ಗುರುವಾರ , ಜೂನ್ 24, 2021
22 °C
ಕಾಳಘಟ್ಟ: 10 ಲಕ್ಷ ಲೀಟರ್ ನೀರು ಸಂಗ್ರಹಿಸುವ ‘ಕೃಷಿ ಹೊಂಡ’

ಕೈ ಹಿಡಿದ ಕೃಷಿ ಹೊಂಡ, ದಾಳಿಂಬೆ ಬದುಕಿಸಿದ ಮಳೆ ನೀರು!

ಪ್ರಜಾವಾಣಿ ವಾರ್ತೆ/ ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಒಂದರ ಹಿಂದೆ ಒಂದು ಕೊಳವೆಬಾವಿ ಕೈಕೊಟ್ಟವು. ಸಸಿಯಾಗಿದ್ದ ದಾಳಿಂಬೆ ಗಿಡವಾಗಿ ಬೆಳೆದು, ಕಾಯಿ ಕಚ್ಚುವ ಹಂತದಲ್ಲಿ ನೀರಿನ ಸಮಸ್ಯೆ ಎದುರಾಯಿತು. ಎಲ್ಲವೂ ಮುಗಿದೇ ಹೋಯಿತು ಎಂಬ ಚಿಂತೆಯಲ್ಲಿರುವಾಗ ಕೃಷಿ ಹೊಂಡದ ನೀರು ಕೈಹಿಡಿಯಿತು. ಜಲಮರು ಪೂರಣ ಮಾಡಿಸಿದ್ದ ಕೊಳವೆ ಬಾವಿಗಳು ದಾಳಿಂಬೆ ಕೃಷಿಯನ್ನು ಬದುಕಿಸಿದವು...ಹೊಳಲ್ಕೆರೆ ತಾಲ್ಲೂಕು ಕಾಳಘಟ್ಟದ ಕೃಷಿಕ ನಿಜಲಿಂಗಪ್ಪ, ಮಳೆ ನೀರು ಮರುಪೂರಣದಿಂದ ಕೊಳವೆಬಾವಿಯ ನೀರು ಹೆಚ್ಚಿಸಿ, ದಾಳಿಂಬೆ ಗಿಡಗಳನ್ನು ಉಳಿಸಿಕೊಂಡ ಯಶೋಗಾಥೆಯನ್ನು ಹೀಗೆ ಆರಂಭಿಸುತ್ತಾರೆ. ಸೋಲಿನಿಂದ ಗೆಲುವಿನೆಡೆಗೆ ಕ್ರಮಿಸಿದ ಶ್ರಮದ ಹಾದಿಯನ್ನು ಇಂಚು ಇಂಚಾಗಿ ಬಿಡಿಸಿ ಹೇಳುತ್ತಾರೆ.ಮೂರು ಎಕರೆ ದಾಳಿಂಬೆ: ನಿಜಲಿಂಗಪ್ಪ ಅವರು 6 ಎಕರೆ 18 ಗುಂಟೆ ಹಿಡುವಳಿದಾರರು. ಈ ಜಮೀನಿನಲ್ಲಿ ಮೊದಲು ರಾಗಿ, ಜೋಳದಂತಹ ಧಾನ್ಯ ಬೆಳೆಯುತ್ತಿದ್ದರು. 2010ರಲ್ಲಿ ಮೂರು ಎಕರೆಯಲ್ಲಿ ದಾಳಿಂಬೆ ಸಸಿಗಳನ್ನು ನಾಟಿ ಮಾಡಿದರು. ದಾಳಿಂಬೆ ಕೃಷಿಗಾಗಿ ಒಂದು ಕೊಳವೆಬಾವಿ ಕೊರೆಸಿದರು. ಒಂದೂವರೆ ಇಂಚು ನೀರು ಸಿಕ್ಕಿತು. ದಾಳಿಂಬೆ ಸಸಿಗಳು ಬೆಳೆಯುವ ಹಂತದಲ್ಲಿದ್ದಿದ್ದರಿಂದ ಅಷ್ಟು ನೀರು ಸಾಕಾಗುತ್ತಿತ್ತು. ಏಳೆಂಟು ತಿಂಗಳು ಕಳೆಯುವುದರೊಳಗೆ ಗಿಡಗಳು ಎತ್ತರವಾದವು. ಹೂವು, ಕಾಯಿ ಕಚ್ಚುವ ಹಂತ ತಲುಪಿತು. ಕೊಳವೆ ಬಾವಿಯಲ್ಲಿ ನೀರಿನ ಕೊರತೆ ಕಾಡಲಾರಂಭಿಸಿತು.ಕೃಷಿ ಹೊಂಡದ ನೀರಾಶ್ರಯ: ಹೊಲ ಇಳಿಜಾರು ಪ್ರದೇಶದಲ್ಲಿ ಇದ್ದಿದ್ದರಿಂದ ಮಳೆ ನೀರೆಲ್ಲ ಹೊಲದ ಬದಿಯಲ್ಲೇ ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಇದನ್ನು ಗಮನಿಸಿದ ನಿಜಲಿಂಗಪ್ಪ, ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ಹಾಕಿಸಿದರು. ಇಳಿಜಾರಿನ ತುದಿಯಲ್ಲಿ ತೋಟಗಾರಿಕಾ ಇಲಾಖೆಯ ಸಹಾಯ ಧನದಿಂದ 50 ಮೀಟರ್ ಅಗಲ, 30 ಮೀಟರ್ ಉದ್ದ, 3 ಮೀಟರ್ ಆಳದ  10 ಲಕ್ಷ ಲೀಟರ್ ನೀರು ಹಿಡಿದಿಡುವ ‘ಕೃಷಿ ಹೊಂಡ’ ನಿರ್ಮಿಸಿದರು.  ಈ ಕೃಷಿ ಹೊಂಡಕ್ಕೆ 50 ಎಕರೆ ಕ್ಯಾಚ್‌ಮೆಂಟ್ ಪ್ರದೇಶ. ಅದೃಷ್ಟವೆಂಬಂತೆ ಕೃಷಿ ಹೊಂಡ ನಿರ್ಮಿಸಿದ ಮೇಲೆ ಎರಡು ಬಾರಿ ಉತ್ತಮ ಮಳೆಯಾಯಿತು. ಹೊಂಡ ತುಂಬಿತು. ಪಂಪ್ ಮೂಲಕ ನೀರೆತ್ತಿ ಡ್ರಿಪ್ ಮೂಲಕ ಗಿಡಗಳಿಗೆ ಪೂರೈಸಿದರು. ಮಳೆಗಾಲ ಮುಗಿದ ಮೇಲೆ ಮತ್ತೆ ಕೃಷಿ ಹೊಂಡ ಖಾಲಿ. ನೀರಿನ ಕೊರತೆ ಪುನರಾವರ್ತನೆ ಆಯಿತು.ಮಳೆ ನೀರು ಮರುಪೂರಣಕ್ಕೆ  ಸಲಹೆ : ಹೊಂಡ ಬರಿದಾದ ಮೇಲೆ ಹೊಂಡದ ಸುತ್ತ ಮತ್ತೆರೆಡು ಕೊಳವೆಬಾವಿ ಕೊರೆಸಿದರು. ಆರಂಭದಲ್ಲಿ ಒಂದೂವರೆ, ಎರಡು ಇಂಚು ನೀರು ಹರಿಸಿ, ಅಂತರ್ಜಲ ಕಡಿಮೆಯಾದ ಮೇಲೆ ಕೊಳವೆಬಾವಿಯಲ್ಲೂ ನೀರು ಕೊರತೆಯಾಯಿತು.  ಮತ್ತೆ ಹೊಸ ಕೊಳವೆಬಾವಿಗಾಗಿ ‘ಜಲ ಸೆರಗಿನ’ ಶೋಧಕ್ಕಾಗಿ ಜಲತಜ್ಞ ಚಿತ್ರದುರ್ಗದ ಎನ್.ದೇವರಾಜ ರೆಡ್ಡಿ ಅವರ ಮೊರೆ ಹೋದರು ನಿಜಲಿಂಗಪ್ಪ. ‘ನೀರ ನಿಧಿ’ಯ ಕುರುಹು ತೋರಿಸಲು ಬಂದ ರೆಡ್ಡಿ ಅವರು, 'ಎಷ್ಟು ಕೊಳವೆ ಬಾವಿ ಹಾಕಿಸಿದರೂ, ಪ್ರಯೋಜನವಿಲ್ಲ. ಇರುವ ಕೊಳವೆ ಬಾವಿಗಳಿಗೆ ಮಳೆ ನೀರು ಮರುಪೂರಣ ಮಾಡಿ' ಎಂದು ಐಡಿಯಾ ಕೊಟ್ಟರು.ಪ್ರಾಥಮಿಕ ಶಾಲೆಯ ಶಿಕ್ಷಕ ನಿಜಗುಣಪ್ಪ ಅವರಿಗಿದ್ದ ಜಲ ಸಂರಕ್ಷಣೆಯ ಪ್ರೀತಿ ಹಾಗೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ಭರವಸೆಯಿಂದಾಗಿ ಕೊಳವೆ ಬಾವಿಗಳಿಗೆ ಮಳೆ ನೀರು ಮರುಪೂರಣಕ್ಕೆ ಒಪ್ಪಿದರು. ಆದರೆ, ಕೊಳವೆ ಬಾವಿಗಳು ಎತ್ತರದಲ್ಲಿದ್ದವು. ಕೃಷಿ ಹೊಂಡ ತಗ್ಗಿನಲ್ಲಿತ್ತು. ಹೀಗಿದ್ದಾಗ ಮಳೆ ನೀರು ಮರುಪೂರಣ ಕಷ್ಟ. ಆದರೆ, ದೇವರಾಜ ರೆಡ್ಡಿ ಅವರು, ಹೊಂಡದ ತಳಭಾಗದಿಂದಲೇ ರಂಧ್ರಗಳನ್ನು ಕೊರೆದು, ಕೊಳವೆ ಬಾವಿಗಳಿಗೆ ಜಲ ಮರುಪೂರಣ ಆಗುವಂತೆ ಮಾಡಿದರು.ಸುಸ್ಥಿರ ನೀರಿನ ಇಳುವರಿ: ‘ಕೊಳವೆ ಬಾವಿಗೆ ಜಲ ಮರುಪೂರಣ ತಂತ್ರಜ್ಞಾನ ಅಳವಡಿಕೆ ನಂತರದ ದಿನಗಳಲ್ಲಿ 650 ಮಿ.ಮೀ ಮಳೆ ಬಂತು. ಕೃಷಿ ಹೊಂಡ ಭರ್ತಿ ಆಯಿತು. ಹೊಂಡದ ಸುತ್ತಲಿದ್ದ ನಾಲ್ಕು ಕೊಳವೆಬಾವಿಗಳಲ್ಲೂ ನೀರಿನ ಇಳುವರಿ ಹೆಚ್ಚಾಯಿತು. 'ಮಳೆ ನೀರು ಮರುಪೂರಣವಾಗಿದ್ದರಿಂದ ನೀರಿನ ಇಳುವರಿ ಹೆಚ್ಚುವ ಜೊತೆಗೆ, ಗಡುಸು ನೀರು ಮೆದುವಾಗಿ, ಸಿಹಿ ನೀರಾಯಿತು. ನೀರು ಸಿಹಿಯಾಗಿದ್ದರಿಂದ ಗಿಡಗಳಿಗೆ ಉತ್ತಮ ಪೋಷಕಾಂಶ ಲಭ್ಯವಾಯಿತು. ಗೊಬ್ಬರ, ಗೋಡು ಕೊಡುವುದರಲ್ಲೂ ಸ್ವಲ್ಪ ಉಳಿತಾಯವಾಯಿತು. ಪರಿಣಾಮ ವಾಗಿ ದಾಳಿಂಬೆ ಇಳುವರಿಯಲ್ಲಿ ತುಸು ಏರಿಕೆಯಾಯಿತು. 500 ಗ್ರಾಂ ತೂಗುತ್ತಿದ್ದ ದಾಳಿಂಬೆ, 600 ರಿಂದ 800 ಗ್ರಾಂವರೆಗೂ ತೂಗಲು ಆರಂಭಿಸಿದವು’ ಎಂದು ಮಳೆ ನೀರಿನ ಪರಿಣಾಮವನ್ನು ಹೀಗೆ ಗುರುತಿಸುತ್ತಾರೆ ನಿಜಲಿಂಗಪ್ಪ.‘ಮೊದಲನೆ ದಾಳಿಂಬೆ ಬೆಳೆಗೆ ಕೃಷಿ ಹೊಂಡದ ನೀರು ಸಹಾಯ ಮಾಡಿತು. ಎರಡನೇ ಬೆಳೆಗೆ ಮಳೆ ನೀರು ಮರುಪೂರಣಗೊಂಡ ಕೊಳವೆ ಬಾವಿಗಳು ನೀರು ಪೂರೈಸಿದವು’ ಎಂದು ಕೃಷಿ ಮತ್ತು ನಿರ್ವಹಣೆಯ ಲೆಕ್ಕಚಾರವನ್ನು ನಿಜಲಿಂಗಪ್ಪ ತೆರೆದಿಡುತ್ತಾರೆ.ಮಳೆ ನೀರಾಶ್ರಯದಿಂದ ಬೆಳೆದ ದಾಳಿಂಬೆ ಗಿಡಗಳು  ಮೂರನೇ ಫಸಲು ನೀಡಲು ಸಿದ್ಧವಾಗಿವೆ. ಇನ್ನೊಂದೆಡೆ ಸಿಹಿ ನೀರನ್ನು ಬಳಸಿಕೊಂಡು  ಶೇಡ್ ನೆಟ್ ಬಳಸಿ, ದಾಳಿಂಬೆ ಗಿಡಗಳಿಗೆ ಗೂಟಿ ಕಟ್ಟಿ ಸಸಿಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಮೂರು ಎಕರೆಯ ದಾಳಿಂಬೆ ಕೃಷಿ  ವಿಸ್ತರಣೆಯಾಗುತ್ತಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.