ಕೊಳಚೆ ನೀರಿನ ಕೆರೆಯಾದ ಶಾಲಾ ಮೈದಾನ

ರಾಯಚೂರು: ಕೆಇಬಿ ಕಾಲೊನಿಯ ಸರ್ಕಾರಿ ಪ್ರೌಢಶಾಲೆ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಚೇರಿ ಇರುವ ಆವರಣ ಈಗ ಅಕ್ಷರಶಃ ಮಿನಿ ಕೆರೆಯಂತೆ ಆಗಿದೆ. ನಗರದಲ್ಲಿ ಎರಡ್ಮೂರು ದಿನಗಳಿಂದ ಸುರಿದ ಭಾರಿ ಮಳೆ ಮತ್ತು ಬಡಾವಣೆಯಿಂದ ಬರುವ ಕೊಳಚೆ ನೀರು ಆಟದ ಮೈದಾನದಲ್ಲಿ ನಿಂತಿದೆ.
5ನೇ ವಾರ್ಡ್ನ ನಿಜಲಿಂಗಪ್ಪ ಬಡಾವಣೆಗೆ ಹೊಂದಿಕೊಂಡಿರುವ ಕೆಇಬಿ ಕಾಲೊನಿಯ 10 ಎಕರೆಗೂ ಹೆಚ್ಚು ಜಾಗದಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಮುಚ್ಚಯವೇ ಇದೆ.
ರಾಯಚೂರು– ಲಿಂಗಸುಗೂರು ಹೆದ್ದಾರಿಗೆ ಅಭಿಮುಖವಾಗಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅದರ ಪಕ್ಕದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದರೆ, ಹಿಂಭಾಗದ ಸುಮಾರು ಐದು ಎಕರೆ ಜಾಗದಲ್ಲಿ ಈ ಸರ್ಕಾರಿ ಪ್ರೌಢಶಾಲೆ ಮತ್ತು ಸ್ಕೌಟ್ಸ್ – ಗೈಡ್ಸ್ ಜಿಲ್ಲಾ ಕಚೇರಿ ಇದೆ. ಈ ಜಾಗ ತಗ್ಗಿನಲ್ಲಿರುವುದರಿಂದ ಪ್ರತಿ ಸಾರಿ ಮಳೆಗಾಲದಲ್ಲಿ ಶಾಲಾ ಮೈದಾನದಲ್ಲಿ ನೀರು ನಿಲ್ಲುತ್ತದೆ.
ಮೈದಾನದಿಂದ ನೀರು ಹೊರಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗಳಿಗೆ ಕಾರಣ. ಪದವಿ ಕಾಲೇಜು ಮತ್ತು ಹಿರಿಯ ಪ್ರಾಥಮಿಕ ಶಾಲೆ ನಡುವಿನ ಸಂದಿಯಲ್ಲಿ ಚರಂಡಿ ನಿರ್ಮಾಣ ಮಾಡಿದರೆ ನೀರು ಸರಾಗವಾಗಿ ಹರಿಯುತ್ತದೆ. ಆದರೆ, ಈ ಕಾರ್ಯ ಅಥವಾ ಪರ್ಯಾಯ ಮಾರ್ಗೋಪಾಯ ಆಗಿಲ್ಲ.
ಮಳೆ ನೀರಿನ ಜೊತೆಗೆ ನಿಜಲಿಂಗಪ್ಪ ಬಡಾವಣೆಯ ಒಳಚರಂಡಿ ಪೈಪ್ಲೈನ್ ಒಡೆದಿರುವ ಕಾರಣ ಅದರ ಕೊಳಚೆ ನೀರು ಮತ್ತು ಸ್ಕೌಟ್ಸ್– ಗೈಡ್ಸ್ ಕಚೇರಿಯ ಪಕ್ಕದಲ್ಲಿರುವ ಕೊಳಗೇರಿಯ ಚರಂಡಿಯ ನೀರು ಈ ಮೈದಾನಕ್ಕೆ ನುಗ್ಗುತ್ತದೆ.
ಇದರಿಂದ ಶೈಕ್ಷಣಿಕ ಪರಿಸರದಲ್ಲಿ ಅನೈರ್ಮಲ್ಯ ಉಂಟಾಗಿದೆ. ಈ ಶಾಲೆಯ ಪಕ್ಕ ಮತ್ತ ಹಿಂಭಾಗದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪ್ರಧಾನ ನ್ಯಾಯಾಧೀಶರು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಗಣ್ಯರ ನಿವಾಸಗಳಿವೆ. ಆದರೂ ಈ ಶಾಲೆ ಎದುರಿಸುತ್ತಿರುವ ಸಮಸ್ಯೆ ದೂರವಾಗಿಲ್ಲ.
‘ಆಗಸ್ಟ್ 18ರಿಂದ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ ನಮ್ಮ ಶಾಲೆಯಲ್ಲಿ ನಡೆಯಲಿದೆ. 18 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಅಷ್ಟರಲ್ಲಿ ಈ ಮಳೆ ನೀರು ಹೊರಹೋಗಲು ಒಂದು ವ್ಯವಸ್ಥೆ ಆಗಬೇಕಿದೆ’ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ ಹವಾಲ್ದಾರ ಹೇಳಿದರು.
‘ನಿಜಲಿಂಗಪ್ಪ ಬಡಾವಣೆಯ ಹಿರಿಯ ನಾಗರಿಕರು ದಿನಾ ಶಾಲೆಯ ಮೈದಾನದಲ್ಲಿ ವಾಯುವಿಹಾರ ಮಾಡುತ್ತಾರೆ. ಅವರಿಗೂ ಕೊಳಚೆ ನೀರಿನ ದುರ್ನಾತ ತಪ್ಪಿಲ್ಲ. ಶಾಲಾ ಆವರಣದಲ್ಲಿ ವಿದ್ಯುತ್ ದೀಪ ಒಡೆಯುವ, ಕಾಂಪೌಂಡ್ ಗೇಟ್ ಮುರಿಯುವ,
ಬಿಸಿಯೂಟ ಕೋಣೆ ಬಾಗಿಲು ಒಡೆಯುವ ಕೆಲಸವನ್ನು ಪುಂಡರು ಮಾಡಿದ್ದಾರೆ. ರಾತ್ರಿ ವೇಳೆ ಕುಡುಕರ ಹಾವಳಿ ಕೂಡ ಇದೆ’ ಎಂದು ಶಾಲೆಯ ಶಿಕ್ಷಕರೊಬ್ಬರು ಹೇಳಿದರು.
‘ಈಗ ಸ್ಕೌಟ್ಸ್ ಮತ್ತು ಗೈಡ್ಸ್ ಕಚೇರಿ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವುದರಿಂದ ಚರಂಡಿ ನೀರು ನುಗ್ಗುವುದು ಕಡಿಮೆ ಆಗಿದೆ ಆದರೂ, ಭೂಮಿಯ ಒಳಗಿನಿಂದ ಶಾಲಾ ಮೈದಾನಕ್ಕೆ ನೀರು ಜಿನುಗುವುದು ನಿಂತಿಲ್ಲ’ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಘಟನಾ ಆಯುಕ್ತ ರಾವುತ್ರಾವ್ ಹೇಳಿದರು.
‘ಶಾಲಾ ಆವರಣದಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ಮುಖ್ಯ ಶಿಕ್ಷಕರು ನನ್ನ ಗಮನಕ್ಕೆ ತಂದಿದ್ದಾರೆ. ತಾತ್ಕಾಲಿಕವಾಗಿ ಮೊರಂ (ಮಣ್ಣು) ಹಾಕುವಂತೆ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಆಯುಕ್ತರನ್ನು ಕೋರುವೆ. ನಂತರದಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸುವೆ’ ಎಂದು 5ನೇ ವಾರ್ಡ್ನ ನಗರಸಭಾ ಸದಸ್ಯೆ ಲಲಿತಾ ಸೋಮಶೇಖರ ತಿಳಿಸಿದರು.
*
ಅನೈರ್ಮಲ್ಯದ ಈ ವಾತಾವರಣದಲ್ಲಿ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಮಕ್ಕಳು ಆಟ ಆಡಬೇಕಿದೆ. ದುರ್ನಾತ ಸಹಿಸಿಕೊಂಡು ಮಧ್ಯಾಹ್ನದ ಬಿಸಿಯೂಟ ಸೇವನೆ ಮಾಡಬೇಕಿದೆ.
-ರಾವುತ್ರಾವ್,
ಜಿಲ್ಲಾ ಸಂಘಟನಾ ಆಯುಕ್ತ ಸ್ಕೌಟ್ಸ್ – ಗೈಡ್ಸ್
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.