ಸಳ ಅರಸರು ಇಲ್ಲಿ ದ್ವಾರಸಮುದ್ರ ಎನ್ನುವ ಹೆಸರಿನಿಂದ ತಮ್ಮ ಸಾಮ್ರಾಜ್ಯ ಸ್ಥಾಪಿಸಿ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು ಎಂದು ಇತಿಹಾಸ ಹೇಳುತ್ತದೆ.ದೋರ ಎಂಬ ಅರಸು ಕೆರೆ ನಿರ್ಮಿ ಸಿದ್ದರಿಂದ ದೋರಸಮುದ್ರ ಎಂದು ಹೆಸರಿಡಲಾಗಿತ್ತು ನಂತರ ಜನರ ಬಾಯಿಂದ ದ್ವಾರಸಮುದ್ರ ಆಯಿತು ಎನ್ನುತ್ತಾರೆ ಕೆಲವರು.ಹೊಯ್ಸಳ ಅರಸರು ಕೆರೆ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದರು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ವ್ಯವಸಾಯಕ್ಕೆ ಪ್ರಾಮುಖ್ಯತೆ ನೀಡಿ ಎರಡೂ ತೂಬು ನಿರ್ಮಿಸಿ ಅಂದಿನ ಕಾಲದಲ್ಲಿಯೇ ನಾಲೆಗಳ ಮುಖಾಂತರ ಜಮೀನಿಗೆ ನೀರು ಹರಿಸಿದ್ದರು. ಬೃಹತ್ ಕಲ್ಲುಗಳಿಂದ ಕೋಡಿಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಿದ್ದರು. ರಣಘಟ್ಟ ಸಮೀಪ ಒಡ್ಡು ನಿರ್ಮಿಸಿ ಬೇಲೂರು ಯಗಚಿ ನದಿಯಿಂದ ಕೆರೆಗೆ ನೀರು ಹರಿಸಿ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿದ್ದರು. ಯೋಜನೆಯ ಮುಖಾಂತರ ವ್ಯವಸಾಯ ಮಾತ್ರ ವಲ್ಲದೆ ಕುಡಿಯುವ ನೀರಿನ ಬರ ಕಾಡದಂತೆ ಎಚ್ಚರವಹಿಸಿದ್ದರು ಎನ್ನುತ್ತಾರೆ ಇತಿಹಾಸಕಾರರು.ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿಯೂ ದ್ವಾರಸಮುದ್ರ ಕೆರೆಗೆ ಏತ ನೀರಾವರಿ ಮುಖಾಂತರ ನೀರು ಹರಿಸುವ ಯೋಜನೆಯ ಪ್ರಕ್ರಿಯೆ ದಶಕಗಳಿಂದ ನಡೆಯುತ್ತಿದೆ. ರಾಜಕಾರ ಣಿಗಳ ಇಚ್ಚಾಶಕ್ತಿಯ ಕೊರತೆಯಿಂದ ಯೋಜನೆ ಅನುಷ್ಟಾನಗೊಳ್ಳುತ್ತಿಲ್ಲ. ಕಾರ್ಯಗತವಾಗದ ಯೋಜನೆಯನ್ನು ಚುನಾವಣಾ ಸಮಯದಲ್ಲಿ ರಾಜಕೀಯ ನೇತಾರರು ಮತ ಸೆಳೆಯುವ ಗಾಳವಾಗಿ ಬಳಸಿಕೊಳ್ಳುತ್ತಿರುವುದು ನಿಜ.ಹೊಯ್ಸಳ ಬೋಟಿಂಗ್ ಸಂಸ್ಥೆ ಕೆರೆಯಲ್ಲಿ ದೋಣಿವಿಹಾರ ನಡೆಸುತ್ತಿದೆ. ಕೆರೆ ಹೊಯ್ಸಳ ದೇವಾಲಯದ ಸನಿಹ ದಲ್ಲಿದ್ದು, ದೇವಾಲಯ ಆವರಣದಿಂದ ಬೋಟಿಂಗ್ ನಿಲ್ದಾಣಕ್ಕೆ ಕಲ್ಪಿಸಿದ್ದ ಪ್ರವೇಶ ದ್ವಾರ ಮುಚ್ಚಲಾಗಿದೆ. ಕರೆ ತೀರದ ಕಿರಿದಾದ ರಸ್ತೆಯಲ್ಲಿ ಸಾರ್ವಜನಿಕರು ಮಲಮೂತ್ರ ವಿಸರ್ಜಿಸಿ ಗಲೀಜು ಮಾಡುವುದರಿಂದ ಪ್ರವಾಸಿಗರು ದೋಣಿವಿಹಾರಕ್ಕೆ ಬರಲು ಹಿಂಜರಿಯುತ್ತಿದ್ದಾರೆ.ಕೆರೆ ಏರಿ ತೀರಾ ಕಿರಿದಾಗಿದ್ದು ಹೆಚ್ಚು ವಾಹನ ಸಂಚರಿಸುವಾದ ಟ್ರಾಫಿಕ್ ಜಾಮ್ ಆಗುತ್ತಿರುತ್ತದೆ.

ಹಿಂದೆ ಪ್ರವಾಹ ಸಂಭವಿಸಿದಾಗ ಪ್ರಾಚೀನ ಕಾಲದ ಕೋಡಿ ಸೇತುವೆ ಶಿಥಿಲಗೊಂಡಿದೆ. ಸ್ಮಾರಕಗಳು ಹಾಗೂ ಕೆರೆಗೆ ಇರುವಷ್ಟೆ ಐತಿಹಾಸಿಕ ಮಹತ್ವ ಸೇತುವೆಗೂ ಇರುವುದರಿಂದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ದುರಸ್ತಿ ಕ್ರಮಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.