ಗುರುವಾರ , ಮೇ 19, 2022
24 °C

ಕೆಲವರಿಗೆ ಬೇಸರ, ಕೆಲವರಿಗೆ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಜಿಎಫ್ ಶಾಸಕ ವೈ. ಸಂಪಂಗಿ ಅವರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಮೂರೂವರೆ ವರ್ಷಗಳ ಕಠಿಣ ಜೈಲುವಾಸದ ಶಿಕ್ಷೆ ವಿಧಿಸಿದ ವಿಷಯ ತಿಳಿದ ಸಂಪಂಗಿ ಬೆಂಬಲಿಗರು ಆಘಾತಕ್ಕೆ ಒಳಗಾದರು.`ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ತೀರ್ಪು ಇಂದು (ಶನಿವಾರ) ಹೊರಬೀಳಲಿದೆ. ಪ್ರಕರಣದಲ್ಲಿ ನಾನು ನಿರ್ದೋಷಿಯಾಗಿ ಹೊರಬರುತ್ತೇನೆ ಎಂದು ಸಾಹೇಬ್ರು ಹೇಳಿದ್ದರು. ಆದರೆ ಈಗ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ~ ಎಂದು ಸಂಪಂಗಿ ಬೆಂಬಲಿಗರೊಬ್ಬರು ಬೇಸರದಿಂದ ಹೇಳಿದರು.ಸಂಪಂಗಿ ಲಂಚ ಪ್ರಕರಣದ ಆದೇಶ ಶನಿವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಹೊರಬೀಳಲಿದೆ ಎಂಬ ಮಾಹಿತಿ ಪಡೆದ ಬೆಂಬಲಿಗರು, ಇಲ್ಲಿನ ಬಹುಮಹಡಿ ಕಟ್ಟಡದಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಜಮಾಯಿಸಿದ್ದರು. ನ್ಯಾಯಾಧೀಶ ಸುಧೀಂದ್ರ ರಾವ್ ಅವರು ಮಧ್ಯಾಹ್ನ 12.15ರ ವೇಳೆಗೆ ಆದೇಶ ಪ್ರಕಟಿಸಿದ ಸಂದರ್ಭದಲ್ಲಿ ಬೆಂಬಲಿಗರ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು.ಸಂಪಂಗಿ ಅವರನ್ನು ಲೋಕಾಯುಕ್ತ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯುವ ವೇಳೆಗೆ ಮಧ್ಯಾಹ್ನ 3.30 ಆಗಿತ್ತು. ಆದೇಶ ಹೊರಬಿದ್ದ ಕ್ಷಣದಿಂದ ಸಂಪಂಗಿ ಅವರನ್ನು ಕರೆದೊಯ್ಯುವ ಹೊತ್ತಿನವರೆಗೂ ಬೆಂಬಲಿಗರು ನ್ಯಾಯಾಲಯದ ಎದುರೇ ಇದ್ದರು. ಆದೇಶ ಹೊರಬಿದ್ದಾಗ ಮ್ಲಾನವದನರಾಗಿದ್ದ ಸಂಪಂಗಿ, ಪೊಲೀಸ್ ವಾಹನ ಏರುವವರೆಗೂ ಸಪ್ಪಮೋರೆಯಲ್ಲೇ ಇದ್ದರು. ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದ ಸಮೀಪ ಎಲೆ ಕ್ಟ್ರಾನಿಕ್ ಮಾಧ್ಯಮದ ಪ್ರತಿನಿಧಿಗಳು ಸಂಪಂಗಿ ಅವರನ್ನು ಜೈಲಿನೊಳಗೆ ಕರೆದೊಯ್ಯುವ ಸಂದರ್ಭದ ಚಿತ್ರೀಕರಣಕ್ಕೆ ಮುಂದಾದಾಗ, ಸಂಪಂಗಿ ತಮ್ಮ ಮುಖ ತಿರುಗಿಸಿ ಅಸಮ್ಮತಿ ಸೂಚಿಸಿದರು.ಪ್ರಕರಣ ಕುರಿತ ಆದೇಶ ಬೆಂಬಲಿಗರ ಪಾಲಿಗೆ ಬೇಸರ ತಂದರೆ, ಕೆಲವರಿಗೆ ಸಂತಸ ನೀಡಿತು. ನ್ಯಾಯಾಲಯದ ಎದುರು ಬೆಂಬಲಿಗರಲ್ಲದೆ, ಮಾಧ್ಯಮ ಪ್ರತಿನಿಧಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದನ್ನು ನೋಡಿದ ಕೆಲವು ಕುತೂಹಲಭರಿತ ಸಾರ್ವಜನಿಕರು ಆದೇಶದ ಕುರಿತು ತಿಳಿದುಕೊಂಡರು. `ಸರಿಯಾಗೇ ಆಯಿತು, ಜನರ ಪ್ರತಿನಿಧಿಯಾಗಿ ಕ್ಷೇತ್ರದ ಸೇವೆ ಮಾಡಬೇಕಾದವರು ತಮ್ಮದಲ್ಲದ ಹಣಕ್ಕೆ ಆಸೆಪಟ್ಟರೆ ಏನಾಗುತ್ತದೆ ಎಂಬುದಕ್ಕೆ ಇವರೊಂದು ಮಾದರಿಯಾಗಲಿ~ ಎಂದು ರಾಜು ಎಂಬುವವರು `ಪ್ರಜಾವಾಣಿ~ ಜೊತೆ ಅಭಿಪ್ರಾಯ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.