ಶುಕ್ರವಾರ, ಏಪ್ರಿಲ್ 16, 2021
31 °C

ಕೊಳವೆಬಾವಿಗೆ ವಿದ್ಯುತ್ ಸಂಪರ್ಕಕ್ಕೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯಾಪ್ತಿ ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ 2008ರಿಂದ 2010ರವರೆಗೆ ಕೊರೆದಿರುವ ಬಾಕಿ ಇರುವ ಕೊಳವೆಬಾವಿಗಳಿಗೆ ಒಂದು ತಿಂಗಳೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್‌ಗೆ ಗಡುವು ನೀಡಲಾಗಿದೆ.ಸಭೆಯಲ್ಲಿ ನಿಗಮದಿಂದ ಕೊರೆದಿರುವ ಹಾಗೂ ಕುಡಿಯುವ ನೀರು ಪೂರೈಕೆಗೆ ಕೊರೆದಿರುವ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್ ಅಧಿಕಾರಿಗಳು  ವಿಳಂಬ ಧೋರಣೆ ತಳೆದಿರುವ ಬಗ್ಗೆ ಚರ್ಚೆ ನಡೆಯಿತು. ಸ್ಥಾಯಿಸಮಿತಿ ಅಧ್ಯಕ್ಷರಾದ ಬಿ.ಪಿ.ಪುಟ್ಟಬುದ್ಧಿ ಹಾಗೂ ಕೊಪ್ಪಾಳಿ ಮಹದೇವನಾಯಕ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿ ಸಭೆಯಲ್ಲೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ಚರ್ಚೆ ನಡೆಯುತ್ತದೆ. ಅಧಿಕಾರಿಗಳು ಅಸ್ಪಷ್ಟ ಮಾಹಿತಿ ನೀಡುತ್ತಾರೆ. ಆದರೆ, ಕಾಮಗಾರಿಗಳೇ ಪೂರ್ಣಗೊಳ್ಳುವುದಿಲ್ಲ. ಏಳೆಂಟು ತಿಂಗಳಿನಿಂದಲೂ ಒತ್ತಾಯಿಸಲಾಗುತ್ತಿದೆ. ಕೆಲವೆಡೆ ಕುಡಿಯುವ ನೀರಿನ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಹಿಂದೇಟು ಹಾಕಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳಿಗೆ 6 ತಿಂಗಳೊಳಗೆ ಸಂಪರ್ಕ ಕಲ್ಪಿಸಬೇಕೆಂಬ ನಿಯಮವಿದೆ. ಆದರೆ, ಇದು ಪಾಲನೆಯಾಗುತ್ತಿಲ್ಲ ಎಂದು ದೂರಿದರು.`ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ವಿದ್ಯುತ್ ಪರಿಕರಗಳ ಕೊರತೆಯಿಲ್ಲ ಎಂದು ಸೆಸ್ಕ್ ಅಧಿಕಾರಿಗಳು ಹೇಳಿದ್ದಾರೆ. ಕೆಡಿಪಿ ಸಭೆಯಲ್ಲಿ ಪರಿಕರಗಳ ಕೊರತೆ ಬಗ್ಗೆ ಹೇಳುತ್ತಾರೆ~ ಎಂದು ಅಧ್ಯಕ್ಷೆ ರಾಜೇಶ್ವರಿ ಅಸಮಾಧಾನ ವ್ಯಕ್ತಪಡಿಸಿದರು.ಸಿಇಒ ಸೋಮಶೇಖರಪ್ಪ ಮಾತನಾಡಿ, `2008ರಿಂದ 2010ರವರೆಗೆ ಬಾಕಿ ಇರುವ ಕೊಳವೆಬಾವಿಗಳಿಗೆ ಒಂದು ತಿಂಗಳೊಳಗೆ ವಿದ್ಯುತ್ ಸಂಪರ್ಕ ನೀಡಬೇಕು. 2011-12ನೇ ಸಾಲಿನಡಿ ಕೊರೆದಿರುವ ಕೊಳವೆಬಾವಿಗಳಿಗೆ ಎರಡು ತಿಂಗಳೊಳಗೆ ಸಂಪರ್ಕ ಕಲ್ಪಿಸಬೇಕು. ಇಲ್ಲವಾದರೆ ಸಭೆಯಲ್ಲಿ ಚರ್ಚೆ ಮಾಡುವುಕ್ಕೆ ಅರ್ಥವಿರುವುದಿಲ್ಲ.ಸೆಸ್ಕ್‌ನ ಕಾರ್ಯಪಾಲಕ ಎಂಜಿನಿಯರ್‌ಗಳು ಸಿದ್ಧಉತ್ತರ ನೀಡುವುದರಲ್ಲಿ ಅರ್ಥವಿಲ್ಲ. ಉಪ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ವಿದ್ಯುತ್ ಪರಿವರ್ತಕಗಳ ಕೊರತೆ ಇಲ್ಲದಿರುವ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ, ನಿಗದಿತ ಅವಧಿಯೊಳಗೆ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಬೇಕು~ ಎಂದು ಸೂಚಿಸಿದರು.ಎಪಿಎಲ್ ಕುಟುಂಬಕ್ಕೂ ಪ್ರೋತ್ಸಾಹ ಧನ

`ನಿರ್ಮಲ ಭಾರತ ಅಭಿಯಾನದಡಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 4,600 ರೂ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯೂ 4,200 ರೂ ಅನುದಾನ ಲಭಿಸಲಿದೆ~ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಕೆ.ಬಿ. ಪ್ರಭುಸ್ವಾಮಿ ತಿಳಿಸಿದರು.ಸಭೆಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕುಟುಂಬಗಳಿಗೆ ಸರ್ಕಾರದಿಂದ ಪ್ರೋತ್ಸಾಹಧನ ಲಭಿಸಲಿದೆ. ಜತೆಗೆ, ಎಪಿಎಲ್ ಕುಟುಂಬಗಳಿಗೆ ಸೇರಿದ ಎಸ್‌ಸಿ, ಎಸ್‌ಟಿ, ಅಂಗವಿಕಲರು, ಸಣ್ಣ, ಅತಿಸಣ್ಣ ರೈತರು, ಭೂರಹಿತ ಕಾರ್ಮಿಕರು ಹಾಗೂ ಮಹಿಳೆಯೇ ಮನೆಯ ಮುಖ್ಯಸ್ಥರಾಗಿದ್ದರೆ ಪ್ರೋತ್ಸಾಹಧನ ಸಿಗಲಿದೆ. ಉದ್ಯೋಗ ಖಾತ್ರಿಯಡಿ 20 ಕುಶಲರಹಿತ ಹಾಗೂ 6 ಕುಶಲ ಮಾನವ ದಿನ ಬಳಸಿಕೊಂಡು ಅನುದಾನ ಪಡೆಯಬಹುದು ಎಂದು ಸಭೆಗೆ ವಿವರಿಸಿದರು.ಸಿಇಒ ಸೋಮಶೇಖರಪ್ಪ ಮಾತನಾಡಿ, `ನಿರ್ಮಲ ಭಾರತ ಅಭಿಯಾನದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸಲಾಗುತ್ತಿದೆ. ಜನಪ್ರತಿನಿಧಿಗಳು ಕೂಡ ಶೌಚಾಲಯ ನಿರ್ಮಿಸಿಕೊಳ್ಳುವ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.