ಶನಿವಾರ, ಜನವರಿ 25, 2020
28 °C

ಕೊಕ್ಕೊ ಬಗ್ಗೆ ಮಲತಾಯಿ ಧೋರಣೆ

–ಕೆ.ಎನ್‌.ನಾಗಸುಂದ್ರಪ್ಪ Updated:

ಅಕ್ಷರ ಗಾತ್ರ : | |

ದೇಶಿಯ ಕ್ರೀಡೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕೊಕ್ಕೊಗೆ ಸರ್ಕಾರ ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿ  ಪ್ರೋತ್ಸಾಹ ನೀಡುತ್ತಿಲ್ಲ ಎಂಬ ಕೂಗು ಇಂದಿಗೂ ಮುಂದುವರಿದಿದೆ. ಕ್ರಿಕೆಟ್‌ ಸೇರಿದಂತೆ ಕೆಲವು ಕ್ರೀಡೆಗಳಿಗೆ ದೊರೆಯುತ್ತಿರುವ ಸೌಲಭ್ಯ, ಸವಲತ್ತುಗಳನ್ನು ದೇಶಿಯ ಕ್ರೀಡೆಗಳಿಗೆ ನೀಡುವುದಿಲ್ಲ. ಅದರಲ್ಲಿಯೂ ಕೊಕ್ಕೊ ಕ್ರೀಡಾಪಟುಗಳನ್ನು ಸರ್ಕಾರ ಮತ್ತು ಕ್ರೀಡಾ ಸಂಸ್ಥೆಗಳು ಕಡೆಗಣಿಸುತ್ತಿವೆ ಎಂಬ ಕೊರಗು ಕ್ರೀಡಾಪಟುಗಳು ಮತ್ತು ತರಬೇತುದಾರರಲ್ಲಿದೆ.ಕೊಕ್ಕೊ ಗ್ರಾಮೀಣ ಕ್ರೀಡೆ. ಗ್ರಾಮೀಣ ಪ್ರದೇಶದ ಶಾಲಾ– ಕಾಲೇಜುಗಳಲ್ಲಿ ಹೊರತು ಪಡಿಸಿದರೆ ನಗರ ಪ್ರದೇಶದಲ್ಲಿ ಕೊಕ್ಕೊಗೆ ಬೆಲೆ ಇಲ್ಲ. ಆದರೆ ಕೊಕ್ಕೊ ಕಲಿಯಲು ಮತ್ತು ನೈಪುಣ್ಯತೆ ಪಡೆಯಲು ಅಗತ್ಯವಿರುವ ತರಬೇತುದಾರರು ಜಿಲ್ಲಾಮಟ್ಟದಲ್ಲಿ ಸಹ ಇಲ್ಲ.  ಗ್ರಾಮೀಣ ಶಾಲೆಗಳಲ್ಲಿ ತರಬೇತುದಾರರನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆಯೂ ಧುತ್ತೆನ್ನುತ್ತದೆ.ಆದರೂ ರಾಜ್ಯದ ಕೊಕ್ಕೊ ಆಟಗಾರರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಬ್‌ಜೂನಿಯರ್‌ ಬಾಲಕರ ಮತ್ತು ಬಾಲಕಿಯರ ತಂಡ 10ಕ್ಕೂ ಹೆಚ್ಚು ಬಾರಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದಿದೆ. ಹಿರಿಯರ ತಂಡದ ಬಾಲಕಿಯರು 6 ಬಾರಿ ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೆ ಅತಿ ಹೆಚ್ಚು ಬಾರಿ 2ನೇ ಸ್ಥಾನ ಪಡೆದಿದ್ದಾರೆ.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ರೀಡಾ ಶಾಲೆಗಳನ್ನು ಸ್ಥಾಪಿಸಲಾಗಿದೆ. ಆದರೆ ಅಲ್ಲಿ ಕೊಕ್ಕೊ ಕ್ರೀಡಾಪಟುಗಳಿಗೆ ಪ್ರವೇಶ ಅವಕಾಶ ನೀಡುತ್ತಿಲ್ಲ. ಮಕ್ಕಳ ಪ್ರತಿಭೆ ಬೆಳೆಯುವ ಹಂತದಲ್ಲಿಯೇ ಪ್ರೋತ್ಸಾಹವಿಲ್ಲದೆ ಮುರುಟಿ ಹೋಗುತ್ತಿದೆ. ಇಲ್ಲಿ ಪ್ರವೇಶ ನೀಡಿ ತರಬೇತಿ ನೀಡಿದರೆ ರಾಷ್ಟ್ರೀಯ ಎತ್ತರದ ನೂರಾರು ಕೊಕ್ಕೊ ಪಟುಗಳು ಅರಳಲು ಸಾಧ್ಯವಿದೆ.ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಕೊಕ್ಕೊ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಿದೆ. ಆದರೆ ಕರ್ನಾಟಕದಲ್ಲಿ ಯಾವುದೇ ಇಲಾಖೆಯಲ್ಲಿ ಕೊಕ್ಕೊ ಕ್ರೀಡಾಪಟುಗಳ ನೇಮಕ ಮಾಡುತ್ತಿಲ್ಲ. ಪೊಲೀಸ್‌ ಇಲಾಖೆಯಲ್ಲಿ ಈ ಹಿಂದೆ ನಡೆಯುತ್ತಿತ್ತು, ಕಳೆದ 15 ವರ್ಷದಿಂದ ಅಲ್ಲಿಯೂ ನೇಮಕ ಮಾಡಿಲ್ಲ. ಅಲ್ಲದೆ ಎಚ್‌ಎಎಲ್‌, ಕೆಪಿಟಿಸಿಎಲ್‌, ಎಸ್‌ಬಿಎಂ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳಲ್ಲಿ ಕಬಡ್ಡಿ ತಂಡಗಳಿವೆ. ಕೊಕ್ಕೊ ತಂಡಗಳನ್ನು ರಚಿಸಲು ಅಲ್ಲಿಯೂ ಮುಂದಾಗಿಲ್ಲ.ರೈಲ್ವೆ ಇಲಾಖೆಯಲ್ಲಿ 5 ಕೊಕ್ಕೊ ತಂಡಗಳಿವೆ. ಆದರೆ ರಾಜ್ಯದ ನೈಋತ್ಯ ರೈಲ್ವೆಯಲ್ಲಿ ಕೊಕ್ಕೊ ತಂಡವೇ ಇಲ್ಲ. ಪ್ರತಿ ವರ್ಷ ಒಂದಿಬ್ಬರು ಕೊಕ್ಕೊ ಆಟಗಾರರಿಗೆ ಅವಕಾಶ ನೀಡಿದರೂ ಮುಂದಿನ ನಾಲ್ಕೈದು ವರ್ಷಗಳಲ್ಲಿ ತಂಡ ರಚನೆ ಮಾಡಬಹುದು ಎನ್ನುತ್ತಾರೆ ಕ್ರೀಡಾಪಟುಗಳು.ರಾಜ್ಯದಲ್ಲಿ ಸಬ್‌ಜೂನಿಯರ್‌ ಮತ್ತು ಸೀನಿಯರ್‌ ಬಾಲಕ, ಬಾಲಕಿಯರ ತಂಡಗಳಲ್ಲಿ 400ಕ್ಕೂ ಹೆಚ್ಚು ಕೊಕ್ಕೊ ಆಟಗಾರರಿದ್ದಾರೆ. ಆದರೆ ಅವರಿಗೆ ಉತ್ತಮ ತರಬೇತಿ ದೊರೆಯುತ್ತಿಲ್ಲ. ಕೇವಲ 15ರಿಂದ 20 ಮಂದಿಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಆರಂಭವಾಗುವ 15 ದಿನಗಳ ಮೊದಲು ತರಬೇತಿ ನೀಡಲು ಆರಂಭಿಸಲಾಗುತ್ತದೆ. ಅಲ್ಪ ಅವಧಿಯ ತರಬೇತಿ ಪಡೆದು ಇಲ್ಲಿನ ಆಟಗಾರರು ಸೆಣಸಬೇಕಾಗಿದೆ.ರಾಜ್ಯದಲ್ಲಿ 3ನೇ ಬಾರಿ ಫೆಡರೇಷನ್‌ ಕಪ್‌ ರಾಷ್ಟ್ರೀಯ ಕೊಕ್ಕೊ ಪಂದ್ಯಾವಳಿ ನಡೆದಿದೆ. ಮಂಡ್ಯ ಮತ್ತು ಬೆಂಗಳೂರಿನ ನಂತರ ತುಮಕೂರಿನಲ್ಲಿ ಈ ವರ್ಷ ಪಂದ್ಯ ನಡೆಯಿತು. ಏಷ್ಯಾ ಕೊಕ್ಕೊ ಚಾಂಪಿಯನ್‌ಶಿಪ್‌ ಪಂದ್ಯಾವಳಿ 2 ಬಾರಿ ನಡೆದಿದ್ದು, ಎರಡೂ ಬಾರಿಯೂ ಭಾರತ ಜಯಗಳಿಸಿದೆ ಎನ್ನುತ್ತಾರೆ ತರಬೇತುದಾರ ಸಿದ್ದಲಿಂಗಮೂರ್ತಿ.ಆರ್ಥಿಕ ಅಡಚಣೆಯ ನಡುವೆ...

ತುಮಕೂರಿನಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಸಲು ಸುಮಾರು ರೂ. 50 ಲಕ್ಷ ಖರ್ಚು ಬರುತ್ತಿದೆ. ಆದರೆ ಸರ್ಕಾರ ಒಂದೇ ಒಂದು ಪೈಸೆ ನೀಡಿಲ್ಲ. ಕ್ರೀಡಾಕೂಟ ಮುಗಿದ ನಂತರ ರೂ. 1 ಲಕ್ಷ ನೀಡುವುದಾಗಿ ತಿಳಿಸಿದೆ. ಆಸಕ್ತರು ಮತ್ತು ಸಂಘಸಂಸ್ಥೆಗಳಿಂದ ಆರ್ಥಿಕ ಸಹಾಯ ಪಡೆಯಲಾಗಿದೆ. ಮಕ್ಕಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ಸಹ ಶ್ರಮಪಡುವಂತಾಗಿದೆ. 

– ಟಿ.ಎಸ್‌.ಸಿದ್ದಲಿಂಗಮೂರ್ತಿ, ಖಜಾಂಚಿ, ರಾಜ್ಯ ಕೊಕ್ಕೊ ಸಂಸ್ಥೆ.ಕೊಡಬೇಕಿರುವ ಹಣವನ್ನೂ ಸರ್ಕಾರ ನೀಡುತ್ತಿಲ್ಲ


ಕಳೆದ ಬಾರಿ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸರ್ಕಾರ ಸಹಾಯ ನೀಡಲಿಲ್ಲ. ಅಲ್ಲದೆ ಸ್ಥಳೀಯ ಸಂಸ್ಥೆಗಳು ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿಲ್ಲ. ಆದರೂ ರಾಜ್ಯ ಸಂಘಟನೆ ಕೊಕ್ಕೊ ಉಳಿಸಲು ಪ್ರಯತ್ನಿಸುತ್ತಿದೆ.

–ರಾಮಕೃಷ್ಣಯ್ಯ, ಅಧ್ಯಕ್ಷ, ತುಮಕೂರು ಜಿಲ್ಲಾ ಕೊಕ್ಕೊ ಸಂಸ್ಥೆಪ್ರಮುಖ ಕ್ರೀಡೆಯಾಗಬೇಕು


ಸರ್ಕಾರ ಮತ್ತು ಕ್ರೀಡಾ ಇಲಾಖೆ ಕೊಕ್ಕೊವನ್ನು ಪ್ರಮುಖ ಕ್ರೀಡೆ ಎಂದು ಪರಿಗಣಿಸುತ್ತಿಲ್ಲ. ಕನಿಷ್ಠ ಸೌಲಭ್ಯಗಳನ್ನು ಸಹ ನೀಡುತ್ತಿಲ್ಲ. ಗ್ರಾಮೀಣ ಶಾಲೆಗಳ ಸೌಲಭ್ಯ ವಂಚಿತ ಮಕ್ಕಳನ್ನು ಕರೆದುಕೊಂಡು ಬಂದು ತರಬೇತಿ ನೀಡಬೇಕಾಗಿದೆ.

–ಮನೋಹರ್‌, ರಾಜ್ಯ ಸಬ್‌ಜೂನಿಯರ್‌ ತಂಡಗಳ ತರಬೇತುದಾರಕೊಕ್ಕೊಗೆ ಪ್ರಾತಿನಿಧ್ಯ ಇರಲಿ


ಮೂಡುಬಿದರೆ ಆಳ್ವಾಸ್‌ ಕಾಲೇಜಿನಲ್ಲಿ ಬಿಎಸ್‌ಡಬ್ಲ್ಯು ಓದುತ್ತಿದ್ದೇನೆ. ಅಲ್ಲಿ ಕ್ರೀಡಾಪಟುಗಳಿಗೆ ನೀಡುವ ಮೀಸಲಾತಿಯ ಅಡಿ ಉಚಿತ ಶಿಕ್ಷಣ ದೊರೆಯುತ್ತಿದೆ. ಅಲ್ಲದೆ ಕೊಕ್ಕೊ ತರಬೇತಿದಾರರಿಂದ ನಿರಂತರ ತರಬೇತಿ ಸಿಗುತ್ತಿದೆ. ಇಂತಹ ಸೌಲಭ್ಯ ಎಲ್ಲ ಪ್ರಮುಖ ಕಾಲೇಜುಗಳಲ್ಲಿ ದೊರೆಯಬೇಕು.

–ಅನುಪ, ರಾಜ್ಯ ಬಾಲಕಿಯರ ತಂಡದ ನಾಯಕಿಪ್ರೋತ್ಸಾಹ ಸಿಗುತ್ತಿಲ್ಲ


ಕೊಪ್ಪಳ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದೇನೆ. ಅಲ್ಲಿ ಕ್ರೀಡೆಗೆ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಸ್ಥಳೀಯ ಮಕ್ಕಳ ಜೊತೆ ಕೊಕ್ಕೊ ಆಡುತ್ತಿದ್ದೆ. ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ನಂತರ ಕೊಕ್ಕೊ ಬಗ್ಗೆ ಆಸಕ್ತಿ ಬೆಳೆಯಿತು. ಉತ್ತ ಮ ತರಬೇತಿ ಪಡೆದು, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಬೇಕೆಂಬ ಆಕಾಂಕ್ಷೆ ಇದೆ.

–ಪ್ರಕಾಶ್‌ ಯಂಕಂಚಿ, ಸಬ್‌ ಜೂನಿಯರ್‌ ಬಾಲಕರ ತಂಡದ ನಾಯಕ

 

ಪ್ರತಿಕ್ರಿಯಿಸಿ (+)