ಶುಕ್ರವಾರ, ಏಪ್ರಿಲ್ 16, 2021
25 °C

ಕೊಬ್ಬರಿ ಮೇಲೆ ರವಿಯ ಚೆಲುವಿನ ಚಿತ್ತಾರ

ಪ್ರಜಾವಾಣಿ ವಾರ್ತೆ ಕೆ.ಎಲ್.ಶಿವು Updated:

ಅಕ್ಷರ ಗಾತ್ರ : | |

ಆಲ್ದೂರು: ಕೊಬ್ಬರಿ ಎಂದಾಕ್ಷಣ ಸಾಮಾನ್ಯವಾಗಿ ನೆನಪಿಗೆ ಬರುವುದು ತೆಂಗಿನಎಣ್ಣೆ, ಕೊಬ್ಬರಿ ಮಿಠಾಯಿ. ಆದರೆ ಇಲ್ಲೊಬ್ಬರು ತಮ್ಮ ಕ್ರಿಯಾಶೀಲತೆ, ಕೈ ಚಳಕದಿಂದ ಕೊಬ್ಬರಿಯಲ್ಲಿ ವಿವಿಧ ಬಗೆಯ ಚಿತ್ತಾರ ಮೂಡಿಸಿ ಅಲಂಕಾರಿಕ ಕಲಾಕೃತಿಗಳನ್ನಾಗಿ ರೂಪಾಂತರಗೊಳಿಸುವ  ಮೂಲಕ ತಮ್ಮ ಕಲಾ ಪ್ರಾವೀಣ್ಯತೆ ಮೆರೆಯುತ್ತಿದ್ದಾರೆ.ಆಲ್ದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಎಚ್.ಎಲ್.ರವಿಕುಮಾರ್ ಕೊಬ್ಬರಿ ಮೇಲೆ ಚಿತ್ತಾರ ಮೂಡಿಸಿ ಸುಂದರ ಕಲಾಕೃತಿಗಳನ್ನಾಗಿ ಮೆರುಗು ನೀಡುತ್ತಿರುವವರು. ಅಪಾರ ಸಾಹಿತ್ಯಾಭಿರುಚಿಯುಳ್ಳ ಇವರು ವಿದ್ಯಾರ್ಥಿಗಳಲ್ಲಿ, ಸಾರ್ವಜನಿಕರಲ್ಲಿ ಚಿತ್ರಕಲಾಸಕ್ತಿ ಸಾಹಿತ್ಯಾಭಿಮಾನ, ವೈಚಾರಿಕ ಪ್ರಜ್ಞೆ ಮೂಡಿಸುವಲ್ಲಿ ಆಗಿಂದಾಗ್ಗೆ ಶಾಲಾ, ಕಾಲೇಜುಗಳಲ್ಲಿ ದತ್ತಿ ಉಪನ್ಯಾಸ, ಚಿತ್ರಕಲಾ ಸ್ಪರ್ಧೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಜೊತೆಗೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿರುವ ಸೃಜನಶೀಲರು.ವೃತ್ತಿಯಿಂದ ಕಾಫಿ ಬೆಳೆಗಾರರು, ಮೆಡಿಕಲ್ ಶಾಪ್ ಮಾಲೀಕರಾಗಿದ್ದರೂ ಪ್ರವೃತ್ತಿಯಿಂದ ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಕೊಬ್ಬರಿಯಲ್ಲಿ  ವಿವಿಧ ಬಗೆಯ ಅಲಂಕಾರಿಕ ಕಲಾಕೃತಿಗಳನ್ನು ತಯಾರಿಸುವಲ್ಲಿ ಮಗ್ನರಾಗುವುದರ ಮೂಲಕ ತಮಗೆ ವಿದ್ಯಾರ್ಥಿ ಹಂತದಲ್ಲಿ ಒಲಿದಿದ್ದ ಚಿತ್ರಕಲಾಸಕ್ತಿಯನ್ನು ಈ ಮೂಲಕ ಮುಂದುವರಿಸಿದ್ದಾರೆ.ಉತ್ತಮ ಚಿತ್ರಕಲಾವಿದರಾಗಿರುವ ರವಿಕುಮಾರ್ ಕೊಬ್ಬರಿ ಕಂಡರೆ ಸಾಕು ಪೆನ್ನು ಹಿಡಿದು ತದೇಕಚಿತ್ತದಿಂದ ಕೊಬ್ಬರಿ ಮೈಮೇಲೆಲ್ಲಾ ಗೆರೆಗಳ ಚಿತ್ತಾರ ಮೂಡಿಸುತ್ತಾರೆ. ಬಳಿಕ ಬ್ಲೇಡಿನ ಸಹಾಯದಿಂದ ಕೆಲವೇ ನಿಮಿಷಗಳಲ್ಲಿ ಅದಕ್ಕೊಂದು ಸುಂದರ ಕಲಾಕೃತಿಯ ಆಕಾರ ನೀಡುವ ಅವರ ಕೈಚಳಕದ ವೈಖರಿ ಹುಬ್ಬೇರಿಸುವಂತದ್ದು.ಕೊಬ್ಬರಿಯಲ್ಲಿ ಹೀಗೆ ಕಲಾಕೃತಿ ಮೂಡಿಸುವ ಕಲೆ ಅವರಿಗೆ ಯಾರ ಬಳುವಳಿಯಲ್ಲ. ಚಿತ್ರ ಕಲಾವಿದರಾಗಿದ್ದ ಅವರು, ಒಮ್ಮೆ ಮನೆಗೆ ತಂದಿದ್ದ ಕೊಬ್ಬರಿಯನ್ನು ಕೈಗೆತ್ತಿಕೊಂಡವರೇ ಅದರ ಮೇಲೆ ಕಾಟಾಚಾರಕ್ಕೆಂಬಂತೆ ಚಿತ್ರವೊಂದನ್ನು ಬರೆದು ಚಾಕುವಿನಿಂದ ಕೊರೆದರು. ಅದೊಂದು ಸುಂದರ ರೂಪ ತಾಳಿದ್ದನ್ನು ಕಂಡು ಅಂದಿನಿಂದ ಕೊಬ್ಬರಿ ಮೇಲೆ ಚಿತ್ತಾರ ಮೂಡಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ತಮ್ಮ ತೋಟ, ವ್ಯಾಪಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಚಟುವಟಿಕೆಯ ನಡುವೆ  ಬಿಡುವಿನ ಅವಧಿಯನ್ನು ಕೊಬ್ಬರಿ ಜೊತೆ ಕಳೆಯುತ್ತಾರೆ.ಚಿಕ್ಕಮಗಳೂರಿನ ಕೃಷಿ ಮಾರುಕಟ್ಟೆಗೆ ತೆರಳಿ ದುಂಡಾಕಾರ ಕೊಬ್ಬರಿಗಳನ್ನು ಆರಿಸಿ ತರುವ ರವಿ, ಅವುಗಳ ಮೇಲೆ ಗ್ರಾಹಕರು ಬಯಸಿದ ಆಕೃತಿಗಳ ಕುಸುರಿ ಕೆಲಸಕ್ಕಿಳಿಯುತ್ತಾರೆ. ಗಣೇಶ, ಹೂ, ಎಲೆ ಮೊದಲಾದ ಚಿತ್ರಗಳನ್ನು ಕೊಬ್ಬರಿ ಮೇಲೆ ಅರಳಿಸಿ ಅಚ್ಚುಕಟ್ಟಿನ ಕೆತ್ತನೆಗಿಳಿಯುತ್ತಾರೆ. ನಂತರ ಅಂದ ಹೆಚ್ಚಿಸಲು ಅಲ್ಲಲಿ ಮಣಿಗಳನ್ನು ಪೋಣಿಸಿ ನೋಡುಗರ ಮನಸೂರೆಗೊಳ್ಳುವ ಸುಂದರ ರೂಪ ನೀಡುವ ಚಾಕಚಕ್ಯತೆ ವರ್ಣನಾತೀತ.ಸಾಮಾನ್ಯವಾಗಿ ಮದುವೆ ಕಾರ್ಯಕ್ಕೆ ಬಳಸುವ  ಕಳಶ, ಹೂವಿನ ಬುಟ್ಟಿಗಳ ಮಾದರಿಗಳೇ ಇವರ ಕೈಯಲ್ಲಿ ಅರಳುವ ಕಲಾಕೃತಿಗಳು. ಇದುವರೆಗೂ ಸುಮಾರು 3 ಸಾವಿರಕ್ಕೂ ಹೆಚ್ಚು ಕೊಬ್ಬರಿ ರವಿಯವರ ಕೈಯಲ್ಲಿ ‘ಚೆಲುವಿನ ಚಿತ್ತಾರದ ಕಲಾಕೃತಿ’ಗಳಾಗಿ ಮೆರುಗು ಪಡೆದುಕೊಂಡಿವೆ.‘ನನಗೆ ಗೊತ್ತಿರುವ ಚಿತ್ರಕಲೆಯನ್ನು ಕೊಬ್ಬರಿಗಳ ಮೂಲಕ ಪ್ರಚುರ ಪಡಿಸಲು ಒಳ್ಳೆ ಅವಕಾಶ ಸಿಕ್ಕಿದೆ. ಇದರ ಸದುಪಯೋಗ ಮಾಡಿಕೊಳ್ಳುತ್ತಿದೇನಷ್ಟೇ, ಇದರಲ್ಲಿ ಸಾಧನೆ ಏನಿಲ್ಲ, ಕೊಂಚ ಕಲಾನೈಪುಣ್ಯತೆ ಜತೆಗೆ ಶ್ರದ್ಧೆ, ತಾಳ್ಮೆ ಇರುವ ಯಾರೂ ಬೇಕಾದರೂ ಈ ಕಲೆಯನ್ನು ಕಲಿತು ಆದಾಯ ಗಳಿಸಬಹುದು’ ಎಂದು ವಿನಯ ಪೂರ್ವಕವಾಗಿ ಹೇಳುತ್ತಾರೆ ರವಿ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.