ಮಂಗಳವಾರ, ಜೂಲೈ 7, 2020
22 °C

ಕೇಂದ್ರದ ವಿರುದ್ಧ ಸಹಕಾರಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರದ ವಿರುದ್ಧ ಸಹಕಾರಿಗಳ ಪ್ರತಿಭಟನೆ

ಬಾಗಲಕೋಟೆ: ಕೇಂದ್ರ ಸರಕಾರವು ಸಹಕಾರಿ ಕ್ಷೇತ್ರಕ್ಕೆ ಆದಾಯ ತೆರಿಗೆ ವಿಧಿಸಿದ್ದನ್ನು ರದ್ದುಪಡಿಸುವಂತೆ ಆಗ್ರಹಿಸಿ ಜಿಲ್ಲೆಯ ಸಹಕಾರಿಗಳು ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನವನಗರದ ಡಿಸಿಸಿ ಬ್ಯಾಂಕಿನಿಂದ ಆರಂಭಗೊಂಡ ಸಹಕಾರಿಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿತು. ಜಿಲ್ಲಾಧಿಕಾರಿ ಕುಂಜಪ್ಪ ಅವರ ಮೂಲಕ ಕೇಂದ್ರ ಹಣಕಾಸು ಸಚಿವ ಪ್ರಣವ ಮುಖರ್ಜಿಯವರಿಗೆ ಬೇಡಿಕೆಗಳ ಮನವಿ ಪತ್ರವನ್ನು ತಲುಪಿಸಲಾಯಿತು.ರಾಜ್ಯದಲ್ಲಿ ರೈತರಿಗೆ, ಒಕ್ಕಲುತನ ಅಭಿವೃದ್ಧಿಗೊಳಿಸಲು ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕುಗಳು ರೈತರಿಗೆ ಸಾಲ ಬಟವಡೆ ಮಾಡುತ್ತವೆ. ಹೆಚ್ಚಿನ ಅಭಿವೃದ್ಧಿಗೆ ಸಹಕಾರಿ ಬ್ಯಾಂಕುಗಳು ಶ್ರಮಿಸುತ್ತಿವೆ. ಈ ಸಂದರ್ಭದಲ್ಲಿ 2006-07ನೇ ವರ್ಷದಿಂದ ಸಹಕಾರಿ ಬ್ಯಾಂಕುಗಳಿಗೆ ಆದಾಯ ಕರ ಅನ್ವಯಿಸಲಾಗಿದೆ. ರೈತರು ಕೃಷಿ ಕಾರ್ಮಿಕರು, ಬಡವರು, ಉದ್ದಿಮೆಗಳು, ಶೇರು ಹಣದಿಂದ ಸ್ಥಾಪಿತವಾದ ಪಟ್ಟಣ ಸಹಕಾರಿ ಬ್ಯಾಂಕ್, ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕುಗಳು, ಆದಾಯ ಕರ ಪಾವತಿಸಿ ಶೇರುದಾರರಿಗೆ ಡಿವಿಡೆಂಟ್ ಕೊಡುವದು ಕಷ್ಟವಾಗಿದೆ. ಸಹಕಾರಿ ಸಂಘಗಳು ಬಡವಾಗುತ್ತಿವೆ. ಕೇಂದ್ರ ಸರ್ಕಾರದ ಹೊಸ ಕರ ನೀತಿಯು ಚಿಕ್ಕ ಬ್ಯಾಂಕುಗಳಿಗೆ ಶಾಪವಾಗಿ ಪರಿಣಮಿಸಲಿದೆ ಎಂದು ತಿಳಿಸಿದ್ದಾರೆ.ಭಾರತೀಯ ರಿಜರ್ವ್ ಬ್ಯಾಂಕಿನ ಇತ್ತೀಚಿನ ಸುತ್ತೋಲೆಯ ಪ್ರಕಾರ ಡಿಟಿಎಲ್‌ದ ಪ್ರತಿಶತ 25ರಷ್ಟನ್ನು ಸಹಕಾರಿ ಬ್ಯಾಂಕುಗಳಲ್ಲಿಯ ಹಣವನ್ನು ತೆಗೆದು ಕಡಿಮೆ ಆದಾಯ ಬರುವ ಸರಕಾರಿ ಸಾಲಪತ್ರಗಳಲ್ಲಿ ತೊಡಗಿಸಬೇಕಾಗಿದೆ. ಇದರಿಂದ ಸಹಕಾರಿ ಬ್ಯಾಂಕುಗಳು ಕ್ಷೀಣಿಸುತ್ತಿವೆ. ಆದಾಯ ಕರ ಆಕರಣೆಯಿಂದ ಸಹಕಾರಿ ಬ್ಯಾಂಕು ತುಂಬಾ ತೊಂದರೆಯಲ್ಲಿವೆ ಎಂದು ಪ್ರತಿಭಟನಾಕಾರರು ಹೇಳಿದರು.ಪಟ್ಟಣ ಸಹಕಾರಿ ಬ್ಯಾಂಕ ಹಾಗೂ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕುಗಳಿಗೆ ಆದಾಯ ಕರ ಅನ್ವಯಿಸದೆ 2007ರ ಪೂರ್ವದಲ್ಲಿ ಇದ್ದ ಪರಿಸ್ಥಿತಿಯನ್ನು ಮುಂದುವರೆಸಬೇಕು. ಆದಾಯ ಕರ ಕಾನೂನು 1961 ಕಲಂ 194(ಏ)(3) ಪ್ರಕಾರ ಸಹಕಾರಿ ಬ್ಯಾಂಕುಗಳ ಸದಸ್ಯರ ಠೇವಣಿಯ ಮೇಲಿನ ಬಡ್ಡಿಗೆ ಟಿಡಿಎಸ್ ಮಾಡುವದು ಅವಶ್ಯಕತೆ ಇರುವುದಿಲ್ಲ. ಆದರೆ ಆದಾಯ ಕರ ಅಧಿಕಾರಿಗಳು ಕಾನೂನನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿ ಮಾಡುತ್ತಿರುವುದು ದುರಾದೃಷ್ಟಕರ ಎಂದು  ದೂರಿದ್ದಾರೆ.ಪ್ರತಿಭಟನೆಯಲ್ಲಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಹಾದೇವಪ್ಪ ಹಟ್ಟಿ, ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮೆಳ್ಳಿ, ಬಿ.ಎಸ್. ಸಿಂಧೂರ, ಪಾಲಭಾವಿ, ಆರ್.ಟಿ. ಪಾಟೀಲ, ಪಿ.ಕೆ.ಪಿ.ಎಸ್. ಅಧ್ಯಕ್ಷರು, ಸದಸ್ಯರು, ನಿರ್ದೇಶಕರು, ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.