ಶುಕ್ರವಾರ, ಆಗಸ್ಟ್ 6, 2021
23 °C

ಕೈ ಪಾಳಯಕ್ಕೆ ಬಿಜೆಪಿ ಬೆಂಬಲಿತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ಬಿಜೆಪಿ ಬೆಂಬಲಿತ ಮೂವರು ಎ.ಪಿ.ಎಂ.ಸಿ ನಿರ್ದೇಶಕರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ ಎಂದು ಶಾಸಕ ರಾಜಶೇಖರ ಪಾಟೀಲ ತಿಳಿಸಿದರು.ಎ.ಪಿ.ಎಂ.ಸಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ ಘಾಟಬೋರಾಳ ಕ್ಷೇತ್ರದಿಂದ ಆಯ್ಕೆಗೊಂಡ ಕಾಂಗ್ರೆಸ್‌ ಬೆಂಬಲಿತ ನಿರ್ದೆಶಕ ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಕಲ್ಲೂರ ಪತ್ರಿಕಾ ಹೇಳಿ ನೀಡಿದ್ದಕ್ಕೆ ಪ್ರತಿಯಾಗಿ ಶಾಸಕ ಪಾಟೀಲ ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ದೂರವಾಣಿ ಮೂಲಕ `ಪ್ರಜಾವಾಣಿ~ಗೆ  ಪ್ರತಿಕಿಯೆ ನೀಡಿದ್ದಾರೆ.ಹುಮನಾಬಾದ್‌ ಎ.ಪಿ.ಎಂ.ಸಿಯ ಒಟ್ಟು 10ಸ್ಥಾನಗಳ ಪೈಕಿ ಹುಮನಾಬಾದ್‌ ವಿಧಾಸಭಾ ಕ್ಷೇತ್ರದಿಂದ 7ಜನ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ವಿಜಯ ಸಾಧಿಸಿದರೆ, ಬಿಜೆಪಿ ಬೆಂಬಲಿತ 3ಜನ ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಆದರೆ, ಬಿಜೆಪಿ ಅಧ್ಯಕ್ಷ ಕಲ್ಲೂರ ಅವರು ಬೀದರ್‌ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಮೂರು ಸ್ಥಾನ ಸೇರಿಸಿ, 6 ಎಂದು ಹೇಳಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಶಾಸಕ ಪಾಟೀಲ ಹೇಳಿದ್ದಾರೆ.ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಕಲ್ಲೂರ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿರುವುದು ಚುನಾವಣೆ ಎದುರಿಸಿ ಅಲ್ಲ, ಸರ್ಕಾರದಿಂದ ನಾಮನಿರ್ದೇಶನಗೊಂಡು ಹಿಂಬಾಗಿಲಿಂದ ಎನ್ನುವುದನ್ನು ಮರೆಯಬಾರದು. ಅದೇ ರೀತಿ ಹುಮನಾಬಾದ್‌ ಎಪಿಎಂಸಿಯಲ್ಲೂ ಸರ್ಕಾರ ನಾಮನಿರ್ದೇಶಗೊಳ್ಳುವ ನಿರ್ದೇಶಕರ ಬೆಂಬಲ ಪಡೆದು ಬಿಜೆಪಿ ಅಧಿಕಾರಕ್ಕೆ ಬರಬಹುದೆಂದು ಭಾವಿಸಿದ್ದಾರೆ.

 

ಇನ್ನೂ ಜಿಲ್ಲೆಯ ಔರಾದ್‌, ಬಸವಕಲ್ಯಾಣದಲ್ಲಿ ಸ್ಪಷ್ಟ ಬಹುಮತ ಬಂದಿರುವುದರಿಂದ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಆಶ್ವರ್ಯವಿಲ್ಲ. ಆದರೇ, ಭಾಲ್ಕಿ, ಹುಮನಾಬಾದ್‌, ಬೀದರ್‌ ಎ.ಪಿ.ಎಂ.ಸಿಯಲ್ಲಿ ಬಹುಮತ ಇಲ್ಲದೇ ಇರುವ ಈ ಸ್ಥಿತಿಯಲ್ಲಿ ಜಿಲ್ಲೆಯ ಎಲ್ಲ ಎ.ಪಿ.ಎಂ.ಸಿಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವುದು ಹಾಸ್ಯಸ್ಪದ ಎಂದು ಶಾಸಕ ರಾಜಶೇಖರ ಪಾಟೀಲ್‌ ಲೇವಡಿ ಮಾಡಿದ್ದಾರೆ.ಹುಮನಾಬಾದ್‌ ಎ.ಪಿ.ಎಂ.ಸಿ ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದ್ದು, ಆ ಬಗ್ಗೆ ತನಿಖೆ ಮಾಡಿಸುವುದಾಗಿ ಸುಭಾಷ ಕಲ್ಲೂರ ಹೇಳಿರುವುದಕ್ಕೆ ಸ್ವಾಗತಿಸುವುದಾಗಿ ತಿಳಿಸಿರುವ ಪಾಟೀಲ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇರುವುದರಿಂದ ಕಲ್ಲೂರ ಅವರು ಆ ಕಾರ್ಯ ಸಾಧ್ಯವಾದಷ್ಟು ಶೀಘ್ರ ಕೈಗೆತ್ತಿಕೊಂಡರೆ ಉತ್ತಮ. ಅಗತ್ಯಬಿದ್ದರೆ, ಲೋಕಾಯುಕ್ತ, ಸಿಬಿಐ ಸಾಧ್ಯವಾದರೇ ಸಿಓಡಿ ತನಿಖೆ ಮಾಡಿಸಲಿ ಎಂದು ಅವರು ಸಲಹೆ ನೀಡಿದ್ದಾರೆ.ಕಲ್ಲೂರ ಅವರು ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ನಂತರ ಕಾರ್ಖಾನೆ ಯಾವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಕಬ್ಬು ನುರಿಸುವಿಕೆ ಸ್ಥಗಿತಗೊಂಡ ಸಂದರ್ಭದಲ್ಲಿ ರೈತರ ಜೊತೆಗೂಡಿ ಬಿಜೆಪಿ ನಿರ್ದೇಶಕರೇ ಬೀದಿಗಿಳಿದು ಹೋರಾಟ ಮಾಡಿರುವುದು

ನೋಡಿದರೇ ಕಾರ್ಖಾನೆ ನಿರ್ದೇಶಕರು ಅವರ ನಾಯಕತ್ವಕ್ಕೆ ನೀಡಿರುವ ಬೆಲೆ ಏನು ಎನ್ನುವುದರ ಸ್ಪಷ್ಟ ಅರಿವಾಗುತ್ತದೆ.ಕಾರ್ಖಾನೆಯಲ್ಲಿ ಈವರಗೆ ನಡೆದಿರುವ ಅವ್ಯವಹಾರಗಳ ಬಗ್ಗೆ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರು ಆಕ್ಷೇಪಿಸಿ, ಹೋರಾಟ ನಡೆಸಿದರೆ, ಆಶ್ವರ್ಯ ಪಡಬೇಕಿರಲಿಲ್ಲ. ಅವರ ಪಕ್ಷದವರೇ ಆಡಳಿತ ವಿರುದ್ಧ ಪತ್ರಿಕೆಗಳಲ್ಲಿ ಬಹಿರಂಗ ಹೇಳಿಕೆ ನೀಡಿರುವುದು ಅವರ ನಾಯಕತ್ವ ವಿರೋಧಿಸುತ್ತಿರುವುದಕ್ಕೆ ಉತ್ತಮ ನಿದರ್ಶನ ಎಂದು ಪಾಟೀಲ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.